ಸ್ವತಂತ್ರ ಭಾರತದಲ್ಲಿ ಹಲವಾರು ದೀರ್ಘ ಕಾಲದ ಜನಾಂದೋಲನಗಳು ನಡೆದಿವೆ. ನೊಂದ, ಶೋಷಿತ, ಅವಮಾನಿತ ಜನಸಮುದಾಯಗಳ ಹಕ್ಕೊತ್ತಾಯಗಳಿಗಾಗಿ ಸಾವಿರಾರು ರೈತರು, ಕಾರ್ಮಿಕರು, ಶೋಷಿತರು ಸುದೀರ್ಘ ಹೋರಾಟಗಳನ್ನು ನಡೆಸಿದ ಚರಿತ್ರೆ ನಮ್ಮ ಕಣ್ಣೆದುರಿದೆ. ಆಳುವ ವರ್ಗಗಳ ದಬ್ಬಾಳಿಕೆಯ ಕ್ರಮಗಳು, ದಮನಕಾರಿ ನೀತಿಗಳು, ಅವಹೇಳನಕಾರಿ ಮಾತುಗಳು ಮತ್ತು ಪೊಲೀಸ್ ಹಾಗೂ ಕಾನೂನು ವ್ಯವಸ್ಥೆಯ ದಂಡನೆಯ ಹಾದಿಗಳನ್ನು ಎದುರಿಸುತ್ತಲೇ ಭಾರತದ ದುಡಿಮೆಯ ದನಿಗಳು ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡಿವೆ. ಚಳುವಳಿಗಳನ್ನು ಗೌರವಯುತವಾಗಿ, ಮಾನವೀಯ ನೆಲೆಯಲ್ಲಿ ನೋಡುತ್ತಿದ್ದ ಒಂದು ಆಡಳಿತ ವ್ಯವಸ್ಥೆ ಕ್ರಮೇಣ ಚಳುವಳಿಗಾರರನ್ನೇ ಅಪಮಾನಿಸುವ ಮಟ್ಟಕ್ಕೆ ಮನ್ವಂತರ ಹೊಂದಿರುವುದನ್ನೂ ಕಾಣುತ್ತಿದ್ದೇವೆ.
ಕಳೆದ ಐದು ದಶಕಗಳಲ್ಲಿ ಸ್ವತಂತ್ರ ಭಾರತ ಹಲವು ದೀರ್ಘ ಜನಾಂದೋಲನಗಳನ್ನು ಕಂಡಿದೆ. ನರಗುಂದ ಬಂಡಾಯ, 1970ರ ರೈಲ್ವೆ ಮುಷ್ಕರ, 1980ರ ಸಾರ್ವಜನಿಕ ಉದ್ದಿಮೆಗಳ ಮುಷ್ಕರ, ಹಲವಾರು ರೈತ ಹೋರಾಟಗಳು, ನಿರಂತರವಾಗಿ ನಡೆಯುತ್ತಿರುವ ಕಾರ್ಮಿಕ ಮುಷ್ಕರಗಳು, ಶೋಷಣೆ, ಅಪಮಾನ, ಅಸ್ಪøಶ್ಯತೆಯ ವಿರುದ್ಧ ದಲಿತ ಸಂಘಟನೆಗಳ ಹೋರಾಟಗಳು ಭಾರತದ ಭೂಪಟವನ್ನು ಅಲಂಕರಿಸಿವೆ. ಈ ಚಳುವಳಿಗಳ ಯಶಸ್ಸು ಅಥವಾ ಸಾಫಲ್ಯವನ್ನು ಕುರಿತು ಯೋಚಿಸುವುದಕ್ಕಿಂತಲೂ ಹೆಚ್ಚಾಗಿ, ಈ ಜನಾಂದೋಲನಗಳು ರೂಪಿಸಿದ ಜನಾಭಿಪ್ರಾಯ ಮತ್ತು ವ್ಯವಸ್ಥೆಯ ಲೋಪಗಳನ್ನು ಬಯಲಿಗೆಳೆದ ಜನತೆಯ ಆಕ್ರೋಶ, ಹೇಗೆ ಭಾರತದ ಹೋರಾಟದ ಪರಂಪರೆಯನ್ನು ಜೀವಂತವಾಗಿರಿಸಿವೆ ಎನ್ನುವುದನ್ನು ಗಮನಿಸುವುದು ಒಳಿತು. ಗುರಿ ಮುಟ್ಟುವವರೆಗೂ ಹೋರಾಡಿ ಗೆಲುವು ಸಾಧಿಸಿದ ಮುಷ್ಕರ, ಚಳುವಳಿ, ಆಂದೋಲನಗಳನ್ನು ಗುರುತಿಸುವುದು ಕಷ್ಟಸಾಧ್ಯವೇ ಆದರೂ ಈ ಹೋರಾಟಗಳ ಕಾವು ಇಂದಿಗೂ ಭಾರತದ ನೆಲದಲ್ಲಿ ಸುಪ್ತವಾಗಿದೆ ಎನ್ನುವುದನ್ನು ದೆಹಲಿಯ ರೈತ ಮುಷ್ಕರ ನಿರೂಪಿಸಿದೆ.
