ಶಿವರಾಮ ಕಾರಂತರೆಂದರೆ ನಡೆದಾಡುವ ವಿಶ್ವಕೋಶ. ಕನ್ನಡಕ್ಕೆ ಎರಡನೇ ಜ್ಞಾನಪೀಠ ತಂದುಕೊಟ್ಟವರು. ಶಿಶುಸಾಹಿತ್ಯದಿಂದ ಹಿಡಿದು ರಂಗಭೂಮಿಯವರೆಗೆ ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲವೆನ್ನಬಹುದು. ಅವರೊಬ್ಬ ಸಾಹಿತಿ, ಪರಿಸರ ತಜ್ಞ, ಕೃಷಿಕ, ರಾಜಕಾರಣಿ, ರಂಗ ಕರ್ಮಿ, ಯಕ್ಷಗಾನ ಕಲಾವಿದ ಎಲ್ಲವೂ ಹೌದು. ಇಂತಹ ಕಾರಂತರು ಕಲೆ ಮತ್ತು ಕಲಿಕೆಯ ಕೇಂದ್ರವನ್ನಾಗಿ ರೂಪಿಸಿದ ಪುತ್ತೂರಿನ ಶಾಲೆಯನ್ನು ಅದರ ಆಡಳಿತ ಮಂಡಳಿಯೇ ನೆಲಸಮ ಮಾಡಿದೆ, ಅದೂ ಸರ್ಕಾರದ ಅನುಮತಿಯಿಲ್ಲದೆ!
ಕಳೆದ 10 ವರ್ಷಗಳಿಂದ ಈ ಶಾಲೆ ಮುಚ್ಚಿದ್ದರೂ ಊರಿನ ಜನರ ಹೃದಯಲ್ಲಿ ‘ನಮ್ಮ ಕಾರಂತರು’ ಮೆಟ್ಟಿದ ಶಾಲೆಯಿದು ಎನ್ನುವ ಮಾಂತ್ರಿಕ ಭಾವವೊಂದು ಆ ಶಾಲೆಯನ್ನು ನೋಡಿದಾಗೆಲ್ಲಾ ಹುಟ್ಟುತ್ತಿತ್ತು. ಈಗ ಆಡಳಿತ ಮಂಡಳಿ ಕೊಡಲಿಯೇಟು ಕೊಟ್ಟಿದ್ದೂ ಅದೇ ಭಾವಕ್ಕೆ. ಇಡೀ ಪುತ್ತೂರು ಪಟ್ಟಣಕ್ಕೆ ಇತಿಹಾಸದ ಕಿಟಕಿಯಂತಿದ್ದ ಶಾಲೆ ಈಗ ಧರಾಶಾಹಿಯಾಗಿದೆ.
ಪುತ್ತೂರಿನ ಶಾಸಕ ಸಂಜೀವ್ ಮಠಂದೂರು ಅವರ ಸೂಚನೆ ಮೇರೆಗೆ ಶಾಲಾ ಕಟ್ಟಡದ ಮೇಲ್ಛಾವಣಿಯ ಕೆಲವು ಹೆಂಚುಗಳನ್ನು ನಿರ್ವಹಣಾ ಕಾಮಗಾರಿಗಾಗಿ ತೆಗೆಯುತ್ತಿದ್ದಾಗ ಒಂದು ಹೆಂಚು ಬಿದ್ದು, ಕಟ್ಟಡದ ಮಣ್ಣಿನ ಗೋಡೆಯೊಂದು ಶಿಥಿಲಾವಸ್ಥೆಗೆ ತಲುಪಿರುವುದು ಗಮನಕ್ಕೆ ಬಂದಾಗ ಶಾಲೆಯನ್ನು ಕೆಡವುವ ನಿರ್ಧಾರಕ್ಕೆ ಬರಲಾಯಿತು ಎನ್ನುತ್ತಾರೆ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಡಿಎಂಸಿ) ಅಧ್ಯಕ್ಷ ಪಂಚಾಕ್ಷರಿ.
ಆದರೆ ಶಾಲೆಯನ್ನು ಪಾರಂಪರಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, 2020ರ ಡಿಸೆಂಬರ್ನಲ್ಲಿ ಮಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಕಚೇರಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಬರೆದ ಪತ್ರದಲ್ಲಿ ಕಟ್ಟಡ ದುರಸ್ತಿಗೆ ಹಣ ಬಿಡುಗಡೆ ಮಾಡುವಂತೆ ಕೋರಲಾಗಿತ್ತು. ಹೀಗಿದ್ದರೂ ಡಿಸೆಂಬರ್ 12ರ ಭಾನುವಾರದಂದು ಯಾವುದೇ ಸೂಚನೆ ನೀಡದೆ ಕಟ್ಟಡವನ್ನು ಕೆಡವಲಾಗಿದೆ.
