ತಮಿಳಿನಲ್ಲಿ ಟಿ ಜೆ ಜ್ಞಾನವೇಲ್ ನಿರ್ಮಿಸಿ ನಿರ್ದೇಶಿಸಿದ ಜೈ ಭೀಮ್ ಚಿತ್ರ ಕಾನೂನು ಹೋರಾಟವನ್ನು ಕುರಿತ ಒಂದು ಚಿತ್ರವಾಗಿದ್ದು ನಟ ಸೂರ್ಯ ಪ್ರಧಾನ ಪಾತ್ರಧಾರಿಯಾಗಿದ್ದಾರೆ. ಇರುಳರ್ ಬುಡಕಟ್ಟು ಸಮುದಾಯದ ಸೆಂಗಣಿ ಎಂಬ ಮಹಿಳೆ ನ್ಯಾಯಕ್ಕಾಗಿ ಜೀವ ಪಣಕ್ಕಿಟ್ಟು ನ್ಯಾಯಾಂಗದ ಮೂಲಕ ಹೋರಾಡುವ ಕಥಾ ಹಂದರವನ್ನು ಚಿತ್ರ ಹೊಂದಿದೆ. ಸೆಂಗಣಿಯ ಪತಿ ರಾಜಕಣ್ಣು ಕಳ್ಳತನದ ಸುಳ್ಳು ಆರೋಪದ ಮೇಲೆ ಬಂಧನಕ್ಕೊಳಗಾಗುತ್ತಾನೆ. ರಾಜಕಣ್ಣು ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಸುದ್ದಿ ಹಬ್ಬಿಸುತ್ತಾರೆ. ವಕೀಲ ಚಂದ್ರು ನೆರವಿನಿಂದ , ಪಾತ್ರಧಾರಿ ಸೂರ್ಯ, ಸೆಂಗಣಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದರ ಮೂಲಕ ಕತೆ ಅನಾವರಣಗೊಳ್ಳುತ್ತದೆ.
ಈ ಚಿತ್ರ ನೈಜ ಘಟನೆಗಳನ್ನು ಆಧರಿಸಿದ್ದು ಇದು 1993ರಲ್ಲಿ ವೃದ್ಧಾಚಲಂ ಎಂಬ ಗ್ರಾಮದಲ್ಲಿ ನಡೆಯುತ್ತದೆ. ನ್ಯಾ ಕೆ ಚಂದ್ರು ವಕೀಲರಾಗಿದ್ದ ಸಂದರ್ಭದಲ್ಲಿ ಈ ಮೊಕದ್ದಮೆಯನ್ನು ವಹಿಸಿಕೊಳ್ಳುತ್ತಾರೆ. ಮದ್ರಾಸ್ ಹೈಕೋರ್ಟ್ನಿಂದ ನಿವೃತ್ತರಾಗಿರುವ ನ್ಯಾ ಚಂದ್ರು ಈಗ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ನ್ಯಾಯಾಂಗ ಸೇವಾವಧಿಯಲ್ಲಿ 96 ಸಾವಿರ ಮೊಕದ್ದಮೆಗಳನ್ನು ವಿಲೇವಾರಿ ಮಾಡಿರುವ ನ್ಯಾ ಚಂದ್ರು , ತಮ್ಮ ಈ ಸಾಧನೆಗೆ ನಿರ್ದಿಷ್ಟ ಯೋಜನೆ, ಸಂಯೋಜನೆ ಮತ್ತು ಪ್ರಕರಣಗಳ ಸೂಕ್ತ ವರ್ಗೀಕರಣವೇ ಕಾರಣವಾಗಿತ್ತು ಎಂದು ಹೇಳುತ್ತಾರೆ. ನ್ಯಾಯಾಧೀಶರಾಗಿ ಸರಾಸರಿ ದಿನಕ್ಕೆ 75 ಮೊಕದ್ದಮೆಗಳನ್ನು ವಿಚಾರಣೆಗೊಳಪಡಿಸಿದ್ದ ನ್ಯಾ ಚಂದ್ರು, ದ ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿರುವ ತಮ್ಮ ಸಂದರ್ಶನದಲ್ಲಿ ಜೈ ಭೀಮ್ ಚಿತ್ರವನ್ನು ಕುರಿತ ಅವರ ಅನಿಸಿಕೆ ಮತ್ತು ಸತ್ಯ-ನ್ಯಾಯದ ಪರಿಪಾಲನೆಯ ಬಗ್ಗೆ ಬೆಳಕು ಚೆಲ್ಲುತ್ತಾರೆ.
