ಮತಾಂತರ ನಿಷೇಧ ಮಸೂದೆ, ಲವ್ ಜಿಹಾದ್ ಮಸೂದೆ ಮುಂತಾದ ನಿರ್ದಿಷ್ಟ ಸಮುದಾಯವನ್ನೇ ಗುರಿಯಾಗಿಸಿಕೊಂಡ ಹಲವು ಕಾನೂನುಗಳ ಮೂಲಕ ಅಲ್ಪಸಂಖ್ಯಾತರ ಮೇಲೆ ಪರೋಕ್ಷ ಪ್ರಹಾರ ನಡೆಸುವ ಅಧಿಕೃತ ಅಸ್ತ್ರಗಳನ್ನು ಭಾರತೀಯ ಜನತಾ ಪಾರ್ಟಿ ತನ್ನ ಅಧಿಕಾರ ರಾಜ್ಯಗಳಲ್ಲಿ ಸಲೀಸಾಗಿ ಕಂಡುಕೊಳ್ಳುತ್ತಿದೆ. ಇತ್ತೀಚೆಗೆ ಕರ್ನಾಟಕ ವಿಧಾನಸಭೆ ಅಂಗೀಕರಿಸಿದ ವಿವಾದಿತ ಮತಾಂತರ ನಿಷೇಧ ಮಸೂದೆ ಕೂಡ ಅಂತಹದ್ದೇ ಒಂದು ಪ್ರಬಲ ಅಸ್ತ್ರ.
ಅದೇ ಅರ್ಥದಲ್ಲೇ ಬಿಜೆಪಿಯ ಹಿರಿಯ ನಾಯಕ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿಧಾನಸಭಾ ಕಲಾಪದಲ್ಲೇ ಅಧಿಕೃತವಾಗಿ “ಮತಾಂತರ ನಿಷೇಧ ಕಾಯ್ದೆಯನ್ನು ಆರ್ ಎಸ್ ಎಸ್ ನಿಂದಲೇ ತಂದಿರೋದು. ದೇಶ, ಧರ್ಮ ಳಿಸೋಕೆ ಇದೊಂದೇ ಕಾಯ್ದೆಯಲ್ಲ ಇಂತಹ ನೂರು ಕಾಯ್ದೆ ತರ್ತೀವಿ. ಧರ್ಮ ಉಳಿಸ್ತೀವಿ. ಹಿಂದೂ ಧರ್ಮದಿಂದ ಮತಾಂತರ ಆಗಲು ಬಿಡಲ್ಲ. ಹಿಂದೂಗಳ ಸಂಖ್ಯೆ ಕಡಿಮೆಯಾಗಲು ಬಿಡಲ್ಲ. ನಾವು ಯಾರ ಸುದ್ದಿಗೂ ಹೋಗಲ್ಲ. ನಮ್ಮ ಸುದ್ದಿಗೆ ಯಾರಾದರೂ ಬಂದರೂ ಚಿಂದಿ ಚಿಂದಿ ಮಾಡ್ತೀವಿ” ಎಂದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಖಾತರಿಪಡಿಸಬೇಕಾದ, ಸಂವಿಧಾನದ ಆಶಯದಂತೆ ಎಲ್ಲಾ ಧರ್ಮ- ಸಮುದಾಯಗಳಿಗೂ ಸಮಾನ ಬದುಕುವ ಹಕ್ಕು ಮತ್ತು ಧರ್ಮಾಚರಣೆಯ ಹಕ್ಕು ಖಾತರಿಪಡಿಸಬೇಕಾದ ಸ್ಥಾನದಲ್ಲಿರುವ ಸರ್ಕಾರದ ಭಾಗವಾದ ಸಚಿವರೇ ಹೀಗೆ ಕಲಾಪದಲ್ಲಿ ಅಧಿಕೃತವಾಗೇ ಚಿಂದಿ ಮಾಡುವ ಮಾತನಾಡಿದ್ದಾರೆ. ಅದು ಕೇವಲ ಆಕಸ್ಮಿಕವೂ ಅಲ್ಲ; ಭಾವನಾತ್ಮಕವೂ ಅಲ್ಲ. ಸಚಿವರ ಆ ಮಾತು ಒಂದು ಕ್ರಮಬದ್ಧ ಯೋಜಿತ ವಿನ್ಯಾಸದ ಅಭಿವ್ಯಕ್ತಿ ಮತ್ತು ಅಧಿಕೃತ ಬೆದರಿಕೆಯ ತಂತ್ರ ಎಂಬುದನ್ನು ವಿವರಿಸಿಹೇಳಬೇಕಿಲ್ಲ.
ಯಾಕೆಂದರೆ, 2014ರ ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕ ಮಾತ್ರವಲ್ಲದೆ ದೇಶದ ಮೂಲೆಮೂಲೆಯಲ್ಲೂ ಇಂತಹ ಬೆದರಿಕೆಯ ಮತ್ತು ದಬ್ಬಾಳಿಕೆಯ ಮಾತುಗಳು ಕೇಂದ್ರ ಗೃಹ ಸಚಿವರಿಂದ ವಿವಿಧ ರಾಜ್ಯಗಳ ಸಚಿವರವರೆಗೆ, ಶಾಸಕರು ಮತ್ತು ಸಣ್ಣಪುಟ್ಟ ನಾಯಕರವರೆಗೂ ಅನೂಚಾನವಾಗಿ ವಿಸ್ತರಿಸುತ್ತಲೇ ಇವೆ.
ಮುಸ್ಲಿಮರು, ಮಹಿಳೆಯರು ಮತ್ತು ದಲಿತರ ವಿರುದ್ಧದ ತಮ್ಮ ಮನುವಾದಿ ಮನಸ್ಥಿತಿಯ ಮಾತುಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಸಚಿವ ಈಶ್ವರಪ್ಪ ಕರ್ನಾಟಕದ ವಿಧಾನಸಭೆಯಲ್ಲಿ ನಿಂತು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಅಬ್ಬರಿಸಿದ ನಾಲ್ಕಾರು ದಿನಗಳ ಮುನ್ನ ಹಿಂದೂಗಳ ಪವಿತ್ರ ಕ್ಷೇತ್ರ ಹರಿದ್ವಾರದಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ಮಾದರಿಯ ಧರ್ಮ ಸಂಸತ್ (#HaridwarHateAssembly) ನಲ್ಲಿ ಬಿಜೆಪಿಯ ಶಾಸಕರೂ ಸೇರಿದಂತೆ ಹಿಂದೂ ಮಹಾಸಭಾ ಮತ್ತಿತರ ಸಂಘಟನೆಗಳ ನಾಯಕರು ಮತ್ತು ಧಾರ್ಮಿಕ ಮುಖಂಡರು ದೇಶದ ಮುಸ್ಲಿಮರ ಜನಾಂಗೀಯ ಹತ್ಯೆಗೆ ಕರೆ ನೀಡಿದ್ದಾರೆ!
ಹರಿದ್ವಾರದಲ್ಲಿ ಡಿಸೆಂಬರ್ 17ರಿಂದ 19ರವರೆಗೆ ಮೂರು ದಿನಗಳ ಕಾಲ ನಡೆದ ಧರ್ಮ ಸಂಸತ್ ನಲ್ಲಿ ದೇಶದ ಮುಸ್ಲಿಮರನ್ನು ಮ್ಯಾನ್ಮಾರ್ ನ ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡದ ಮಾದರಿಯಲ್ಲಿ ಸಾಮೂಹಿಕ ಹತ್ಯೆ ಮಾಡಬೇಕು ಎಂದು ಕರೆ ನೀಡಿರುವ ಹಿಂದೂ ರಕ್ಷಾ ಸೇನೆಯ ಸ್ವಾಮಿ ಪ್ರಭೋದಾನಂದ ಗಿರಿ, ಯತಿ ನರಸಿಂಗಾನಂದ, ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಧ್ವಿ ಅನ್ನಪೂರ್ಣ ಅವರ ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಧರ್ಮ ಸಂಸತ್ ಮೂಲಕ ದೇಶದ 20 ಕೋಟಿ ಮುಸ್ಲಿಮರ ಸಾಮೂಹಿಕ ಹತ್ಯೆಗೆ ಈ ನಾಯಕರು ಪ್ರಚೋದನೆ ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹರಿದ್ವಾರದ ಪೊಲೀಸರಿಗೆ ಆರ್ ಟಿ ಐ ಕಾರ್ಯಕರ್ತ ಸಾಕೇತ್ ಗೋಖಲೆ ಸೇರಿದಂತೆ ಹಲವರು ದೂರು ನೀಡಿದ್ದಾರೆ.
