ಅಂತೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೊರಟುನಿಂತಿದ್ದಾರೆ. ಸಂಪುಟ ವಿಸ್ತರಣೆಯ ನಿರೀಕ್ಷೆ ಮತ್ತು ಸಂಪುಟ ಪುನರ್ ರಚನೆಯ ಒತ್ತಡದ ನಡುವೆ ಮುಖ್ಯಮಂತ್ರಿಗಳ ದೆಹಲಿ ಭೇಟಿ ಸಹಜವಾಗೇ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯ ಬಜೆಟ್ ಪೂರ್ವಭಾವಿಯಾಗಿ ಸಂಸದರೊಂದಿಗೆ ಮಾತುಕತೆ ನಡೆಸುವುದು ವಾಡಿಕೆ. ಆ ಹಿನ್ನೆಲೆಯಲ್ಲಿ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಿರುವ ಸಂಸದರನ್ನು ದೆಹಲಿಯಲ್ಲಿಯೇ ಭೇಟಿಯಾಗುವ ಉದ್ದೇಶದಿಂದ ತಾವು ದೆಹಲಿಗೆ ತೆರಳುತ್ತಿರುವುದಾಗಿ ಸ್ವತಃ ಬೊಮ್ಮಾಯಿ ಅವರೇ ಹೇಳಿದ್ದಾರೆ. ಜೊತೆಗೆ ನದಿ ಜೋಡಣೆ ಪ್ರಸ್ತಾಪದ ಹಿನ್ನೆಲೆಯಲ್ಲಿ ರಾಜ್ಯದ ಹಿತ ಕಾಯುವ ನಿಟ್ಟಿನಲ್ಲಿ ಜಲ ತಜ್ಞರು ಮತ್ತು ಕಾನೂನು ಪರಿಣತರೊಂದಿಗೆ ಚರ್ಚೆ ನಡೆಸುವ ಉದ್ದೇಶ ಈ ಭೇಟಿಯದ್ದಾಗಿದೆ ಎಂದೂ ವಿವರಿಸಿದ್ದಾರೆ.
ಆದರೆ, ಅವರು ವಿವರಿಸದೆ ಇದ್ದರೂ ಈ ದೆಹಲಿ ಭೇಟಿಯ ಮುಖ್ಯ ಅಜೆಂಡಾ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯ ವಿಷಯವೇ ಎಂಬುದು ಗುಟ್ಟೇನಲ್ಲ. ಏಕೆಂದರೆ, ಸಿಎಂ ಈಗಾಗಲೇ ಬಿಜೆಪಿ ಹೈಕಮಾಂಡಿನ ಭಾಗವಾದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಹಲವರನ್ನು ಭೇಟಿಯಾಗಲು ಸಮಯ ನಿಗದಿ ಕೂಡ ಮಾಡಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲೇ ಗುರುವಾರಕ್ಕೆ ನಿಗದಿಯಾಗಿದ್ದ ಪ್ರವಾಸ ದಿಢೀರನೇ ಸೋಮವಾರಕ್ಕೆ ಹೋಗಿದ್ದು, ಬರೋಬ್ಬರಿ ಎರಡು ದಿನ ಸಂಪೂರ್ಣ ಸಿಎಂ ದೆಹಲಿಯಲ್ಲಿಯೇ ಬೀಡುಬಿಟ್ಟು ಪಕ್ಷದ ಮತ್ತು ಸರ್ಕಾರದ ಪ್ರಮುಖರನ್ನು ಭೇಟಿಯಾಗಲಿದ್ದಾರೆ. ಮುಖ್ಯವಾಗಿ ಈ ವೇಳೆ ಸಂಪುಟದ ಕುರಿತು ವರಿಷ್ಠರ ಸಲಹೆ ಮತ್ತು ಒಪ್ಪಿಗೆ ಪಡೆಯಲಿದ್ದಾರೆ.
ಮುಖ್ಯಮಂತ್ರಿಗಳ ದೆಹಲಿ ಭೇಟಿ ನಿಗದಿಯಾಗುತ್ತಲೇ ರಾಜ್ಯ ಬಿಜೆಪಿಯಲ್ಲಿ ಸಹಜವಾಗಿಯೇ ಚಟುವಟಿಕೆಗಳು ಗರಿಗೆದರಿದ್ದು, ಸಂಪುಟ ಸೇರಲು ತುದಿಗಾಲಲ್ಲಿರುವ ನಾಯಕರು ಕೊನೇ ಕ್ಷಣದ ಕಸರತ್ತುಗಳಿಗೆ ಜೋತುಬಿದ್ದಿದ್ದರೆ, ಸಂಪುಟ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿರುವವರು ಕುರ್ಚಿ ಉಳಿಸಿಕೊಳ್ಳಲು ಇನ್ನಿಲ್ಲದ ಯತ್ನ ನಡೆಸಿದ್ದಾರೆ.