• ಈ ಚಿತ್ರದ ಬಗ್ಗೆ ನೀವು ಯಾವ ರೀತಿಯ ಅಭಿಪ್ರಾಯಗಳನ್ನು ಕೇಳುತ್ತಿರುವಿರಿ ?
ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ವಿಭಿನ್ನ ಆಯಾಮಗಳಲ್ಲಿ ನಡೆಯುತ್ತಿದೆ. ಕೆಲವರು ವಿಭಿನ್ನ ಕಾರಣಗಳಿಗಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಪಾತ್ರಧಾರಿಯು ದಲಿತ ಅಥವಾ ಆದಿವಾಸಿ ಅಲ್ಲ ಎಂಬ ಕಾರಣಕ್ಕೆ ಅಥವಾ ಹೋರಾಟವನ್ನು ಸರಳೀಕರಿಸಿರುವ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ. ಇವೆಲ್ಲವೂ ದುರ್ಬಲ ವಾದಗಳು. ಇಲ್ಲಿ ಮುಖ್ಯವಾದ ಸಂಗತಿ ಎಂದರೆ ಬಿಡುಗಡೆಯಾಗುವ ಮುನ್ನವೇ ಚಿತ್ರ ನಿರ್ಮಾಪಕರು ಇರುಳರ್ ಸಂಘಟನೆಗೆ ಒಂದು ಕೋಟಿ ರೂ ದೇಣಿಗೆ ನೀಡಿದ್ದಾರೆ. ಎರಡನೆಯ ವಿಚಾರ ಎಂದರೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಈ ಚಿತ್ರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ ಈ ಚಿತ್ರ ತಮ್ಮನ್ನು ವಿಚಲಿತಗೊಳಿಸಿದೆ ಎಂದು ಹೇಳಿದ್ದಾರೆ. ಮೇಲಾಗಿ ಈ ಚಿತ್ರ ಯುವ ಜನತೆಯಲ್ಲಿ ಆಸಕ್ತಿ ಮೂಡಿಸಿದೆ. ಈ ರೀತಿ ಘಟನೆಗಳು ನಡೆಯುತ್ತಿರುವುದು ತಮಗೆ ತಿಳಿದೇ ಇರಲಿಲ್ಲ ಎಂದು ಹಲವರು ಹೇಳಿದ್ದಾರೆ. ಹಾಗಾಗಿ ಈ ಚಿತ್ರ ಒಂದು ರೀತಿಯ ಒಳಗೊಳ್ಳುವಿಕೆಯೊಂದಿಗೇ ವಿಶಿಷ್ಟವಾಗಿಯೂ ಮೂಡಿಬಂದಿದೆ. ಇದು ಮುಂದಿನ ದಿನಗಳಲ್ಲಿ ಆಡಳಿತ ನೀತಿಗಳನ್ನು ರೂಪಿಸಲು ನೆರವಾಗುತ್ತದೆ.
• ನ್ಯಾಯಾಂಗ ರಾಷ್ಟ್ರಮಟ್ಟದಲ್ಲಿ ಎದುರಿಸುತ್ತಿರುವ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಇದು ಬಿಂಬಿಸುವುದೇ ?
ನ್ಯಾಯಾಂಗದ ಬಗ್ಗೆ ಈ ಚಿತ್ರವು ಜನರಲ್ಲಿ ಸುಳ್ಳು ಭರವಸೆಯನ್ನು ಮೂಡಿಸುತ್ತಿದೆ ಎಂಬ ಅಭಿಪ್ರಾಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿದೆ. ನನಗೆ ಹಾಗೆನಿಸುವುದಿಲ್ಲ. ಒಬ್ಬ ವ್ಯಕ್ತಿಗೆ ಬಾಯಾರಿಕೆ ಆಗಿದ್ದರೆ ಕೂಡಲೇ ಆತನಿಗೆ ಕುಡಿಯಲು ನೀರು ಕೊಡುತ್ತೀರಿ. ಬದಲಾಗಿ ಹೇರಳವಾಗಿ ನೀರು ಲಭ್ಯವಾಗುವಂತಹ ಯೋಜನೆಯೊಂದು ಸಿದ್ಧವಾಗುತ್ತಿದೆ ಎಂದು ಹೇಳುವುದಿಲ್ಲ. ಸದ್ಯದ ಸಮಸ್ಯೆಗಳ ಬಗ್ಗೆ ತಕ್ಷಣ ಗಮನ ನೀಡುವುದು ಮುಖ್ಯವಾಗುತ್ತದೆ.
• ಚಿತ್ರದಲ್ಲಿ ಸೆಂಗಣಿಯೊಡನೆ ಒಂದು ಎಡಪಕ್ಷವೂ ಹೋರಾಡುತ್ತಿರುವಂತೆ ತೋರಿಸಲಾಗಿದೆ. ಅಂದರೆ ತಳಮಟ್ಟದಲ್ಲಿ ಅನ್ಯ ಪಕ್ಷಗಳು ಸಕ್ರಿಯವಾಗಿಲ್ಲ ಎಂದು ಅರ್ಥವೇ ?
ನಾನು ಹಾಗೆ ಭಾವಿಸುವುದಿಲ್ಲ. ಇದು ಒಂದು ಪಕ್ಷದ ವಿಚಾರ ಅಲ್ಲ. ಬಹುಶಃ ಎಡಪಕ್ಷಗಳು ತಮ್ಮ ಉದ್ದೇಶಿತ ಗುರಿ ಸಾಧಿಸಲು ಹೆಚ್ಚು ಬದ್ಧತೆಯನ್ನು ಹೊಂದಿರುವುದರಿಂದ ಅವು ಎದ್ದು ಕಾಣುತ್ತವೆ. ಮುಖ್ಯವಾಹಿನಿಯ ಪಕ್ಷಗಳು ಮತ್ತು ಅವುಗಳ ನಾಯಕರು ಸಹ ಹೋರಾಡಿದ್ದಾರೆ. ಒಂದು ಸಮಗ್ರ ಅಧ್ಯಯನ ಇಲ್ಲದೆ ಹೋದರೆ ಇದನ್ನು ಅಳೆಯಲು ಸಾಧ್ಯವಾಗುವುದಿಲ್ಲ.,,, ಇಲ್ಲಿ ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ನನಗೆ ಎನಿಸುವುದಿಲ್ಲ.
• ಚಿತ್ರಹಿಂಸೆ/ಕಿರುಕುಳ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಶಿಕ್ಷೆಗೊಳಗಾಗುವುದು ಅಪರೂಪವಾಗಿರುವುದು ಏಕೆ ?
ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 4ರ ಅನ್ವಯ ಒಂದು ಅಪರಾಧದಲ್ಲಿ ಅಧಿಕಾರಿಯೂ ಭಾಗಿದಾರನಾಗಿದ್ದರೆ, ಅವರ ವಿರುದ್ಧ ಕಾನೂನು ಮೊಕದ್ದಮೆ ಜಾರಿಯಾಗಬೇಕು. ವಾಸ್ತವವಾಗಿ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ ಚಾರ್ಜ್ಷೀಟ್ ದಾಖಲಿಸುವವರು ಅವರೇ ಆಗಿರುತ್ತಾರೆ. ಆದಾಗ್ಯೂ ಕಾನೂನು ತಿದ್ದುಪಡಿಯ ಪರಿಣಾಮ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ. ಹಾಗೆಂದ ಮಾತ್ರಕ್ಕೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಮೊಕದ್ದಮೆ ಹೂಡಲು ಅವಕಾಶ ನೀಡುವಂತಹ ಐಪಿಸಿ ಅಪರಾಧವೇ ಇಲ್ಲ. ಪೊಲೀಸರ ವಿರುದ್ಧ ಕಾನೂನು ಕಾರ್ಯಾಚರಣೆ ಒಂದು ಅಪವಾದದಂತೆ ನಡೆಯುತ್ತದೆಯಷ್ಟೆ.
• ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಪೊಲೀಸ್ ಕಿರುಕುಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೀವು ಸೂಚಿಸಬಹುದಾದ ಪರಿಹಾರವೇನು ?
ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ವಾರ್ಷಿಕ ಗೋಪ್ಯ ಆಂತರಿಕ ವರದಿಯನ್ನು ವರ್ಷಕ್ಕೊಮ್ಮೆ ಸಲ್ಲಿಸುವ ಪದ್ಧತಿ ಇದೆ. ಈ ವರದಿಯಲ್ಲಿ ಅಧಿಕಾರಿಗಳ ನಡತೆ, ವರ್ತನೆ ಮತ್ತು ಕಾರ್ಯಕ್ಷಮತೆಯನ್ನು ಪರಾಮರ್ಶಿಸಲಾಗುತ್ತದೆ. ಈ ವರದಿಯ ಆರನೆಯ ಪ್ರಶ್ನೆಯಲ್ಲಿ ಪ್ರತಿಯೊಬ್ಬ ಅಧಿಕಾರಿಯ, ಎಸ್ಸಿ/ಎಸ್ಟಿ ಸಮುದಾಯದ ಬಗ್ಗೆ ಆತನ/ಆಕೆಯ ಧೋರಣೆಯನ್ನು ಪರಾಮರ್ಶಿಸಲಾಗುತ್ತದೆ. ಒಂದು ವೇಳೆ ವರದಿಯಲ್ಲಿ ವ್ಯತಿರಿಕ್ತ ಅಭಿಪ್ರಾಯ ಇದ್ದಲ್ಲಿ ಅಂತಹ ಅಧಿಕಾರಿಗೆ ಬಡ್ತಿ ದೊರೆಯುವುದಿಲ್ಲ. ಹಾಗಾಗಿ ರಾಷ್ಟ್ರ ಮಟ್ಟದಲ್ಲೂ ಸಹ ಅಧಿಕಾರಿಗಳ ನಡತೆಯನ್ನು ಗಮನಿಸುವ ನಿಯಮ ಜಾರಿಯಲ್ಲಿದೆ. ಆದರೆ ಅಂತಹ ಒಂದು ನಿಯಮ ಕಾನ್ಸ್ಟೇಬಲ್ ಮತ್ತು ಇನ್ಸ್ಪೆಕ್ಟರ್ಗಳಿಗೆ ಎಲ್ಲಿದೆ ? ಅಷ್ಟೇ ಅಲ್ಲ, ಒಂದು ವರ್ಗಾಧಾರಿತ ಸಮಾಜದಲ್ಲಿ ನ್ಯಾಯವೂ ಸಹ ವರ್ಗವನ್ನೇ ಆಧರಿಸಿರುತ್ತದೆ. ಉದಾಹರಣೆಗೆ , ದ್ವಿಚಕ್ರ ವಾಹನಕ್ಕಿಂತಲೂ, ನಾಲ್ಕು ಚಕ್ರದ ವಾಹನದಲ್ಲಿ ಓಡಾಡುವಾಗ ನೀವು ಸಂಚಾರ ನಿಯಮ ಉಲ್ಲಂಘಿಸುವುದು ಸುಲಭ.
• ಕೆಳಹಂತದ ನ್ಯಾಯಾಲಯಗಳ ಮ್ಯಾಜಿಸ್ಟ್ರೇಟ್ಗಳು ವಿಚಾರಣಾ ಪೂರ್ವ ಪ್ರಕ್ರಿಯೆಯಲ್ಲೇ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ವಿಚಾರವನ್ನು ಸರಿಪಡಿಸುವುದು ಹೇಗೆ ?
ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳು ಹೇರಳವಾಗಿವೆ ಆದರೆ ಇದರ ಬಗ್ಗೆ ಜಾಗೃತಿ ಮೂಡಿಲ್ಲ. ಮೇಲಾಗಿ ಇಂತಹ ನಿರ್ಧಾರಗಳನ್ನು ಅನನುಭವಿ ಮ್ಯಾಜಿಸ್ಟ್ರೇಟರುಗಳು ಅಥವಾ ಪಟ್ಟಭದ್ರ ಹಿತಾಸಕ್ತಿ ಇರುವವರು ಕೈಗೊಳ್ಳುತ್ತಾರೆ. ಸಂತಾಕುಲಂ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಒಬ್ಬರು ಇಬ್ಬರು ಆರೋಪಿಗಳನ್ನು ಯಾಂತ್ರಿಕವಾಗಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು. ಈ ಕುರಿತು ನಾನು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದೆ ಆದರೆ ಪ್ರತಿಕ್ರಿಯೆಯೇ ಬರಲಿಲ್ಲ.
• ಕೆಲವು ಆದಿವಾಸಿ ಸಮುದಾಯಗಳನ್ನು ಕ್ರಿಮಿನಲ್ಗಳು ಎಂದು ದಾಖಲಿಸುವುದು ಇಂದಿಗೂ ನಡೆಯುತ್ತಿದ್ದು, ತರಬೇತಿಯ ಸಂದರ್ಭದಲ್ಲಿ ಯುವ ಪೊಲೀಸ್ ಸಿಬ್ಬಂದಿಗೆ ಮೌಖಿಕವಾಗಿ ಈ ಸಂದೇಶ ನೀಡಲಾಗುತ್ತಿದೆ ಎನ್ನಲಾಗುತ್ತದೆ. ಈ ವಿಷಯವನ್ನು ಹೇಗೆ ನಿಭಾಯಿಸುವುದು ?
