ಸರ್ಕಾರಿ ಶಾಲೆಗಳೆಂದರೆ ಎಲ್ಲರೂ ಮೂಗು ಮುರಿಯುತ್ತಾರೆ. ಬಾಗಿಲು ಕಿಟಕಿಗಳಿರಲ್ಲಾ, ಮೂಲ ಸೌಕರ್ಯಗಳಿರಲ್ಲಾ. ಸರಿಯಾಗಿ ಶಿಕ್ಷಕರ ನೇಮಕವಾಗಿರಲ್ಲಾ ಎಂಬಿತ್ಯಾದಿ ಸಮಸ್ಯೆಗಳ ಪಟ್ಟಿ ಅಲ್ಲಿರುತ್ತವೆ ಎಂದು ಎಲ್ಲರೂ ಮಾತನಾಡೋದು ಕಾಮನ್. ಹೀಗಾಗಿ ಬಹುತೇಕ ಪಾಲಕರು ಕಷ್ಟಪಟ್ಟಾದರೂ ತಮ್ಮ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ, ಕಾನ್ವೆಂಟ್ ಗಳಲ್ಲಿ ಅಡ್ಮಿಷನ್ ಮಾಡಿಸೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಇನ್ನು ಬಡವರು ಖಾಸಗಿ ಶಾಲೆಗಳ ಶುಲ್ಕ ಭರಿಸಲು ಆಗದವರು ಮಾತ್ರ ಅನಿವಾರ್ಯವಾಗಿ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ.
ಆದರೆ ಈ ಸಮಸ್ಯೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ನಾದ ಕೆ ಡಿ ಗ್ರಾಮದಲ್ಲಿರೋ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿಲ್ಲಾ. ಭೀಮಾತೀರದಲ್ಲಿರೋ ನಾದ ಕೆಡಿ ಗ್ರಾಮದ ಹೊರ ಭಾಗದಲ್ಲಿರೋ ಶಾಲೆಯನ್ನು ಪ್ರವೇಶ ಮಾಡಬೇಕಾದರೆ ಹಸಿರು ವನಸಿರಿಯನ್ನು ದಾಟಿಕೊಂಡು ಮುಂದೆ ಹೋಗಬೇಕಿದೆ. ಹಸಿರು ಗಿಡ ಮರಗಳ ಮಧ್ಯೆ ಶಾಲೆಯ ಕಟ್ಟಡ ನಮಗೆ ಕಾಣ ಸಿಗುತ್ತದೆ. ಎರಡು ಎಕರೆ ಜಾಗದಲ್ಲಿ 2007 ರಲ್ಲಿ ನಿರ್ಮಾಣವಾದ ಈ ಶಾಲೆ ಇದೀಗಾ ಪರಿಸರ ಶಾಲೆಯೆಂದೆ ಖ್ಯಾತಿಗೆ ಪಾತ್ರವಾಗಿದೆ. 2010 ರಿಂದ ಇಲ್ಲಿನ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿಕೊಂಡು ಬರಲಾಗಿದೆ. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಬಿಂದಿಗೆಯಿಂದ ನೀರನ್ನು ತಂದು ಸಸಿಗಳನ್ನು ಪೋಷಣೆ ಮಾಡಿದ್ಧಾರೆ. ಸದ್ಯ ಶಾಲೆಯ ಆವರಣದಲ್ಲಿ 701 ವಿವಿಧ ಮರಗಿಡಗಳು ನಮಗೆ ಕಾಣ ಸಿಗುತ್ತದೆ. ಒಂದು ರೀತಿಯ ವನದಂತೆ ಶಾಲೆ ಕಂಡು ಬರುತ್ತದೆ. 2013 ರ ಬರಗಾಲದ ಸಮಯದಲ್ಲಿ ಸಸಿಗಳನ್ನು, ಪುಟ್ಟ ಪುಟ್ಟ ಮರಗಳನ್ನು ಉಳಿಸಲು ಇವರೆಲ್ಲ ಪಟ್ಟ ಪರಿಶ್ರಮ ಅಪಾರ.
ಸದ್ಯ ಕೊಳವೆ ಬಾವಿ ಕೊರೆಸಲಾಗಿದ್ದು, ನೀರನ ಕೊರತೆ ಇಲ್ಲದಾಗಿದೆ. ಬರೀ ಮರಗಳು ಅಷ್ಟೇಯಲ್ಲಾ ಶಾಲೆಯ ಆವರಣದಲ್ಲಿ ಸಾವಯವ ಗೊಬ್ಬರ ತಯಾರಿಕೆ ಹಾಗೂ ಮಳೆ ಕೋಯ್ಲು ಮಾಡಲಾಗಿದ್ದು ಸಾವಯವ ಗೊಬ್ಬರನ್ನು ಇದೇ ಮರಗಳಿಗೆ ಹಾಕಲಾಗುತ್ತದೆ. ಮಳೆ ನೀರು ಕೋಯ್ಲು ಕೊಳವೆ ಬಾವಿಯ ಅಂತರ್ಜಲ ಮಟ್ಟ ಕಾಪಾಡಲು ಉಪಯೋವಾಗಿದೆ. ಇವೆಲ್ಲದ ಫಲವಾಗಿ ಶಾಲೆಗೆ ಹಳದಿ ಪರಿಸರ ಪ್ರಶಸ್ತಿ, ಹಸಿರು ಮಿತ್ರ ಪರಿಸರ ಶಾಲೆ, ಪರಿಸರ ಮಿತ್ರ ಶಾಲೆ ಹಾಗೂ ಇಂಡಿ ತಾಲೂಕಾ ಉತ್ತಮ ಶಾಲೆ ಎಂಬ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಇದು ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ
.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆ ಡಿ ಗ್ರಾಮ ಭೀಮಾತೀರದ ಗ್ರಾಮ.
