ಭಾರತ ಶೀಘ್ರಗತಿಯಲ್ಲಿ ಬದಲಾಗುತ್ತಿದೆ. ಸ್ವತಂತ್ರ-ಸ್ವಾವಲಂಬಿ ಭಾರತ ವಿಶ್ವಗುರುವಿನ ಪಟ್ಟವನ್ನು ಅಲಂಕರಿಸಲು ಇನ್ನು ಕೆಲವೇ ಹೆಜ್ಜೆಗಳು ಬಾಕಿ ಉಳಿದಿವೆ. 1949ರ ನವಂಬರ್ 26ರಂದು ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನದ ಆಶಯಗಳನ್ನು ಮರೆತು ಈಗ ನಮಗೆ ನಾವೇ ವಿಶ್ವಗುರು ಪಟ್ಟವನ್ನು ಅರ್ಪಿಸಿಕೊಳ್ಳಲು ಸಮಸ್ತ ಜನಕೋಟಿಯೂ ಸಿದ್ಧತೆ ನಡೆಸಬೇಕಿದೆ. ನಿಜಕ್ಕೂ ಇದು ಸಂಭ್ರಮಿಸಬೇಕಾದ ಕ್ಷಣ. ಏಕೆಂದರೆ ವಿಶ್ವದ ಅತ್ಯುತ್ಕೃಷ್ಟ ಪ್ರಜಾಸತ್ತಾತ್ಮಕ ಸಂವಿಧಾನವನ್ನು ಹೊಂದಿರುವ ಒಂದು ದೇಶದಲ್ಲಿ ಎಲ್ಲವೂ ಬದಲಾಗುತ್ತಿದೆ. ನಮ್ಮ ಮೂಲ ಸಂಸ್ಕೃತಿಯೇ ಸಹಿಷ್ಣುತೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದ ಸಾರ್ವಭೌಮ ಪ್ರಜೆಗಳಾದ ನಾವು ಹೆಮ್ಮೆ ಪಡುವಂತೆ ನಮ್ಮ ಸಹಿಷ್ಣುತೆಯನ್ನು ಜಗಜ್ಜಾಹೀರು ಮಾಡುತ್ತಿದ್ದೇವೆ. ನಾವು ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇವೆ. ಸಾಂಸ್ಕೃತಿಕ ದಬ್ಬಾಳಿಕೆ, ಸಾಮಾಜಿಕ ಶೋಷಣೆ, ರಾಜಕೀಯ ಸರ್ವಾಧಿಕಾರ, ಅಡಿಯಿಂದ ಮುಡಿಯವರೆಗಿನ ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರ, ಶತಮಾನಗಳಿಂದ ಪೋಷಿಸಿಕೊಂಡು ಬಂದ ಅಸ್ಪೃಶ್ಯತೆ, ಜಾತಿ ತಾರತಮ್ಯಗಳು, ಜನಸಾಮಾನ್ಯರ ಆಹಾರ ಪದ್ಧತಿಯ ಮೇಲೆ ಆಕ್ರಮಣ, ಬದುಕುವ ಹಕ್ಕುಗಳ ಮೇಲಿನ ಧಾಳಿ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವ ನಮ್ಮ ಸಮಾಜ ಸಹಿಷ್ಣುತೆಗೆ ಒಂದು ನಿದರ್ಶನವೇ ಅಲ್ಲವೇ ?