ಮಾಜಿ ವಕೀಲರು ಮತ್ತು ಶಿವರಾಮ ಕಾರಂತರ ಸಹವರ್ತಿಯಾಗಿರುವ 81 ವರ್ಷದ ಪುರಂದರ ಭಟ್ ಅವರು ಶಿವರಾಮ ಕಾರಂತರು ಶಾಲೆಯ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ನಾಟಕಗಳನ್ನು ಬರೆದು ಅವರಿಗೆ ಅಭಿನಯ ತರಬೇತಿ ನೀಡುತ್ತಿದ್ದರು. 1934 ರಿಂದ 1944 ರ ನಡುವೆ ಪುತ್ತೂರು ದಸರಾ ಹಬ್ಬದ ಅಂಗವಾಗಿ ಶಾಲಾ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಗಳು ಸಹ ನಡೆಯುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ. “ಬರೆಯಲು ಓದಲು ಬಾರದವರೂ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸಲು ಚಾಪೆಯನ್ನು ತರುತ್ತಿದ್ದರು” ಎಂದು ಅವರು ‘ದಿ ನ್ಯೂಸ್ ಮಿನಿಟ್’ ಜೊತೆ ಮಾತಾಡುತ್ತಾ ಹೇಳಿದ್ದಾರೆ.

ಪುತ್ತೂರಿನಲ್ಲೇ ಇರುವ ಶಿವರಾಮ ಕಾರಂತರ ಬಾಲವನವನ್ನು ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTACH) ಮೂಲಕ ಕಾರಂತರು ಬಳಸಿದ ವಸ್ತುಗಳನ್ನು ಬಳಸಿ ಪುನಃಸ್ಥಾಪಿಸಲಾಗಿದೆ. ಇದು 40 ವರ್ಷಗಳಿಗೂ ಹೆಚ್ಚು ಕಾಲ ಅವರ ಮನೆಯಾಗಿತ್ತು. ಆದರೆ, ಈ ಶಾಲೆ ಪುತ್ತೂರಿನಲ್ಲಿ ಅವರ ಎರಡನೇ ಮನೆಯಾಗಿತ್ತು, ಅದನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಪುತ್ತೂರಿನ ಹಿರಿಯರು ವಿಷಾದ ವ್ಯಕ್ತಪಡಿಸುತ್ತಾರೆ. ಈ ಬಗ್ಗೆಯೂ ಮಾತನಾಡಿರುವ ಪುರಂದರ ಅವರು “ಅವರು ಮನೆಯಲ್ಲಿ ಇಲ್ಲದಿದ್ದಾಗ ತಮ್ಮ ವಿದ್ಯಾರ್ಥಿಗಳೊಂದಿಗೆ ಶಾಲೆಯಲ್ಲಿರುತ್ತಿದ್ದರು” ಎಂದು ಹೇಳುತ್ತಾರೆ. ಶಿವರಾಮ ಕಾರಂತರ ಪ್ರಭಾವದಿಂದ ಕುವೆಂಪು ಅವರಂತಹ ಕನ್ನಡದ ದಿಗ್ಗಜರು ಶಾಲೆಯಲ್ಲಿ ಮಾತುಕತೆ ನಡೆಸಿದ್ದನ್ನೂ ಹಿರಿಯರು ನೆನಪಿಸಿಕೊಳ್ಳುತ್ತಾರೆ.
ನಿಜಕ್ಕೂ ಬಾಲವನದಷ್ಟೇ ಆದ್ಯತೆಯನ್ನು ಈ ಶಾಲೆಗೆ ಕೊಡಬೇಕಾಗಿತ್ತು. ಆದರೆ ಶಾಲೆ ಪೂರ್ತಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ ಕೆಲವು ವರ್ಷಗಳಿಂದಲೇ ಗೋಡೆಗಳ ಬಣ್ಣ ಎದ್ದು ಬರಲು ಪ್ರಾರಂಭಿಸಿತ್ತು ಮತ್ತು ಛಾವಣಿಯ ಮಾಡು ಬೀಳಲು ಪ್ರಾರಂಭಿಸಿದ್ದವು. ಮಣ್ಣಿನ ಗೋಡೆಗಳು ದುರ್ಬಲಗೊಂಡಿದ್ದವು. ಸ್ಥಳೀಯರ ತೀವ್ರ ಪ್ರಯತ್ನದ ಹೊರತಾಗಿಯೂ ಶಾಲೆಯನ್ನು ಸಂರಕ್ಷಿಸಲು ಯಾವುದೇ ಪುನಶ್ಚೇತನ ಕಾರ್ಯ ನಡೆಯಲಿಲ್ಲ, ಸ್ಥಳೀಯರ ಭಾವನೆಗಳಿಗೆ ಕಿಂಚಿತ್ತು ಬೆಲೆಯೂ ದೊರೆತಿಲ್ಲ. ಸ್ಥಳೀಯ ಶಿಕ್ಷಣ ಇಲಾಖೆ, ಮಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರಿನಲ್ಲಿರುವ ರಾಜ್ಯ ಶಿಕ್ಷಣ ಇಲಾಖೆ ಹಾಗೂ ಪ್ರಧಾನಮಂತ್ರಿಗಳ ಕಚೇರಿಗೂ ಈ ಬಗ್ಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಸ್ಥಳೀಯರಾದ ಅಮೃತ್.
ಮುಂದುವರೆದು, “ಇದೊಂದು ಸಾಂಸ್ಕೃತಿಕ ನಿಧಿಯಾಗಿತ್ತು. ಅದನ್ನು ಸಾಧ್ಯವಾದಷ್ಟು ಮೂಲ ರಚನೆಗೆ ಹತ್ತಿರವಾಗಿ ಮರುನಿರ್ಮಾಣ ಮಾಡಬೇಕೆಂದು ನಾವು ಬಯಸುತ್ತೇವೆ. ಶಿವರಾಮ ಕಾರಂತರ ಗೌರವಾರ್ಥ ವಸ್ತುಸಂಗ್ರಹಾಲಯ ಅಥವಾ ಪರಂಪರೆಯ ಕೇಂದ್ರವಾಗಿ ಸಾರ್ವಜನಿಕ ಬಳಕೆಗೆ ಇದು ಅತ್ಯಗತ್ಯ ಎಂದು ನಾವು ನಂಬುತ್ತೇವೆ”’ ಎಂದು ವಿವರಿಸಿದ್ದಾರೆ.

ಶಾಲೆಯ ತರಗತಿ ಕೊಠಡಿಗಳನ್ನು ರೋಮ್ ಮತ್ತು ಲಂಡನ್ನಲ್ಲಿರುವಂತೆ ಒಳಾಂಗಣ ಆಂಫಿಥಿಯೇಟರ್ಗಳಂತೆ ವಿನ್ಯಾಸಗೊಳಿಸಲಾಗಿದ್ದ, 156 ವರ್ಷ ಹಳೆಯ, ಕಾರಂತರ ಅಭಿಲಾಷೆಯಂತೆ ಸುಂದರ ವಿನ್ಯಾಸ ಮತ್ತು ನಲಿಕೆಯೊಂದಿಗೆ ಕಲಿಯಬಹುದಾಗಿದ್ದಂತಹ ಪಾರಂಪರಿಕ ಕಟ್ಟಡವೊಂದನ್ನು ಸಂರಕ್ಷಿಸುವ ಎಲ್ಲಾ ಅವಕಾಶವಿದ್ದೂ ಅದನ್ನು ಪಾಳು ಬೀಳಲು ಬಿಟ್ಟು ನಿರ್ಲಕ್ಷಿಸಿದ್ದು ಸರ್ಕಾರದ ತಪ್ಪು. ಕೊನೆಪಕ್ಷ, ಕಾರಂತರ ಕೊಡುಗೆಗಳನ್ನು ಮುಂದಿನ ಪೀಳಿಗೆಯೂ ಅರಿಯಲು ಸಾಧ್ಯವಾಗುವಂತೆ ಅದನ್ನು ಪುನರ್ನಿರ್ಮಾಣ ಮಾಡುವ ಕನಿಷ್ಠ ಜವಾಬ್ದಾರಿಯನ್ನಾದರೂ ಸರ್ಕಾರ ಹೊತ್ತುಕೊಳ್ಳಬೇಕು. ಆ ಮೂಲಕ ಕಾರಂತರಂತಹ ಧೀಮಂತ ವ್ಯಕ್ತಿತ್ವಕ್ಕೆ ಸಲ್ಲಬೇಕಾದ ಗೌರವ, ಆದರಗಳು ಸಲ್ಲಲಿ.





