ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬೇರುಗಳು ಭದ್ರವಾಗಿಲ್ಲ. ಹಾಗಾಗಿ ಏನಾದರೂ ಮಾಡಿ ಎಷ್ಟು ಸಾಧ್ಯವೋ ಅಷ್ಟು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಶತಪ್ರಯತ್ನ ಮಾಡುತ್ತಿದೆ. ಮೊದಲಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 40ರಷ್ಟು ಸೀಟು ಕೊಡುವುದಾಗಿ ಹೇಳಿತ್ತು. ಇದೀಗ ಉತ್ತರ ಪ್ರದೇಶದಲ್ಲಿ ವ್ಯಾಪಕವಾದ ನಿರುದ್ಯೋಗ ಸಮಸ್ಯೆ ಇರುವುದರಿಂದ ಯುವಕರಿಗೆ ಪ್ರತ್ಯೇಕವಾದ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದಲ್ಲದೆ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಗಾಂಧಿ ಅವರೀಗ ‘ತಾನೇ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಹೇಳಿಕೊಂಡಿದ್ದಾರೆ.
ನಿಜ, ಪ್ರಿಯಾಂಕಾ ಗಾಂಧಿ ‘ತಾನೇ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ನೇರವಾಗಿ ಹೇಳಿಲ್ಲ. ಪತ್ರಕರ್ತರು ‘ಉತ್ತರ ಪ್ರದೇಶದ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?’ ಎಂದು ಪ್ರಶ್ನೆ ಕೇಳಿದಾಗ ‘ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕಡೆಯಿಂದ ನಿಮಗೆ ಬೇರೆ ಮುಖ ಕಾಣಿಸುತ್ತಿದೆಯೇ?, ನೀವು ನನ್ನ ಮುಖವನ್ನು ಎಲ್ಲೆಡೆ ನೋಡುತ್ತಿದ್ದೀರಿ, ಅಲ್ಲವೇ?’ ಎಂದು ಮರುಪ್ರಶ್ನೆ ಮಾಡುವ ಮೂಲಕ ಪ್ರಿಯಾಂಕಾ ಗಾಂಧಿ ‘ತಾನೇ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರು ಮೊದಲು ‘ಮಹಿಳೆಯರಿಗೆ ಶೇಕಡಾ 40ರಷ್ಟು ಸೀಟು ಕೊಡುತ್ತೇನೆ’ ಎಂದು ಹೇಳಿದ್ದು. ಇದಾದ ಬಳಿಕ ‘ಮೇ ಲಡಕಿ ಹೂ, ಲಡ್ ಸಖ್ತಿ ಹೂ’ ಎಂದಿದ್ದು. ಯುವಕರಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿರುವುದು ಮತ್ತು ಪ್ರಿಯಾಂಕಾ ಗಾಂಧಿ ‘ತಾನೇ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಹೇಳಿರುವುದು ನಿಜಕ್ಕೂ ಕಾಂಗ್ರೆಸ್ ಪಾಲಿಗೆ ಒಂದಿಷ್ಟು ಆಶಾವಾದ ಮೂಡಿಸವಂತಹ ವಿಷಯಗಳೇ.
ಏಕೆಂದರೆ ಸದ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬಹುವಾಗಿ ಬೆಂಬಲಿಸುವವರ ಪೈಕಿ ಮಹಿಳೆಯರು ಕೂಡ ಒಂದು ಪ್ರಮುಖ ವರ್ಗ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಶೇಕಡಾ 40ರಷ್ಟು ಸೀಟು ಕೊಡುತ್ತೇನೆ ಎಂದು ಹೇಳಿರುವುದು ಸ್ವಲ್ಪ ಮಟ್ಟಿಗಾದರೂ ಪಕ್ಷಕ್ಕೆ ಅನುಕೂಲ ಆಗಬಹುದು. ಮಹಿಳೆಯರ ಮತಗಳ ಪೈಕಿ ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಮತ ಪಡೆದರೆ ಅದೇ ಸದ್ಯಕ್ಕೆ ದೊಡ್ಡ ಸಾಧನೆ ಆಗಲಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಉನ್ನಾವೋ ಮತ್ತು ಹತ್ರಾಸ್ ಗಳಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಿಯಾಂಕಾ ಗಾಂಧಿ ಗಟ್ಟಿ ದನಿಯಲ್ಲಿ ಮಾತನಾಡಿದ್ದರು. ಇದೇ ಹಿನ್ನಲೆಯಲ್ಲಿ ‘ಮೇ ಲಡಕಿ ಹೂ, ಲಡ್ ಸಖ್ತಿ ಹೂ’ ಅಭಿಯಾನ ಆರಂಭಿಸಿದ್ದಾರೆ. ಇದು ಮಹಿಳೆಯರ ಮತ ಪಡೆಯಲು ಕಾಂಗ್ರೆಸ್ ಪಕ್ಷದ ಮುಂದುವರೆದ ತಂತ್ರವಾಗಿದೆ.
ಕೇಂದ್ರ ಸರ್ಕಾರ ತಂದಿದ್ದ ಮೂರು ರೈತ ವಿರೋಧಿ ಕೃಷಿ ಕಾನೂನುಗಳ ಬಗ್ಗೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದಂತಹ ಸಂದರ್ಭದಲ್ಲೇ, ವಿರೋಧ ವ್ಯಕ್ತವಾಗುತ್ತಿದ್ದಂತಹ ಸಂದರ್ಭದಲ್ಲೇ ಪ್ರಿಯಾಂಕಾ ಗಾಂಧಿ ಅವರು ಲಖೀಂಪುರ್ ಖೇರಿಯಲ್ಲಿ ನಡೆದ ರೈತರ ಹತ್ಯಾಕಾಂಡದ ವಿರುದ್ಧವೂ ಹೋರಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ಪ್ರಿಯಾಂಕಾ ಗಾಂಧಿ ಅವರನ್ನು ಗೃಹ ಬಂಧನದಲ್ಲೂ ಇರಿಸಿದ್ದರು. ಈ ಮೂಲಕ ಮೋದಿಯವರ ಮತ್ತೊಂದು ಓಟ್ ಬ್ಯಾಂಕ್ ರೈತರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನವನ್ನೂ ಕಾಂಗ್ರೆಸ್ ನಡೆಸಿದೆ.
