“ಅಡುಗೆಗೆ ಚಕ್ಕೆ, ಲವಂಗ, ಏಲಕ್ಕಿ, ಬೆಳ್ಳುಳ್ಳಿಗಳಂತಹ ‘ಗರ್ಮಿ’ ಸಾಮಾನು ಬಳಸೋದ್ರಿಂದ ಅವ್ರು ಬೇರೆ ಹೆಂಗಸರ ಸಹವಾಸಕ್ಕೆ ಹೋಗ್ತಿದ್ದಾರೆ ಇದರಲ್ಲೇನೂ ಅವರ ತಪ್ಪಿಲ್ಲ ಪಾಪ” ಎಂದು ಬಿರಿಯಾನಿ ಕರಿಯಪ್ಪನ ಹೆಂಡತಿ ಹೇಳುವ ಸನ್ನಿವೇಶವೊಂದು ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯಲ್ಲಿ ಬರುತ್ತದೆ. ಅಲ್ಲಿ ಕರಿಯಪ್ಪನ ಹೆಂಡತಿ ಅನಕ್ಷರಸ್ಥೆ, ಲೋಕಜ್ಞಾನ ಇಲ್ಲದವಳು. ಆದರೆ 2018-19ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸರ್ವೇಯ ಪ್ರಕಾರ ಪುರುಷರಿಗಿಂತ 21,000 ಮಹಿಳೆಯರು ಉನ್ನತ ಶಿಕ್ಷಣಕ್ಕಾಗಿ ದಾಖಲಾಗಿರುವ ತೆಲಂಗಾಣ ರಾಜ್ಯದಲ್ಲಿ 83.8% ಮಹಿಳೆಯರು ಗಂಡ ಹೆಂಡತಿಗೆ ಹೊಡೆಯುವುದರಲ್ಲಿ ತಪ್ಪೇ ಇಲ್ಲ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂಬ ಆಘಾತಕಾರಿ ಸಂಗತಿಯೊಂದನ್ನು ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ಹೊರಗೆಡವಿದೆ.
ನಮ್ಮ ದೇಶದಲ್ಲಿ ವಿದ್ಯಾವಂತ ಮತ್ತು ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯಲ್ಲಿನ ಹೆಚ್ಚಳವು ಮಹಿಳೆಯರ ಒಟ್ಟಾರೆ ಸಬಲೀಕರಣಕ್ಕೆ ಕಾರಣವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಧ್ಯಯನವು ಇದನ್ನು ಸುಳ್ಳೆಂದು ಸಾಬೀತುಪಡಿಸಿದೆ . ಇದಕ್ಕೆ ಪುಷ್ಟೀಕರಣ ನೀಡುವಂತೆ ಕರ್ನಾಟಕದ 76.9% ರಷ್ಟು ಮಹಿಳೆಯರು ಪುರುಷರು ಹೊಡೆಯುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 18 ರಾಜ್ಯಗಳ ಮಹಿಳೆಯರೊಂದಿಗೆ ನಡೆಸಿದ ಸಮೀಕ್ಷೆಯಲ್ಲಿ ಪತಿಯು ತನ್ನ ಹೆಂಡತಿಯನ್ನು ಹೊಡೆಯುವುದು ಅಥವಾ ಬಡಿಯುವುದು ಸಮರ್ಥನೀಯವೇ..? ಎಂದು ಪ್ರಶ್ನಿಸಲಾಗಿತ್ತು.