2008-09ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಸುಮಾರು 2002-03ರಿಂದ ನಿರಂತರವಾಗಿ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವಗಳಲ್ಲಿ ಕೂಡ ಬಹುತೇಕ ಕರ್ನಾಟಕದ ಹಲವು ಸ್ವಾಮೀಜಿಗಳು, ಧರ್ಮಗುರುಗಳು ಪ್ರಮೋದ್ ಮುತಾಲಿಕ್ ಮತ್ತು ಪ್ರವೀಣ್ ಭಾಯ್ ತೊಗಾಡಿಯಾರಂತಹ ಉಗ್ರ ಹಿಂದುತ್ವವಾದಿಗಳ ನೇತೃತ್ವದಲ್ಲಿ ಇಂತಹದ್ದೇ ಪ್ರಚೋದನಕಾರಿ ಭಾಷಣ ಮಾಡಿದ್ದರು. ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನಲ್ಲಿ 2004ರಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಮುನ್ನ ಪ್ರಭಾವಿ ಸ್ವಾಮೀಜಿಯೊಬ್ಬರು ಮಾಡಿದ ಪ್ರಚೋದನಕಾರಿ ಭಾಷಣ ಆ ಭಾಗದ ಹಿಂದೂ ಯುವಕರಿಗೆ ನೀಡಿದ ಪ್ರಚೋದನೆಯ ಪರಿಣಾಮವಾಗಿ ಇಡೀ ಮಲೆಬೆನ್ನೂರು ಬರೋಬ್ಬರಿ ಮೂರು ತಿಂಗಳ ಕಾಲ ಹೊತ್ತಿ ಉರಿದಿತ್ತು.
ಅದೊಂದು ನಿದರ್ಶನ ಅಷ್ಟೇ. ಇದೀಗ ಹರಿದ್ವಾರದಲ್ಲಿ ನಡೆದಿರುವುದು ನೇರಾ ನೇರ ಹುಕಂ ಹೊರಡಿಸಿರುವ ಧರ್ಮ ಸಂಸತ್. “ನಾವು ಎಲ್ಲ ತಯಾರಿ ಮಾಡಿಕೊಳ್ಳಬೇಕು. ಏನು ತಯಾರಿ ಎಂಬುದನ್ನು ನಾನು ನಿಮಗೆ ಹೇಳುವೆ. ನಾನು ಹೇಳ್ತಿದೀನಿ ಇದೊಂದೇ ನಮಗಿರುವ ಪರಿಹಾರ ಮಾರ್ಗ. ಈ ಪರಿಹಾರ ಮಾರ್ಗವನ್ನು ಅನುಸರಿಸಿದರೆ ಎಲ್ಲವೂ ಸುಸೂತ್ರ. ಮ್ಯಾನ್ಮಾರ್ ನಲ್ಲಿ ಹಿಂದೂಗಳನ್ನು ಅಟ್ಟಾಡಿಸಿ ಹೊಡೆದು ಕೊಂದರು. ಅಲ್ಲಿನ ಸರ್ಕಾರ, ಪೊಲೀಸ್ ಮತ್ತು ರಾಜಕಾರಣಿಗಳು ಎಲ್ಲಕ್ಕೂ ಕಣ್ಣುಮುಚ್ಚಿಕೊಂಡಿದ್ದರು. ಅವರು ಕತ್ತು ಕೊಯ್ದು, ಬೀದಿಯಲ್ಲಿ ಅಟ್ಟಾಡಿಸಿ ಹೊಡೆದು ಕೊಂದರು” ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೊಂದಿಗೆ ಆಪ್ತರಾಗಿರುವ ಸ್ವಾಮಿ ಪ್ರಭೋದಾನಂದ ಗಿರಿ ಹೇಳಿದ್ದಾರೆ.
