ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಕಳೆದ ಎರಡು ದಿನದಿಂದ ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ. ಇನ್ನು ಎರಡು ದಿನ ಇದೇ ವಾತಾವರಣ ಮುಂದುವರೆಯೋದಾಗಿ ಹವಮಾನ ಇಲಾಖೆ ಎಚ್ಚರಿಸಿದೆ. ಇದರ ನಡುವೆ ಅನಾರೋಗ್ಯ ಪೀಡಿತರಿಗೆ ಆತಂಕ ಶುರುವಾಗಿದೆ..
ಇಂದೂ ಸಿಲಿಕಾನ್ ಸಿಟಿಯಲ್ಲಿ ಮುಂದುವರೆದ ಮಂಜಿನ ವಾತಾವರಣ !
ಬೆಂಗಳೂರಿನ ವಾತವಾರಣದಲ್ಲಿ ತೇಲಿ ಹೋಗುತ್ತಿರೋ ಮಂಜು. ಮುತ್ತು ಉದುರಿದಂತೆ ಬೀಳುತ್ತಿರುವ ಸೋನೆ ಮಳೆ. ಚುಮು ಚುಮು ಚಳಿಗೆ ಮುದುಡಿ ಓಡಾಡುತ್ತಿರುವ ಜನ. ಅಬ್ಬಬ್ಬಾ ಇದೇನಿದು ಮಂಜಿನ ನಗರಿಯೇ ಎಂದೆನಿಸಿದರೂ ಅನಿಸಬಹುದು. ಯಾಕೆಂದರೆ ಕಳೆದರಡು ದಿನಗಳಿಂದ ಬೆಂಗಳೂರು ಸಂಪೂರ್ಣವಾಗಿ ಮಂಜಿನ ಮಡಿಲಲ್ಲಿದೆ. ಹೌದು.. ಕಳೆದ ಎರಡು ದಿನಗಳಿಂದ ಸಿಲಿಕಾನ್ ಸಿಟಿ ಬೆಂಗಳೂರು ಊಟಿಯಂತೆ ಕಾಣಿಸಿಕೊಳ್ತಿದೆ. ಇದಕ್ಕೆ ಕಾರಣ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತ. ಇದರ ಪರಿಣಾಮ ಚೆನೈ ನಗರದಲ್ಲಿ ಧಾರಾಕಾಳ ಮಳೆಯಾಗಿ ಸಾಕಷ್ಟು ಹಾನಿಯಾಗಿದೆ. ಬೆಂಗಳೂರಿನಲ್ಲಿ ಕೂಡ ಇದರ ಪ್ರಭಾವದಿಂದ ಕಳೆದೆರಡು ದಿನಗಳಿಂದ ಸತತ ಮಳೆಯಾಗುತ್ತಿದೆ. ಒಮ್ಮೆಮ್ಮೊ ಜೋರು ಮಳೆ ಕಾಣಿಸಿಕೊಂಡರೆ ದಿನವಿಡಿ ಜಿಟಿಜಿಟಿ ಮಳೆಯಾಗುತ್ತಿದೆ.
ಬೆಂಗಳೂರಿನಲ್ಲಿ ಕನಿಷ್ಟ ಉಷ್ಣಾಂಶ 16 ಡಿಗ್ರಿ.. ಚಳಿ ಮಳೆಗೆ ಅನಾರೋಗ್ಯ ಪೀಡಿತರೇ ಎಚ್ಚರ!
ಕೊರೋನಾ ಕಡಿಮೆಯಾಗಿ ಮಳೆ ಶುರುವಾಗ್ತಿದ್ದಂತೆ ಡೆಂಗ್ಯೂ,ಮಲೇರಿಯಾ ದಂತಹ ರೋಗಗಳು ಹೆಚ್ಚಾಗುವುದು ಸಾಮಾನ್ಯ. ಇದೀಗ ಉಸಿರಾಟಕ್ಕೆ ಸಂಬಂದಿಸಿದ ಕಾಯಿಲೆಗಳು ಉಲ್ಬಣವಾಗ್ತಿದೆ. ಚಳಿಮಳೆಗೆ ವಿಷಮಶೀತ ಜ್ವರ, ನೆಗಡಿಯಂತಹ ಖಾಯಿಲೆ ಹೆಚ್ಚಾಗುತ್ತದೆ. ಅಲ್ಲದೇ ಬೆಂಗಳೂರಿನ ಉಷ್ಣಾಂಶ ಕನಿಷ್ಟ 16 ಡಿಗ್ರಿಗೆ ಇಳಿದಿರುವುದರಿಂದ ಟಿಬಿ ರೋಗಿಗಳಿಗೂ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಆದಷ್ಟು ಹೊರಗಡೆ ಓಡಾಡದೇ ಬೆಚ್ಚಗಿನ ಪ್ರದೇಶದಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಇಂತಹ ವಾತವರಣದಲ್ಲಿ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು. ಅನಗತ್ಯವಾಗಿ ಮಳೆಯಲ್ಲಿ ನೆನೆಯದಂತೆ ವೈದ್ಯರು ಎಚ್ಚರಿಸಿದ್ದಾರೆ. ಇದೇ ಕಾರಣದಿಂದ ಬಿಬಿಎಂಪಿ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ನಗರದ 300 ಆಸ್ಪತ್ರೆಗಳಿಗೆ ಹೊರ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಎಚ್ಚರಿಕೆ ನೀಡಿದೆ.
ಬೆಂಗಳೂರಲ್ಲಿ ಇನ್ನೂ 3 ದಿನಗಳ ಕಾಲ ಮಳೆ ಇದೇ ಮಾದರಿಯಲ್ಲಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಹವಮಾನ ಇಲಾಖೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ. ಜಿಟಿಜಿಟಿ ಮಳೆಯ ಜೊತೆಗೆ ಚಳಿಯ ವಾತಾವರಣವೂ ಮುಂದುವರೆಯಲಿದೆ. ಬಿಸಿಲ ಬೇಗೆಯಿಂದ ಹುಬ್ಬೇರಿಸುತ್ತಿದ್ದ ಮಂದಿಗೆ ಈ ವಾತಾವರಣ ತಂಪೆರದರೆ, ಉಸಿರಾಟ ಸಂಬಂದಿ ಕಾಯಿಲೆ ಇರುವವರಿಗೆ ಮುಸುಕಿದ ಮಂಜಿನಿಂದ ಉಸಿರು ಕಟ್ಟಿದಂತಾಗುತ್ತಿದೆ.