ಮಂಡ್ಯ ವಿಧಾನಪರಿಷತ್ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದಳಪತಿಗಳು ಸುಮಲತಾ ವಿರುದ್ದ ಎಣೆದಿದ್ದ ನೇಮ್ ಪಾಲಿಟಿಕ್ಸ್ ತಂತ್ರಗಾರಿಕೆಯನ್ನ ಬಿಜೆಪಿ ಅಭ್ಯರ್ಥಿ ಮೇಲೆ ಮತ್ತೆ ಎಣೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಚಿವ ನಾರಾಯಣಗೌಡ ಈ ಗಿಮಿಕ್ ರಾಜಕಾರಣವನ್ನ ಬಹಿರಂಗಪಡಿಸಿದ್ದಾರೆ.
ಮಂಡ್ಯ ರಾಜಕಾರಣವೇ ಹಾಗೆ. ಯಾವುದೇ ಚುನಾವಣೆ ಬರ್ಲಿ ಸದಾ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗುತ್ತದೆ. ಪ್ರತಿ ಚುನಾವಣೆಗಳಲ್ಲಿ ಕೇಳಿ ಬರ್ತಿದ್ದ ಮಾತು ಅಂದ್ರೆ ಅದು ಜೆಡಿಎಸ್-ಕಾಂಗ್ರೆಸ್ ಸಾಂಪ್ರಾದಾಯಿಕ ಎದುರಾಳಿ ಅಂತಾ. ಆದ್ರೆ ಕಳೆದ ಲೋಕಸಭಾ ಚುನಾವಣೆ ಹಾಗೂ ಕೆ.ಆರ್.ಪೇಟೆ ಉಪಚುನಾವಣೆ ಬಳಿಕ ಆ ಮಾತು ಉಲ್ಟಾ ಆಗಿದೆ. ಜೆಡಿಎಸ್-ಕಾಂಗ್ರೆಸ್‌ಗೆ ಸರಿಸಮನಾಗಿ ಬಿಜೆಪಿ ಸಿಡಿದೆದ್ದು ನಿಂತಿದೆ. ಅದರಿಂದ ಜೆಡಿಎಸ್ ಬಿಜೆಪಿ ವಿರುದ್ದ ಮಸಲತ್ತು ನಡೆಸಿ ನೇಮ್ ಪಾಲಿಟಿಕ್ಸ್ ಮಾಡ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ವಿರುದ್ದ ನೇಮ್ ತಂತ್ರಗಾರಿಕೆಯನ್ನ ಹೆಣೆದಿರೋದು ತಿಳಿದುಬಂದಿತ್ತು. ಸುಮಲತಾ ಹೆಸರಿನ ಮೂವರು ಮಹಿಳೆಯರನ್ನ ಕರೆತಂದು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ನಿಲ್ಲಿಸಲಾಗಿತ್ತು. ಇದೀಗ ಈ ತಂತ್ರಗಾರಿಕೆ ಮಾಡಿದವರು ದಳಪತಿಗಳು ಎಂಬ ಅಂಶ ಬಯಲಾಗಿದೆ. ಈ ರೋಚಕ ಕುತಂತ್ರವನ್ನ ಸಚಿವ ನಾರಾಯಣಗೌಡ ಇದೀಗ ಬಹಿರಂಗಪಡಿಸಿದ್ದಾರೆ. ಅಲ್ಲದೇ ಇದೀಗ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ವಿರುದ್ಧವೂ ಜೆಡಿಎಸ್ ಇಂಥದ್ದೇ ತಂತ್ರಗಾರಿಕೆ ಎಣೆದಿದೆ ಅಂತಲೂ ನಾರಾಯಣ ಗೌಡ ಆರೋಪಿಸಿದ್ದಾರೆ. ಬೂಕಹಳ್ಳಿ ಮಂಜು ವಿರುದ್ಧ ಮಂಜುನಾಥ್ ಜಿ.ಬಿ ಎಂಬುವವರನ್ನ ಪಕ್ಷೇತರ ಅಭ್ಯರ್ಥಿಯಾಗಿ ಎಂಎಲ್‌ಸಿ ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಬಿಜೆಪಿ ಅಭ್ಯರ್ಥಿ ಬೂಕಳ್ಳಿ ಮಂಜು ಕೂಡಾ ಕಿಡಿಕಾರಿದ್ದಾರೆ. ಇದು ಎದುರಾಳಿಗಳ ಕುತಂತ್ರ, ಕುತಂತ್ರಕ್ಕೆ ಬೆಲೆ ಸಿಗಲ್ಲ. ನಾನು ಮತದಾರರ ಮನೆಗಳಿಗೆ ನೇರ ಪರಿಚಯ ಇದ್ದೇನೆ. ಜೆಡಿಎಸ್‌ನವರ ಗಿಮಿಕ್ ನೋಡಿದ್ರೆ ಬಿಜೆಪಿ ಮೇಲಿನ ಅವರಿಗಿರುವ ಭಯ ಗೊತ್ತಾಗುತ್ತೆ ಅಂತಾ ವ್ಯಂಗ್ಯವಾಡಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ನನಗೆ ಸಿಕ್ಕ ಬೆಂಬಲಕ್ಕೆ ಹೆದರಿದ ದಳಪತಿಗಳು, ಕೊನೆಗೆ ಮತದಾರರ ದಿಕ್ಕು ತಪ್ಪಿಸಲು ಈ ಹೊಸ ತಂತ್ರ ಹೂಡಿದ್ದಾರೆ. ಆ ಮೂಲಕ ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಭಾವಿಸಿದ್ದಾರೆ. ಬಿಜೆಪಿಯೇ ಇಲ್ಲಿ ಗೆಲ್ಲೋದು ಎಂದಿದ್ದಾರೆ ಬೂಕಹಳ್ಳಿ ಮಂಜು.
