“ನೀವೇನಾದ್ರು ನಮ್ಗೆ ಮೊಟ್ಟೆ ಕೊಡೊದು ಬೇಡ. ಬಾಳೆ ಹಣ್ಣು ಬೇಡ ಅಂತ ತಕರಾರು ತಗೆದರೆ ನಾವೇ ನಿಮ್ಮ ಮಠದೊಳಗೆ ಬಂದು ಮೊಟ್ಟೆ ತಿಂದು ಹೋಗ್ತಿವಿ. ನಮ್ಗೆ ಮೊಟ್ಟೆ ಬೇಕೇ ಬೇಕು. ತತ್ತಿ ತಿಂದ್ರೆ ನಾವು ಮುಂದೆ ಬದುಕ್ತಿವಿ. ಇಲ್ಲಾಂದ್ರ ನಾವು ಸತ್ ಹೋಗ್ತಿವಿ. ನಿಮ್ಗೆ ನಾವು ಸಾಯೋದ ಬೇಕಾ? ಇಲ್ಲಾ ಮೊಟ್ಟೆ ಕೊಡದೇ ಇರೋದು ಬೇಕಾ ಹೇಳಿ ಬಿಡ್ರಿ”. ಹೀಗಂತ ಯಾವುದೇ ಮುಖಂಡರು ಹೇಳಿದ್ದಲ್ಲ. ಸ್ವತಃ ವಿದ್ಯಾರ್ಥಿನಿಯೇ ಮುಂದೆ ಬಂದು ಮಠಾಧೀಶರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ಮೊಟ್ಟೆ ನೀಡಲು ಮಠಾಧೀಶರ ವಿರೋಧ ಹಿನ್ನೆಲೆಯಲ್ಲಿ ಮಠಾಧೀಶರ ವಿರುದ್ಧ ಎಸ್ಎಫ್ಐ ಸಂಘಟನೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಕ್ಕಳು ದೇವರ ಸಮಾನ ಅಂತಾರೆ. ದೇವರ ಆಸೆ ಏಕೆ ಈಡೇರಿಸುವುದಿಲ್ಲ. ನಾವು ರಸ್ತೆಗಿಳಿದು ಹೋರಾಟ ಮಾಡಬೇಕಾ? ನಾವು ಒಂದಲ್ಲ ಎರಡು ಮೊಟ್ಟೆ ತಿಂತೀವಿ ಅದನ್ನ ಕೇಳಲು ನೀವ್ಯಾರು? ನಿಮ್ಮ ಮಠಕ್ಕೆ ಸ್ನಾನ ಮಾಡಿ ಬಂದು ಪೂಜೆ ಮಾಡಿಲ್ವಾ? ನಿಮಗೆ ದಕ್ಷಿಣೆ ಹಾಕಿಲ್ವಾ? ನಮ್ಮ ಹಿಂದೆ ಯಾರು ಇಲ್ಲಾ ಅನ್ಕೊಬೇಡಿ. ನಮಗೆಲ್ಲ ಹೇಳೋರಿದ್ದಾರೆ. ನಮಗೂ ಶಿಕ್ಷಕರಿದ್ದಾರೆ. ಪಾಲಕರಿದ್ದಾರೆ. ನಮಗಾಗಿಯೇ ಎಸ್.ಎಫ್.ಐ ನಂತಹ ಸಂಸ್ಥೆ ಇದೆ ಎಂದು ಗುಡುಗಿದ್ದಾಳೆ.

ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಕೆಲವು ಮಠಾಧೀಶರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. ಜನರಲ್ಲಿ ಏಕರೂಪ ರೂಪಿಸಬೇಕಾದ ಸರ್ಕಾರವೇ ಮೊಟ್ಟೆ ಕೊಡುವುದರ ಮೂಲಕ ವೈಮನಸ್ಸು ತಂದಿಟ್ಡಿದೆ ಎಂಬ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಇವುಗಳ ನಡುವೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿಯರು ಮೊಟ್ಟೆ ಬೇಕು ಎಂದು ಆಗ್ರಹಿಸಿರುವುದು ಈಗ ಹೆಚ್ಚು ಮಹತ್ವ ಬಂದಿದೆ.