ʼಲವ್ ಜಿಹಾದ್ʼ ಅನ್ನು ನಿಷೇಧಿಸುವ ಕಾನೂನನ್ನು ಕೂಡ ಬಿಜೆಪಿ ಸರ್ಕಾರ ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಸೋಮವಾರ ಹೇಳುವ ಮೂಲಕ ಹೊಸ ಸಂಚನಕ್ಕೆ ನಾಂದಿ ಹಾಡಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಧಾರ್ಮಿಕ ಮತಾಂತರ ನಿಯಂತ್ರಿಸುವ ಮಸೂದೆ ಮಂಡಿಸಲು ಸರ್ಕಾರವು ಸಜ್ಜಾಗಿರುವಾಗಲೇ ಸಚಿವ ಸುನೀಲ್ ಕುಮಾರ್ ಈ ಹೇಳಿಕೆ ಈಗ ಆಶ್ಚರ್ಯ ಹಾಗೂ ಆತಂಕದೊಂದಿಗೆ ಕುತೂಹಲ ಸೃಷ್ಟಿಸಿದೆ.
ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, “ಬಿಜೆಪಿ ಗೋಹತ್ಯೆ ವಿರೋಧಿ ಕಾನೂನು ಜಾರಿಗೆ ತರುವುದಾಗಿ ಘೋಷಿಸಿತ್ತು, ಅದನ್ನು ಮಾಡಿದೆ. ಪ್ರಸಕ್ತ ಅಧಿವೇಶನದಲ್ಲಿ ನಾವು ಮತಾಂತರ ವಿರೋಧಿ ಮಸೂದೆಯನ್ನು ಪರಿಚಯಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ʼಲವ್ ಜಿಹಾದ್ʼ ಅನ್ನು ಸಹ ನಿಷೇಧಿಸುವ ಮಸೂದೆಯನ್ನು ನಮ್ಮ ಸರ್ಕಾರವು ಪರಿಚಯಿಸುತ್ತದೆ,” ಎಂದಿದ್ದಾರೆ.
ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಅಲಹಾಬಾದ್ ಹೈಕೋರ್ಟ್ ಆದೇಶದ ಆಧಾರದ ಮೇಲೆ ವಿವಾಹದ ಸಲುವಾಗಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ರೂಪಿಸುವ ಯೋಜನೆಯನ್ನು ಕರ್ನಾಟಕ ಘೋಷಿಸಿತ್ತು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ‘ಲವ್ ಜಿಹಾದ್’ಗೂ ಕಡಿವಾಣ ಹಾಕಲು ಕಾನೂನು ರೂಪಿಸಿವೆ ಎಂದು ತಿಳಿಸಿದರು.
ಮತಾಂತರ ನಿಷೇಧ ಮಸೂದೆಯನ್ನು ಕಾಂಗ್ರೆಸ್ ಏಕೆ ವಿರೋಧಿಸುತ್ತಿದೆ ಎಂಬುದನ್ನು ವಿವರಿಸಬೇಕು. ಮತಾಂತರಕ್ಕೆ ಕಾರಣಗಳು ಮತ್ತು ಅದರ ದುಷ್ಪರಿಣಾಮಗಳು ನಮಗೆ ತಿಳಿದಿದೆ. ನಾವು ಯಾವುದೇ ಸಮುದಾಯವನ್ನು ಗುರಿಯಾಗಿಸಲು ಕಾನೂನನ್ನು ಪರಿಚಯಿಸುತ್ತಿಲ್ಲ. ಈ ವಿಷಯದ ಬಗ್ಗೆ ಬಿಜೆಪಿ ಚರ್ಚೆಗೆ ಸಿದ್ಧವಾಗಿದೆ ಎಂದು ಕರೆ ನೀಡಿದ್ದಾರೆ.
ಸುನೀಲ್ ಕುಮಾರ್ ಅವರ ಹೇಳಿಕೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, “ಅಂಥ ಪ್ರಸ್ತಾಪದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಸಚಿವ ಸುನೀಲ್ ಕುಮಾರ್ ಯಾವ ಅರ್ಥದಲ್ಲಿ ಆ ಹೇಳಿಕೆಯನ್ನು ನೀಡಿದ್ದಾರೆ ಎಂದು ನನಗೆ ಗೊತ್ತಾಗುತ್ತಿಲ್ಲ,” ಎಂದಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮತಾಂತರ ನಿಷೇಧ ಕಾಯ್ದೆ ಕುರಿತು ಉತ್ತರಿಸಿ, “ಪ್ರಸ್ತಾವಿತ ಮತಾಂತರ ವಿರೋಧಿ ಮಸೂದೆ ರಾಜಕೀಯ ಪ್ರೇರಿತ. ಸಂವಿಧಾನವೇ ಬಲವಂತದ ಮತಾಂತರವನ್ನು ನಿಷೇಧಿಸಿದೆ. ಈಗ ಪ್ರತ್ಯೇಕ ಮಸೂದೆ ಮಂಡಿಸುವ ಅಗತ್ಯವೇನು? ಎಂದು ಪ್ರಶ್ನಿಸಿದ್ದಾರೆ.