ಬೆಂಗಳೂರು ವಿವಿಯಲ್ಲಿ ಇತ್ತೀಚಿಗೆ ನಡೆದ ಬಿ.ಕಾಂ ಪರೀಕ್ಷೆಗಳ ಮೌಲ್ಯಮಾಪನದಲ್ಲಿ ಭಾರೀ ಎಡವಟ್ಟು ಆಗಿರುವುದು ಹೊಸ ವಿವಾದ ಒಂದಕ್ಕೆ ನಾಂದಿ ಹಾಡಿದೆ. ಉತ್ತರಪತ್ರಿಕೆಗಳ ಮೌಲ್ಯಮಾಪನದ ಸಮಯದಲ್ಲಿ ಪರೀಕ್ಷಕರು ನಿಗದಿಪಡಿಸಿದಕ್ಕಿಂತ ಹೆಚ್ಚಿನ ಅಂಕಗಳನ್ನು ನೀಡುವ ಮೂಲಕ ವಿವಿ ನೋಡುಗರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ವಾರ ಬಿಡುಗಡೆಯಾದ ಫಲಿತಾಂಶವನ್ನು ನೋಡಿ ಬಿಕಾಂ ವಿದ್ಯಾರ್ಥಿಗಳು ಅಘಾತಕ್ಕೊಳಗಾಗಿದ್ದಾರೆ. ಬಿ.ಕಾಂ ವಿದ್ಯಾರ್ಥಿಗಳು ಪ್ರವಾಸೋದ್ಯಮ ಎಜೆನ್ಸಿ ವಿಷಯವನ್ನು 70 ಅಂಕಗಳಿಗೆ ಬರೆದಿದ್ದರು. ಆದರೆ, ವಿದ್ಯಾರ್ಥಿಗಳಿಗೆ 70ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾತನಾಡಿದ ಕೆಲವು ವಿದ್ಯಾರ್ಥಿಗಳು ಮೊದಲಿಗೆ ಅಂಕಗಳನ್ನು ನೋಡಿ ನಾವು ಗಾಬರಿಯಾದೆವು. 70 ಅಂಕಗಳಿಗೆ ನಮಗೆ 89,74,73,71 ಅಂಗಳನ್ನು ನೀಡಿದ್ದಾರೆ. ಇದು ವಿವಿಯ ಮೌಲ್ಯಮಾಪನದ ಗುಣಮಟ್ಟವನ್ನು ಎತ್ತಿ ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ವಿವಿಯ ಅಧಿಕಾರಿಗಳು ವಿದ್ಯಾರ್ಥಿಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಸುಮಾರು 500 ಜನ ವಿದ್ಯಾರ್ಥಿಗಳು ಪ್ರವಾಸೋದ್ಯಮ ವಿಷಯದಲ್ಲಿ ಪರೀಕ್ಷೆಯನ್ನು ಬರೆದಿದ್ದರು. ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯಲ್ಲಿನ ಸಲಹೆ ಸೂಚನೆಗಳನ್ನು ಸರಿಯಾಗಿ ಓದಿಕೊಂಡಿಲ್ಲವಾದ್ದರಿಂದ ಇಷ್ಟೆಲ್ಲ ಆಗಿದೆ ಎಂದ್ದಿದ್ದಾರೆ.
ಹೊಸ ವಿದ್ಯಾರ್ಥಿಗಳು 70 ಅಂಕಗಳಿಗೆ ಬರೆಯಬೇಕಿತ್ತು. ಬ್ಯಾಕ್ಲಾಗ್ ವಿದ್ಯಾರ್ಥಿಗಳು 100 ಅಂಕಗಳಿಗೆ ಬರಿಯಬೇಕಿತ್ತು. ಆದರೆ, ವಿದ್ಯಾರ್ಥಿಗಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು ನಮ್ಮ ತಪ್ಪಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೌಲ್ಯಮಾಪನ ಕುಲಸಚಿವ ಜಿ.ಟಿ.ದೇವರಾಜು, ಸದ್ಯ ಪ್ರಕಟಿಸಿರುವ ಪಲಿತಾಂಶವನ್ನು ಹಿಂಪಡೆಯಲಾಗುವುದು. ಟ್ಯಾಬುಲೇಷನ್ ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಗಮನಿಸಿಲ್ಲ ಮತ್ತೊಮ್ಮೆ ಪರಿಶೀಲಿಸಿ ಪಲಿತಾಂಶ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.