ಅದೇ ವೇದಿಕೆಯಲ್ಲಿ, ಮತ್ತೊಬ್ಬ ಹಿಂದೂ ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಕೂಡ ಪ್ರಚೋದನಕಾರಿ ಹೇಳಿಕೆ ನೀಡಿದ್ದು, “ನಮ್ಮ ಸ್ಥಿತಿ ಇದು. ದೆಹಲಿ ಗಡಿಯಲ್ಲಿ ಏನಾಯ್ತು ಎಂದು ನೀವೆಲ್ಲಾ ನೋಡಿದ್ದೀರಿ. ಹಿಂದೂಗಳನ್ನು ಸಾಯಿಸಿ ನೇತುಹಾಕಿದರು. ಈಗ ನಮಗೆ ಹೆಚ್ಚಿನ ಸಮಯವಿಲ್ಲ. ಈಗ ನೀವು ಸಾಯಲು ಸಿದ್ಧರಾಗಬೇಕು ಇಲ್ಲವೇ ಸಾಯಿಸಲು ಸಜ್ಜಾಗಬೇಕು. ಎರಡೇ ದಾರಿ ಇರುವುದು. ಇದನ್ನು ಬಿಟ್ಟು ಬೇರೆ ದಾರಿ ಇಲ್ಲ. ಹಾಗಾಗಿ ಪ್ರತಿಯೊಬ್ಬ ಹಿಂದೂವೂ ಅಸ್ತ್ರ ಕೈಗೆತ್ತಿಕೊಳ್ಳಬೇಕು ಮತ್ತು ಶುದ್ಧೀಕರಣ ಅಭಿಯಾನ(ಸಫಾಯಿ ಅಭಿಯಾನ್) ಆರಂಭಿಸಬೇಕು. ಇದರ ಹೊರತು ಬೇರೆ ಪರಿಹಾರವೇ ಇಲ್ಲ” ಎಂದು ಮುಸ್ಲಿಮರ ಜನಾಂಗೀಯ ಹತ್ಯೆಗೆ ನೇರ ಕರೆ ನೀಡಿದ್ದಾರೆ.
“ಅಸ್ತ್ರ ಕೈಗೆತ್ತಿಕೊಳ್ಳದೆ ಏನೂ ಮಾಡಲಾಗದು. ನೀವು ಅವರ ಜನಸಂಖ್ಯೆಯನ್ನು ತೊಡೆದುಹಾಕಬೇಕು ಎಂದರೆ ಅವರನ್ನು ಕೊಲ್ಲಬೇಕು. ಹಾಗಾಗಿ ಕೊಲ್ಲಲು ಮತ್ತು ಅದಕ್ಕಾಗಿ ಜೈಲಿಗೆ ಹೋಗಲು ಸಿದ್ಧರಾಗಿ. ಕನಿಷ್ಟ ನಮ್ಮಲ್ಲಿ ನೂರು ಮಂದಿ ಅವರ 20 ಮಂದಿಯನ್ನು ಕೊಲ್ಲಲು ಸಾಧ್ಯವಾದರೂ ನಾವು ಅವರ ವಿರುದ್ಧ ಜಯ ಗಳಿಸಿದಂತೆಯೇ. ಅದಕ್ಕಾಗಿ ಜೈಲಿಗೆ ಹೋಗುವುದರಲ್ಲೂ ಹೆಮ್ಮೆ ಇದೆ” ಎಂದು ಸಾಧ್ವಿ ಅನ್ನಪೂರ್ಣ ಧರ್ಮ ಸಂಸತ್ ನಲ್ಲಿ ಕರೆ ನೀಡಿದ್ದಾರೆ.
ಅಲ್ಲದೆ ಘಟನೆಯ ಕುರಿತು ಪ್ರತಿಕ್ರಿಯೆ ಕೇಳಿದ ಎನ್ ಡಿಟಿವಿ ಜೊತೆ ಮಾತನಾಡಿರುವ ಸಾಧ್ವಿ ಅನ್ನಪೂರ್ಣ, ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ “ಭಾರತದ ಸಂವಿಧಾನವೇ ತಪ್ಪು. ಭಾರತ ಮಹಾತ್ಮಾಗಾಂಧಿ ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ನೆನೆಯಬೇಕು. ನಾನು ಹಾಗೆ ಹೇಳಿದ್ದಕ್ಕೆ ಯಾವ ಭಯವೂ ಇಲ್ಲ, ಪೊಲೀಸರಿಗೆ ಹೆದರುವುದೂ ಇಲ್ಲ” ಎಂದು ಕಾನೂನು ಮತ್ತು ಸುವ್ಯವಸ್ಥೆಗೇ ಸವಾಲು ಹಾಕಿದ್ದಾರೆ!
