ಕೃಷಿ ಕಾಯ್ದೆ ಹಿಂದೆಗೆದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಅಚ್ಚರಿ ನೀಡಿದಂತೆ ಆಂಧ್ರ ಪ್ರದೇಶ ಸರ್ಕಾರವೂ ತನ್ಮ ವಿವಾದಾತ್ಮಕ ‘ಮೂರು ರಾಜಧಾನಿ’ ಕಾಯ್ದೆಯನ್ನು ಹಿಂದೆಗೆದು ಅಚ್ಚರಿ ನೀಡಿದೆ. ಈ ಹಿಂದೆ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರವು ‘ವಿಕೇಂದ್ರಿಕೃತ ಅಭಿವೃದ್ಧಿ’ ಎನ್ನುವ ಕಲ್ಪನೆಯಡಿ ವಿಶಾಖಪಟ್ಟಣಂ (ಕಾರ್ಯನಿರ್ವಾಹಕ ರಾಜಧಾನಿ), ಅಮರಾವತಿ (ಶಾಸಕಾಂಗ ರಾಜಧಾನಿ) ಮತ್ತು ಕರ್ನೂಲ್ (ನ್ಯಾಯಾಂಗ ರಾಜಧಾನಿ) ಎನ್ನುವ ಪ್ರಸ್ತಾಪನೆಯಡಿ ‘ತ್ರಿ ರಾಜಧಾನಿ’ ಕಾನೂನನ್ನು ರಾಜ್ಯ ವಿಧಾನಸಭೆಯಲ್ಲಿ ಜಾರಿಗೆ ತಂದಿತ್ತು.
ಇದೀಗ ಆಂಧ್ರ ಪ್ರದೇಶದ ಹಣಕಾಸು ಸಚಿವ ಬುಗ್ಗನ ರಾಜೇಂದ್ರನಾಥ ರೆಡ್ಡಿ ಅವರು ನವೆಂಬರ್ 22 ರಂದು ರಾಜ್ಯ ವಿಧಾನಸಭೆಯಲ್ಲಿ ‘ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ರದ್ದತಿ ಮಸೂದೆ, 2021’ ಅನ್ನು ಮಂಡಿಸಿದ್ದು ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ‘ಮೂರು ರಾಜಧಾನಿ’ ಶಾಸನದ ರದ್ದತಿಯ ಬಗ್ಗೆ ಮಾತನಾಡುತ್ತಾ ವೈಎಸ್ಆರ್ ಕಾಂಗ್ರೆಸ್ ಮೂಲಗಳು ‘ಸರ್ಕಾರವು ಸಮಾಲೋಚನಾ ಪ್ರಕ್ರಿಯೆಯ ಮೂಲಕ ಮತ್ತು ಕಾನೂನಾತ್ಮಕ ತೊಡರುಗಳನ್ನು ನಿವಾರಿಸಿ ಶೀಘ್ರದಲ್ಲಿ ಸಮಗ್ರ ಶಾಸನವನ್ನು ತರಲಿದೆ’ ಎಂದಿದೆ.
ಅಮರಾವತಿಯಲ್ಲಿ ರಾಜಧಾನಿ ನಿರ್ಮಿಸುವುದು ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರದ ನಿರ್ಧಾರ. ಆದರೆ ಅಮರಾವತಿಯಲ್ಲಿ ಮೆಗಾಸಿಟಿಯನ್ನು ಅಭಿವೃದ್ಧಿಪಡಿಸುವುದೆಂದರೆ ರಸ್ತೆಗಳು, ವಿದ್ಯುತ್ ಮತ್ತು ಒಳಚರಂಡಿ ವ್ಯವಸ್ಥೆಯಂತಹ ‘ಮೂಲ ಮೂಲಸೌಕರ್ಯ’ ರೂಪಿಸಲೇ ರಾಜ್ಯವು 1 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಬೃಹತ್ ವಿತ್ತೀಯ ಕೊರತೆಯಿರುವ ಆಂಧ್ರಪ್ರದೇಶವು ಇಷ್ಟು ವೆಚ್ಚದ ಯೋಜನೆಯನ್ನು ಭರಿಸಲು ಸಾಧ್ಯವಿಲ್ಲ. ಆದರೆ ಈಗಾಗಲೇ ಉತ್ತಮ ಮೂಲಸೌಕರ್ಯ ಹೊಂದಿರುವ ವಿಶಾಖಪಟ್ಟಣಂ ಅನ್ನು ರಾಜ್ಯ ಸರ್ಕಾರದ ಅಲ್ಪ ಸ್ವಲ್ಪ ಬೆಂಬಲದೊಂದಿಗೆ ಕಾರ್ಯಕಾರಿ ರಾಜಧಾನಿಯಾಗಿ ಅಭಿವೃದ್ಧಿಪಡಿಸಿ ಒಂದು ದಶಕದೊಳಗೆ ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಂತಹ ಇತರ ಮಹಾನಗರಗಳೊಂದಿಗೆ ಸ್ಪರ್ಧಿಸುವಂತೆ ಮಾಡಬಹುದು ಎನ್ನುವುದು ಈಗಿನ ಸರ್ಕಾರದ ವಾದವಾಗಿತ್ತು.