ಭೀಮಾತೀರವೆಂದರೆ ಸಾಕು ರಕ್ತಪಾತಕ್ಕೆ ಕುಖ್ಯಾತಿಯನ್ನು ಪಡೆದಿರೋ ಪ್ರದೇಶ. ಇಂಥ ಪ್ರದೇಶದಲ್ಲಿ ಅದರಲ್ಲೂ ಒಂದು ಸರ್ಕಾರಿ ಶಾಲೆಯನ್ನು ಹಸಿರು ಶಾಲೆಯನ್ನಾಗಿ, ಪರಿಸರ ಸ್ನೇಹಿ ಶಾಲೆಯನ್ನಾಗಿ ನಿರ್ಮಾಣ ಮಾಡಿದ್ದು ಇಲ್ಲಿನ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಪರಿಶ್ರಮವಾಗಿದೆ. ಇಲ್ಲಿನ ಸುತ್ತಮುತ್ತಲ ಖಾಸಗಿ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡುವ ವಿದ್ಯಾರ್ಥಿಗಳು ಖಾಸಗಿ ಶಾಲೆ, ಆದರ್ಶ ವಿದ್ಯಾಲಯ ಸೇರಿದಂತೆ ಇತರೆ ಶಾಲೆಗಳನ್ನು ಬಿಟ್ಟು ನಾದ ಕೆಡಿ ಗ್ರಾಮದಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಪೋಷಕರು ಸಹ ತಮ್ಮ ಮಕ್ಕಳು ಇಲ್ಲಿಯೇ ವಿದ್ಯಾಬ್ಯಾಸ ಮಾಡುವಂತಾಗಲಿ ಎಂದು ದುಂಬಾಲು ಬಿದ್ದಿದ್ದಾರೆ. 2007 ರಲ್ಲಿ 30 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ ಈಗಾ ಒಂದೊಂದು ತರಗತಿಯಲ್ಲಿ 140 ಕ್ಕೂ ಆಧಿಕ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
450 ಕ್ಕೂ ಆಧಿಕ ವಿದ್ಯಾರ್ಥಿಗಳು ದಾಖಲಾಗಿದ್ದು ಒಂದು ಸಾಧನೆಯೇ ಆಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರೋ ಕಾರಣ ಒಂದೊಂದು ತರಗತಿಯ ಎರಡು ವಿಭಾಗಗಳನ್ನು ಮಾಡಲಾಗಿದೆ. ಪಠ್ಯಗಳ ಜೊತೆಗೆ ಪಠ್ಯೇತರ ಚಟುವಟಿಕೆ, ಗಿಡ ಮರಗಳಿಗೆ ನೀರು ಗೊಬ್ಬರ ಹಾಕಿ ಪೋಷನೆ ಮಾಡುವ ಜವಾಬ್ದಾರಿ ಇಲ್ಲಿ ಎಲ್ಲರ ಮೇಲಿದೆ.
ಸದ್ಯ ಇಂಡಿ ತಾಲೂಕಿನಲ್ಲಿಯೇ ಉತ್ತಮ ಸರ್ಕಾರಿ ಶಾಲೆ ಎಂಬ ಗರಿಮೆ ನಾದ ಕೆಡಿ ಗ್ರಾಮದ ಸರ್ಕಾರಿ ಮಾದ್ಯಮಿಕ ಶಾಲೆಗಿದೆ. ಅಷ್ಟೇಯಲ್ಲಾ ಇತರೆ ಖಾಸಗಿ ಶಾಲೆಗಳಿಗೆ ಸಖತ್ ಪೈಪೋಟಿ ನೀಡುತ್ತಿದೆ. ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿಯೂ ಖಾಸಗಿ ಶಾಲೆಗಳಿಗಿಂತ ಈ ಶಾಲೆಯ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಆಟೋಟ, ಪಠ್ಯ ಪಠ್ಯತೇರ ಚಟುವಟಿಕೆಗಳಲ್ಲಿಯೂ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಲ್ಲುತ್ತಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು. ನಾದ ಕೆಡಿ ಗ್ರಾಮದ ಸರ್ಕಾರಿ ಶಾಲೆಯಂತೆಯೇ ಇತರೆ ಸರ್ಕಾರಿ ಶಾಲೆಗಳು ಬದಲಾವಣೆಯಾದರೆ ವ್ಯಾಪಾರೀಕರಣವಾದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆ ಮಾಡಬಹುದು.









