ರಾಜ್ಯದಲ್ಲಿ ಹಿಜಾಬ್ ವಿವಾದ ರಾಜಕೀಯ ತಿರುವು ಪಡೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಮಧ್ಯೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ನಾಯಕರಾದ ಜಮೀರ್ ಅಹ್ಮದ್, ಯು.ಟಿ.ಖಾದರ್, ತನ್ವೀರ್ ಸೇಠ್ ಹಾಗೂ ಸಿ.ಎಂ. ಇಬ್ರಾಹಿಂ ವಿರುದ್ದ ಹಿಜಾಬ್ ವಿಚಾರವಾಗಿ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಪಸಂಖ್ಯಾತ ನಾಯಕರುಗಳು ಸಮಾಜದ ಕೋಮು ಸೌಹಾರ್ದ ಕದಡಿ ಕೋಮು ಗಲಭೆ ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದ್ದರಿಂದ ಇವರುಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದಿದ್ದಾರೆ.
ಕರ್ನಾಟಕವನ್ನು ನಾವು ತಾಲಿಬಾನ್ ಆಗಲು ಬಿಡುವುದಿಲ್ಲ ಅಮಾಯಕ ಹೆಣ್ಣು ಮಕ್ಕಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವವರನ್ನು ರಾಜ್ಯದಿಂದ ಗಡಿ ಪಾರು ಮಾಡಬೇಕು ಎಂದು ಕಾಂಗ್ರೆಸ್ ನಾಯಕರ ವಿರುದ್ದ ಹರಿಹಾಯ್ದರು.
ಈ ಹಿಂದೆ ತನ್ವೀರ್ ಸೇಠ್ರವರ ತಂದೆ ಅಜೀಜ್ ಸೇಠ್ ಕೋಮು ಸೌಹಾರ್ದ ಸೃಷ್ಟಿಸಿದ ಕಾರಣ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿದ್ದರು ಈಗ ತನ್ವೀರ್ ಅವರ ತಂದೆಯ ಹಾದಿಯನ್ನು ಅನುಸರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಇಷ್ಟು ವರ್ಷಗಳ ಕಾಲ ವಸ್ತ್ರ ಸಂಹಿತೆಯನ್ನು ಪಾಲಿಸಲಾಗುತ್ತಿತ್ತು. ಜಾತಿ ಮತ್ತು ಧರ್ಮದ ಅಂಶಗಳನ್ನು ಹೊರಗಿಡಲಾಗಿತ್ತು. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲವು ಹೆಣ್ಣುಮಕ್ಕಳಿಗೆ ಹಿಜಾಬ್ಅನ್ನು ಧರಿಸುವಂತೆ ಪ್ರೇರೆಪಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.