ಕರೋನ ರೂಪಾಂತರ ಓಮಿಕ್ರಾನ್ ವೈರಸ್ ವಿಶ್ವಾದ್ಯಾಂತ ವ್ಯಾಪಿಸಿದ್ದು ಕರ್ನಾಟಕ ರಾಜ್ಯಕ್ಕೂ ಒಕ್ಕರಿಸಿದ್ದು ಈ ಕುರಿತು ಯಾವುದೇ ಭಯ ಬೇಡ, ಕಾಳಜಿ ವಹಿಸಿಸಬೇಕು. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ವಾರದ ಬಳಿಕ ಈ ಕುರಿತು ಪರಿಸ್ಥಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನೈಟ್ ಕರ್ಫ್ಯೂ ಸದ್ಯಕ್ಕಿಲ್ಲ, ಒಂದು ವಾರದ ಬಳಿಕ ನಿರ್ಧಾರ ಮಾಡಲಾಗುವುದು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ. ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ಒಂದು ವಾರ ನೋಡಿಕೊಂಡು ಕೆಲ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ವಿವರಿಸಿದ್ದಾರೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಸುದರ್ಶನ್ ಅವರ ಜೊತೆ ಚರ್ಚೆ ಮಾಡಿದ್ದೇವೆ. ಓಮಿಕ್ರಾನ್ ಕುರಿತು ವಿವರಣೆ ನೀಡಿದ್ದಾರೆ. ಜನರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ಸರಿಯಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

ಹಾಸ್ಟೆಲ್‌ಗಳಿಗೆ ಈಗಾಗಲೇ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಿದ್ದೇವೆ. ವಾರ್ಡನ್, ಅಡುಗೆಯವರು ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡಿರಬೇಕು. ಹಾಸ್ಟೆಲ್, ಕ್ಲಸ್ಟರ್ ಗೆ ಮಾತ್ರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಯಾವುದೇ ಹೊಸ ಗೈಡ್‌ಲೈನ್ಸ್ ಇಲ್ಲ. ವ್ಯಾಕ್ಸಿನ್ ಡ್ರೈವ್ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಗಡಿ ಭಾಗದಲ್ಲಿ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದೆ ಎಂದಿದ್ದಾರೆ.
ಸಭೆಗೆ ಹಾಜರಾಗದ ಆರೋಗ್ಯ ಸಚಿವ ಸುಧಾಕರ್ :
ಸಚಿವ ಸಂಪುಟ ಸಭೆಗೆ ಆರೋಗ್ಯ ಸಚಿವ ಸುಧಾಕರ್ ಗೈರು ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಸುಧಾಕರ್ ಸಭೆಗೆ ಬರಲು ಸಾಧ್ಯವಾಗದು ಎಂದು ಮೊದಲೇ ತಮಗೆ ತಿಳಿಸಿ ಅನುಮತಿ ಪಡೆದುಕೊಂಡಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.