ಬೆಳಗಾವಿಯಲ್ಲಿ ನಾಳೆ ಸೋಮವಾರದಿಂದ (ಡಿ.ಸೆಂಬರ್ 13) ಚಳಿಗಾಲದ ಅಧಿವೇಶನ ಶುರುವಾಗುತ್ತಿದೆ.ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳನ್ನು ಬಿಂಬಿಸುವ, ಅದಕ್ಕೆ ಪರಿಹಾರಗಳನ್ನು ರೂಪಿಸುವ ಉದ್ದೇಶದಿಂದ ನಿರ್ಮಾಣವಾದ ಬೆಳಗಾವಿಯ ಸುವರ್ಣ ವಿಧಾನಸೌಧ ತನ್ನ ಆಶಯಗಳನ್ನು ಈಡೇರಿಸುವ ದಾರಿ ತುಳಿಯಲೇ ಇಲ್ಲ.
ವರ್ಷಕ್ಕೊಮ್ಮೆ 8-10 ದಿನಗಳ ಅವಧಿಯ ಚಳಿಗಾಲ ಅಧಿವೇಶನ ನಡೆಸಲಿಕ್ಕಷ್ಟೇ ಈ ಸೌಧ ಉಪಯೋಗವಾಗುತ್ತಿದೆ. ಬೆಂಗಳೂರಿನಿಂದ ದೂರವಿರುವ ಉತ್ತರ ಕರ್ನಾಟಕದ ಜಿಲ್ಲೆಗಳ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ದಿನವೂ ಸಾಲು ಪ್ರತಿಭಟನೆಗಳನ್ನು ನಡೆಸುವುದು ಸಾಮಾನ್ಯ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ತಯಾರಾದ ನವ-ದ್ರಾವಿಡ ಶೈಲಿಯ ಈ ಕಟ್ಟಡಕ್ಕೆ ಕನಿಷ್ಠ ಹಲವು ಇಲಾಖೆಗಳನ್ನೂ ವರ್ಗಾಯಿಸಿಲ್ಲ.
ಈ ಸಲ ಏನಾಗಬಹುದು?
ಪ್ರತಿ ಸಲದಂತೆ ಈ ಸಲವೂ ಇದೊಂದು ಸಾಮಾನ್ಯ ಅಧಿವೇಶನವಾಗಲಿದೆಯಾ? ಸದ್ಯಕ್ಕೆ ಉತ್ತರವಿಲ್ಲ. ಉತ್ತರ ಕರ್ನಾಟಕದ ವಿಷಯಗಳೇನೂ ಹೆಚ್ಚಿನ ಆದ್ಯತೆ ಪಡೆಯುವ ಲಕ್ಷಣವಿಲ್ಲ. ಬಿಟ್ ಕಾಯಿನ್-ಕ್ರಿಪ್ಸೊ ಕರೆನ್ಸಿ ಹಗರಣದ ತನಿಖೆಯ ವಿಷಯದಲ್ಲಿ ಆಡಳಿತ ಪಕ್ಷ ಎಡವಿದ್ದು, ತನಿಖೆಯಲ್ಲಿ ಪಾರದರ್ಶಕತೆಯ ಕೊರತೆ ಇರುವುದು ವಿಪಕ್ಷಗಳ ಅಸ್ತ್ರವಾಗಲಿದೆ. ಅಕಾಲಿಕ ಮಳೆಯಿಂದಾದ ಬೆಳೆನಾಶಕ್ಕೆ ಪರಿಹಾರ. ಪೊಲೀಸ್ ಇಲಾಖೆಯ ಕುರಿತು ಗೃಹ ಸಚಿವರೇ ಮಾಡಿದ ʼಎಂಜಲು ತಿನ್ನುವʼ ಗಂಭೀರ ಆರೋಪ, ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮದ ಕುರಿತ ಗೊಂದಲ- ಈ ವಿಷಯಗಳು ಆಡಳಿತ ಮತ್ತು ವಿಪಕ್ಷಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು.

ಮತಾಂತರ ನಿಷೇಧ ಕಾಯಿದೆಯ ಕಿಡಿ
ಈ ಸಲ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಸಾಕಷ್ಟು ಟೀಕೆಗೆ ಒಳಗಾಗಿರುವ ಮತಾಂತರ ವಿರೋಧಿ ಕಾಯಿದೆಯ ಡ್ರಾಫ್ಟ್ನ್ನೇ ಕರ್ನಾಟಕ ಸರ್ಕಾರ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮಸೂದೆಯಾಗಿ ಮಂಡಿಸಲು ಹೊರಟಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಇದನ್ನು ತೀವ್ರವಾಗಿ ವಿರೊಧಿಸುವ ಸಾಧ್ಯತೆ ಇದೆ. ಇದು ಸಭಾತ್ಯಾಗಕ್ಕೂ ಕಾರಣವಾಗಬಹುದು. ಈ ಮಸೂದೆ ಜಾರಿಯಾಗಲೇಬೇಕು ಎಂದು ಹಿಂದೂತ್ವವಾದಿ ಸಂಘಟನೆಗಳಿಂದ ಭಾರಿ ಒತ್ತಡವಿದೆ. ಈಗಾಗಲೇ ಅವು ಬೆಳಗಾವಿಯಲ್ಲಿ ಕ್ರೈಸ್ತರಿಗೆ ತೊಂದರೆ ಕೊಡುವ ಕೆಲಸಗಳನ್ನು ಮಾಡಿವೆ. ಪಾದ್ರಿಯೊಬ್ಬರ ಮೇಲೆ ಹಲ್ಲೆಯೂ ನಡೆದಿದೆ. ಆರ್ಎಸ್ಎಸ್ ಮೂಲದ ಬಿಜೆಪಿ ಶಾಸಕರು, ಸಂಘ ಪರಿವಾರದ ಕಟ್ಟಾ ಸದಸ್ಯರ ಒತ್ತಡಕ್ಕೆ ಮಣಿದು ಸರ್ಕಾರ ಸುಗ್ರೀವಾಜ್ಞೆ ಮೂಲಕ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವ ತಂತ್ರವನ್ನೂ ಅನುಸರಿಸಬಹುದು.
ಗದ್ದಲ-ಗಲಾಟೆ-ಪ್ರತಿಭಟನೆಗಳಲ್ಲೇ ಈ ಅಧಿವೇಶನ ಮುಗಿಯದಿರಲಿ. ಉತ್ತರ ಕರ್ನಾಟಕ ಭಾಗದ ಸಮ್ಯೆಗಳ ಚರ್ಚೆಯಾಗಲಿ ಮತ್ತು ಅದಕ್ಕೆ ಪರಿಹಾರ ದೊರೆಯುವಂತಾಗಲಿ.ಕೇವಲ ಕಾಟಾಚಾರಕ್ಕೆ ಚಳಿಗಾಲದ ಅಧಿವೇಶನ ಮಾಡಿದರೆ, ಅದು ತೆರಿಗೆದಾರರ ಹಣ ಪೋಲು ಮಾಡಿದಂತಾಗುತ್ತದೆ ಎಂಬ ಸೂಕ್ಷ್ಮತೆ ಸರ್ಕಾರಕ್ಕಿರಲಿ.