ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗದ (Central Water Commission) ಅನುಮತಿ ಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಕಾಂಗ್ರೆಸ್ ಇತ್ತೀಚೆಗೆ ಬಿಜೆಪಿಯ ಆಡಳಿತ ವೈಫಲ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದು, ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪಿಸಿ ಪಾದ ಯಾತ್ರೆ ನಡೆಸಿ ಬಿಜೆಪಿಗೆ ಮುಖಭಂಗ ಉಂಟುಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಇದಕ್ಕೆ ಉತ್ತರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಈ ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗದ ಅನುಮತಿ ಅಗತ್ಯ ಎಂದು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಇದರ ಬೆನ್ನಲ್ಲೇ ಈ ಸಿಎಂ ಹೇಳಿಕೆ ಉಲ್ಲೇಖಿಸಿ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಗಳನ್ನು ಮಾಡಿದೆ. ಮೊದಲ ಟ್ವೀಟ್ ನಲ್ಲಿ ‘ಮೇಕೆದಾಟು ಯೋಜನೆ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಸರ್ಕಾರ ಕಾನೂನು ಹೋರಾಟ ಮಾಡುತ್ತಿದೆ. ಯೋಜನೆ ಜಾರಿಗೆ ಕೇಂದ್ರ ಜಲ ಆಯೋಗದ ಅನುಮತಿ ಬೇಕಾಗಿದೆ. ಶೀಘ್ರವೇ ಅನುಮತಿ ಲಭಿಸುವ ವಿಶ್ವಾಸವಿದೆ. ಅನುಮತಿ ಸಿಗುತ್ತಿದ್ದಂತೆಯೇ ಯೋಜನೆ ಜಾರಿಗೊಳಿಸುತ್ತೇವೆ’ ಎಂದು ಹೇಳಲಾಗಿದೆ.
ಇದಾದ ಬಳಿಕ ಮತ್ತೆ ಟ್ವೀಟ್ ಟಾಂಗ್ ಮುಂದುವರೆಸಿದ ಬಿಜೆಪಿ, ‘ಮೇಕೆದಾಟು ಯೋಜನೆ ಡಿಪಿಆರ್ ತಯಾರಿಸಲು ಕಾಂಗ್ರೆಸ್ ಸರ್ಕಾರ ಹಲವು ವರ್ಷಗಳನ್ನೇ ತೆಗೆದುಕೊಂಡಿತು. ಆಗಲೇ ತ್ವರಿತವಾಗಿ ಡಿಪಿಆರ್ ಸಿದ್ಧಪಡಿಸಿ ಯೋಜನೆಯನ್ನು ಜಾರಿ ಮಾಡುವ ಬದ್ಧತೆ ಏಕೆ ತೋರಲಿಲ್ಲ..?’ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ. ‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಯನ್ನು ಏಕೆ ಜಾರಿಗೊಳಿಸಲಿಲ್ಲ..? ಮೇಕೆದಾಟು ಯೋಜನೆಯನ್ನು ಜಾರಿಗೊಳಿಸುವಂತೆ ಪಾದಯಾತ್ರೆ ಹೆಸರಿನಲ್ಲಿ ಈಗ ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವನ್ನು ಕಾಂಗ್ರೆಸ್ ಅನುಸರಿಸುತ್ತಿದೆ’ ಎಂದು ಬಿಜೆಪಿ ಕಿಡಿ ಕಾರಿದೆ.
ರಾಜ್ಯದ ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಯಾರೊಂದಿಗೂ ನಾನು ರಾಜಿ ಆಗುವುದಿಲ್ಲ. ಮೇಕೆದಾಟು ಯೋಜನೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಈ ಹಿಂದೆ ಸಿಎಂ ಬೊಮ್ಮಾಯಿ ಹೇಳಿದ್ದರು. ಕುಡಿಯುವ ನೀರಿನ ಉದ್ದೇಶದಿಂದ ರೂಪಿಸಿರುವ ಮೇಕೆದಾಟು ಯೋಜನೆ ನಿಲ್ಲುವುದಿಲ್ಲ. ಯೋಜನೆ ಜಾರಿ ಸಂಬಂಧ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ವಿಶ್ವಾಸವಿದೆ ಎಂದೂ ಕೂಡ ಅವರು ಭರವಸೆ ವ್ಯಕ್ತಪಡಿಸಿದ್ದರು.
ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿಯನ್ನು ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಹೆಚ್ಚುವರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುವ ಯೋಜನೆಯನ್ನು ಜಾರಿಗೊಳಿಸುವ ಎಲ್ಲಾ ಹಕ್ಕು ರಾಜ್ಯಕ್ಕಿದೆ. ರಾಜ್ಯದ ಜನರ ಹಿತ ರಕ್ಷಣೆಗಾಗಿ ನೂರಕ್ಕೆ ನೂರರಷ್ಟು ