ಮುಂದಿನ ಚುನಾವಣೆ ಗೆಲ್ಲಬೇಕು ಎಂಬ ಒಂದೇ ಉದ್ದೇಶದಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸುತ್ತಿದೆ. ಇಂಥ ಮೋಸದ ಯಾತ್ರೆಗಳು ಫಲ ನೀಡುವುದಿಲ್ಲ. ಕಾನೂನು ಬಲ್ಲವರಿಂದಲೇ ಕಾನೂನು ಉಲ್ಲಂಘನೆ ಆಗುತ್ತಿರುವುದು ವಿಪರ್ಯಾಸ ಎಂದು ವಿಧಾನಪರಿಷತ್ನ ಮಾಜಿ ಸದಸ್ಯ ಹಾಗೂ ಸಾಹಿತಿ ದೊಡ್ಡರಂಗೇಗೌಡ ತಿಳಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಹಿಂದುಳಿಯಲು ಕಾಂಗ್ರೆಸ್ ಸರ್ಕಾರದ ಐದು ವರ್ಷಗಳ ಆಲಸ್ಯತನ ಹಾಗೂ ವಿಳಂಬ ನೀತಿಯೇ ಕಾರಣ. ಕೋವಿಡ್, ಓಮೈಕ್ರಾನ್ ವ್ಯಾಪಕವಾಗಿ ಹರಡುವ ಹಿನ್ನೆಲೆಯಲ್ಲಿ ಜನರು ಸೇರಬಾರದೆಂಬ ನಿಯಮವಿದ್ದರೂ ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್ ಈ ಪಾದಯಾತ್ರೆ ನಡೆಸುತ್ತಿದೆ ಎಂದು ಕುಟುಕಿದರು.
ಮೇಕೆದಾಟು ಯೋಜನೆ ಬಗ್ಗೆ ಚೆನ್ನೈನ ಹಸಿರುಪೀಠದಲ್ಲಿದ್ದ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಬಿಜೆಪಿ ಸರ್ಕಾರ ಮುಂದಾಗಿದೆ. ಆದರೆ ತಮಿಳುನಾಡು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನೂ ಬಾಕಿ ಇದೆ. ಇದು ವಿಲೇವಾರಿ ಆಗದ ಹೊರತು ಯೋಜನೆ ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಹೀಗಿರುವಾಗ ಸಂವಿಧಾನ ಬಲ್ಲ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಬೆನ್ನು ಕಾಣುತ್ತಿಲ್ಲ ಎಂದು ತಿವಿದರು.