ಪಂಚಮಸಾಲಿ ಸಮುದಾಯದ ಒಳಗಿನ ಬೇಗುದಿ ಸದ್ಯ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸುವ ಸೂಚನೆಗಳು ಗೋಚರಿಸುತ್ತಿವೆ.
ಒಂದು ಕಡೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಸಾಮಾಜಿಕವಾಗಿ ಸಾಕಷ್ಟು ಸಂಚಲನ ಮೂಡಿಸಿದ್ದರೆ, ಮತ್ತೊಂದು ಕಡೆ ಸಮುದಾಯದ ಮೂರನೇ ಪೀಠದ ವಿಷಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಮೀಸಲಾತಿ ವಿಷಯದಲ್ಲಿ ಕಳೆದ ಒಂದು ವರ್ಷದಿಂದ ಕಾವೇರಿರುವ ಪಂಚಮಸಾಲಿ ಸಮುದಾಯದ ಹೋರಾಟ ಇದೀಗ ಒಂದು ಹಂತ ತಲುಪಿದ್ದು, ರಾಜ್ಯ ಬಜೆಟ್ ಗೆ ಮುನ್ನ ಮೀಸಲಾತಿ ಘೋಷಣೆ ಮಾಡದೇ ಇದ್ದಲ್ಲಿ ಮುಂದಿನ ನಡೆ ನಿರ್ಧರಿಸುವುದಾಗಿ ಹೋರಾಟದ ನೇತೃತ್ವ ವಹಿಸಿರುವ ಸ್ವಾಮೀಜಿಗಳು ಮತ್ತು ಸಮುದಾಯದ ನಾಯಕರು ಗಡುವು ನೀಡಿದ್ದಾರೆ.
ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಮೂಲಕವೇ ರಾಜ್ಯಾದ್ಯಂತ ಮನೆಮಾತಾದ ಸಮುದಾಯದ ಮಠಾಧೀಶರು ಮತ್ತು ನಾಯಕರ ನಡುವೆಯೇ ಹೋರಾಟದ ಅರ್ಧ ದಾರಿಯಲ್ಲೇ ಉಂಟಾದ ಬಿರುಕು ರಾಜ್ಯ ರಾಜಕಾರಣದ ಮೇಲೂ ಪರಿಣಾಮ ಬೀರತೊಡಗಿದ್ದು, ಸಿಎಂ ಬೊಮ್ಮಾಯಿ ಸಂಪುಟದ ಪ್ರಮುಖ ಸಚಿವರಾಗಿರುವ ಮುರುಗೇಶ್ ನಿರಾಣಿಯವರ ವಿರುದ್ಧ ಸಮುದಾಯದ ಒಂದು ಬಣ ಬಹಿರಂಗ ಆಕ್ರೋಶ ವ್ಯಕ್ತಪಡಿಸತೊಡಗಿದೆ.
ಮೀಸಲಾತಿಗಾಗಿ ಆಗ್ರಹಿಸಿ ಆರು ತಿಂಗಳ ಹಿಂದೆ ಸಮುದಾಯದ ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ನಡುವೆಯೇ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯುತ್ತಲೇ ಮುರುಗೇಶ್ ನಿರಾಣಿಯವರು ಪಾದಯಾತ್ರೆಯಿಂದ ಹಿಂದೆ ಸರಿದಿದ್ದರು. ಅಷ್ಟೇ ಅಲ್ಲ; ಮೀಸಲಾತಿ ಹೋರಾಟದ ಕುರಿತೇ ಅಪಸ್ವರವೆತ್ತಿದ್ದರು. ನಿರಾಣಿಯವರ ವರಸೆ ಬದಲಾಗುತ್ತಲೇ ಅವರ ವಿರುದ್ಧ ಹೋರಾಟದದ ನೇತಾರರಾದ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್ ಮತ್ತು ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲಿಂದ ಆರಂಭವಾದ ಸಮುದಾಯದ ನಾಯಕರ ನಡುವಿನ ಒಡಕು ಇದೀಗ ಪ್ರತ್ತೇಕ ಮಠ ಸ್ಥಾಪನೆಗೆ ಬಂದು ತಲುಪಿದೆ. ಇದೀಗ ಮೀಸಲಾತಿ ಹೋರಾಟ ಬದಿಗೆ ಸರಿದು ಮಠದ ಕಿತ್ತಾಟ ಮುಂಚೂಣಿಗೆ ಬಂದು ನಿಂತಿದ್ದು, ಈಗಾಗಲೇ ಕೂಡಲಸಂಗಮ ಮತ್ತು ಹರಿಹರ ಮಠ ಸೇರಿದಂತೆ ಸಮುದಾಯದ ಎರಡು ಮಠಗಳು ಇರುವಾಗ, ಮತ್ತೊಂದು ಮಠ ಸ್ಥಾಪಿಸುವ ಉದ್ದೇಶವೇನು ಮತ್ತು ಆ ಪ್ರಯತ್ನದ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗಳು ಚರ್ಚೆಯಾಗುತ್ತಿವೆ. ಅದರಲ್ಲೂ ಮೂರನೇ ಮಠ ಈಗಿನ ಸಮುದಾಯದ ಮೂಲ ಮಠ ಎನ್ನಲಾಗುತ್ತಿರುವ ಕೂಡಲಸಂಗಮ ಮಠಕ್ಕೆ ಪರ್ಯಾಯವಾಗಿ ಸ್ಥಾಪನೆಯಾಗುತ್ತಿದ್ದು, ಆ ಪ್ರಯತ್ನದ ಹಿಂದೆ ಮುರುಗೇಶ್ ನಿರಾಣಿ ಇದ್ದಾರೆ. ಮೀಸಲಾತಿ ಹೋರಾಟದ ವಿಷಯದಲ್ಲಿ ತಮ್ಮ ವಿರುದ್ಧ ತಿರುಗಿಬಿದ್ದಿರುವ ಸಮುದಾಯದ ಕೆಲವು ನಾಯಕರಿಗೆ ತಿರುಗೇಟು ನೀಡಲು ಮತ್ತು ಕೂಡಲಸಂಗಮ ಸ್ವಾಮೀಜಿಯ ವಿರುದ್ಧದ ತಮ್ಮ ಅಸಮಾಧಾನದ ಹಿನ್ನೆಲೆಯಲ್ಲಿ ನಿರಾಣಿಯವರೇ ಪರ್ಯಾಯ ಮಠ ಸ್ಥಾಪಿಸುತ್ತಿದ್ದಾರೆ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು.
ಸ್ವತಃ ಕೂಡಲಸಂಗಮ ಸ್ವಾಮೀಜಿ ಮತ್ತು ಮೀಸಲಾತಿ ಹೋರಾಟದ ಮುಂಚೂಣಿ ನಾಯಕರು ಕೂಡ ಈ ಮಾತನ್ನು ಹೇಳಿದ್ದಾರೆ. ನಿರಾಣಿಯ ಕುಮ್ಮಕ್ಕಿನಿಂದಲೇ ಮೂರನೇ ಪೀಠ ಹುಟ್ಟಿಕೊಳ್ಳುತ್ತಿದೆ. ಆ ಮೂಲಕ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. ಆದರೆ, ಅದಕ್ಕೆ ಪ್ರತಿಕ್ರಿಯಿಸಿರುವ ನಿರಾಣಿ, ಮೂರನೇ ಪೀಠ ಬಂದರೆ ತಪ್ಪೇನು. ಪಂಚಮಸಾಲಿ ಸಮುದಾಯ ಅತಿದೊಡ್ಡ ಲಿಂಗಾಯತ ಸಮುದಾಯ. ಅದಕ್ಕೆ ಮೂರು ಮತ್ತೊಂದು ಮಠ ಇದ್ದರೆ ಒಳ್ಳೆಯದೇ ಎಂದು ಹೇಳಿದ್ದಾರೆ. ಆದರೆ, ಆ ಮಠದ ಹಿಂದೆ ತಾವಿರುವ ಆರೋಪವನ್ನು ಅವರು ಎಲ್ಲೂ ತಳ್ಳಿಹಾಕಿಲ್ಲ ಎಂಬುದು ಗಮನಾರ್ಹ.