ಭಾರತದ ಕೋಟ್ಯಂತರ ಜನರ ಹಿತಾಸಕ್ತಿಗಳನ್ನು ಮತ್ತು ಸಮಸ್ತ ರೈತ ಸಮುದಾಯವನ್ನು ಪ್ರತಿನಿಧಿಸುವ 450 ರೈತ ಸಂಘಟನೆಗಳನ್ನೊಳಗೊಂಡ ಒಂದು ಹೋರಾಟದ ವೇದಿಕೆ ಒಂದು ವರ್ಷದ ಕಾಲ ದೇಶದ ರಾಜಧಾನಿಯ ಗಡಿಗಳಲ್ಲೇ ಮುಷ್ಕರ ಹೂಡಿ, ಕೇಂದ್ರ ಸರ್ಕಾರ ಅಸಾಂವಿಧಾನಿಕ ಮಾರ್ಗದಲ್ಲಿ ಜಾರಿಗೊಳಿಸಿದ್ದ ಮೂರು ಕರಾಳ ಕೃಷಿ ಕಾಯ್ದೆಗಳ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸಿದ್ದೇ ಅಲ್ಲದೆ, ಅಂತಿಮವಾಗಿ ಹಠಮಾರಿ ಕೇಂದ್ರ ಸರ್ಕಾರ ಕಾಯ್ದೆಗಳನ್ನು ರದ್ದುಪಡಿಸುವಂತೆ ಮಾಡಿರುವುದು ಚರಿತ್ರೆಯಲ್ಲಿ ದಾಖಲಾಗುವ ಒಂದು ವಿದ್ಯಮಾನ. ಈ ಚಳುವಳಿಯನ್ನು ಹತ್ತಿಕ್ಕಲು ನರೇಂದ್ರ ಮೋದಿ ಸರ್ಕಾರ, ಹರಿಯಾಣ ಮತ್ತು ಉತ್ತರಪ್ರದೇಶ ಬಿಜೆಪಿ ಸರ್ಕಾರಗಳು, ಬಿಜೆಪಿ ಮತ್ತು ಸಂಘಪರಿವಾರ ಮತ್ತು ದೇಶದ ವಂದಿಮಾಗಧ ಮಾಧ್ಯಮಗಳು ಅನುಸರಿಸಿದ ಅಡ್ಡದಾರಿಗಳನ್ನು ನೆನೆದರೆ, ಈ ದೇಶ ನೈತಿಕವಾಗಿ ಎಷ್ಟು ಅಧೋಗತಿಗಿಳಿದಿದೆ ಎಂದು ಅರಿವಾಗುತ್ತದೆ.
