ಕಳೆದ ಐದು ತಿಂಗಳಿನಿಂದ ಕಾಂಗ್ರೆಸ್ ನ ಹಿರಿಯ ನಾಯಕ ಪಿ.ಚಿದಂಬರಂ ಪ್ರತಿ ಎರಡು ಮೂರು ವಾರಗಳಿಗೊಮ್ಮೆ ಗೋವಾಕ್ಕೆ ಭೇಟಿ ನೀಡುತ್ತಿದ್ದಾರೆ. ಕರಾವಳಿ ರಾಜ್ಯದ ಎಲ್ಲಾ 40 ಕ್ಷೇತ್ರಗಳಿಗೂ ಅವರು ಭೇಟಿ ನೀಡಿದ್ದಾರೆ. ಬ್ಲಾಕ್ ಮಟ್ಟದ ಸಭೆಗಳನ್ನು ಉದ್ದೇಶಿಸಿ, ಸದಸ್ಯತ್ವ ನೋಂದಣಿ ಅಭಿಯಾನಗಳನ್ನು ಪ್ರಾರಂಭಿಸಿ ಮತ್ತು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತಮ್ಮದೇ ಕಾರ್ಯತಂತ್ರ ರೂಪಿಸಿದ್ದಾರೆ.
76 ವರ್ಷದ ಚಿದಂಬರಂ ಅವರು 2017 ರಲ್ಲಿ ಗೋವಾದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ವಿಫಲವಾಗಿದ್ದಕ್ಕೆ ಪಕ್ಷದ ಪರವಾಗಿ, ವೈಯಕ್ತಿಕವಾಗಿ ಕ್ಷಮೆಯಾಚಿಸಿದ್ದರು. ಈ ಬಾರಿ ಬಹುಮತ ಸಿಕ್ಕರೆ ಕೇವಲ ʼಐದು ನಿಮಿಷಗಳಲ್ಲಿʼ ಸರ್ಕಾರ ರಚಿಸುವ ವಾಗ್ದಾನವನ್ನು ಚಿದಂಬರಂ ಮಾಡಿದ್ದಾರೆ.
ಚಿದಂಬರಂ ಅವರು ರಾಜ್ಯಸಭಾ ಸಂಸದರಾಗಿ, ಕೇಂದ್ರ ಹಣಕಾಸು ಸಚಿವರಾಗಿ ಮತ್ತು ಗೃಹ ಸಚಿವರಾಗಿ ಒಳ್ಳೆ ಹೆಸರು ಮಾಡಿದ ನಾಯಕ . 2022 ರ ಗೋವಾ ವಿಧಾನಸಭಾ ಚುನಾವಣೆ ಪಕ್ಷಾಂತರದಿಂದ ತುಂಬಿರುವ ಗೋವಾ ಕಾಂಗ್ರೆಸ್ ಅನ್ನು ಒಟ್ಟುಗೂಡಿಸಲು ತಮ್ಮದೇ ಆದ ರಣತಂತ್ರಗಳನ್ನು ರಾಜಕೀಯ ತಂತ್ರಜ್ಞರೊಂದಿಗೆ ಸೇರಿಕೊಂಡು ಹೆಣೆದಿದ್ದಾರೆ.
