ಕರಾವಳಿ ಅಂದ್ರೇನೆ ಹಾಗೆ ಅದೊಂದು ಸುಂದರ ತಾಣ. ಹಚ್ಚ ಹಸಿರಿನ ನಡುವೆ ಪ್ರಕೃತಿ ನಡುವೆ ತುಳುನಾಡು ಸದಾ ಕಂಗೊಳಿಸುತ್ತಲೇ ಇರುವ ಸುಂದರ ಸ್ಥಳ. ಒಂದು ಕಾಲದಲ್ಲಿ ಕೃಷಿಯೇ ಜೀವಾಳವಾಗಿದ್ದ ಕರಾವಳಿಗರಿಗೆ ಇತ್ತೀಚೆಗೆ ಕೃಷಿಯತ್ತ ಒಲವು ಕಡಿಮೆಯಾಗುತ್ತಿದೆ. ಆದರೂ ಕೆಲವು ಬೆರಳೆಣಿಕೆಯಷ್ಟು ಮಂದಿ ಪ್ರಗತಿಪರ ಕೃಷಿಯಲ್ಲಿ ತೊಡಗಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುಂದುವರೆಯುತ್ತಿದ್ದಾರೆ.
ಈ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಪ್ರಗತಿಪರ ಕೃಷಿಕ 73 ವರ್ಷದ ಅಮೈ ಮಹಾಲಿಂಗ ನಾಯ್ಕ ಅವರು 2022 ನೇ ಸಾಲಿನ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಮಂದಿ ಕೃಷಿಕರನ್ನು ಗಮನಿಸಬಹುದು. ಕೆಲವರು ವಿದ್ಯಾಭ್ಯಾಸ ಉಳ್ಳವರಾದರೆ ಇನ್ನೂ ಅನೇಕರು ಶಾಲೆ ಮುಖವನ್ನೇ ನೋಡಲಿಲ್ಲ. ಆದರೂ, ತಮ್ಮ ಹಠ ಬಿಡದೇ ಕೃಷಿಯಲ್ಲಿ ವಿನೂತನ ಪ್ರಯತ್ನಗಳನ್ನು ಮಾಡುತ್ತಾ ಸದಾ ಸುದ್ದಿಯಾಗುತ್ತಾರೆ.

ಶಾಲೆಯ ಮುಖ ನೋಡಲಿಲ್ಲ, ಛಲಬಿಡಲಿಲ್ಲ!
ಇನ್ನು ಮಹಾಲಿಂಗ ನಾಯ್ಕ ಅವರ ಕುರಿತು ಹೇಳುವುದಾದರೆ, ಇವರು ಕೂಡ ಶಾಲೆಗೆ ಹೋಗಲಿಲ್ಲ, ಆದರೂ ನೀರಿನಿಂದ ನೆಮ್ಮದಿಯನ್ನು ಕಾಣುತ್ತಿರುವ ಇವರು ಪ್ರಗತಿಪರ ಕೃಷಿಕರು ಎಂದೆನಿಸಿಕೊಂಡಿದ್ದಾರೆ. ಇವರ ಬಗ್ಗೆ ಹೇಳೋದಾದ್ರೆ, ಈ ಸಾಧಕ ಬೋಳುಗುಡ್ಡೆಯಲ್ಲಿ ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25-30 ಮೀಟರ್ ಉದ್ದದ ಸತತ ಐದು ಸುರಂಗಗಳನ್ನು ಕೊರೆದಿದ್ದಾರೆ. 62 ಮೀಟರ್ ಉದ್ದದ ಆರನೇ ಸುರಂಗದ ಪ್ರಯತ್ನ ಕೊನೆಗೂ ಫಲ ನೀಡಿ, ಸುರಂಗದಲ್ಲಿ ನೀರು ಜಿನುಗಳು ಪ್ರಾರಂಭವಾಯಿತು.
ಅನಂತರ ಏಳನೇ ಹಂತದ ಸುರಂಗ ಮಾರ್ಗ ಕೊರೆಯುವ ಸಮಯದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನೀರು ಕಾಣಿಸಿಕೊಂಡಿದ್ದು, ಒಂದು ಎಕ್ರೆ ತೋಟಕ್ಕೆ ಸಾಕಾಗುವಷ್ಟು ನೀರು ಕಾಣಿಸಿಕೊಂಡಿತ್ತು. ಈಗ ಎರಡು ಬೋರ್ ವೆಲ್ ಗಳನ್ನು ತೋಡಿ, ಪಂಪ್ ಸೆಟ್ ಹಾಕಿಕೊಂಡಿದ್ದಾರೆ. ತೋಟದ ನಡುವೆಯೂ ಅಲ್ಲಲ್ಲಿ ಇಂಗುಗುಂಡಿ ನಿರ್ಮಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರಿಂದ ಸನ್ಮಾನ
ಸತತ ಪ್ರಯತ್ನದಿಂದ ಸುರಂಗ ಮಾರ್ಗ ನಿರ್ಮಿಸಿದ ಕಾರ್ಯದಲ್ಲಿ ಯಶಸ್ವಿಯಾದ ಇವರು ಕರಾವಳಿಯ ಭಗೀರಥ ಎಂದೇ ಖ್ಯಾತರಾಗಿದ್ದು, ಇದೀಗ ಈ ಸಾಧಕನಿಗೆ ಕರಾವಳಿಯಲ್ಲಿ ಸನ್ಮಾನಗಳ ಮಹಾಪೂರವೇ ಹರಿದುಬರುತ್ತಿದ್ದು,ಜಿಲ್ಲಾ ಉಸ್ತುವರಿ ಸಚಿವ ಸುನೀಲ್ ಕುಮಾರ್ ಸನ್ಮಾನಿಸಿದ್ದಾರೆ, ಈ ವೇಳೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಹರೇಕಳ ಹಾಜಬ್ಬ ಕೂಡ ಉಪಸ್ಥಿತರಿದ್ದರು.
ಕರಾವಳಿ ಜಿಲ್ಲೆಗಳಲ್ಲಿ ಕೃಷಿ ನಿಧಾನವಾಗಿ ಹಿನ್ನಲೆಗೆ ಸರಿಯುತ್ತಿರುವ ಹಂತದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕ ಅಮೈ ಮಹಾಲಿಂಗ ನಾಯ್ಕ ಕೃಷಿಕಾಯಕದ ಮೂಲಕ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಹೊಸ ತಲೆಮಾರಿಗೆ ತಿಳಿಸಿಕೊಟ್ಟಿದ್ದಾರೆ.