2014ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಆದರೆ ಮೋದಿ ಪ್ರಧಾನಿ ಆದ ಮೇಲೆ ಅವರ ಆರ್ಥಿಕ ನೀತಿಗಳಿಂದ, ಅದರಲ್ಲೂ ನೋಟು ರದ್ದತಿ ಮತ್ತು ಜಿಎಸ್ ಟಿ ಜಾರಿಯಾದ ಮೇಲೆ ಇರುವ ಉದ್ಯೋಗವೂ ದೊಡ್ಡ ಪ್ರಮಾಣದಲ್ಲಿ ನಷ್ಟವಾಯಿತು. ಇಷ್ಟಾದರೂ ಯುವ ಮತದಾರರು ಮೋದಿಯನ್ನು ಬೆಂಬಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಯುವಕರನ್ನು ಗುರಿಯಾಗಿಸಿಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ವರ್ಷಕ್ಕೆ 16 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ. ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಇಡುವ ಭರವಸೆ ನೀಡಿದೆ. ಲೈಬ್ರರಿ, ಫ್ರೀ ವೈಫೈ, ಅಡ್ವಾನ್ಸ್ ಟೆಕ್ನಾಲಜಿ ಕಾಲೇಜುಗಳು, ವಿವಿಧ ರೀತಿಯ ಅಕಾಡೆಮಿಗಳನ್ನು ಸ್ಥಾಪಿಸುವ ಭರವಸೆ ನೀಡಿದೆ. ಈ ಮೂಲಕ ಮತ್ತೆ ಮೋದಿ ಮತಬುಟ್ಟಿಗೆ ಕೈ ಹಾಕಲೆತ್ನಿಸಿದೆ.
ಉತ್ತರ ಪ್ರದೇಶದ ಅಭಿವೃದ್ಧಿಗೆ ಹೊಸ ದೃಷ್ಟಿಕೋನದ ಅಗತ್ಯ ಇದೆ. ಅದು ಸಕಾರಾತ್ಮಕ ದೃಷ್ಟಿಕೋನ. ಕಾಂಗ್ರೆಸ್ ಅಂತಹ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದೆ. ಯಾರನ್ನೂ ದ್ವೇಷಿಸುವ ರಾಜಕಾರಣವನ್ನು ಕಾಂಗ್ರೆಸ್ ಮಾಡುವುದಿಲ್ಲ. ಎಲ್ಲರ ಜೊತೆಗೂಡಿ ಉತ್ತರ ಪ್ರದೇಶವನ್ನು ಕಟ್ಟುವುದು ಕಾಂಗ್ರೆಸ್ ಪಕ್ಷದ ಆದ್ಯತೆ ಎಂದು ಹೇಳಿದೆ. ಮೇಲೆ ಉಲ್ಲೇಖಿಸಿದವೆಲ್ಲವನ್ನೂ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಮಾಡುತ್ತೇನೆ ಎಂದು ಇದೀಗ ಪರೋಕ್ಷವಾದ ಸಂದೇಶವನ್ನೂ ರವಾನಿಸಿದೆ. ಈ ಎಲ್ಲದರಿಂದ ಖಂಡಿತಕ್ಕೂ ಕಾಂಗ್ರೆಸ್ ಗ್ರಾಫ್ ಮೆಲೇರಬಹುದು. ಇಷ್ಟಕ್ಕೂ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಕಳೆದುಕೊಳ್ಳುವಂತದ್ದು ಏನೂ ಇಲ್ಲ.
ಇದೇ ವೇಳೆ ಪ್ರಿಯಾಂಕಾ ಗಾಂಧಿ ಅವರಿಗೆ ‘ಫಲಿತಾಂಶ ಬಂದ ಬಳಿಕ ನೀವು ಬೇರೆ ಪಕ್ಷದ ಜೊತೆ ಸೇರಿ ಸರ್ಕಾರದ ಭಾಗವಾಗುತ್ತೀರಾ? ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ ಅವರು ‘ಈ ಪ್ರಶ್ನೆಗೆ ನನ್ನ ಉತ್ತರ ಏನೆಂದರೆ ಅಂತಹ ಸಂದರ್ಭಗಳು ಉದ್ಭವಿಸಿದಾಗ ನೋಡೋಣ ಎನ್ನುವುದಾಗಿದೆ’ ಎಂದರು. ಮತ್ತದೇ ಪ್ರಶ್ನೆ ಬಂದಾಗ ‘ಒಂದೊಮ್ಮೆ ಬೇರೆಯವರ ಜೊತೆ ಸೇರಿ ಸರ್ಕಾರದ ಭಾಗವಾಗುವ ಪ್ರಮೇಯ ಬಂದರೆ ಯುವಕರು ಮತ್ತು ಮಹಿಳೆಯರಿಗಾಗಿ ನಾವು ರೂಪಿಸಿರುವ ಕಾರ್ಯಸೂಚಿಯನ್ನು ಕಾರ್ಯರೂಪಕ್ಕೆ ತರುವಂತೆ ಷರತ್ತು ವಿಧಿಸುತ್ತೇವೆ’ ಎಂದು ಹೇಳಿದರು.