ಇತ್ತೀಚೆಗಿನ ವಿದ್ಯಮಾನದಲ್ಲಿ ಸ್ಮಾರ್ಟ್ ನಗರದ ಕನಸಿಗೆ ಹೊಸ ರೂಪ ದಕ್ಕುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೊಸತನಗಳ ಪ್ರದರ್ಶನವಾಗುತ್ತಿವೆ. ಇಂತಹ ವಿಷಯದಲ್ಲಿ ಎಲೆಕ್ಟ್ರಿಕ್ ಸಂಬಂಧಿತ ಉಪಕರಣಗಳ ಬೇಡಿಕೆಯೂ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಕೆಎಸ್ ಆರ್ ಟಿ ಸಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ ಗಳು ಮುಂಬರುವ ಏಪ್ರಿಲ್ ತಿಂಗಳಿನಲ್ಲಿ ಕಾರ್ಯಾಚರಿಸಲಿವೆ.
ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳನ್ನು ವಿದಾನಸೌಧದ ಮುಂಭಾಗ ಅನಾವರಣಗೊಳಿಸಿದ್ದರು. ಇದು ಹೊಸ ವಿನ್ಯಾಸದೊಂದಿಗೆ ಪ್ರಯಾಣಿಕರಿಗೆ ಮೆಟ್ರೋ ಅನುಭವ ನೀಡುವಂತೆ ಜನರಿಗೆ ಹಿತ ನೀಡುತ್ತಿದೆ.
ಪರಿಸರ ಸ್ನೇಹಿಯತ್ತ ಸರ್ಕಾರ
ಬೆಂಗಳೂರಿನಲ್ಲಿ ವಾಯುಮಾಲಿನ್ಯ ದಿನಂಪ್ರತಿ ಹೆಚ್ಚಾಗುತ್ತಿದೆ. ಬೆಳಗೆದ್ದು ಮನೆಯ ಹೊರಗೆ ಬಂದರೆ ಸಾಕು ನಾವು ವಾಹನದಟ್ಟಣೆಯಲ್ಲಿ ಮುಳುಗಿಹೋಗುತ್ತೇವೆ. ಅದೇ ವಾಹನದಟ್ಟಣೆ, ಅದೇ ಧೂಳು, ಹಳ್ಳಗಳಂತಾಗಿರುವ ಗುಂಡಿಬಿದ್ದ ರಸ್ತೆಗಳಲ್ಲಿ ತೆರಳುವುದು ರೂಢಿಯಾಗಿಬಿಟ್ಟಿದೆ. ಇಂತಹ ದೊಡ್ಡ ನಗರ ಪ್ರದೇಶದಲ್ಲಿಯೂ ಇಂತಹ ಭೀಕರ ಪರಿಸ್ಥಿತಿಗಳಿವೆ ಎನ್ನುವುದು ನಂಬಲೇಬೇಕಾದ ಸತ್ಯವಾಗಿದೆ. ಆದರೂ ಸರ್ಕಾರ ಆಧುನಿಕ ತಂತ್ರಜ್ಞಾನಗಳನ್ನು ಇನ್ನಷ್ಟು ವಿನೂತನವಾಗಿ ಪರಿಸರ ಸ್ನೇಹ ಬಸ್ ವ್ಯವಸ್ಥೆಗಳನ್ನು ಪರಿಚಯಿಸುತ್ತಿರುವುದು ವಿಶೇಷ.
ಸರಕಾರ ಒಂದಿಷ್ಟು ವಿಭಿನ್ನ ಯೋಜನೆಗಳನ್ನು ಜನರ ಮುಂದಿರಿಸಿ, ನಗರವನ್ನು ಸ್ಮಾರ್ಟ್ ಆಗಿ ರೂಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದು, ಈಗಾಗಲೇ ಎಲೆಕ್ಟ್ರಿಕ್ ಮೋಟಾರು, ಬಸ್ ಗಳನ್ನು ಪರಿಚಯ ಮಾಡಿದೆ. ಹವಾನಿಯಂತ್ರಕ ವ್ಯವಸ್ಥೆ, ಸೆನ್ಸಾರ್ ಗಳಿಂದ ಸುಲಭವಾಗಿ ಜನಸಾಮಾನ್ಯರಿಗೆ ಹತ್ತಿರವಾಗುತ್ತಿವೆ.