ಈ ಹಿಂದೆಯೂ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಅವರ ಮಗ ಸ್ಪರ್ಧಿಸಿದ್ದರು. ಇವರನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು ಜೆಡಿಎಸ್ ಪಣ ತೊಟ್ಟಿತ್ತು. ಆಗ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಹಾದಿಗೆ ಅಡ್ಡಿಯಾಗಿ ನಿಂತಿದ್ದರು. ಸುಮಲತಾರನ್ನು ಸೋಲಿಸಬೇಕು ಎಂದು ಅಂದು ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಹೆಸರಿನಲ್ಲಿ ಮೂವರು ವ್ಯಕ್ತಿಗಳು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಈ ಮೂವರು ‘ಸುಮಲತಾ’ರನ್ನು ಹುಟ್ಟುಹಾಕಿದ್ದೇ ಜೆಡಿಎಸ್ ಎಂಬ ಮಾತು ದಟ್ಟವಾಗಿ ಹರಡಿತ್ತು. ಮತದಾರರ ದಿಕ್ಕು ತಪ್ಪಿಸಲು ದಳಪತಿಗಳು ಹೂಡಿರುವ ಸಂಚು ಇದು ಎಂದು ವಿಶ್ಲೇಷಿಸಲಾಗುತ್ತಿತ್ತು.
ಕನಕಪುರದ ರಂಗನಾಥ ಬಡಾವಣೆಯ ಸುಮಲತಾ ದರ್ಶನ್, ಕೆ.ಆರ್.ಪೇಟೆ ತಾಲೂಕಿನ ಗೊರವಿ ಗ್ರಾಮದ ಸುಮಲತಾ ಮಂಜೇಗೌಡ, ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರಿನ ಸುಮಲತಾ ಸಿದ್ದೇಗೌಡ ಎಂಬುವವರು ಅಂದು ನಾಮಪತ್ರ ಸಲ್ಲಿಸಿದ್ದರು. ಅಲ್ಲದೇ ಚುನಾವಣೆಯಲ್ಲಿ 20 ಸಾವಿರಕ್ಕೂ ಹೆಚ್ಚು ಮತ ಇವರ ಪಾಲಾದವು.
ಈಗಲೂ ಮತದಾರರಲ್ಲಿ ಗೊಂದಲ ಸೃಷ್ಟಿಸಲು ಜೆಡಿಎಸ್ ಇಂತಹ ಷಡ್ಯಂತ್ರದ ರಾಜಕಾರಣ ಮಾಡುತ್ತಿದೆ. ಹೀಗಾಗಿ ಬೂಕಹಳ್ಳಿ ಮಂಜು ಹೆಸರಿನ ಅಭ್ಯರ್ಥಿಯನ್ನು ಕಣದಲ್ಲಿ ನಿಲ್ಲಿಸಿದೆ. ಬಿಜೆಪಿ ಅಭ್ಯರ್ಥಿ ಮಂಜುಗೆ ಬರಬೇಕಿದ್ದ ಮತಗಳನ್ನ ಹಾಗೂ ಪ್ರಾಶಸ್ತ್ಯ ಮತಗಳನ್ನ ಡಿವೈಡ್ ಮಾಡಲು, ನೇಮ್ ಕನ್ಪ್ಯೂಜ್ ತಂತ್ರ ಮಾಡಲಾಗಿದೆ ಅನ್ನೋದು ಆರೋಪ. ಆದ್ರೆ ಈ ತಂತ್ರಕ್ಕೆ ಮತದಾರರು ಯಾವ ರೀತಿ ಮಣೆ ಹಾಕುತ್ತಾರೆ ಅನ್ನೋದೇ ಕುತೂಹಲ.