ಹೈದರಾಬಾದ್ನಲ್ಲಿ ಐಪಿಎಸ್ ಅಧಿಕಾರಿಗಳ ತರಬೇತಿಯ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಸಂವೇದನಾಶೀಲತೆಯನ್ನು ಮೂಡಿಸಲಾಗುತ್ತದೆ. ಆದರೆ ಹೆಡ್ ಕಾನ್ಸ್ಟೇಬಲ್ಗಳ ವಿಚಾರ ಏನು ? ಅವರು ಆರೋಪಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿಯೇ ಠಾಣೆಗೆ ಕರೆತರುತ್ತಾರೆ. ಎಷ್ಟೇ ಸಂವೇದೀಕರಣ ಮಾಡಿದರೂ, ಸೂಕ್ಷ್ಮಗ್ರಾಹಿಯನ್ನಾಗಿ ಮಾಡಲು ಪ್ರಯತ್ನಿಸಿದರೂ ಈ ಸಮಸ್ಯೆ ಬಗೆಹರಿಯುತ್ತಿಲ್ಲ. ಆದರೆ ಇಡೀ ಪ್ರಕ್ರಿಯೆಯಲ್ಲಿ ಒಳಗೊಳ್ಳುವಿಕೆಯ ನೀತಿ ಅನುಸರಿಸಿದರೆ ಇದು ಸರಿಹೋಗಬಹುದು. ಶಿಕ್ಷಣ, ಉದ್ಯೋಗ ಮತ್ತು ವಸತಿ ಸೌಲಭ್ಯ ಒದಗಿಸುವುದರೊಂದಿಗೆ ನಾಗರಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆಯ ಮೂಲಕ ಇದನ್ನು ಸರಿಪಡಿಸಬಹುದು.
• ಅನೇಕ ವಕೀಲರು ಮಾನವ ಹಕ್ಕು ಮೊಕದ್ದಮೆಗಳನ್ನು ಕೈಗೆತ್ತಿಕೊಳ್ಳಲು, ಅದು ಹೆಚ್ಚಿನ ವರಮಾನ ತರುವಂತಹುದಲ್ಲ ಎಂಬ ಕಾರಣಕ್ಕಾಗಿಯೇ, ಹಿಂಜರಿಯುತ್ತಾರೆ. ಇದನ್ನು ಸರಿಪಡಿಸುವುದು ಹೇಗೆ ?
ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಇಂತಹ ನೊಂದ ಜನರನ್ನು ಬೆಂಬಲಿಸುವಂತಹ ಬದ್ಧತೆಯುಳ್ಳ ಪ್ರಬಲ ಸಂಘಟನೆಗಳು ಇರುವುದು ಅತ್ಯವಶ್ಯಕ. ಅದರಲ್ಲೂ ಅಸಂಘಟಿತ ಸಮುದಾಯಗಳಿಗೆ ಇಂತಹ ಕಾನೂನು ನೆರವು ಬೇಕೇಬೇಕಾಗುತ್ತದೆ. ಇಂತಹ ಸಂಘಟನೆಗಳು ಹಲವು ಮೂಲಗಳಿಂದ ದೇಣಿಗೆ ಪಡೆಯಲು ಅವಕಾಶಗಳನ್ನೂ ನೀಡಬೇಕು. ಈ ಚಿತ್ರದಲ್ಲಿ ಇಂತಹ ಸಂಘಟನೆಗಳ ಮತ್ತು ವ್ಯಕ್ತಿಗಳ ಮಹತ್ವವನ್ನು ಸಾರಿ ಹೇಳುತ್ತದೆಯೇ ಹೊರತು, ವಕೀಲನಾಗಿ ಒಬ್ಬ ವ್ಯಕ್ತಿಯ ಹೀರೋಯಿಸಂ ಬಿಂಬಿಸುವುದಿಲ್ಲ.
ಅನುವಾದ : ನಾ ದಿವಾಕರ
( ದ ಇಂಡಿಯನ್ ಎಕ್ಸ್ಪ್ರೆಸ್ – ಸಿ ಪಿ ಬಾಲಸುಬ್ರಮಣ್ಯಂ)