ಆದರೆ ದಿಡೀರನೆ ಇದೇ ಸರ್ಕಾರ ಈಗ ‘ಮೂರು ರಾಜಧಾನಿ’ ಮಸೂದೆಯನ್ನು ಹಿಂದೆಗೆದಿದ್ದು ಇದರ ಹಿಂದೆ ರಾಜಕೀಯ ಮತ್ತು ಕಾನೂನಾತ್ಮಕ ಲೆಕ್ಕಾಚಾರಗಳಿವೆ ಎನ್ನಲಾಗುತ್ತದೆ. ಮೊದಲನೆಯದಾಗಿ ಅಮರಾವತಿಯಲ್ಲಿ ರಾಜಧಾನಿ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುವ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ 100 ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ. ಇವುಗಳಲ್ಲಿ ಹೆಚ್ಚಿನ ಅರ್ಜಿಗಳನ್ನು ಅಮರಾವತಿ ಜಂಟಿ ಕ್ರಿಯಾ ಸಮಿತಿಯಡಿಯಲ್ಲಿ ಒಗ್ಗೂಡಿದ ರೈತರು ಸಲ್ಲಿಸಿದ್ದಾರೆ. ನ್ಯಾಯಾಲಯವು ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಇದಕ್ಕೆ ಸಂಬಂಧಪಟ್ಟ ಪ್ರಕರಣಗಳ ವಾದವಿವಾದಗಳನ್ನು ಪ್ರತಿದಿನ ಆಲಿಸುವುದಾಗಿ ಘೋಷಿಸಿದೆ. ರೈತರ ಪರವಾಗಿ ಹೈಕೋರ್ಟ್ ತೀರ್ಪು ಬಂದು ಮತ್ತು ಅದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದರೆ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದನ್ನು ಹೊರತುಪಡಿಸಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆಯ್ಕೆಗಳು ಉಳಿಯುವುದಿಲ್ಲ. ಈ ಮುಜುಗರವನ್ನು ತಪ್ಪಿಸಲು ಮೊದಲೇ ಕಾನೂನನ್ನು ರದ್ದುಗೊಳಿಸಲಾಯಿತು ಎನ್ನಲಾಗುತ್ತಿದೆ.
ಅಲ್ಲದೆ ಹಿಂದಿನ ಟಿಡಿಪಿ ಸರ್ಕಾರವು ರಾಜಧಾನಿ ಅಭಿವೃದ್ಧಿಗಾಗಿ ಅಮರಾವತಿ ರೈತರಿಂದ ಭೂಮಿಯನ್ನು ಪಡೆದಾಗ ಕಾನೂನಿನ ಮೂಲಕ ಅವರಿಗೆ ನೀಡಿದ ಪರಿಹಾರದ ಭರವಸೆಗಳನ್ನು ಪ್ರಸ್ತುತ ಸರ್ಕಾರವು ತಿರಸ್ಕರಿಸುತ್ತಿದೆ. ಇದರ ವಿರುದ್ಧ ರೈತರು ಕೋರ್ಟಿಗೆ ಹೋದರೆ ಸರ್ಕಾರದ ವಿರುದ್ಧ ತೀರ್ಪು ಬರಲಿದೆ ಎನ್ನುವ ಭಯವೂ ಸರ್ಕಾರಕ್ಕಿದೆ.
ಕಾಯ್ದೆ ರದ್ಧತಿಯ ಹಿಂದಿರುವ ಇನ್ನೊಂದು ಬಹುಮುಖ್ಯ ಕಾರಣ ರೈತ ಪ್ರತಿಭಟನೆ. ಹಿಂದಿನ ಟಿಡಿಪಿ ಸರ್ಕಾರವು ಅಮರಾವತಿ ಅಭಿವೃದ್ಧಿಗಾಗಿ ಲ್ಯಾಂಡ್ ಪೂಲಿಂಗ್ ಮೂಲಕ 33,000 ಎಕರೆ ಭೂಮಿಯನ್ನು ರೈತರಿಂದ ಪಡೆದಿತ್ತು. ಆ ರೈತರು ಅಮರಾವತಿಯನ್ನು ರಾಜಧಾನಿ ಮಾಡುವುದಿಲ್ಲ ಎಂದಾದಾಗ ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಬೆಂಬಲವನ್ನು ಹೊಂದಿರುವ ಈ ಪ್ರತಿಭಟನೆಗಳು ನವೆಂಬರ್ 22 ಸೋಮವಾರಕ್ಕೆ 706 ನೇ ದಿನಕ್ಕೆ ಕಾಲಿಟ್ಟಿದ್ದು ಆಡಳಿತ ವಿರೋಧಿ ಅಲೆಯಾಗಿ ರೂಪುಗೊಳ್ಳಬಹುದು ಎನ್ನುವ ಭಯ ವೈಎಸ್‌ಆರ್ ಕಾಂಗ್ರೆಸ್‌ಗಿದೆ.
ಮತ್ತೊಂದೆಡೆ ವಿಭಜಿತ ಆಂಧ್ರಪ್ರದೇಶಕ್ಕೆ ರಾಜಧಾನಿಯನ್ನು ನಿರ್ಮಿಸುವುದು ಟಿಡಿಪಿ ಮತ್ತು ವೈಎಸ್ಆರ್ ಕಾಂಗ್ರೆಸ್ ನಡುವಿನ ರಾಜಕೀಯ ಮೇಲಾಟದ ವಿಷಯವಾಗಿದೆ. ವಿರೋಧ ಪಕ್ಷದ ನಾಯಕರಾಗಿ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರಕ್ಕೆ ಬಂದರೆ ಅಮರಾವತಿಯನ್ನು ರಾಜಧಾನಿಯಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು 2019 ರಲ್ಲಿ ಮುಖ್ಯಮಂತ್ರಿಯಾದ ನಂತರ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ತಮಗೆ ತಿರುಗುಬಾಣವಾಗಬಹುದು ಎನ್ನುವ ಆತಂಕವೂ ಅವರಿಗಿದೆ.
ಆಂಧ್ರಪ್ರದೇಶ ಸರ್ಕಾರವು ಕಾಯ್ದೆಯನ್ನು ಹೊಸ ರೂಪದಲ್ಲಿ ಮಂಡಿಸಲಾಗುವುದು ಎಂದು ಈಗಾಗಲೇ ಹೇಳಿದೆಯಾದರೂ ಯಾವಾಗ ಮಂಡಿಸಲಿದೆ ಎಂದು ಸಮಯ ನಿಗದಿ ಮಾಡಿಲ್ಲ. ಒಂದೆಡೆ ರಾಜಕೀಯ ಕಾರಣಗಳು ಇನ್ನೊಂದೆಡೆ ಕಾನೂನಾತ್ಮಕ ತೊಡಕುಗಳು ಜಗನ್ಮೋಹನ್ ರೆಡ್ಡಿಯವರ ಮಹತ್ವಾಕಾಂಕ್ಷೆಯ ‘ತ್ರಿ ರಾಜಧಾನಿ’ ಸೂತ್ರಕ್ಕೆ ಅಡ್ಡಿಯಾಗಿದ್ದರೂ ಒಂದು ರಾಜ್ಯದ ರಾಜಧಾನಿ ಎಲ್ಲಿರಬೇಕೆಂದು ನಿರ್ದೇಶಿಸುವ ಅಧಿಕಾರ ನ್ಯಾಯಾಲಯಕ್ಕಿಲ್ಲ. ಹಾಗಾಗಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜಧಾನಿ ಮತ್ತದರ ರೂಪುರೇಷೆಗಳು ಬದಲಾಗಲೂಬಹುದು ಮತ್ತು ಹಳೆಯ ಕಾಯ್ದೆಯೇ ಹೊಸ ರೂಪದಲ್ಲಿ ಮತ್ತೊಮ್ಮೆ ಮಂಡನೆಯಾಗಲೂಬಹುದು.