ಒಂದೆಡೆ, ಇದೀಗ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕ ಮೂಡಿಸುತ್ತಿದ್ದು, ಕೆಎಸ್ ಆರ್ ಟಿ ಸಿ ಬಸ್ ಚಾಲಕರೂ ಕೂಡ ಜನರಿಲ್ಲದೆ ಬಸ್ ಸ್ಟ್ಯಾಂಡ್ ಗಳು ಬಿಕೋ ಎನ್ನುತ್ತಿವೆ ಎಂದು ಅಳಲು ತೋಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಗುತ್ತಿಗೆ ಆಧಾರದಲ್ಲಿ 50 ಬಸ್ ಗಳು
ಇದರ ಬೆನ್ನಲ್ಲೇ, ಮುಂದಿನ ಮೂರು ತಿಂಗಳಲ್ಲಿ ಕೆಎಸ್ ಆರ್ ಟಿ ಸಿ ಬಸ್ಸ್ ಗಳೂ ಎಲೆಕ್ಟ್ರಿಕ್ ಬಸ್ ಗಳಾಗಿ ಕಾರ್ಯಾಚರಿಸಲಿವೆ ಎಂದು ಆದೇಶ ನೀಡಲಾಗಿದೆ. ಬೆಂಗಳೂರು, ದಾವಣಗೆರೆ, ಮಡಿಕೇರಿ, ಮೈಸೂರು , ವಿರಾಜಪೇಟೆ, ಶಿವಮೊಗ್ಗ ಚಿಕ್ಕಮಗಳೂರಿಗೆ ಹೋಗಿ ಬರಲು ಎಲೆಕ್ರ್ಟಿಕ್ ಬಸ್ ಗಳನ್ನು ನಿಯೋಜಿಸಲು ಸಿದ್ಧತೆ ನಡೆಯುತ್ತಿದ್ದು, ಹೈದರಾಬಾದ್ ನ ಇವಿ ಟ್ರಾನ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಕೆಎಸ್ ಆರ್ ಟಿಸಿ ಬಸ್ ಎಲೆಕ್ಟ್ರಿಕ್ ಬಸ್ ಒದಗಿಸಲಿದೆ. ಗುತ್ತಿಗೆ ಆಧಾರದಲ್ಲಿ 50 ಬಸ್ ಗಳನ್ನು ಪಡೆಯುವ ಟೆಂಡರ್ ಪ್ರಕ್ರೀಯೆ ಪೂರ್ಣಗೊಂಡಿದೆ.
ಚಾಲಕರನ್ನೂ ಗುತ್ತಿಗೆ ಪಡೆದ ಕಂಪನಿ ನಿಯೋಜನೆ
ಕೆಎಸ್ ಆರ್ ಟಿ ಸಿ ಎಲೆಕ್ಟ್ರಿಕ್ ಬಸ್ ಗಳಿಗೆ ಚಾರ್ಜಿಂಗ್ ವ್ಯವಸ್ಥೆಯನ್ನು ಗುತ್ತಿಗೆ ಪಡೆದಿರುವ ಕಂಪನಿ ಜವಾಬ್ದಾರಿ ವಹಿಸಲಿದೆ. ಚಾಲಕರನ್ನೂ ಕೂಡ ಅದೇ ಕಂಪನಿ ಒದಗಿಸಲಿದೆ. ನಿರ್ವಾಹಕರನ್ನು ಕೆಎಸ್ ಆರ್ ಟಿ ಸಿ ನಿಯೋಜಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
43 ಸೀಟುಗಳಿಂದ ವಿನ್ಯಾಸ
ಈ ಎಲೆಕ್ಟ್ರಿಕ್ ಬಸ್ 43 ಸೀಟುಗಳನ್ನು ಹೊಂದಿದ್ದು, ಹವಾನಿಯಂತ್ರಿತ ವ್ಯವಸ್ಥೆಕೂಡ ಇರಲಿದೆ. ಪ್ರಯಾಣದರವನ್ನೂ ಕೂಡ ಡಿಸೇಲ್ ಚಾಲಿತ ಹವಾನಿಯಂತ್ರಣ ಬಸ್ ಗಳಿಗೆ ನೀಡುವ ದರವನ್ನೇ ನಿಗದಿ ಮಾಡುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗಿದೆ.