ಇತ್ತೀಚೆಗೆ ನಡೆದ ಸಿಂದಗಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರೂ ಕಾಂಗ್ರೆಸ್ ಮಾತ್ರ ಒಟ್ಟಾರೆ ಬೈ ಎಲೆಕ್ಷನ್‌ನಲ್ಲಿ ಮೇಲುಗೈ ಸಾಧಿಸಿದೆ. ಸಿಎಂ ತವರಲ್ಲೇ ಜಯಭೇರಿ ಬಾರಿಸುವ ಮೂಲಕ ಬಿಜೆಪಿಗೆ ಟಕ್ಕರ್ ಕೊಟ್ಟಿದೆ. ಈ ನಿಟ್ಟಿನಲ್ಲಿ ಎರಡು ಕ್ಷೇತ್ರಗಳ ಸೋಲು ಗೆಲುವಿನ ಪರಾಮರ್ಶೆಯಲ್ಲಿ ಕೈ ನಾಯಕರು ತೊಡಗಿದ್ದಾರೆ. ಈ ವೇಳೆ ತಮ್ಮ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷರು ಗೆಲುವಿನ ಸಂದೇಶವೊಂದನ್ನ ರವಾನಿಸಿದ್ದಾರೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೇವು-ಬೆಲ್ಲದ ಸ್ವಾದ ಸಿಕ್ಕಿದೆ. ಆದ್ರೂ ಕೈ ನಾಯಕರಿಗೆ ಮಿನಿ ಸಮರದಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು ಸಿಕ್ಕಿದೆ. ಹೇಗಂದ್ರೆ, ಸಿಂದಗಿಯಲ್ಲಿ ಕಾಂಗ್ರೆಸ್ ಸೋತಿರಬಹುದು. ಆದ್ರೆ, ಸಿಎಂ ತವರಲ್ಲೇ ಗೆದ್ದಿರೋದು ಒಂದು ಕೈ ಮೇಲಾಗುವಂತೆ ಮಾಡಿದೆ. ಈ ಮೂಲಕ ಹಸ್ತ ನಾಯಕರು ಕೇಸರಿ ಪಾಳಯ ಮತ್ತು ದಳಪತಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮಧ್ಯೆ ಹಾನಗಲ್‌ನಲ್ಲಿ ಶ್ರೀನಿವಾಸ್ ಮಾನೆ ಗೆಲ್ಲೋಕೆ ಕಾರಣವೇನು ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿವರಿಸಿದ್ದಾರೆ. ಅಲ್ಲದೇ ತಮ್ಮ ಕಾರ್ಯಕರ್ತರಿಗೆ ಗೆಲುವಿನ ಕ್ರೆಡಿಟ್ ಅನ್ನು ನೀಡಿದ್ದಾರೆ.

ಇನ್ನು ಹಾನಗಲ್ ಗೆಲುವಿನಲ್ಲಿ ಕಾಂಗ್ರೆಸ್ ನಾಯಕರು ತೇಲುತ್ತಿದ್ದಾರೆ. ಈ ನಡುವೆ ರಾಜ್ಯ ಕಾಂಗ್ರೆಸ್ ಕಪ್ತಾನನ ಈ ಮಾತು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ಹುಟ್ಟಿಸಿದೆ. ಜೊತೆಗೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಒಗ್ಗಟ್ಟಿನ ಹೋರಾಟ ನಡೆಸಲು ಕೈ ಸಜ್ಜಾಗುತ್ತಿರೋ ಸಂದೇಶ ರವಾನಿಸಿದೆ.
ಲೀಡರ್ ಗೆಲುವಲ್ಲ, ಕ್ಯಾಡರ್ ಗೆಲುವು!
1. ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಮಾಸ್ ಲೀಡರ್ ಎಂದು ಡಿಕೆಶಿಗೂ ಗೊತ್ತು
2. ಹೀಗಾಗಿ ಗೆಲುವಿನ ಕ್ರೆಡಿಟ್ ಡಿಕೆ ಶಿವಕುಮಾರ್ಗೋ? ಅಥವಾ ಸಿದ್ದರಾಮಯ್ಯರಿಗೋ?