ಅಲ್ಲದೆ, ಅದೇ ಸಮಾವೇಶದಲ್ಲಿ ಬಿಜೆಪಿ ಆಪ್ತ ಧಾರ್ಮಿಕ ಮುಖಂಡ ಧರ್ಮದಾಸ್ ಮಹರಾಜ್ ಎಂಬುವರು “ಸಂಸತ್ತಿನಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಸಂಪತ್ತಿನಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕಿದೆ ಎಂದು ಹೇಳುವಾಗ ನಾನು ಅಲ್ಲಿದ್ದಿದ್ದರೆ, ನಾಥೂರಾಂ ಗೋಡ್ಸೆಯ ಹಾದಿ ಹಿಡಿಯುತ್ತಿದ್ದೆ. ರಿವಾಲ್ವರ್ ಹಿಡಿದು ಆತನ(ಮನಮೋಹನ್ ಸಿಂಗ್) ಎದೆಗೆ ಆರು ಸುತ್ತು ಗುಂಡು ಹಾರಿಸುತ್ತಿದ್ದೆ” ಎಂದಿರುವ ವೀಡಿಯೋ ಕೂಡ ವೈರಲ್ ಆಗಿದೆ.
ಧರ್ಮದಾಸ್ ಮಹರಾಜ್, ಸ್ವಾಮಿ ಪ್ರಭೋದಾನಂದ ಗಿರಿ, ಯತಿ ನರಸಿಂಗಾನಂದ ಮತ್ತು ಸಾಧ್ವಿ ಅನ್ನಪೂರ್ಣ ಸೇರಿದಂತೆ ಧರ್ಮ ಸಂಸತ್ ನಲ್ಲಿ ಮುಸ್ಲಿಮರ ಸಾಮೂಹಿಕ ಹತ್ಯೆಗೆ, ಜನಾಂಗೀಯ ಹತ್ಯಾಕಾಂಡಕ್ಕೆ ಕರೆ ನೀಡಿದ ಮುಖಂಡರೆಲ್ಲರೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿಯ ನಾಯಕರು ಮತ್ತು ಆ ಪಕ್ಷಕ್ಕೆ ಆಪ್ತರು ಎಂಬುದು ಗುಟ್ಟೇನಲ್ಲ. ಅಲ್ಲದೆ, ಸ್ವತಃ ಬಿಜೆಪಿ ಉತ್ತರಾಖಂಡದ ನಾಯಕರಾದ ಅಶ್ವಿನ್ ಉಪಾಧ್ಯಾಯ ಮತ್ತು ಉದಿತ್ ತ್ಯಾಗಿ ಸೇರಿದಂತೆ ಹಲವು ನಾಯಕರು ಆ ಪ್ರಚೋಧನಕಾರಿ ಹೇಳಿಕೆಯ ವೇಳೆ ವೇದಿಕೆಯಲ್ಲಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಒಂದು ಕಡೆ 2020ರ ಫ್ರೆಬವರಿಯ ದೆಹಲಿ ಗಲಭೆಯಂತಹ ಘಟನೆಗಳಲ್ಲಿ ಪೊಲೀಸರ ಮೂಲಕ ಸರ್ಕಾರಗಳೇ ಅಲ್ಪಸಂಖ್ಯಾತರ ವಿರುದ್ಧ ವ್ಯವಸ್ಥಿತ ಯೋಜಿತ ಹಿಂಸೆಗೆ, ಅಟ್ಟಹಾಸಕ್ಕೆ, ದಬ್ಬಾಳಿಕೆಗೆ ಕುಮ್ಮಕ್ಕು ನೀಡಿರುವುದು ನ್ಯಾಯಾಲಯದ ವಿಚಾರಣೆಯಲ್ಲೇ ಬಯಲಾಗಿದೆ. ಮತ್ತೊಂದು ಕಡೆ ಸಿಎಎ-ಎನ್ ಆರ್ ಸಿಯಂತಹ ಕಾನೂನುಗಳ ಮೂಲಕ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಪೌರತ್ವವನ್ನೇ ನಿರಾಕರಿಸುವ ಯೋಜಿತ ಹುನ್ನಾರಗಳು ನಡೆಯುತ್ತಿವೆ. ಅಧಿಕಾರದ ದಂಡ ಹಿಡಿದವರು ತಮ್ಮ ವ್ಯಾಪ್ತಿಯಲ್ಲಿ ಹೀಗೆ ಅಲ್ಪಸಂಖ್ಯಾತರನ್ನು ಹಣಿಯಲು ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ಮಾಡುತ್ತಿರುವಾಗಲೇ ಧರ್ಮ ಸಂಸತ್, ವಿರಾಟ್ ಹಿಂದೂ ಸಮಾಜೋತ್ಸವದಂತಹ ವೇದಿಕೆಗಳ ಮೂಲಕ ಅಲ್ಪಸಂಖ್ಯಾತರ ಜನಾಂಗೀಯ ಹತ್ಯಾಕಾಂಡಕ್ಕೆ ಜರ್ಮನಿಯ ಹಿಟ್ಲರ್ ಮಾದರಿಯನ್ನು ಅನುಸರಿಸಲಾಗುತ್ತಿದೆ.