ದಿನೇಶ್ ಗುಂಡೂರಾವ್ ಸಾಥ್
ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಗೋವಾ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರೊಂದಿಗೆ ರಾಜಕೀಯ ತಂತ್ರಗಾರಿಕೆಯನ್ನು ಹೆಣೆದಿದ್ದಾರೆ. ಗೋವಾದ ವೀಕ್ಷಕರು ಮತ್ತು ಕಾಂಗ್ರೆಸ್ ಸದಸ್ಯರು ಹೇಳುವಂತೆ ಚಿದಂಬರಂ ಅವರು ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಗೋವಾದಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಬ್ಲಾಕ್ ಮಟ್ಟದ ನಾಯಕರನ್ನು ಭೇಟಿ ಮಾಡಿ, ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ್ದಾರೆ. ಪಕ್ಷದ ಸದಸ್ಯತ್ವವನ್ನು ಹೆಚ್ಚಿಸಲು ಮತ್ತು ವಿಶ್ವಾಸಾರ್ಹ ಕಾರ್ಯಕರ್ತರನ್ನು ನೇಮಿಸಿಕೊಳ್ಳಲು ಹಾಗೂ ಅವರಿಗೆ ಅಗತ್ಯವಾದ ಶಕ್ತಿ ತುಂಬಿ ಅವರಿಗೆ ಸೂಕ್ತ ಸಲಹೆ ನೀಡಿದ್ದಾರೆ.
ಆದಾಗ್ಯೂ ಗೋವಾ ಚುನಾವಣೆಗೆ ಮೂರು ವಾರಗಳು ಬಾಕಿ ಇರುವಾಗಲೇ ಕೆಲವು ಕ್ಷೇತ್ರಗಳಲ್ಲಿ ಪಕ್ಷವು ತನ್ನ ನೆಲದ ಕಾರ್ಯಕರ್ತರಿಂದ ಬಂಡಾಯ ಎದುರಿಸುತ್ತಿದೆ.

ಚಿದಂಬರಂ ಚುನಾವಣಾ ತಂತ್ರಜ್ಞರಲ್ಲ!
ಮೂಲತಃ ವಕೀಲರಾಗಿರುವ ಚಿದಂಬರಂ ಅವರು ಕಾಂಗ್ರೆಸ್ ನಾಯಕರಾಗಿ ಅಸಂಖ್ಯ ಕಾಂಗ್ರೆಸ್ ಟೋಪಿಗಳನ್ನು ಧರಿಸಿದ್ದಾರೆ. ಆದರೆ ಅವರ ಸುಮಾರು ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಪಕ್ಷವು ಅವರಿಗೆ ಚುನಾವಣಾ ವೀಕ್ಷಕರಾಗಿ ಜವಾಬ್ದಾರಿಯನ್ನು ನೀಡಿದ್ದಿಲ್ಲ.
ಚಿದಂಬರಂ ಅವರು MRF ಯ ಯೂನಿಯನ್ ನಾಯಕರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದವರು. ತಮಿಳುನಾಡು ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1984 ರಲ್ಲಿ ತಮ್ಮ ಮೊದಲ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಶಿವಗಂಗಾದಿಂದ ಸ್ಪರ್ಧಿಸಿ ಗೆದ್ದರು. ನಾಲ್ಕು ಬಾರಿ ಕೇಂದ್ರ ಹಣಕಾಸು ಸಚಿವರಾಗಿ, ಎರಡು ವೇಳೆ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವರಾಗಿದ್ದರು. ಒಮ್ಮೆ ಕೇಂದ್ರ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ವಾಣಿಜ್ಯ ಸಚಿವಾಲಯದಲ್ಲಿ ಕೆಲಸ ಮಾಡಿದ್ದಾರೆ ಮತ್ತು ಗೃಹ ವ್ಯವಹಾರಗಳ ಸಂಸದೀಯ ಸಮಿತಿಯಲ್ಲೂ ಸೇವೆ ಸಲ್ಲಿಸಿ ಅನುಭವ ಅವರಿಗಿದೆ.