ಬಿಜೆಪಿಯ ಈವರೆಗಿನ ಎಲ್ಲಾ ಸರ್ಕಾರಗಳಲ್ಲಿ ಸಚಿವರಾಗಿರುವ ಮತ್ತು ಪಕ್ಷದಲ್ಲಿ ಹಿರಿಯರಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಕಳೆದ ಒಂದೂವರೆ ತಿಂಗಳಿನಿಂದ ಹಲವು ಸಚಿವಸ್ಥಾನ ವಂಚಿತರ ಟೀಕೆಗಳ ಗುರಿಯಾಗಿದ್ದರು. ಎಲ್ಲಾ ಸರ್ಕಾರಗಳಲ್ಲಿ ಮಂತ್ರಿಗಿರಿ ಅನುಭವಿಸಿರುವ ಹಿರಿಯರನ್ನು ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನಾ ಕಾರ್ಯಕ್ಕೆ ಹಚ್ಚಬೇಕು ಮತ್ತು ಅವಕಾಶವಂಚಿತರಾಗಿರುವ ಅರ್ಹರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಿ ಚುನಾವಣಾ ಹೊಸ್ತಿಲಲ್ಲಿ ಪಕ್ಷಕ್ಕೆ ಬಲ ತುಂಬಬೇಕು ಎಂಬ ಕೂಗು ಹಲವು ಹಿರಿಯ ಶಾಸಕರು ಮತ್ತು ನಾಯಕರಿಂದಲೇ ಕೇಳಿಬಂದಿತ್ತು. ಈಶ್ವರಪ್ಪ ಕೂಡ ಅಂತಹ ಹೇಳಿಕೆಗಳಿಗೆ ಸ್ವಯಂಪ್ರೇರಿತರಾಗಿ ಪ್ರತಿಕ್ರಿಯಿಸಿ, ಪಕ್ಷ ಸಚಿವ ಸ್ಥಾನ ಬಿಟ್ಟುಕೊಡಿ ಎಂದರೆ ಬಿಡುವೆ, ಸಂಘಟನೆಯ ಕೆಲಸ ವಹಿಸಿದರೆ ಮಾಡುವೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ ಎಂಬ ಸ್ಪಷ್ಟನೆಯನ್ನೂ ನೀಡಿದ್ದರು.
ಆದರೆ, ಈ ನಡುವೆ ಕೆ ಎಸ್ ಈಶ್ವರಪ್ಪ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳು ತೆರೆಮರೆಯ ಕಸರತ್ತುಗಳಿಗೆ ಚಾಲನೆ ನೀಡಿದ್ದರು. ಕಳೆದ ಬಾರಿ ರಾಯಣ್ಣ ಬ್ರಿಗೇಡ್ ಗೆ ಚಾಲನೆ ನೀಡುವ ಮೂಲಕ ಜಾತಿ ಕಾರ್ಡ್ ಬಳಸಿ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದ ಈಶ್ವರಪ್ಪ, ಇದೀಗ ಮತ್ತೆ ಜಾತಿ ಅಸ್ತ್ರವನ್ನೇ ಬಳಸಿದ್ದು, ಸ್ವಜಾತಿಯ ಮಠಾಧೀಶರ ಮೂಲಕ ಸಿಎಂ ಮೇಲೆ ಒತ್ತಡ ಹಾಕಿಸಿದ್ದಾರೆ. ಮಠಗಳಿಗೆ ಅನುದಾನ ಕೋರಿ ಇತ್ತೀಚೆಗೆ ಸಿಎಂ ಭೇಟಿ ಮಾಡಿದ ಮಠಾಧೀಶರ ನಿಯೋಗದಲ್ಲಿ ಸ್ವತಃ ಈಶ್ವರಪ್ಪ ಕಾಣಿಸಿಕೊಂಡಿದ್ದರ ಹಿಂದಿನ ಲೆಕ್ಕಾಚಾರವೇ ಮಂತ್ರಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದಾಗಿತ್ತು ಎನ್ನಲಾಗುತ್ತಿದೆ.