3. ನಾಯಕರಿಗೆ ಕ್ರೆಡಿಟ್ ವಿಚಾರ ಚರ್ಚೆಯಾದರೆ, ಸಿದ್ದರಾಮಯ್ಯರಿಗೆ ಗೆಲುವಿನ ಕ್ರೆಡಿಟ್

4. ಹೀಗಾಗಿ ಹಾನಗಲ್ ಗೆಲುವಿನ ಕ್ರೆಡಿಟ್ ಕಾರ್ಯಕರ್ತರಿಗೆ ಕೊಟ್ಟು ಖುಷಿ ಪಡಿಸಿದ ಡಿಕೆಶಿ
5. ಇದೇ ವೇಳೆ ಸಿದ್ದರಾಮಯ್ಯ ಒಬ್ಬರಿಂದಲೇ ಗೆಲುವಲ್ಲ ಎಂಬ ಪರೋಕ್ಷ ಸಂದೇಶ ರವಾನೆ
6. ಈ ಮೂಲಕ ಹಾನಗಲ್ ಗೆಲುವಿನ ಸಂಪೂರ್ಣ ಶ್ರೇಯಸ್ಸು ಸಿದ್ದುಗೆ ಹೋಗುವುದಕ್ಕೆ ತಡೆ
ರಾಜ್ಯದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಮಾಸ್ ಲೀಡರ್ ಎಂದು ಡಿಕೆಶಿಗೂ ಗೊತ್ತು. ಹೀಗಾಗಿ ಗೆಲುವಿನ ಕ್ರೆಡಿಟ್ ಡಿ.ಕೆ ಶಿವಕುಮಾರ್ಗೋ? ಅಥವಾ ಸಿದ್ದರಾಮಯ್ಯರಿಗೋ? ಎಂಬ ಚರ್ಚೆ ಕೂಡಾ ಶುರುವಾಗಿತ್ತು. ಹಾನಗಲ್ ಗೆಲುವಿನ ಕ್ರೆಡಿಟ್ ನಾಯಕರಿಗೆ ಅಂತಾ ಚರ್ಚೆಯಾದರೆ, ಸಿದ್ದರಾಮಯ್ಯರಿಗೆ ಜಯದ ಕ್ರೆಡಿಟ್ ದಕ್ಕಬೇಕಿತ್ತು. ಹೀಗಾಗಿ ಹಾನಗಲ್ ಗೆಲುವಿನ ಕ್ರೆಡಿಟ್ ಕಾರ್ಯಕರ್ತರಿಗೆ ಕೊಟ್ಟು ಡಿ.ಕೆ.ಶಿವಕುಮಾರ್ ಅವರನ್ನ ಖುಷಿಪಡಿಸಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಒಬ್ಬರಿಂದಲೇ ಗೆಲುವಲ್ಲ ಎಂಬ ಪರೋಕ್ಷ ಸಂದೇಶವನ್ನೂ ಡಿಕೆಶಿ ರವಾನಿಸಿದಂತಿದೆ. ಈ ಮೂಲಕ ಹಾನಗಲ್ ಗೆಲುವಿನ ಸಂಪೂರ್ಣ ಶ್ರೇಯಸ್ಸು ಸಿದ್ದುಗೆ ಹೋಗುವುದನ್ನ ತಪ್ಪಿಸಲು ಕೆಪಿಸಿಸಿ ಅಧ್ಯಕ್ಷರು ಈ ನಡೆಯನ್ನ ಅನುಸರಿಸಿದ್ದಾರೆ ಎನ್ನಲಾಗಿದೆ.
ಇನ್ನು ಸಿಂದಗಿಯಲ್ಲಿ ಸೋತರೂ ಕಾಂಗ್ರೆಸ್‌ಗೆ ಎರಡನೇ ಸ್ಥಾನಕ್ಕೆ ಏರಿರೋ ಸಮಾಧಾನವಿದೆ. ಅಲ್ಲದೇ ಮಿನಿ ಸಮರದ ಫಲಿತಾಂಶದಿಂದ ಕೈ ನಾಯಕರಿಗೆ ಸ್ಪಷ್ಟ ಸಂದೇಶವೂ ಸಿಕ್ಕಂತಾಗಿದೆ. ಅದೇನಂದ್ರೆ ಎಲ್ಲಾ ನಾಯಕರು ಒಂದಾದ್ರೆ ಆಡಳಿತಾರೂಢ ಬಿಜೆಪಿಗೆ ಪೈಪೋಟಿ ನೀಡಬಹುದು. ಜೊತೆಗೆ ಮುಂದಿನ ಚುನಾವಣೆಗೂ ಒಟ್ಟಾಗಿ ಹೋದ್ರೆ ಅಧಿಕಾರ ಸಿಗಬಹುದೆಂಬ ಲೆಕ್ಕಾಚಾರ ಕೈ ಪಾಳಯದ್ದಾಗಿದೆ.
ಅದೇನೆ ಇರಲಿ ಗೆಲುವಿನ ಕ್ರೆಡಿಟ್ ವಿಚಾರದಲ್ಲೂ ಕೈ ಪಾಳಯದಲ್ಲಿ ಕೆಪಿಸಿಸಿ ಅಧ್ಯಕ್ಷರು ತೋರಿರೋ ಜಾಣ ನಡೆ ಮುಂದಿನ ದಿನದಲ್ಲಿ ಪಕ್ಷಕ್ಕೆ ಪ್ಲಸ್ ಆಗುತ್ತಾ? ಇಲ್ಲ ಹೊಡೆತ ಕೊಡುತ್ತಾ? ಎಂದು ಕಾದು ನೋಡಬೇಕಿದೆ.






