ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ, 2012 ರ ಅಡಿಯಲ್ಲಿ, ಲೈಂಗಿಕ ದೌರ್ಜನ್ಯದ ಅಪರಾಧಕ್ಕೆ “ಚರ್ಮದಿಂದ ಚರ್ಮಕ್ಕೆ” ಸಂಪರ್ಕ ಅಗತ್ಯ ಎಂದು ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ತಳ್ಳಿಹಾಕಿದೆ.
ನ್ಯಾಯಮೂರ್ತಿ ಯು,ಯು ಲಲಿತ್ ನೇತೃತ್ವದ ಪೀಠವು, ಅಂತಹ ಪ್ರಕರಣಗಳಲ್ಲಿ ಲೈಂಗಿಕ ಉದ್ದೇಶವು ಮುಖ್ಯವಾಗಿದೆ ಮತ್ತು ಅದನ್ನು ಕಾಯಿದೆಯ ವ್ಯಾಪ್ತಿಯಿಂದ ತೆಗೆದು ಹಾಕಲಾಗದು ಎಂದು ಹೇಳಿತು. ಅಪರಾಧಿಯನ್ನು ಕಾನೂನಿನ ಜಾಲಗಳಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುವುದು ಕಾನೂನಿನ ಉದ್ದೇಶವಾಗಿರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ವರ್ಷದ ಜನವರಿಯಲ್ಲಿ, ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠವು, ಲೈಂಗಿಕ ಕಿರುಕುಳದ ಆರೋಪ ಹೊತ್ತ ಪುರುಷನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು. ನೇರವಾಗಿ “ಚರ್ಮದಿಂದ ಚರ್ಮಕ್ಕೆ” ದೈಹಿಕ ಸಂಪರ್ಕವಿಲ್ಲದೆ ಮಗುವಿನ ಸ್ತನಗಳನ್ನು ಆಕೆಯ ಬಟ್ಟೆಯ ಮೇಲೆ ಒತ್ತಿದರೆ ಅದು “ಲೈಂಗಿಕ ದೌರ್ಜನ್ಯ” ಆಗುವುದಿಲ್ಲ ಎಂದು POCSO ಕಾಯಿದೆ ವಿವರಿಸುತ್ತದೆ ಎಂದು ಬಾಂಬೆ ಹೈಕೋರ್ಟ್ ವಿವರಣೆ ನೀಡಿತ್ತು. ಈ ತೀರ್ಪು ನೀಡಿದವರು ನ್ಯಾಯಮೂರ್ತಿ ಪುಷ್ಪಾ ಎಂಬ ಮಹಿಳೆ ಎಂಬುದು ಸೋಜಿಗದ ವಿಷಯವಾಗಿತ್ತು.
ಈ ಕುರಿತು ʼಪ್ರತಿಧ್ವನಿʼಗೆ ಮಹಿಳಾ ಆಕ್ಟಿವಿಸ್ಟ್ಗಳು ನೀಡಿದ ಅಭಿಪ್ರಾಯ ಇಲ್ಲಿವೆ:
ಅಂಬಿಕಾ ಜಾಲಗಾರ, ರಾಜ್ಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಮಾತನಾಡಿ, ʼಚರ್ಮ-ಚರ್ಮ ಸಂಪರ್ಕ ಎಂಬ ವ್ಯಾಖ್ಯಾನದ ಬಾಂಬೆ ಹೈಕೋರ್ಟ್ತೀರ್ಪೇ ಅಸಹ್ಯವಾಗಿತ್ತು. ಸದ್ಯ ಅದನ್ನು ರದ್ದು ಮಾಡಿ ಸುಪ್ರೀಂಕೋರ್ಟ್ ಸ್ವಾಗತಾರ್ಹ ಕೆಲಸ ಮಾಡಿದೆ. ಯಾವುದೇ ಕಾನೂನು ಅಥವಾ ಶಾಸನವನ್ನು ನ್ಯಾಯಮೂರ್ತಿಗಳು ಮಾನವೀಕ ನೆಲೆಯಿಂದ ನೋಡಬೇಕು. ಮೇಲ್ ಸ್ತರದ ವಾತಾವರಣದಲ್ಲಿ ಬೆಳೆದ ಮಹಿಳೆಯರಿಗೆ ಕೆಳಸ್ತರದ ಮಹಿಳೆಯ ನೋವು ಅರ್ಥವಾಗುವುದಿಲ್ಲ. ಅವರು ಓದು, ಒಡನಾಟದ ಮೂಲಕ ಅದನ್ನು ಅರ್ಥ ಮಾಡಿಕೊಂಡು ತೀರ್ಪು ನೀಡಬೇಕು. ನ್ಯಾಯಾಧೀಶೆ ಪುಷ್ಪಾ ಅವರು ಮತ್ತೆ ಇಂತಹ ತಪ್ಪುಮಾಡದಿರಲಿ.