ಆಡಳಿತ ವ್ಯವಸ್ಥೆಯ ಕ್ರೌರ್ಯ, ಅಧಿಕಾರಸ್ಥರ ವ್ಯಂಗ್ಯೋಕ್ತಿ ಮತ್ತು ಅಪಮಾನಕರ ಹೇಳಿಕೆಗಳು, ವಂದಿಮಾಗಧ ಭಟ್ಟಂಗಿಗಳ ಅಪಸ್ತುತಿ, ಪೊಲೀಸರ ದೌರ್ಜನ್ಯ ಮತ್ತು ದೇಶದ ಹಿತವಲಯದ ಅಸಡ್ಡೆ ಇವೆಲ್ಲವನ್ನೂ ಮೀರಿ ಒಂದು ವರ್ಷದ ಕಾಲ ಹಿಡಿದ ಪಟ್ಟು ಬಿಡದೆ ಹೋರಾಡಿ ವಿಜಯಪತಾಕೆ ಹಾರಿಸಿದ ರೈತ ಮುಷ್ಕರವನ್ನು ಅಷ್ಟೇ ಪರಿಣಾಮಕಾರಿಯಾಗಿ ಕ್ಯಾಮರಾ ಕಣ್ಣುಗಳಲ್ಲಿ ಹಿಡಿದಿಟ್ಟು, ಒಂದು ವರ್ಷದ ಕಾಲ ನಡೆದ ಮುಷ್ಕರದ ಏಳು ಬೀಳುಗಳನ್ನು, ದುಃಖ ದುಮ್ಮಾನಗಳನ್ನು, ವೇದನೆ ಬೇಗುದಿಗಳನ್ನು ಕಣ್ಣಿಗೆ ಕಟ್ಟುವಂತೆ ಸೆರೆಹಿಡಿದು, ಸವಿವರಾತ್ಮಕವಾಗಿ ಕರಾಳ ಕೃಷಿ ಕಾಯ್ದೆಗಳ ಕರಾಳತೆಯನ್ನು ಮತ್ತು ಆಳುವವರ ನಿಷ್ಕ್ರಿಯತೆ ಹಾಗೂ ಕ್ರೌರ್ಯವನ್ನು ಪರದೆಯ ಮೇಲೆ ಮೂಡಿಸುವ ಒಂದು ಪ್ರಯತ್ನವನ್ನು ನಮ್ಮ ನಡುವಿನ ಸಂವೇದನಾಶೀಲ ಸಾಕ್ಷ್ಯಚಿತ್ರ ನಿರ್ಮಾಪಕ ಶ್ರೀಯುತ ಕೇಸರಿ ಹರವೂ ಮಾಡಿದ್ದಾರೆ.
ಈಗ ಹಿಂಪಡೆಯಲಾಗಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಮತ್ತು ಕೃಷಿ ಸೇವೆಗಳ ಒಪ್ಪಂದ 2020, ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ 2020 ಈ ಮೂರು ಕೃಷಿ ಕಾಯ್ದೆಗಳನ್ನು ಏಕೆ ಕರಾಳ ಎನ್ನಲಾಗುತ್ತಿತ್ತು ಎಂಬ ಪ್ರಶ್ನೆಗೆ ಈ ಸಾಕ್ಷ್ಯ ಚಿತ್ರ “ ಕಿಸಾನ್ ಸತ್ಯಾಗ್ರಹ ” ಸ್ಪಷ್ಟ ಉತ್ತರ ನೀಡುತ್ತದೆ. ಈ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿ, ಬೌದ್ಧಿಕ ವಲಯದಲ್ಲಿ ಮತ್ತು ಆಡಳಿತ ವಲಯದಲ್ಲೂ ಉದ್ಭವಿಸಿದ ಅನೇಕ ಅನುಮಾನಗಳಿಗೆ, ಪ್ರಶ್ನೆಗಳಿಗೆ, ಜಿಜ್ಞಾಸೆಗಳಿಗೆ ಹರವೂ ಅವರ ಕ್ಯಾಮರಾ ಕಣ್ಣುಗಳು ಉತ್ತರಿಸುತ್ತವೆ.
ಸಾಮಾನ್ಯವಾಗಿ ನಡೆದುಹೋದ ಒಂದು ಘಟನೆ ಅಥವಾ ಜನಾಂದೋಲನವನ್ನು ಕುರಿತು ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಅಥವಾ ನಡೆದ ಘಟನೆಯ ಚಿತ್ರಾವಳಿಗಳನ್ನಾಧರಿಸಿ ನಂತರದಲ್ಲಿ ಚಿತ್ರನಿರ್ಮಿಸಲಾಗುತ್ತದೆ. ಆದರೆ ರೈತ ಮುಷ್ಕರವನ್ನು ಆದಿಯಿಂದ ಅಂತ್ಯದವರೆಗೆ ಅದರ ಒಳಸುಳಿಗಳನ್ನೂ ಪರಿಚಯಿಸುತ್ತಾ ಮುಷ್ಕರ ನಿರತ ರೈತರ ಒಳಬೇಗುದಿಗಳನ್ನೂ ಚಿತ್ರಿಸುತ್ತಾ, ಒಂದು ದಮನಕಾರಿ ಆಡಳಿತ ವ್ಯವಸ್ಥೆಯೆದುರು ಹೋರಾಡುವಾಗ ಸಹಜವಾಗಿಯೇ ಇರಬಹುದಾದ ಆತಂಕ-ಭೀತಿಯ ಕ್ಷಣಗಳನ್ನೂ ಬಿತ್ತರಿಸುತ್ತಾ ನಿರ್ಮಿಸಿರುವ “ ಕಿಸಾನ್ ಸತ್ಯಾಗ್ರಹ ” ಎಂಬ ದೃಶ್ಯಕಾವ್ಯ, ಸ್ವತಂತ್ರ ಭಾರತದ ಪ್ರಪ್ರಥಮ ಲೈವ್ ಚಿತ್ರಣ. ಮೊದಲ ಬಾರಿಗೆ ಒಂದು ಬೃಹತ್ ಜನಾಂದೋಲನ ನಡೆಯುತ್ತಿರುವಾಗಲೇ ಅದನ್ನು ಚಿತ್ರಿಸಿ ಜನತೆಗೆ ಮುಟ್ಟಿಸುವ ಪ್ರಯತ್ನವಾಗಿ ಈ ಸಾಕ್ಷ್ಯ ಚಿತ್ರ ಚರಿತ್ರೆಯಲ್ಲಿ ದಾಖಲಾಗುತ್ತದೆ.
“ ಕಿಸಾನ್ ಸತ್ಯಾಗ್ರಹ ” ಚರಿತ್ರೆಯಲ್ಲಿ ದಾಖಲಾಗಲು ಇದೊಂದೇ ಕಾರಣವಲ್ಲ. ಕೇಸರಿ ಹರವೂ ಅವರ ಕ್ಯಾಮರಾ ಕಣ್ಣುಗಳು ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಹರಿದಾಡಿಲ್ಲ. ಅಥವಾ ನೋಡುಗರಲ್ಲಿ ರೋಚಕತೆ ಉಂಟುಮಾಡುವ ಉದ್ದೇಶದಿಂದ ಮಸೂರಗಳು ಉತ್ಪ್ರೇಕ್ಷಿತವಾಗಿ ಏನನ್ನೂ ಹುಡುಕಿಲ್ಲ. ಸರ್ಕಾರದ ಕ್ರೂರ ನಡೆಯನ್ನು ದಾಖಲಿಸುವಾಗ, ಪೊಲೀಸರ ದೌರ್ಜನ್ಯವನ್ನು ಬಿತ್ತರಿಸುವಾಗ, ರೈತರ ಹಾದಿಗೆ ಮುಳ್ಳುಬೇಲಿಗಳನ್ನು ನಿರ್ಮಿಸುವ ಆಡಳಿತ ವ್ಯವಸ್ಥೆಯ ದಬ್ಬಾಳಿಕೆಯನ್ನು ತೋರಿಸುವಾಗ, ಕೊನೆಗೆ ಒಂದು ಹತ್ಯೆಯನ್ನು ಬಿಂಬಿಸುವಾಗಲೂ ಹರವೂ ಅವರ ಕ್ಯಾಮರಾದ ಮಸೂರಗಳು ವಸ್ತುಸ್ಥಿತಿಯತ್ತಲೇ ಗಮನಹರಿಸುವಂತೆ ಮಾಡುತ್ತವೆ. ಇಲ್ಲ್ಲಿ ಚಿತ್ರೀಕರಿಸಲಾಗಿರುವ ದೃಶ್ಯಗಳು ಮತ್ತು ಕೆಲವು ಅಹಿತಕರ ಘಟನೆಗಳು ನೋಡುಗರಲ್ಲಿ ಅಭಿಪ್ರಾಯ ಮೂಡಿಸುವುದಕ್ಕಿಂತಲೂ ಹೆಚ್ಚಾಗಿ ಪ್ರಶ್ನೆಗಳನ್ನು ಹುಟ್ಟುಹಾಕುವಂತಿವೆ. ಏಕೆ ಹೀಗಾಗುತ್ತಿದೆ ಎಂಬ ಪ್ರಶ್ನೆ ಚಿತ್ರದುದ್ದಕ್ಕೂ ಮೂಡುತ್ತಲೇ ಹೋಗುತ್ತದೆ. ಇದು ಒಂದು ಸಾಕ್ಷ್ಯ ಚಿತ್ರದ ಹಿರಿಮೆಯನ್ನು ಸಾಬೀತುಪಡಿಸುವ ಅಂಶ. ಕೇಸರಿ ಹರವೂ ಇಲ್ಲಿ ಗೆದ್ದಿದ್ದಾರೆ.