ಈ ನಡುವೆ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಪಂಚಮಸಾಲಿ ಸಮುದಾಯದ ಮತ್ತೊಂದು ಪ್ರಮುಖ ಮಠವಾದ ಹರಿಹರದ ಪಂಚಮಸಾಲಿ ವೀರಶೈವ ಲಿಂಗಾಯತ ಪೀಠದ ವಚನಾನಂದ ಸ್ವಾಮೀಜಿ ಕೂಡ ಮೂರನೇ ಪೀಠಕ್ಕೆ ಬೆಂಬಲ ಸೂಚಿಸಿದ್ದು, ಹೊಸ ಮಠಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಅಲ್ಲಿಗೆ ಪಂಚಮಸಾಲಿ ಸಮುದಾಯ ಎರಡು ಹೋಳಾದಂತಾಗಿದೆ. ಒಂದು ಕೂಡಲಸಂಗಮದ ಜಯಮೃತ್ಯಂಜಯ ಸ್ವಾಮೀಜಿ ನೇತೃತ್ವದ ಬಣ ಮತ್ತೊಂದು ಮೂರನೇ ಮಠದ ಬಣ.
ಹೀಗೆ ಒಂದು ಕಡೆ ಮೀಸಲಾತಿ ಹೋರಾಟ, ಮತ್ತೊಂದು ಕಡೆ ಮಠದ ವಿವಾದಗಳು ಕಾವೇರುತ್ತಿರುವ ನಡುವೆ ಜಮಖಂಡಿಯಲ್ಲಿ ಫೆ.14ರಂದು ನಡೆಯಲಿರುವ ಸಮಾರಂಭದಲ್ಲಿ ಮೂರನೇ ಪೀಠಕ್ಕೆ ಚಾಲನೆ ನೀಡಲಾಗುವುದು ಎಂದು ಪಂಚಮಸಾಲಿ ಒಕ್ಕೂಟದ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ಘೋಷಿಸಿದ್ದಾರೆ ಮತ್ತು ಈಗಾಗಲೇ ಜಮಖಂಡಿ ಸಮೀಪದ ಅಲಗೂರು ಗ್ರಾಮದಲ್ಲಿ ಸಮಾರಂಭದ ತಯಾರಿ ಕಾರ್ಯಗಳು ಭರದಿಂದ ಸಾಗಿವೆ. ಪಂಚಮಸಾಲಿ ಒಕ್ಕೂಟದ ಮೂವತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಮೂರನೇ ಪೀಠದ ಸಾರಥ್ಯ ವಹಿಸಿದ್ದಾರೆ.
ಅಷ್ಟಕ್ಕೂ ಮೂರನೇ ಪೀಠದ ವಿಷಯ ಸಮುದಾಯದ ಒಗ್ಗಟ್ಟನ್ನು ಒಡೆಯುವ ಮಟ್ಟಿಗೆ ಪ್ರತಿಷ್ಠೆಯ ವಿಷಯವಾಗಿದ್ದು ಯಾಕೆ? ಎಂಬುದು ಈಗಿನ ಪ್ರಶ್ನೆ. ವಾಸ್ತವವಾಗಿ ಈಗಾಗಲೇ ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಎರಡು ಮಠಗಳಿವೆ. ಆ ಮಠಗಳಿಗೆ ಪರ್ಯಾಯವಾಗಿ ಮತ್ತೊಂದು ಮಠ ಬೇಕು ಎಂಬ ಕೂಗು ಸಮಾಜದ ಜನಸಾಮಾನ್ಯರ ನಡುವೆಯಾಗಲೀ, ಅಥವಾ ಎರಡೂ ಮಠಗಳ ಭಕ್ತರ ಕಡೆಯಿಂದಲಾಗಲೀ ಈ ಮೊದಲು ಕೇಳಿಬಂದಿರಲಿಲ್ಲ. ಆದರೂ ಸಮುದಾಯದ ಮೀಸಲಾತಿಗಾಗಿ ಕೂಡಲಸಂಗಮ ಮಠದ ಸ್ವಾಮೀಜಿ ಪ್ರಬಲ ಹೋರಾಟ ಕಟ್ಟುತ್ತಿದ್ದಂತೆ ದಿಢೀರನೇ ಮೂರನೇ ಪೀಠದ ಕನಸು ಮೊಳಕೆಯೊಡೆದಿದ್ದು ಹೇಗೆ ಎಂಬುದು ಒಗಟು.