ಚಿದಂಬರಂ ಅವರು ರಾಜಕೀಯವಾಗಿ ವರ್ಣರಂಜಿತ ವ್ಯಕ್ತಿತ್ವ ಹೊಂದಿದ ನಾಯಕ ಎನ್ನಲಾಗಿದೆ. 1996 ರಲ್ಲಿ ಕಾಂಗ್ರೆಸ್ ಒಂದು ಬಣ ತಮಿಳು ಮನಿಲಾ ಕಾಂಗ್ರೆಸ್ ಕಟ್ಟಿದಾಗ ಆ ಬಣವನ್ನು ಒಂದುಗೂಡಿಸಿದ ಶೇಯಸ್ಸು ಇವರಿಗೆ ಸಲ್ಲುತ್ತದೆ. ಪರೋಕ್ಷವಾಗಿ ಹಲವು ಚುನಾವಣೆಗಳಿಗೆ ಚಿದಂಬರಂ ರಣತಂತ್ರಗಳನ್ನು ಪಕ್ಷಕ್ಕೆ ತಿಳಿಸಿಕೊಟ್ಟಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಇವೆ. ಎಲ್ಲದರ ಮೊತ್ತವಾಗಿ ಅವರನ್ನು ಚುನಾವಣಾ ತಂತ್ರಗಾರ ಎಂದೇ ಈಗ ವಿಶ್ಲೇಷಿಸಲಾಗುತ್ತಿದೆ.
ಈ ಚುನಾವಣೆಯಲ್ಲಿ ಚಿದಂಬರಂ ಮತ್ತು ಗುಂಡೂರಾವ್ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ತಯಾರಿಕೆಗೆ ಒಂದು ಸ್ಪಷ್ಟತೆ ಸಿಕ್ಕಿದೆ ಎಂದು ಗೋವಾ ಕಾಂಗ್ರೆಸ್ಸಿನ ನಾಯಕರೇ ಮಾತನಾಡುತ್ತಿದ್ದಾರೆ.
The Print ಜೊತೆ ಮಾತನಾಡಿದ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್, “ಕಳೆದ ಕೆಲವು ತಿಂಗಳುಗಳಲ್ಲಿ ನಮ್ಮ ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಚಿದಂಬರಂ ಜಿ ಬಂದು ಜನರೊಂದಿಗೆ ಸಭೆ ಮತ್ತು ಸಂವಾದ ನಡೆಸಿದ್ದಾರೆ. ಆಗಸ್ಟ್‌ನಿಂದ ಪ್ರತಿ ಎರಡು-ಮೂರು ವಾರಗಳಿಗೊಮ್ಮೆ, ಗೋವಾದಲ್ಲಿ ನಾಲ್ಕೈದು ದಿನಗಳನ್ನು ಕಳೆದಿದ್ದಾರೆ. ಅವರೊಂದಿಗೆ ಬ್ಲಾಕ್ ಸಮಿತಿ, ಜಿಲ್ಲಾ ಸಮಿತಿಗಳನ್ನು ಬಲಪಡಿಸಿದ್ದೇವೆ. ಅವರು ಕಾರ್ಯಕರ್ತರನ್ನು ಭೇಟಿ ಮಾಡಿ, ಅವರ ಸಮಸ್ಯೆಗಳೇನು ಎಂದು ತಿಳಿಯಲು ಪ್ರಯತ್ನಿಸಿದರು. ಅವರ ಕಾರ್ಯ ವೈಖರಿ ನಮ್ಮಲ್ಲಿ ಸ್ಪೂರ್ತಿ ತುಂಬಿದೆ ಎಂದು ತಿಳಿಸಿದ್ದಾರೆ.
ಮುಂದುವರೆದು, ಚಿದಂಬರಂ ಅವರು ಬ್ಲಾಕ್ ಅಧ್ಯಕ್ಷರನ್ನು ಒಂದಕ್ಕಿಂತ ಹೆಚ್ಚು ಬಾರಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಪ್ರತಿ ಬ್ಲಾಕ್‌ನಲ್ಲಿ ಗುಂಡೂರಾವ್, ಕಾಮತ್ ಮತ್ತು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರೊಂದಿಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ವಿವರಿಸಿದ್ದಾರೆ.
ಚಿದಂಬರಂ ಅವರು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿಯೇ ಚುನಾವಣಾ ಸಿದ್ಧತೆಗಳು ತಮ್ಮ ಕೈಯಲ್ಲಿವೆ ಎಂದು ಹೇಳಿದ್ದರು. ಕರಪತ್ರಗಳನ್ನು ವಿನ್ಯಾಸಗೊಳಿಸುವುದು ಮತ್ತು ಪ್ರಚಾರದ ವಿಧಾನವನ್ನು ನಿರ್ಧರಿಸುವುದರಿಂದ ಹಿಡಿದು ಅಭ್ಯರ್ಥಿಗಳನ್ನು ಆಯ್ಕೆ ಮಾಡುವವರೆಗೆ ಯೋಜನೆ ಸಿದ್ದಪಡಿಸಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬಂದಿವೆ.
ಗೋವಾ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ಹಿಮಾಂಶು ತಿವ್ರೇಕರ್, ಈ ಕುರಿತು ಪ್ರತಿಕ್ರಿಯಿಸಿದ್ದು, “ಪ್ರತಿ ಕ್ಷೇತ್ರದಲ್ಲೂ ನಾವು ಈಗಾಗಲೇ 3,000 ಅಥವಾ 4,000 ಮತದಾರರನ್ನು ಹೊಂದಿದ್ದೇವೆ. ನಾವು ಅವುಗಳನ್ನು ಸಕ್ರಿಯಗೊಳಿಸಬೇಕಾಗಿತ್ತು. ಪಿ.ಚಿದಂಬರಂ ಅವರಂತಹ ನಾಯಕರು ಗೋವಾದ ಕ್ಷೇತ್ರಗಳಲ್ಲಿ ಮೂಲೆ ಮೂಲೆ ಸಭೆಗಳಿಗೆ ಹೋಗುತ್ತಿರುವುದು ಗೋವಾದಲ್ಲಿ ಈ ಬಾರಿ ಕಾಂಗ್ರೆಸ್ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿ. ದಿನೇಶ್ ಗುಂಡೂರಾವ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇಬ್ಬರೂ ಕಳೆದ 3-4 ತಿಂಗಳಿಂದ ಮೈದಾನದಲ್ಲಿದ್ದಾರೆ. ಈ ಭಾರೀ ಗೋವಾದ ರಾಜಕೀಯವೇ ಬೇರೆ ಎಂದು ವಿವರಿಸಿದ್ದಾರೆ.
ಅಭ್ಯರ್ಥಿ ಆಯ್ಕೆಯ ಕುರಿತು ಮೂಲಗಳು ಹೇಳುವಂತೆ ಚಿದಂಬರಂ ಅವರು ಬ್ಲಾಕ್ ಕಾರ್ಯಕರ್ತರಿಂದ ಹೆಸರುಗಳನ್ನು ಮೊದಲು ಆಯ್ಕೆ ಮಾಡಿಸುತ್ತಿದ್ದಾರೆ. ಪ್ರತಿ ಕ್ಷೇತ್ರದಿಂದ ಎರಡು ಅಥವಾ ಮೂರು ಹೆಸರುಗಳನ್ನು ನಾಮನಿರ್ದೇಶನ ಮಾಡಲು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಅವರು ನೀಡಿದ ಪಟ್ಟಿಯಲ್ಲಿ ಪಕ್ಷದ ನಾಯಕತ್ವವು ಆಯ್ಕೆ ಮಾಡುತ್ತದೆ ಎಂದು ಅವರಿಗೆ ಭರವಸೆ ತುಂಬಿದ್ದಾರೆ. ಒಟ್ಟಾರೆಯಾಗಿ ಈ ಭಾರೀ ಗೋವಾ ಚುನಾವಣಾ ತಯಾರಿಯಲ್ಲಿ ಕಾಂಗ್ರೆಸ್ ಹೆಚ್ಚು ಕ್ರಮಬದ್ಧವಾಗಿದೆ ಎನ್ನುವ ವ್ಯಾಖ್ಯಾನಗಳು ಕೇಳಿಬರುತ್ತಿವೆ.