ಈ ನಡುವೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಕಳೆದ ಎರಡೂವರೆ ವರ್ಷಗಳಿಂದ ಬಕಪಕ್ಷಿಯಂತೆ ಕಾಯುತ್ತಿರುವ ಸಚಿವ ಶ್ರೀರಾಮುಲು ಈ ಬಾರಿಯ ಪುನರ್ ರಚನೆಯಲ್ಲಾದರೂ ಆ ಸ್ಥಾನ ದಕ್ಕಿಸಿಕೊಳ್ಳಲು ಈಗಾಗಲೇ ದೆಹಲಿಗೆ ಹಾರಿದ್ದಾರೆ. ಸಿಎಂ ದೆಹಲಿಗೆ ಆಗಮಿಸುವ ಮುನ್ನವೇ ದೆಹಲಿಯ ಬಿಜೆಪಿ ಶಕ್ತಿಕೇಂದ್ರದಲ್ಲಿ ತಮ್ಮ ಲಾಬಿ ಆರಂಭಿಸಿದ್ದಾರೆ. ಆದರೆ, ಒಂದು ವೇಳೆ ಸಂಪುಟ ಪುನರ್ ರಚನೆಯಾದರೆ ಉಪ ಮುಖ್ಯಮಂತ್ರಿ ಸ್ಥಾನಗಳಲ್ಲೂ ಬದಲಾವಣೆಯಾಗಲಿದೆಯೇ? ಆಗ ತಮ್ಮ ಸಮುದಾಯದ ಇತರ ನಾಯಕರನ್ನು ಮೀರಿ ಶ್ರೀರಾಮುಲು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗುವರೇ ಎಂಬುದನ್ನು ಕಾದುನೋಡಬೇಕಿದೆ.
ಈ ನಡುವೆ ಸಂಪುಟ ಪುನರ್ ರಚನೆಗೇ ಒತ್ತಡ ಹೆಚ್ಚಿರುವುದರಿಂದ ಬಹುತೇಕ ಪುನರ್ ರಚನೆಯಾಗಲಿದೆ. ಪುನರ್ ರಚನೆಯಾಗದೇ ಇದ್ದಲ್ಲಿ ಬಿಜೆಪಿಯಲ್ಲಿ ಈಗಾಗಲೇ ಭುಗಿಲೆದ್ದಿರುವ ಅತೃಪ್ತಿ ಮತ್ತು ಅಸಮಾಧಾನ ಮಾರು ಸುಟ್ಟು ಮನೆ ಸುಡುವ ಅಪಾಯವಿದೆ. ಜೊತೆಗೆ ಬೆಳಗಾವಿ ಸಕ್ಕರೆ ಲಾಬಿಯ ಒತ್ತಡ ಕೂಡ ಇದ್ದು, ಜಾರಕಿಹೊಳಿ ಮತ್ತು ಉಮೇಶ್ ಕತ್ತಿ ಬಣವಗಳ ನಡುವಿನ ಭಿನ್ನಮತವನ್ನು ಶಮನಗೊಳಿಸಲು ಕೂಡ ಸಂಪುಟ ಪುನರ್ ರಚನೆ ಉಪಾಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಅವಕಾಶ. ಹಾಗಾಗಿ ಪುನರ್ ರಚನೆಯ ಸಾಧ್ಯತೆಗಳು ದಟ್ಟವಾಗಿದ್ದು, ಯಾರೆಲ್ಲಾ ಸಂಪುಟದಿಂದ ಹೊರಹೋಗಲಿದ್ದಾರೆ ಮತ್ತು ಯಾರೆಲ್ಲಾ ಮಂತ್ರಿಗಿರಿ ಪಡೆಯಲಿದ್ದಾರೆ ಎಂಬ ಚರ್ಚೆ ಬಿಜೆಪಿ ಪಡಸಾಲೆಯಲ್ಲಿ ರಂಗೇರಿದೆ.
ಮಾಹಿತಿಯ ಪ್ರಕಾರ ಹಾಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಜೊತೆಗೆ ಇನ್ನೂ ಎಂಟು ಮಂದಿ ಸಚಿವರನ್ನು ಕೈಬಿಟ್ಟು ಆ ಸ್ಥಾನಗಳೂ ಸೇರಿ ಒಟ್ಟು 10-12 ಮಂದಿ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆ ಪೈಕಿ ಪ್ರಮುಖವಾಗಿ ರೆಬೆಲ್ ನಾಯಕರಾಗಿರುವ ಬಸನಗೌಡ ಪಾಟೀಲ್ ಯತ್ನಾಳ್, ಎಂ ಪಿ ರೇಣುಕಾಚಾರ್ಯ, ಅರವಿಂದ್ ಬೆಲ್ಲದ್, ಜಿ ಎಚ್ ತಿಪ್ಪಾರೆಡ್ಡಿ, ಗೂಳಿಹಟ್ಟಿ ಶೇಖರ್, ಅಪ್ಪಚ್ಚು ರಂಜನ್, ಎಸ್ ಎ ರಾಮದಾಸ್, ರಾಜುಗೌಡ ನಾಯಕ್, ಪೂರ್ಣಿಮಾ ಶ್ರೀನಿವಾಸ್, ಆನಂದ್ ಮಾಮನಿ ಅವರ ಹೆಸರುಗಳು ಸಂಪುಟ ಸೇರಲಿದ್ದಾರೆ. ಆ ಮೂಲಕ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಎರಡನೇ ಹಂತದ ನಾಯಕರನ್ನು ಮುಂಚೂಣಿಗೆ ತರುವ ಯತ್ನವಾಗಿಯೂ ಈ ಸಂಪುಟ ಪುನರ್ ರಚನೆ ಅಸ್ತ್ರವಾಗಲಿದೆ ಎನ್ನಲಾಗುತ್ತಿದೆ.