ಒಂದು ವರ್ಷದ ಕಾಲ ಚಳಿ, ಗಾಳಿ, ಮಳೆ, ಬಿಸಿಲು ಈ ನೈಸರ್ಗಿಕ ಅಡೆತಡೆಗಳನ್ನೂ ಲೆಕ್ಕಿಸದೆ, ಜಲಫಿರಂಗಿ, ಲಾಠಿಏಟು, ಒದೆತ, ಹೊಡೆತ, ಅಪಮಾನ, ನಿಂದನೆ ಈ ಮಾನವ ರೂಪಿತ ವ್ಯತ್ಯಯಗಳನ್ನೂ ಲೆಕ್ಕಿಸದೆ ದೆಹಲಿಯ ಗಡಿಗಳಲ್ಲಿ ಕುಳಿತು ತಮ್ಮ ಬದುಕಿನ ಅಮೂಲ್ಯ 365 ದಿನಗಳ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡ ಪಂಜಾಬ್ ಮತ್ತು ಹರಿಯಾಣದ, ದೇಶದ ಇತರ ರಾಜ್ಯಗಳ ರೈತರ ಒಳಬೇಗುದಿಗಳನ್ನು, ಹತಾಶೆಯನ್ನು, ಆತಂಕಗಳನ್ನು ಮತ್ತು ಭರವಸೆಯ ನಾಳೆಗಳನ್ನು ನಿರ್ದೇಶಕ ಕೇಸರಿ ಹರವೂ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದಾರೆ. ಅಲ್ಲಿ ನೆರೆದಿದ್ದ ರೈತರಲ್ಲಿರುವಷ್ಟೇ ಚಡಪಡಿಕೆ, ಭಾವುಕ ಬದ್ಧತೆ ಮತ್ತು ತಾತ್ವಿಕ ನಿಷ್ಠೆ ಹರವೂ ಅವರಲ್ಲೂ ಕಾಣಬಹುದಾದರೆ ಅದನ್ನು, ಸೆರೆಹಿಡಿಯಲಾಗಿರುವ ರೈತರ ಮಾತುಗಳಲ್ಲಿಯೂ ಕಾಣಬಹುದು. ಒಂದು ವಸ್ತುನಿಷ್ಠ ಸಾಕ್ಷ್ಯಚಿತ್ರಕ್ಕೆ ಅತ್ಯವಶ್ಯವಾದ ತಾತ್ವಿಕ ನಿಷ್ಠೆ ಚಿತ್ರದುದ್ದಕ್ಕೂ ಕಾಣುವುದು ಹರವೂ ಅವರ ಹೆಗ್ಗಳಿಕೆ.
ಕೇಂದ್ರ ಸರ್ಕಾರದ, ಬಿಜೆಪಿ ಮತ್ತು ಸಂಘಪರಿವಾರದ ದೃಷ್ಟಿಯಲ್ಲಿ ಖಲಿಸ್ತಾನಿಗಳಾಗಿ, ದೇಶದ್ರೋಹಿಗಳಾಗಿ, ಉಗ್ರವಾದಿಗಳಾಗಿ, ಭಯೋತ್ಪಾದಕರಾಗಿ, ತುಕಡೆತುಕಡೆ ಗುಂಪಿನವರಾಗಿ, ಆಂದೋಲನಜೀವಿಗಳಾಗಿ, ಮಾವೋವಾದಿಗಳಾಗಿ, ನಗರ ನಕ್ಸಲರಾಗಿ, ಪಾಕಿಸ್ತಾನಿಗಳಾಗಿ, ದೇಶದ್ರೋಹಿಗಳಾಗಿ ಕಂಡ ರೈತರು, ರೈತ ನಾಯಕರು, ರೈತ ಮಹಿಳೆಯರು ಮತ್ತು ಯುವಕರು ವೀಕ್ಷಕರಿಗೆ ರೈತರಾಗಿ ಮಾತ್ರ ಕಾಣುತ್ತಾರೆ. ಅವರ ಮಾತುಗಳ ಮೂಲಕ, ಕ್ರಿಯೆ ಪ್ರತಿಕ್ರಿಯೆಯ ಮೂಲಕ, ಅವರ ಕಂಗಳಲ್ಲಿ ತುಂಬಿರುವ ಭಾವನೆಗಳ ಮೂಲಕ ನಾಳಿನ ಬಗ್ಗೆ ಚಿಂತಾಕ್ರಾಂತರಾಗಿರುವ ನೊಂದ ಜೀವಿಗಳಾಗಿ ಮಾತ್ರವೇ ಕಾಣುತ್ತಾರೆ. ಸಾಕ್ಷ್ಯ ಚಿತ್ರ ಎನ್ನುವುದು ಒಂದು ವಸ್ತು ಅಥವಾ ಘಟನೆಯ ಸಾಕ್ಷ್ಯ ನುಡಿಯಬೇಕಾದರೆ ಅದು ಹೀಗಿದ್ದರೆ ಮಾತ್ರ ಸಾಧ್ಯ. ಹರವೂ ಇಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ. ಮುಷ್ಕರ ನಿರತ ರೈತರ ಹೆಜ್ಜೆಗಳನ್ನೇ ನಿಯಂತ್ರಿಸುವ ಕಂದಕಗಳು, ಮುಳ್ಳು ಹಾಸಿಗೆಗಳು, ಸಿಮೆಂಟ್ ಮತ್ತು ಕಬ್ಬಿಣದ ಗೋಡೆಗಳು, ಮುಳ್ಳು ಬೇಲಿಗಳು ಢಾಳಾಗಿ ಕಾಣುತ್ತಿರುವಂತೆಯೇ ಇವುಗಳನ್ನು ಭೇದಿಸಿಕೊಂಡು ಮುನ್ನಡೆಯುವ ರೈತಾಪಿಯ ದೃಢ ನಿಶ್ಚಯವೂ ನೋಡುಗರ ಮನದಲ್ಲಿ ಅಚ್ಚೊತ್ತುತ್ತದೆ. ಇದು ವಸ್ತುಸಿತಿಯೇನೋ ಹೌದು ಆದರೆ ಇದನ್ನು ಜನರಿಗೆ ಮನದಟ್ಟು ಮಾಡುವುದು ಹೇಗೆ ? ಕೇಸರಿ ಹರವೂ ತಮ್ಮ ಸಾಕ್ಷ್ಯ ಚಿತ್ರದ ಮೂಲಕ ಇದನ್ನು ಸಾಧ್ಯವಾಗಿಸುತ್ತಾರೆ.
