ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಚೀನಾ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು `Make In India’ ಅಂದರೆ ʻBuy From Chiná ಎಂದು ಮಾರ್ಪಟ್ಟಿದೆ ಎಂದು ಕುಟುಕಿದ್ದಾರೆ.
ಈ ಕುರಿತು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದು, “ಬುಧವಾರ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಿದ ರಾಹುಲ್ ಮೋದಿ ಸರ್ಕಾರವು ಅಸಂಘಟಿತ ವಲಯ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಎಂಎಸ್‌ಎಂಇಗಳನ್ನು ನಾಶಪಡಿಸಿದೆ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ʻʻಭಾರತಕ್ಕೆ ಜುಮ್ಲಾ, ಚೀನಾಕ್ಕೆ ಉದ್ಯೋಗ ಮೋದಿ ಸರ್ಕಾರವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಅಸಂಘಟಿತ ವಲಯ ಮತ್ತು ಎಂಎಸ್‌ಎಂಇಗಳನ್ನು ನಾಶಪಡಿಸಿದೆ. ಇದರ ಫಲಿತಾಂಶ: ‘ಮೇಕ್ ಇನ್ ಇಂಡಿಯಾ’ ಈಗ ‘ಚೀನಾದಿಂದ ಖರೀದಿಸಿ’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ರಾಹುಲ್ ಮೇಕ್ ಇನ್ ಇಂಡಿಯಾ ಅಂತ ಪ್ರಧಾನಿಗಳು ಹೇಳುತ್ತಾರೆ. ಅದರ ಒಳಾರ್ಥ ಚೀನಾದಿಂದ ಖರೀದಿಸಬೇಕು ಎಂದು ಮೋದಿ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ. 2021ರಲ್ಲಿ ಚೀನಾದಿಂದ ವಸ್ತುಗಳ ಆಮದಿನಲ್ಲಿ ಶೇ.46ರಷ್ಟು ಏರಿಕೆ ಕಂಡಿದೆ. ನಿರುದ್ಯೋಗ ವಿಚಾರದಲ್ಲಿ ಭಾರತ ದಾಖಲೆಯನ್ನು ಮುರಿದಿದೆ. ಚೈನಾ ಭಾರತ ಭೂಪ್ರದೇಶವನ್ನ ಆಕ್ರಮಿಸಿಕೊಂಡಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಚೀನಾದ ವಿಕಸನವನ್ನು ಈ ಮೂಲಕ ಖಾತ್ರಿ ಪಡಿಸುತ್ತಿದೆ ಎಂದಿದ್ದಾರೆ.
ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದುವರೆದು, ಭಾರತೀಯ ಜನತಾ ಪಕ್ಷವು ಬರು ಬರುತ್ತಾ ಬೀಜಿಂಗ್ ಜನತಾ ಪಕ್ಷವಾಗಿ ಪರಿವರ್ತನೆಯಗುತ್ತಿದೆ. ಬಿಜೆಪಿ ನಮ್ಮ ದೇಶದ ಭೂಮಿಯನ್ನಷ್ಟೇ ಅಲ್ಲ ನಮ್ಮ ದೇಶದ ಆರ್ಥಿಕತೆಯನ್ನ ಬಿಟ್ಟುಕೊಡುತ್ತಿದೆ ಎಂದು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಈ ಎರಡು ಟ್ವೀಟ್‌ಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ʻʻಒಂದೆಡೆ ಕೇಂದ್ರ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಮತ್ತೊಂದೆಡೆ ಚೀನಾ ನಮ್ಮ ದೇಶದಲ್ಲಿ ಮನೆಗಳನ್ನು ನಿರ್ಮಿಸುತ್ತಿದೆ ಇಷ್ಟಾದರೂ ಸಹ ಬಿಜೆಪಿಯವರು ಯಾಕಿಷ್ಟು ಮೌನ ವಹಿಸಿದ್ದಾರೆ? ಇದು ಯಾವ ರೀತಿಯ ದೇಶಭಕ್ತಿ ಎಂದು ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.
ಗುರುವಾರ ಬಿಜೆಪಿ ಸಂಸದ ತಪಿರ್ ಗಾವೊ ಹೇಳಿಕೆಯನ್ನು ಪ್ರಸ್ತಾಪಿಸಿದ ರಾಹುಲ್ ಚೀನಾ ಭಾರತೀಯ ನಾಗರೀಕರನ್ನು ಅಪಹರಿಸಿ ಚಿತ್ರಹಿಂಸೆಯನ್ನು ನೀಡುತ್ತಿದೆ. ಈ ಕುರಿತು ಸರ್ಕಾರ ಕಠಿಣ ಕ್ರಮವನ್ನ ಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ʻಚೀನಾ ಮೊದಲು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿತ್ತು. ನಂತರ ನಮ್ಮ ದೇಶದ ನಾಗರೀಕರನ್ನು ಅಪಹರಿಸಿ ಅವರ ಹಿಂಸೆಯನ್ನು ನೀಡುತ್ತಿದೆ. ಆದರೆ, ಮೋದಿಜೀ ಮೌನ ವಹಿಸುವ ಮೂಲಕ ಅಚ್ಚೇ ದಿನಕ್ಕಾಗಿ ಕಾಯುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಮಾತನಾಡುವ ವೇಳೆ ಚೀನಾ ಮತ್ತು ಪಾಕಿಸ್ತಾನದ ಬಗ್ಗೆ ಮೋದಿ ಸರ್ಕಾರ ತಾಳಿರುವ ನಿಲುವು ಉಭಯ ದೇಶಗಳು ಭಾರತದ ವಿರುದ್ದ ದ್ವೇಷ ಸಾಧಿಸುವ ಹಾಗಾಗಿದೆ. ಚೀನಾ ಮತ್ತು ಪಾಕಿಸ್ತಾನವನ್ನು ದೂರವಿಡುವುದು ಭಾರತದ ಏಕೈಕ ದೊಡ್ಡ ಕಾರ್ಯತಂತ್ರವಾಗಿದೆ. ಆದರೆ ನಿಮ್ಮ ಸರ್ಕಾರ ಮಾಡಿರುವುದು ಅವರನ್ನು ಒಟ್ಟಿಗೆ ಸೇರಿಸಿದೆ ನೀವು ಮಾಡಬಾರದ ಒಂದು ದೊಡ್ಡ ಅಪರಾಧವನ್ನ ಮಾಡಿದ್ದೀರಿ ಎಂದು ಸಂಸತ್ ಅಧಿವೇಶನದಲ್ಲಿ ಮಾತನಾಡುವ ವೇಳೆ ಉಲ್ಲೇಖಿಸಿದ್ದಾರೆ.