ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ಬೆಳಗ್ಗೆ ವಿಧಾನಸಭಾ ಕಲಾಪ ಆರಂಭವಾಗಿದೆ. ಇಂದಿನಿಂದ ಡಿಸೆಂಬರ್ 24ರವರೆಗೆ ಸದನ ನಡೆಯಲಿದ್ದು, ಮೊದಲ ದಿನವಾದಿಂದ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗೆ ಶೀಘ್ರದಲ್ಲೇ ಶಿಫಾರಸ್ಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಲಾಪದಲ್ಲಿ ತಿಳಿಸಿದರು.
ಮೊದಲಿಗೆ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಕರ್ನಾಟಕ ಮಾಜಿ ರಾಜ್ಯಪಾಲ ರೋಸಯ್ಯ, ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್, ನಟ ಪುನೀತ್ ರಾಜ್ ಕುಮಾರ್, ಎಸ್.ಆರ್,ಮೋರೆ ಸೇರಿದಂತೆ ಹಲವು ಗಣ್ಯರಿಗೆ ಸಂತಾಪ ಸೂಚಿಸಿದರು.
ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುತ್ತೇವೆ. ವಿರೋಧ ಪಕ್ಷದರು ಕೂಡ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಪತ್ರ ಬರೆದಿದ್ದರು. ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿನಾಂಕ ಶೀಘ್ರ ಪ್ರಕಟಿಸುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪುನೀತ್ ಕೇವಲ ರಾಜ್ ಕುಮಾರ್ ಮಗ ಎನ್ನುವ ಕಾರಣಕ್ಕೆ ಫೇಮಸ್ ಆಗಿದ್ದಲ್ಲ. ಅವರು ಅವರದ್ದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಸರ್ಕಾರದ ಅನೇಕ ಯೋಜನಗಳಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದರು. ಪುನೀತ್ ನನ್ನನ್ನು ಪ್ರೀತಿಯಿಂದ ಮಾಮಾ ಅಂತ ಕರೆಯುತ್ತಿದ್ದರು. ಅವರ ಒತ್ತಾಯಕ್ಕೆ ರಾಜಕುಮಾರ ಸಿನಿಮಾ ಮೈಸೂರಿನಲ್ಲಿ ನೋಡಿದ್ದೆ ಎಂದು ಸ್ಮರಿಸಿದರು.