ಮೋದಿಯವರ ಭಾರತೀಯ ಜನತಾ ಪಕ್ಷ ಮತ್ತು ಅದರ ಚಾಲಕ ಶಕ್ತಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಹುತ್ವದ ಪರಿಕಲ್ಪನೆ ಎಂಥಹದ್ದು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎಂಥ ಬದ್ಧತೆಯಿಂದ ಅವರ ಪಕ್ಷದ ಸರ್ಕಾರಗಳು ಜಾರಿಗೆ ತರುತ್ತಿವೆ ಎಂಬುದಕ್ಕೆ ಹರಿದ್ವಾರದ ಘಟನೆ ಒಂದು ತಾಜಾ ಉದಾಹರಣೆ. ಧರ್ಮ ಸಂಸತ್ ವೇದಿಕೆಯಿಂದ ಮುಸ್ಲಿಮರ ಜನಾಂಗೀಯ ಹತ್ಯೆಗೆ ಕರೆ ನೀಡಿದ ಪ್ರಚೋಧನಕಾರಿ ಹೇಳಿಕೆ ಕುರಿತು ದಾಖಲಾದ ಎಫ್ ಐಆರ್ ನಡಿ ಈವರೆಗೆ ಅಲ್ಲಿನ ಪೊಲೀಸರು ಕ್ರಮಕೈಗೊಂಡಿರುವುದು ಏಕೈಕ ವ್ಯಕ್ತಿಯ ವಿರುದ್ಧ! ಅದೂ ಕೂಡ ಪ್ರಚೋಧನಕಾರಿ ಭಾಷಣ ಮಾಡಿದ ಯಾವ ವ್ಯಕ್ತಿಯ ವಿರುದ್ಧವೂ ಯಾವ ಕ್ರಮವನ್ನೂ ಕೈಗೊಳ್ಳದ ಪೊಲೀಸರು, ಸಂಘಟಕರಲ್ಲಿ ಒಬ್ಬನಾದ ಜಿತೇಂದ್ರ ನಾರಾಯಣ ಅಲಿಯಾಸ್ ವಾಸಿಂ ರಿಜ್ವಿ ಎಂಬ ಇತ್ತೀಚೆಗೆ ತಾನೆ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯ ವಿರುದ್ಧ ಮಾತ್ರ ಕ್ರಮಜರುಗಿಸಿದ್ದಾರೆ!
ಈ ಎಲ್ಲದರ ನಡುವೆ, ಭಾರತೀಯ ಜನತಾ ಪಕ್ಷದ ಹಿಂದುತ್ವದ ಐಕಾನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು, ಇತ್ತೀಚಿನ ತಮ್ಮ ಅಮೆರಿಕ ಭೇಟಿಯ ವೇಳೆ ನಡೆದ ‘ಪ್ರಜಾಪ್ರಭುತ್ವ ಶೃಂಗಸಭೆ’ಯಲ್ಲಿ “ಕಾನೂನು ಪಾಲನೆ ಮತ್ತು ಬಹುತ್ವದ ಮೌಲ್ಯಗಳು ಸೇರಿದಂತೆ ಪ್ರಜಾಪ್ರಭುತ್ವದ ಸ್ಪೂರ್ತಿ ಎಂಬುದು ಭಾರತೀಯರಲ್ಲಿ ತಲತಲಾಂತರದಿಂದ ನೆಲೆಯೂರಿವೆ” ಎಂದಿದ್ದರು! ಆದರೆ, ಪ್ರಧಾನಿಗಳ ಪಕ್ಷ ಮತ್ತು ಅವರು ಪ್ರತಿನಿಧಿಸುವ ಕಟ್ಟಾ ಹಿಂದುತ್ವವಾದದ ನಾಯಕರು ಸಾರಿ ಹೇಳುತ್ತಿರುವ ಪ್ರಜಾಪ್ರಭುತ್ವದ ಆಶಯ ಮತ್ತು ಪ್ರೇರಣೆಗಳು ಏನು ಎಂಬುದಕ್ಕೆ ಹರಿದ್ವಾರದ ಜನಾಂಗೀಯ ಹತ್ಯೆಯ ಕರೆಯ ಧರ್ಮ ಸಂಸತ್ ಸಾಕ್ಷಿ!