ಕೊರೋನಾ ಎಗ್ಗಿಲಲ್ಲದೇ ತನ್ನ ಅಟ್ಟಹಾಸ ಮುಂದುವರೆಸುತ್ತಿದ್ದು, ರಾಜ್ಯದೆಲ್ಲೆಡೆ ತನ್ನ ಕರಾಳ ರೂಪ ತಾಳುತ್ತಿದ್ದು, ಉಡುಪಿ ಜಿಲ್ಲೆಯಾದ್ಯಂತ ಮಕ್ಕಳಲ್ಲಿ ಹೆಚ್ಚಾಗಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು ಆತಂಕ ಮೂಡಿಸಿದೆ.
ಮಕ್ಕಳ ಜೊತೆ ವಯಸ್ಸಾದ ವೃದ್ಧರಿಗೂ ಸೋಂಕು ಹೆಚ್ಚಾಗಿ ತಗುಲುತ್ತಿದೆ. ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಜನವರಿ 14 ಮತ್ತು 21 ರವರೆಗೆ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 4150 ಜನರು ಸೋಂಕಿಗೆ ಒಳಗಾಗಿದ್ದಾರೆ.
ಕಳೆದ ಒಂದು ವಾರದ ಅಂಕಿಅಂಶಗಳನ್ನು ಪರಿಗಣಿಸಿದರೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 48 ಮಕ್ಕಳು, ಆರರಿಂದ ಹತ್ತರವರೆಗಿನ 269, 16 ರಿಂದ 20 ವರ್ಷ ವಯಸ್ಸಿನವರು 923, ಮತ್ತು 20 ರಿಂದ 25 ವಯೋಮಾನದವರಲ್ಲಿ 537 ಮಕ್ಕಳಿಗೆ ಸೋಂಕು ತಗುಲಿದೆ. ಶಾಲಾ ಕಾಲೇಜಿಗೆ ತೆರಳುವ ಮಕ್ಕಳಿಗೆ ಜ್ವರ, ಶೀತ ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರಿಗೂ ಆತಂಕ ಮೂಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 84,804 ಮಂದಿಗೆ ಸೋಂಕು ಕಾಣಿಸಿಕೊಂಡಿದೆ.