ಅದೇ ಹೊತ್ತಿಗೆ, ಪಕ್ಷ ಮತ್ತು ಸರ್ಕಾರದಲ್ಲಿ ಅನುಭವಿ ಹಿರಿಯರಾಗಿರುವ ಕೆ ಎಸ್ ಈಶ್ವರಪ್ಪ, ವಿ ಸೋಮಣ್ಣ, ಗೋವಿಂದ್ ಕಾರಜೋಳ ಮತ್ತು ಮುರುಗೇಶ್ ನಿರಾಣಿ ಅವರನ್ನು ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಯ ಹೊಣೆ ಹೊರಿಸಬಹುದು. ಜೊತೆಗೆ ಖಾತೆಗಳನ್ನು ನಿಭಾಯಿಸುವಲ್ಲಿ ಎಡವುತ್ತಿರುವ ಮತ್ತು ಕ್ರಿಯಾಶೀಲವಾಗಿ ಇಲ್ಲ ಎಂಬ ದೂರುಗಳಿರುವ ಪ್ರಭು ಚೌಹಾಣ್, ಶಶಿಕಲಾ ಜೊಲ್ಲೆ, ಕೆ ಸಿ ನಾರಾಯಣ ಗೌಡ ಸೇರಿದಂತೆ ಕೆಲವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಮುಖ್ಯವಾಗಿ ಸಂಪುಟ ಪುನರ್ ರಚನೆಯ ಮೂಲಕ ಸರ್ಕಾರ ಮತ್ತು ಪಕ್ಷದ ನಡುವಿನ ಸಮನ್ವಯತೆಗೆ ಹೆಚ್ಚು ಆದ್ಯತೆ ನೀಡುವುದು ಚುನಾವಣಾ ಕಣದಲ್ಲಿ ಪಕ್ಷದ ವರಿಷ್ಠರ ಯೋಜನೆಯಾಗಿದೆ. ಅದರಂತೆ ಎರಡನೇ ತಲೆಮಾರಿನ ಉತ್ಸಾಹಿ ನಾಯಕರಿಗೆ ಸಂಪುಟದಲ್ಲಿ ಅವಕಾಶ ನೀಡುವುದು ಮತ್ತು ಅದೇ ಹೊತ್ತಿಗೆ ಅನುಭವಿ ಹಿರಿಯ ನಾಯಕರನ್ನು ಪಕ್ಷ ಸಂಘಟನೆಗೆ ಹಚ್ಚುವುದು ಯೋಜನೆ. ಆ ಸೂತ್ರದಂತೆ ಎಲ್ಲವೂ ನಡೆದರೆ ಸಚಿವ ಸ್ಥಾನ ವಂಚಿತರ ಅಸಮಾಧಾನವನ್ನೂ ತಣಿಸಬಹುದು ಮತ್ತು ಪಕ್ಷದ ಚುನಾವಣಾ ಯಂತ್ರವನ್ನೂ ಬಲಪಡಿಸಬಹುದು ಎಂಬುದು ಅವರ ಲೆಕ್ಕಾಚಾರ ಎನ್ನಲಾಗುತ್ತಿದೆ.
ಆದರೆ, ಈಗಾಗಲೇ ಉತ್ತರಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಕಾವೇರಿರುವ ಹೊತ್ತಿನಲ್ಲಿ ಆ ಚುನಾವಣೆಗಳಲ್ಲಿ ಮುಳುಗಿರುವ ಪಕ್ಷದ ವರಿಷ್ಠರು ಚುನಾವಣೆಗೆ ಮುನ್ನವೇ ಕರ್ನಾಟಕದ ಸಂಪುಟದ ವಿಷಯಕ್ಕೆ ಕೈ ಹಾಕಿ ಮತ್ತೊಂದು ತಲೆನೋವು ಆಹ್ವಾನಿಸಿಕೊಳ್ಳುವರೇ ? ಅಥವಾ ಆ ರಾಜ್ಯಗಳ ಚುನಾವಣೆ ಬಳಿಕ ಈ ವಿಷಯ ನೋಡೋಣ. ಸದ್ಯಕ್ಕೆ ಸಂಪುಟದ ವಿಷಯದಲ್ಲಿ ಯಾವುದೇ ತರಾತುರಿ ಬೇಡ ಎಂದು ಮುಖ್ಯಮಂತ್ರಿಗಳನ್ನು ಸಾಗಹಾಕುವರೇ ಎಂಬುದನ್ನು ಕಾದುನೋಡಬೇಕಿದೆ.