ಏಳುನೂರು ರೈತರ ಬಲಿದಾನಕ್ಕೆ ಸಾಕ್ಷಿಯಾದ ಈ ರೈತ ಮುಷ್ಕರ ಕೊನೆಗೂ ತನ್ನ ಯಶಸ್ಸು ಕಂಡಿತಾದರೂ, ಈ ಯಶಸ್ಸಿನ ಹಿಂದೆ ಆ ಅಮಾಯಕ ರೈತರ ಸಾವಿನ ಕರಾಳ ಮುಖಗಳಿವೆ, ಸರ್ಕಾರದ ನಿರಂಕುಶಾಧಿಕಾರದ ಕ್ರೌರ್ಯ ಇದೆ, ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆ ಇದೆ ಹಾಗೆಯೇ ಇಡೀ ಒಂದು ವರ್ಷದಲ್ಲಿ ಒಮ್ಮೆಯಾದರೂ ನೇರವಾಗಿ ಮುಷ್ಕರ ನಿರತ ರೈತರಿಗೆ ಮುಖಾಮುಖಿಯಾಗದ ಒಬ್ಬ ಪ್ರಧಾನಮಂತ್ರಿಯ ತಣ್ಣನೆಯ ಮೌನವೂ ಇದೆ. ಬ್ರಿಟೀಷ್ ವಸಾಹತು ಕಾಲದಲ್ಲೂ ಕಾಣಲಾಗದ ಒಂದು ಪ್ರವೃತ್ತಿಯನ್ನು ಸ್ವತಂತ್ರ ಭಾರತದಲ್ಲಿ ಕಂಡಿದ್ದೇವೆ ಹಾಗೆಯೇ ವಸಾಹತು ಕಾಲದ ದಂಡಿ ಸತ್ಯಾಗ್ರಹದಷ್ಟೇ ಪರಿಣಾಮಕಾರಿಯಾದ ಜನಾಂದೋಲನದ ಸ್ಫೂರ್ತಿಯನ್ನು ಕಳೆದ ಒಂದು ವರ್ಷದಲ್ಲಿ ಕಂಡಿದ್ದೇವೆ. ಈ ಎರಡೂ ಮುಖಗಳನ್ನು “ ಕಿಸಾನ್ ಸತ್ಯಾಗ್ರಹ ” ನೋಡುಗರಿಗೆ ಪರಿಚಯಿಸುತ್ತದೆ. ರಿಚರ್ಡ್ ಅಟನ್ಬರೋ ಅವರ ಗಾಂಧಿ ಚಿತ್ರವನ್ನು ನೋಡಿದ್ದವರಿಗೆ ಈ ಚಿತ್ರದಲ್ಲಿನ ಕೆಲವು ದೃಶ್ಯಗಳು ಪುನರಾವರ್ತನೆ ಎನಿಸುವಷ್ಟು ಮಟ್ಟಿಗೆ ಚಳುವಳಿಗಾರರ ಸ್ಪೂರ್ತಿ, ಉತ್ಸಾಹ ಮತ್ತು ಆತಂಕಗಳನ್ನು ಸೆರೆಹಿಡಿಯಲಾಗಿದೆ.
ತಾತ್ಕಾಲಿಕ ಎನ್ನಬಹುದಾದರೂ, ಗೆಲುವು ಸಾಧಿಸಿದ ಒಂದು ವರ್ಷದ ಸುದೀರ್ಘ ರೈತ ಮುಷ್ಕರದ ಬಗ್ಗೆ ಸರ್ಕಾರಗಳು, ಬಿಜೆಪಿ, ಸಂಘಪರಿವಾರ ಮತ್ತು ವಿದ್ಯುನ್ಮಾನ ಸುದ್ದಿಮನೆಗಳು ನಡೆಸಿದ ಅಪಪ್ರಚಾರವನ್ನೇ ವಾಸ್ತವ ಎಂದು ನಂಬಿರುವ ಜನತೆಯ ಕಣ್ತೆರೆಸುವಂತೆ ಕೇಸರಿ ಹರವೂ ಅವರು “ ಕಿಸಾನ್ ಸತ್ಯಾಗ್ರಹ ”ವನ್ನು ತಮ್ಮ ಸಾಕ್ಷ್ಯ ಚಿತ್ರದಲ್ಲಿ ಸೆರೆಹಿಡಿದಿದ್ದಾರೆ. ಈ ದೃಷ್ಟಿಯಿಂದ “ ಕಿಸಾನ್ ಸತ್ಯಾಗ್ರಹ ” ಚಿತ್ರವನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ನೋಡಬೇಕೆನಿಸುತ್ತದೆ. ಮುಂಬರುವ ಹಾದಿಗಳ ಕಠೋರ ಸಂದರ್ಭಗಳನ್ನು ನೆನೆದರೆ ಭಯವಾಗುವ ಇಂದಿನ ಪರಿಸ್ಥಿತಿಯಲ್ಲಿ ಕೇಸರಿ ಹರವೂ ಅವರ ಈ ಸಾಕ್ಷ್ಯಚಿತ್ರ ಭರವಸೆಯ ಕಿಂಡಿಗಳನ್ನು ತೆರೆಯಲು ಸಹಾಯ ಮಾಡುತ್ತದೆ. ಹರವೂ ಅವರ ಸಪ್ರಯತ್ನದ ಸಾರ್ಥಕತೆ ಇದರಲ್ಲೇ ಅಡಗಿದೆ.