ಹಾಗೆಯೇ ನಾವು ಏನೆಲ್ಲಾ ಸಹಿಸಿಕೊಳ್ಳುತ್ತಿದ್ದೇವೆ ಗಮನಿಸೋಣ. ಜೀವನದ ಜಂಜಾಟದಿಂದ ಬಳಲಿರುವ ಜನರನ್ನು ರಂಜಿಸಿ ತಾತ್ಕಾಲಿಕವಾಗಿಯಾದರೂ ನಗೆ ಮೂಡಿಸುವ ಒಬ್ಬ Stand-up comedian, ಹಾಸ್ಯ ಕಲಾವಿದನ ಕಲಾಭಿವ್ಯಕ್ತಿಯ ಹಕ್ಕು ಚ್ಯುತಿಯಾಗುತ್ತಿದೆ. ಸಮಾಜವನ್ನು ಓರೆ ಕಣ್ಣಿನಿಂದ ನೋಡುತ್ತಲೇ ವಾಸ್ತವಗಳನ್ನು ತೆರೆದಿಡುವ ವ್ಯಂಗ್ಯ ಚಿತ್ರಕಾರನ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಒಬ್ಬ ಸಾಹಿತಿಯ ಸಾಹಿತ್ಯಕ ಅಭಿವ್ಯಕ್ತಿಯ ಹಕ್ಕು ಅಪಾಯದಲ್ಲಿದೆ. ಪರದೆಯ ಮೇಲೆ ಸಮಾಜದ ವಾಸ್ತವಗಳನ್ನು ಬಿಂಬಿಸುವ ಒಬ್ಬ ಚಲನಚಿತ್ರ ನಿರ್ದೇಶಕ-ನಟನ ಸ್ವಾತಂತ್ರ್ಯಕ್ಕೆ ಚ್ಯುತಿ ಉಂಟಾಗುತ್ತಿದೆ. ಸಮಾಜವನ್ನು ವಿಡಂಬನಾತ್ಮಕವಾಗಿ ನೋಡುವ ಜನತೆಯ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಮತ್ತೊಂದೆಡೆ ಯುವಕರ ಕೈಗಳಿಗೆ ಮಾರಕಾಸ್ತ್ರಗಳನ್ನು ಮುಕ್ತವಾಗಿ ಹಂಚಲಾಗುತ್ತಿದೆ. ಶಸ್ತ್ರಾಸ್ತ್ರ ಬಳಕೆಯ ತರಬೇತಿಯನ್ನು ನೀಡಲಾಗುತ್ತಿದೆ. ವಿದ್ಯೆ ನೀಡಬೇಕಾದ ಕೈಗಳಿಗೆ ತ್ರಿಶೂಲಗಳನ್ನು, ಲಾಂಗು ಮಚ್ಚುಗಳನ್ನು ನೀಡಲಾಗುತ್ತಿದೆ. ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇವೆ.
“ ದ್ವೇಷ ಗೆದ್ದಿದೆ ಕಲಾವಿದ ಸೋತಿದ್ದಾನೆ, ನಾನು ನನ್ನ ಷೋ ಮುಗಿಸುತ್ತಿದ್ದೇನೆ, ವಿರಮಿಸುತ್ತಿದ್ದೇನೆ ” ಎಂದು ಒಬ್ಬ ಹಾಸ್ಯ ಕಲಾವಿದ ವಿಷಾದದಿಂದ ಘೋಷಿಸುವುದನ್ನು ಹೇಗೆ ಅರ್ಥೈಸುವುದು. 2015ರಲ್ಲಿ ತಮಿಳು ಸಾಹಿತಿ ಪೆರುಮಾಳ್ ಮುರುಗನ್ ತಮ್ಮ ಮದೋರುಬಾಗನ್ ಕಾದಂಬರಿಯ ವಿರುದ್ಧ ಹಿಂದುತ್ವ ಪರಿವಾರದವರ ಆಕ್ರಮಣದ ನಂತರದಲ್ಲಿ ಹೀಗೆಯೇ ಘೋಷಿಸಿದ್ದರು. “ ಇಂದಿಗೆ ಪೆರುಮಾಳ್ ಮುರುಗನ್ ಎಂಬ ಲೇಖಕ ಕೊನೆಯಾಗಿದ್ದಾನೆ. ಅವನು ದೇವರಲ್ಲ ಅವನು ತನ್ನ ಪುನರ್ಜನ್ಮವನ್ನೂ ಬಯಸುವುದಿಲ್ಲ. ಇಂದಿನಿಂದ ಪಿ. ಮುರುಗನ್ ಕೇವಲ ಒಬ್ಬ ಶಿಕ್ಷಕನಾಗಿ ಬದುಕಿರುತ್ತಾನೆ, ಅವನೊಳಗಿನ ಸಾಹಿತಿ ಪೆರುಮಾಳ್ ಮುರುಗನ್ ತನ್ನ ಅಂತ್ಯ ಕಂಡಿದ್ದಾನೆ ”. ಅಂದಿನಿಂದ ತಮ್ಮ ಮಾತಿಗೆ ಬದ್ಧರಾಗಿದ್ದುಕೊಂಡೇ ಸಾಹಿತ್ಯ ಲೋಕದಿಂದ ವಿರಮಿಸಿರುವ ಪೆರುಮಾಳ್ ಮುರುಗನ್ ಅವರಿಗೆ ಮುನಾವರ್ ಫಾರೂಖಿ ಜೊತೆಯಾಗಲಿದ್ದಾರೆ. ಸಮಾಜವನ್ನು ವಿಡಂಬನಾತ್ಮಕವಾಗಿ ನೋಡುವ ಮನುಷ್ಯನ ಸ್ವಾಭಾವಿಕ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಹಾಗೆಯೇ ಹಾಸ್ಯ ಪ್ರಜ್ಞೆಯ ಕಣ್ಣಿಂದ ಸುತ್ತಲಿನ ವಿದ್ಯಮಾನಗಳನ್ನು ನೋಡುವ ಕಾಣ್ಕೆಯನ್ನೂ ಕಿತ್ತುಕೊಳ್ಳಲಾಗುತ್ತಿದೆ. ಇದನ್ನೂ ಸಹಿಸಿಕೊಳ್ಳುತ್ತಿದ್ದೇವೆ.
ಪುನೀತ್ ರಾಜಕುಮಾರ್ ಸ್ಮರಣಾರ್ಥ ಖ್ಯಾತ ಹಾಸ್ಯ ಕಲಾವಿದ Stand-up comedian ಮುನಾವರ್ ಫಾರೂಖಿ ಅವರ ಒಂದು ಚಾರಿಟಿ ಷೋ “ ಡೋಂಗ್ರಿ ಟು ನೋವೇರ್ ” ನವಂಬರ್ 28ರಂದು ಬೆಂಗಳೂರಿನ ಗುಡ್ ಷೆಫರ್ಡ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಆದರೆ ಕೆಲವು ಬಲಪಂಥೀಯ ಹಿಂದುತ್ವ ಸಂಘಟನೆಗಳು ಈ ಪ್ರದರ್ಶನಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳಿರುವುದರಿಂದ ಬೆಂಗಳೂರು ಪೊಲೀಸರು ಮುಂಚೆಯೇ ಅನುಮತಿ ನೀಡಲಾಗಿದ್ದರೂ ಈಗ ರದ್ದುಪಡಿಸುವಂತೆ ಆದೇಶಿಸಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಮುನಾವರ್ ಫಾರೂಖಿ ಅವರ ಹನ್ನೆರಡು ಷೋಗಳು ಇದೇ ರೀತಿ ರದ್ದಾಗಿವೆ. ಜೂನ್ ತಿಂಗಳಲ್ಲಿ ಮುಂಬಯಿಯಲ್ಲಿ ಏರ್ಪಡಿಸಲಾಗಿದ್ದ ಒಂದು ಪ್ರದರ್ಶನವನ್ನೂ, ಭಜರಂಗದಳದ ಬೆದರಿಕೆಯ ಹಿನ್ನೆಲೆಯಲ್ಲಿ, ಕಡೆಯ ಗಳಿಗೆಯಲ್ಲಿ ರದ್ದುಪಡಿಸಲಾಗಿತ್ತು. ಜನರನ್ನು ರಂಜಿಸುವ ಒಂದು ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ ಮಾಡಿ ರಕ್ಷಣೆ ಕೊಡುವ ನೈತಿಕ ಹಾಗೂ ಸಾಂವಿಧಾನಿಕ ಜವಾಬ್ದಾರಿ ಇರುವ ಪೊಲೀಸ್ ಇಲಾಖೆ, ನವ ಭಾರತದಲ್ಲಿ ಮೂಲಭೂತವಾದಿಗಳ ಬೆದರಿಕೆಗಳಿಗೆ ಮಣಿದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರಲ್ಲಿ ತೊಡಗಿದೆ.
ವಿಡಂಬನೆಯನ್ನೂ ಸಹಿಸಿಕೊಳ್ಳಲಾಗದಷ್ಟು ಮಟ್ಟಿಗೆ ನಮ್ಮ ಸಮಾಜ ಅಸಹಿಷ್ಣುವಾಗಿದೆಯೇ ? ಬಹುಶಃ ಈ ಪ್ರಶ್ನೆಗೆ ಹೌದು ಎನ್ನಲಾಗುವುದಿಲ್ಲ. ಜನಸಾಮಾನ್ಯರ ನಡುವೆ ಇಂದಿಗೂ ಹಾಸ್ಯ ಪ್ರಜ್ಞೆ ಜೀವಂತವಾಗಿದೆ. ಹಾಸ್ಯ, ವಿಡಂಬನೆ ಮುಂತಾದ ಮನರಂಜನೆಯ ಸರಕುಗಳನ್ನು ಅರಗಿಸಿಕೊಳ್ಳುವಷ್ಟು ವ್ಯವಧಾನ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಜೈಭೀಮ್ ನಂತಹ ಗಂಭೀರ ಚಿತ್ರಗಳನ್ನೂ, ನೈಜ ಕಥಾವಸ್ತುವಿನ ಪರದೆಯ ಮೇಲಿನ ಚಿತ್ರಣವನ್ನೂ ಸಹಿಸಿಕೊಳ್ಳುವಷ್ಟು ಮಟ್ಟಿಗೆ ಸಮಾಜದಲ್ಲಿ ಮನುಜ ಪ್ರಜ್ಞೆ ಜೀವಂತವಾಗಿದೆ. ಒಬ್ಬ ಕುನಾಲ್ ಕಾಮ್ರಾ, ಒಬ್ಬ ಮುನಾವರ್ ಫಾರೂಖಿ ಇಡೀ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡಿಬಿಡುತ್ತಾರೆ ಅಥವಾ ಒಬ್ಬ ಪೆರುಮಾಳ್ ಮುರುಗನ್ ಸಮಸ್ತ ಸಮುದಾಯದ ನಂಬಿಕೆಗಳಿಗೆ ಭಂಗ ಉಂಟುಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೂ ಈ ಕಲಾವಿದರ ವಿರುದ್ಧ, ಸಾಹಿತಿಗಳ ವಿರುದ್ಧ ಸಮಾಜದ ಒಂದು ವರ್ಗ ದನಿ ಎತ್ತುತ್ತದೆ, ಈ ವರ್ಗ ಪ್ರತಿನಿಧಿಸುವ ಸಮಾಜಘಾತುಕ-ಸಂವಿಧಾನವಿರೋಧಿ-ಸಂವೇದನಾರಹಿತ ದ್ವೇಷ ಭಾವನೆಯ ಜಗತ್ತಿಗೆ ಆಡಳಿತ ವ್ಯವಸ್ಥೆಯ ಅಂಗ ಸಂಸ್ಥೆಗಳು ಮಂಡಿಯೂರಿ ಶರಣಾಗುತ್ತವೆ. ಸಂವಿಧಾನ ರಕ್ಷಣೆ ನೀಡುವಂತಹ ಎಲ್ಲ ನಾಗರಿಕ ಹಕ್ಕುಗಳನ್ನು ರಕ್ಷಿಸುವ ನೈತಿಕ ಹೊಣೆಗಾರಿಕೆ ಇರುವ ಆಡಳಿತ ವ್ಯವಸ್ಥೆಯ ಅಂಗ ಸಂಸ್ಥೆಗಳು ಸಾರ್ವಭೌಮ ಪ್ರಜೆಗಳ ಭಾವನೆಗಳಿಗಿಂತಲೂ ಆಳುವ ಪಕ್ಷಗಳ ಸೈದ್ಧಾಂತಿಕ-ತಾತ್ವಿಕ ಭಾವನೆಗಳಿಗೆ ಹೆಚ್ಚಿನ ಗೌರವ ನೀಡುತ್ತಿವೆ.
ಹಾಗಾಗಿಯೇ ಬೆಳಗಾವಿಯಲ್ಲಿ ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ, ಕ್ರೈಸ್ತ ಮಂದಿರಗಳಲ್ಲಿ ಪ್ರಾರ್ಥನೆಯನ್ನೂ ನಡೆಸದಂತೆ ಆದೇಶ ನೀಡಲಾಗುತ್ತದೆ. ಕೆಲವು ಬಲಪಂಥೀಯ ಗುಂಪುಗಳು ಗಲಭೆ ಸೃಷ್ಟಿಸುವ ಸಾಧ್ಯತೆಗಳಿರುವುದರಿಂದ, ತಮ್ಮ ಪ್ರಾರ್ಥನಾ ಸಭೆಗಳನ್ನು ಸಾರ್ವಜನಿಕವಾಗಿ ನಡೆಸದಂತೆ ಬೆಳಗಾವಿ ಪೊಲೀಸರು ವಿನಮ್ರತೆಯಿಂದಲೇ ಕ್ರೈಸ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಿಧಾನಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ನೈತಿಕ ಹೊಣೆ ಹೊರಬೇಕಾದ ಪೊಲೀಸ್ ಇಲಾಖೆ, ಕೆಲವೇ ಸಮಾಜಘಾತುಕ ಶಕ್ತಿಗಳಿಗೆ, ಶಾಂತಿ ಭಂಜಕರಿಗೆ, ದ್ವೇಷದ ವಾರಸುದಾರರಿಗೆ ಹೆದರಿ, ಕ್ರೈಸ್ತ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿರುವುದನ್ನು ಹೇಗೆ ಬಣ್ಣಿಸಲು ಸಾಧ್ಯ ? ಆಡಳಿತ ವ್ಯವಸ್ಥೆಯ ಈ ಧೋರಣೆಯಿಂದ ಪ್ರಚೋದನೆ ಪಡೆದೇ ಬೇಲೂರಿನಲ್ಲಿ ಪ್ರಾರ್ಥನಾನಿರತ ಕ್ರೈಸ್ತರ ಮೇಲೆ ಭಜರಂಗ ದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಇಂದು ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಯುವಕ ಯುವತಿಯರು ಲಿಂಗಭೇದವನ್ನು ಮರೆತು ಸ್ನೇಹಭಾವದೊಂದಿಗೆ, ಒಂದಾಗಿರಲು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ಬದಿಯ ಮತೀಯವಾದಿಗಳು ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ.
ಈ ಧಾಳಿಕೋರರು, ಪುಂಡ ಪಡೆಗಳು, ಮೂಲಭೂತವಾದಿ ಸಂಘಟನೆಗಳು ಒಂದೆಡೆ ಮತೀಯ ದ್ವೇಷವನ್ನು ಹರಡುತ್ತಾ ಮತ್ತೊಂದೆಡೆ ಅನ್ಯ ಮತದ ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳನ್ನೂ ಕಸಿದುಕೊಳ್ಳುತ್ತಿವೆ. ಇಂತಹ ಅನೈತಿಕ ಪೊಲೀಸ್‍ಗಿರಿ ನಡೆಸುವ ಮತೀಯ ಕಾವಲುಪಡೆಗಳಿಗೆ ಪೊಲೀಸ್ ಮತ್ತು ಕಾನೂನು ವ್ಯವಸ್ಥೆ ಹೆಚ್ಚಿನ ಮಾನ್ಯತೆ ನೀಡುತ್ತಿರುವುದು ದುರಂತ. ಕೆಲವು ದಿನಗಳ ಹಿಂದೆ ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ್ದ ಕ್ರಿಯೆ-ಪ್ರತಿಕ್ರಿಯೆ ಪ್ರಮೇಯ ಇಲ್ಲಿಗೆ ಅನ್ವಯಿಸಲಾಗುವುದೇ ? ಇಲ್ಲಿ ಕ್ರಿಯೆ ಯಾವುದು ಪ್ರತಿಕ್ರಿಯೆ ಯಾವುದು ? ನಿತ್ಯ ಬದುಕಿನ ಜಂಜಾಟದಿಂದ ಬಸವಳಿದ ಜನಸಾಮಾನ್ಯರಿಗೆ ಮನರಂಜನೆ ನೀಡುವ ಒಂದು ಕ್ರಿಯೆಗೆ ಮತೀಯ ಮೂಲಭೂತವಾದಿಗಳ ಧಾಳಿ ಪ್ರತಿಕ್ರಿಯೆಯಾದೀತೇ ? ಅಥವಾ ಸಂವಿಧಾನ ಸಮಸ್ತ ಜನತೆಗೂ ನೀಡುವ ಪ್ರಾರ್ಥನೆ ಮತ್ತು ಆರಾಧನಾ ಸ್ವಾತಂತ್ರ್ಯವನ್ನು ಪಾಲಿಸುವವರ ಕ್ರಿಯೆಗೆ ಪುಂಡ ಪಡೆಗಳು ಆಕ್ರಮಣ ನಡೆಸುವುದು ಪ್ರತಿಕ್ರಿಯೆಯಾದೀತೇ ? ಇಲ್ಲಿ ರಕ್ಷಣೆ ಬೇಕಿರುವುದು ಯಾರಿಗೆ ? ಕಾನೂನು ಪಾಲಕರು ಮತ್ತು ರಕ್ಷಕರು ಯಾರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಡು ಹೇಳಲು, ಹಾಸ್ಯದ ಹೊನಲು ಹರಿಸಲು, ನಾಟಕ ನಡೆಸಲು, ಪ್ರಾರ್ಥನೆ ನಡೆಸಲು ಈ ದೇಶದ ಪ್ರಜೆಗಳು ಪೊಲೀಸ್ ರಕ್ಷಣೆಯನ್ನು ಕೋರಬೇಕಾಗಿ ಬಂದಿರುವ ಪರಿಸ್ಥಿತಿಯನ್ನು ಯಾವ ರೀತಿ ಕ್ರಿಯೆ-ಪ್ರತಿಕ್ರಿಯೆಯ ಪ್ರಮೇಯಕ್ಕೆ ಅನ್ವಯಿಸಬಹುದು. ಇತ್ತೀಚೆಗೆ ನವಂಬರ್ 26ರಂದು ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಿದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಇತರರು ತಮ್ಮ ಸಂವಿಧಾನಬದ್ಧತೆಯನ್ನು ಪ್ರಮಾಣೀಕರಿಸಿದ್ದಾರೆ. ಆದರೆ ಇಲ್ಲಿ ಒಬ್ಬ Stand-up comedian ತನ್ನ ಷೋ ನಡೆಸಲಾಗದೆ ಶಾಶ್ವತವಾಗಿ ವಿದಾಯ ಹೇಳುತ್ತಾನೆ. ನಾವು ಸ್ವತಂತ್ರ ಸಾರ್ವಭೌಮ ದೇಶದಲ್ಲಿದ್ದೇವೆಯೇ ?
ಈ ಸಂದರ್ಭದಲ್ಲಿ ಮತ್ತೊಮ್ಮೆ ಅಂಬೇಡ್ಕರ್ ನೆನಪಾಗುತ್ತಾರೆ. “ ಸಂವಿಧಾನದ ಉದ್ದೇಶ ಕೇವಲ ಪ್ರಭುತ್ವದ ಅಂಗಗಳನ್ನು ರೂಪಿಸುವುದಷ್ಟೇ ಅಲ್ಲ, ಅವುಗಳ ಅಧಿಕಾರ ವ್ಯಾಪ್ತಿಯನ್ನು ಸೀಮಿತಗೊಳಿಸುವುದೂ ಆಗಿರುತ್ತದೆ ಏಕೆಂದರೆ ಈ ಅಂಗಗಳ ಅಧಿಕಾರ ವ್ಯಾಪ್ತಿಯ ಮೇಲೆ ಯಾವುದೇ ಮಿತಿಯನ್ನು ಹೇರದೆ ಹೋದರೆ, ಅಲ್ಲಿ ಸಂಪೂರ್ಣ ನಿರಂಕುಶಾಧಿಕಾರ ಮತ್ತು ದಬ್ಬಾಳಿಕೆ ಇರುತ್ತದೆ ” ಎಂಬ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳು ನೆನಪಾಗುತ್ತವೆ. ಸಂವಿಧಾನ ರಚನೆಯ ಸಂದರ್ಭದಲ್ಲಿ, ಸಾಂವಿಧಾನಿಕ ಅಂಗಗಳ ಕಾರ್ಯನಿರ್ವಹಣೆಯಲ್ಲಿ ಸ್ಥಿರತೆಗಿಂತಲೂ ಜವಾಬ್ದಾರಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದ್ದ ಅಂಬೇಡ್ಕರ್, ಜಾರ್ಜ್ ಗ್ರೋಟ್ ಅವರನ್ನು ಉಲ್ಲೇಖಿಸಿ ಸಾಂವಿಧಾನಿಕ ನೈತಿಕತೆಯನ್ನು “ ಸಂವಿಧಾನದ ಸ್ವರೂಪಗಳಿಗೆ ಅತಿ ಹೆಚ್ಚಿನ ಗೌರವ ನೀಡುವುದು, ಈ ಸ್ವರೂಪದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಲೇ ಅಧಿಕಾರ ಕೇಂದ್ರಗಳಿಗೆ ವಿಧೇಯತೆಯನ್ನು ಅಪೇಕ್ಷಿಸುವುದು, ಮುಕ್ತ ವಾಕ್ ಸ್ವಾತಂತ್ರ್ಯವನ್ನು ರೂಢಿಸಿಕೊಂಡು, ಕಾನೂನು ನಿಯಂತ್ರಣದಲ್ಲಿರುವ ಮುಕ್ತ ಚಟುವಟಿಕೆಗೆ ಅವಕಾಶ ನೀಡುವುದು ಮತ್ತು ಅಧಿಕಾರದಲ್ಲಿರುವವರ ಎಲ್ಲ ರೀತಿಯ ಕ್ರಿಯೆಗಳ ಬಗ್ಗೆ ಅನಿಯಂತ್ರಿತ ಅಸಮ್ಮತಿಯನ್ನು ಹೊಂದಿರುವುದು,,,,” ಎಂದು ಬಣ್ಣಿಸಿದ್ದರು. ಇದೇ ವೇಳೆ ಅಂಬೇಢ್ಕರ್ “ ಸಾಂವಿಧಾನಿಕ ನೈತಿಕತೆ ಒಂದು ಸ್ವಾಭಾವಿಕ ಭಾವನೆಯಲ್ಲ. ಅದನ್ನು ಪೋಷಿಸಿ ಬೆಳೆಸಬೇಕು. ಜನರು ಇನ್ನೂ ಇದನ್ನು ಕಲಿಯಬೇಕಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಭಾರತದ ಪ್ರಜಾಪ್ರಭುತ್ವ ಎಂದರೆ, ಮೂಲತಃ ಅಪ್ರಜಾತಾಂತ್ರಿಕವಾಗಿರುವ ಭಾರತದ ನೆಲವನ್ನು ಪ್ರಜಾಪ್ರಭುತ್ವದ ಹೊದಿಕೆಯಿಂದ ಸಿಂಗರಿಸುವುದೇ ಆಗಿದೆ ” ಎಂದು ಹೇಳಿದ್ದರು.
ಬಹುಶಃ ಸಂವಿಧಾನ ಕರ್ತೃಗಳ ಆತಂಕಗಳನ್ನು ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಾಕ್ಷೀಕರಿಸುತ್ತಿದ್ದೇವೆ ಎನಿಸುತ್ತದೆ. ಭಾರತದ ಸರ್ಕಾರ ಸಂವಿಧಾನಬದ್ಧವಾಗಿದೆ. ರಾಜ್ಯ ಸರ್ಕಾರಗಳು ಸಂವಿಧಾನಕ್ಕೆ ನಿಷ್ಠೆಯಿಂದಲೇ ನಡೆದುಕೊಳ್ಳುತ್ತಿವೆ. ಏಕೆಂದರೆ ನಮ್ಮಲ್ಲಿ ಪ್ರಜಾಪ್ರಭುತ್ವ ಇನ್ನೂ ಉಸಿರಾಡುತ್ತಿದೆ. ಆದರೆ ಆಡಳಿತ ವ್ಯವಸ್ಥೆಯ ಚೌಕಟ್ಟಿನಿಂದ ಹೊರಗೆ ಜನಸಾಮಾನ್ಯರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವ ಅಸಾಂವಿಧಾನಿಕ, ಮತೀಯ ಕಾವಲು ಪಡೆಗಳು ದಿನದಿಂದ ದಿನಕ್ಕೆ ಸಕ್ರಿಯವಾಗುತ್ತಿವೆ. ಸಾಂವಿಧಾನಿಕವಾಗಿ ಜನರ ಹಕ್ಕುಗಳನ್ನು, ವಾಕ್ ಸ್ವಾತಂತ್ರ್ಯ-ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಕಟಿಬದ್ಧವಾಗಿರಬೇಕಾದ ಆಡಳಿತ ವ್ಯವಸ್ಥೆಯ ಅಂಗ ಸಂಸ್ಥೆಗಳು ತಮ್ಮ ಸಾಂವಿಧಾನಿಕ ನೈತಿಕತೆಯನ್ನೇ ಮರೆತು, ಸಂವಿಧಾನ ಭಂಜಕ ಶಕ್ತಿಗಳಿಗೆ ಮಣಿಯುತ್ತಿವೆ. ಇದರ ನೇರ ಪರಿಣಾಮವನ್ನು ಮುನಾವರ್ ಫಾರೂಖಿಯಲ್ಲಿ, ಪೆರುಮಾಳ್ ಮುರುಗನ್ ಅವರಲ್ಲಿ ಕಾಣುತ್ತಿದ್ದೇವೆ. ಕ್ಷಮೆ ಕೋರದೆ ಹೋಗಿದ್ದರೆ ಬಹುಶಃ ಹಂಸಲೇಖ ಸಹ ಇವರ ಸಾಲಿಗೆ ಸೇರುತ್ತಿದ್ದರು.
ಸಮಾಜದಲ್ಲಿ ಪ್ರವಹಿಸುತ್ತಿರುವ, ಪಸರಿಸುತ್ತಿರುವ ದ್ವೇಷದ ಭಾವನೆಗಳನ್ನು ಹತ್ತಿಕ್ಕುವ ಮೂಲಕ ಒಂದು ಸಂವೇದನಾಶೀಲ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯ ನಿರ್ವಹಿಸಬೇಕಿದೆ. ಇಲ್ಲವಾದಲ್ಲಿ ಈ ಆಡಳಿತ ವ್ಯವಸ್ಥೆಗೆ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸುವ ನೈತಿಕ ಹಕ್ಕೇ ಇರುವುದಿಲ್ಲ. ಇಂದು ಮುನಾವರ್ ಅಥವಾ ಹಂಸಲೇಖ ನಾಳೆ ಯಾರಾಗಬಹುದು ?