ಆ ಒಗಟನ್ನು ಬಿಡಿಸಲು ಹೋದರೆ, ಮೀಸಲಾತಿ ಹೋರಾಟ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಕುತ್ತು ತರುವ ಮಟ್ಟಕ್ಕೆ ಪ್ರಭಾವಿಯಾಗಿ ಬೆಳೆದದ್ದು, ನೇರವಾಗಿ ಯಡಿಯೂರಪ್ಪ ಅವರಿಗೇ ಸವಾಲು ಹಾಕುವ ಮಟ್ಟಕ್ಕೆ ಹೋರಾಟದ ದನಿಗಳು ಮೊಳಗಿದ್ದು ಮತ್ತು ಆ ಬಳಿಕವೂ ಯಡಿಯೂರಪ್ಪ ಬದಲಾದರೂ ಬೊಮ್ಮಾಯಿ ಅವರ ಮೇಲೆಯೂ ಒತ್ತಡ ಹೇರಿ ಮೀಸಲಾತಿ ನೀಡದೇ ಹೋದರೆ ಸಮುದಾಯ ಬಿಜೆಪಿಯ ವಿರುದ್ಧ ತಿರುಗಿಬೀಳಲಿದೆ ಎಂಬ ಸಂದೇಶ ರವಾನಿಸಿದ್ದು, ಈ ನಡುವೆ ನಿರಾಣಿಗೆ ಸಚಿವ ಸ್ಥಾನ ನೀಡುವ ಮೂಲಕ ಮೀಸಲಾತಿ ಹೋರಾಟವನ್ನು ದುರ್ಬಲಗೊಳಿಸುವ ಬಿಜೆಪಿಯ ಯತ್ನ ಫಲಿಸದೆ ಸ್ವತಃ ನಿರಾಣಿ ವಿರುದ್ಧವೇ ಹೋರಾಟಗಾರರು ತಿರುಗಿಬಿದ್ದದ್ದು,.. ಈ ಎಲ್ಲವನ್ನೂ ಒಂದಕ್ಕೊಂದು ಜೋಡಿಸಿ ನೋಡಿದರೆ, ಮೂರನೇ ಮಠದ ಹಿಂದಿನ ರಾಜಕೀಯ ಲೆಕ್ಕಾಚಾರಗಳ ವಾಸನೆ ಸಿಗದೇ ಇರದು.

ಆದರೆ, ಒಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಇಬ್ಬರೂ ನೇರವಾಗಿ ನಿರಾಣಿಯವರನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡುತ್ತಿರುವುದು ಮತ್ತು ಸಚಿವ ಸಂಪುಟ ಪುನರ್ ರಚನೆಯಲ್ಲಿ ನಿರಾಣಿ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ಹೇಳುತ್ತಿರುವುದು, ಮತ್ತೊಂದು ಕಡೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾಗಲಿದೆ, ನಿರಾಣಿಯವೇ ಮುಂದಿನ ಮುಖ್ಯಮಂತ್ರಿ ಎಂಬ ಸುದ್ದಿಗಳು ಹುಟ್ಟುತ್ತಿರುವುದು ಕುತೂಹಲ ಮೂಡಿಸಿದೆ. ಅದರಲ್ಲೂ ಬಿಜೆಪಿಯ ವರಿಷ್ಠರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲೇ ನಿರಾಣಿ ಲೆಕ್ಕಾಚಾರದ ಹೆಜ್ಜೆಗಳನ್ನು ಇಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿರುವುದು ಮೀಸಲಾತಿ ಬೇಡಿಕೆಯ ಹೋರಾಟ ಬಿಜೆಪಿ ಸರ್ಕಾರದ ಪಾಲಿಗೆ ಕುತ್ತಿಗೆಗೆ ಬಂದಿರುವುದರ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಮೀಸಲಾತಿ ಹೋರಾಟದ ವಿಷಯದಲ್ಲಿ ಕೂಡಲ ಸಂಗಮ ಸ್ವಾಮೀಜಿ ನೇತೃತ್ವದಲ್ಲಿ ಬಿಜೆಪಿಯ ಸಚಿವ ಸ್ಥಾನ ವಂಚಿಕ ಯತ್ನಾಳ್ ಮತ್ತು ಅರವಿಂದ್ ಬೆಲ್ಲದ್ ಮತ್ತಿತರ ನಾಯಕರು ಪಾದಯಾತ್ರೆ ನಡೆಸಿದ್ದು ಮತ್ತು ಬಿಜೆಪಿ ಸರ್ಕಾರ ಮತ್ತು ವರಿಷ್ಠರಿಗೆ ಸವಾಲು ಹಾಕಿದ್ದೇ ಮುಳುವಾಯಿತೆ? ಬಿಜೆಪಿಯ ಹಾಲಿ ಸರ್ಕಾರಕ್ಕೆ ಮಾತ್ರವಲ್ಲದೆ ಭವಿಷ್ಯದ ಚುನಾವಣೆಯ ಹಿನ್ನೆಲೆಯಲ್ಲಿಯೂ ನುಂಗಲಾರದ ತುತ್ತಾಗಿರುವ ಈ ಪಂಚಮ ಸಾಲಿ ಮೀಸಲಾತಿ ಸವಾಲನ್ನು ಬಗ್ಗುಬಡಿಯಲು ಬಿಜೆಪಿ ಹೈಕಮಾಂಡ್ ನಿರಾಣಿ ಮೂಲಕ ಪ್ರತ್ಯೇಕ ಪೀಠದ ದಾಳ ಪ್ರಯೋಗಿಸಿದೆಯೇ ಎಂಬ ಬಗ್ಗೆಯೂ ಸ್ವತಃ ಪಂಚಮಸಾಲಿ ಸಮುದಾಯದ ಒಳಗೇ ಸಾಕಷ್ಟು ಚರ್ಚೆ ಶುರುವಾಗಿದೆ.
ರಾಜ್ಯದ ಮೂಲದ ಬಿಜೆಪಿ ಹೈಕಮಾಂಡಿನ ಪ್ರಭಾವಿ ನಾಯಕರೊಬ್ಬರ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ದಿಕ್ಕುತಪ್ಪಿಸುವ ದೂರಗಾಮಿ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಸಮುದಾಯದ ಪರ್ಯಾಯ ಶಕ್ತಿಯನ್ನು ಹುಟ್ಟುಹಾಕುವ ಮೂಲಕ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಮಠಾಧೀಶರನ್ನು ಮೂಲೆಗುಂಪು ಮಾಡುವ ಮತ್ತು ಆ ಮೂಲಕ ಇಡೀ ಹೋರಾಟವನ್ನೇ ಸದ್ದಡಗಿಸುವ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ರಾಜಕೀಯ ಮಹತ್ವಾಕಾಂಕ್ಷೆಯ ಮುರುಗೇಶ್ ನಿರಾಣಿಯವರನ್ನೇ ಗುರಾಣಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದು ಒಂದು ವಾದ.
ಒಟ್ಟಾರೆ, ಸದ್ಯಕ್ಕೆ ರಾಜ್ಯ ಬಜೆಟ್ ಗೆ ಮುನ್ನ ಮೀಸಲಾತಿ ಘೋಷಿಸುವ ಗಡುವು ಸಮೀಪಿಸುತ್ತಿರುವ ಹೊತ್ತಿಗೆ ಸರಿಯಾಗಿ ಪಂಚಮಸಾಲಿ ಮೂರನೇ ಪೀಠ ಅಸ್ತಿತ್ವಕ್ಕೆ ಬರಲಿದೆ. ಆ ಪೀಠದ ವಿಷಯದಲ್ಲಿ ಈಗ ನಡೆಯುತ್ತಿರುವ ವಾಗ್ವಾದ ಮತ್ತು ಸಂಘರ್ಷ ಅಷ್ಟರ ವೇಳೆಗೆ ಯಾವ ಸ್ವರೂಪ ಪಡೆಯುವುದೋ ಎಂಬುದರ ಮೇಲೆ ಮೀಸಲಾತಿ ಹೋರಾಟದ ಭವಿಷ್ಯವೂ ನಿಂತಿದೆ ಎಂಬುದಂತೂ ನಿಜ.