1.ಹೆಂಡತಿ ಗಂಡನಿಗೆ ಹೇಳದೆ ಹೊರಗೆ ಹೋದರೆ
2. ಅವಳು ಮನೆ ಅಥವಾ ಮಕ್ಕಳನ್ನು ನಿರ್ಲಕ್ಷಿಸಿದರೆ
3.ಗಂಡನೊಂದಿಗೆ ವಾದಿಸಿದರೆ
4.ಪತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ನಿರಾಕರಿಸಿದರೆ
5. ಅವಳು ಸರಿಯಾಗಿ ಅಡುಗೆ ಮಾಡದಿದ್ದರೆ
6. ಅವನಿಗೆ ಅವಳ ಮೇಲೆ ಅನುಮಾನವಿದ್ದರೆ
7.ಅವಳು ಗಂಡನ ಮನೆಯವರಿಗೆ ಅಗೌರವ ತೋರಿಸಿದರೆ ಎಂಬೆಲ್ಲಾ
ಸಂದರ್ಭಗಳನ್ನೂ ಉಲ್ಲೇಖಿಸಿ ತಮ್ಮ ಅಭಿಪ್ರಾಯ ಏನೆಂದು ಕೇಳಿತ್ತು. ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತೆಲಂಗಾಣ, ತ್ರಿಪುರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು.
ತೆಲಂಗಾಣದ 83.8% ಮಹಿಳೆಯರು, ಆಂಧ್ರಪ್ರದೇಶದ 83.6%ರಷ್ಟು ಮತ್ತು ಕರ್ನಾಟಕದ 76.9% ರಷ್ಟು ಮಹಿಳೆಯರು ಪುರುಷರು ಹೊಡೆಯುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮತ್ತೊಂದೆಡೆ, ತೆಲಂಗಾಣದ 70.4% ಪುರುಷರು, ಕರ್ನಾಟಕದ 81.9% ರಷ್ಟು ಮತ್ತು ಆಂಧ್ರದಲ್ಲಿ 66.5% ರಷ್ಟು ಪುರುಷರು ಹೆಂಡತಿಗೆ ಹೊಡೆಯುವುದನ್ನು ಸಮರ್ಥಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕೇವಲ 14.8% ಮಹಿಳೆಯರು ಮತ್ತು 14.2% ಪುರುಷರು ಮಾತ್ರ ಸಮರ್ಥಿಸಿದ್ದಾರೆ. ಈ ಸಮೀಕ್ಷೆಯನ್ನು 2019-21ರಲ್ಲಿ ನಡೆಸಲಾಗಿದ್ದು ಡೇಟಾವನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಮಹಿಳೆಯರು ಗಂಡನ ಮನೆಯವರಿಗೆ ಅಗೌರವ ತೋರುವುದನ್ನು ಸಮರ್ಥನೆಗೆ ಮೊದಲ ಕಾರಣ ನೀಡಿದ್ದರೆ ಮಕ್ಕಳನ್ನು ಹಾಗೂ ಮನೆಯನ್ನು ನಿರ್ಲಕ್ಷಿಸುವುದನ್ನು ಎರಡನೆ ಕಾರಣವಾಗಿ ನೀಡಿದ್ದಾರೆ. ಅನುಮಾನದ ಕಾರಣಕ್ಕಾಗಿ ಹೊಡೆಯುವುದನ್ನು ಮಾತ್ರ ಕನಿಷ್ಠ ಮಹಿಳೆಯರು ಸಮರ್ಥಿಸಿಕೊಂಡಿದ್ದಾರೆ.
ಮಹಿಳಾ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್ಜಿಒ ‘ಪಾಪ್ಯುಲೇಶನ್ ಫಸ್ಟ್’ನ ನಿರ್ದೇಶಕಿ ಶಾರದಾ ಎ ಎಲ್ “ತಮ್ಮ ಕುಟುಂಬ ಮತ್ತು ಪತಿಗೆ ಸೇವೆ ಸಲ್ಲಿಸುವುದು ತಮ್ಮ ಮೊದಲ ಆದ್ಯತೆ ಎಂಬ ಪಿತೃಪ್ರಧಾನ ವ್ಯವಸ್ಥೆಯ ಮನಸ್ಥಿತಿ ಮಹಿಳೆಯರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ” ಎನ್ನುತ್ತಾರೆ.