ಮಲ್ಲಿಗೆ ಸಿರಿಮನೆ, ಸಾಮಾಜಿಕ ಕಾರ್ಯಕರ್ತೆ ಮಾತನಾಡಿ, ʼಮಕ್ಕಳಿಗೆ ಕೆಟ್ಟ ಚಿತ್ರ ತೋರಿಸುವುದು, ಲೈಂಗಿಕ ವಿಡಿಯೋಗಳನ್ನು ಕಳಿಸುವುದು, ಅಂಗಚೇಷ್ಠೆ ಮಾಡುವುದು-ಇವೆಲ್ಲ ಪೊಸ್ಕೊ ಕಾಯ್ದೆ ಅಡಿ ಲೈಂಗಿಕ ಅಪರಾಧವೇ ಆಗುತ್ತದೆ. ಅಂಥದ್ದರಲ್ಲಿ ಮಗುವೊಂದರ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ ವ್ಯಕ್ತಿಯನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ್ದು ಮತ್ತು ಅದಕ್ಕೆ ಚರ್ಮ-ಚರ್ಮದ ಸಂಪರ್ಕವಿಲ್ಲ ಎಂಬ ಕಾರಣ ನೀಡಿದ್ದು ನಾಚಿಕೆಗೇಡು. ಸುಪ್ರಿಂಕೋರ್ಟ್ ಬಾಂಬೆ ಹೈಕೋರ್ಟ್ನ ನಾಗಪುರ ಪೀಠದ ತೀರ್ಪನ್ನು ರದ್ದು ಮಾಡಿದ್ದು ಸ್ವಾಗತಾರ್ಹ ಬೆಳವಣಿಗೆʼ.
ರಾಜಲಕ್ಷ್ಮಿ ಅಂಕಲಗಿ, ಹೈಕೋರ್ಟ್ ವಕೀಲೆ ಮಾತನಾಡಿ, ʼಒಬ್ಬ ಮಹಿಳೆಯಾಗಿ ನ್ಯಾಯಮೂರ್ತಿ ಪುಷ್ಪಾ ಆ ತೀರ್ಪು ನೀಡಿದ್ದು ನಿಜವಾಗಿಯೂ ಖೇದಕರ ವಿಷಯವೇ. ಇಲ್ಲಿ ಪುರುಷ ಅಥವಾ ಮಹಿಳಾ ಜಡ್ಜ್ ಎಂದು ನೋಡುವ ಬದಲು, ಅವರ ಮೈಂಡ್ಸೆಟ್ ಅಥವಾ ಮನೋಸ್ಥಿತಿ ಯಾವ ವಾತಾವರಣದಿಂದ ರೂಪುಗೊಂಡಿದೆ ಎಂಬುದೂ ಇಲ್ಲಿ ಮುಖ್ಯ. ಆದರೆ ಒಂದು ಘನತೆಯ ಹುದ್ದೆ ತಲುಪುವ ಮೊದಲು ಇಡೀ ಸಮಾಜದ ಅಂತರಂಗ ಅರಿಯಬೇಕು. ಪುಷ್ಪಾ ಅವರ ತೀರ್ಪು ಅನೂರ್ಜಿತವಾಗಲು 11 ತಿಂಗಳು ಬೇಕಾಗಿತು ಎಂಬುದು ನಮ್ಮ ನ್ಯಾಯ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿ.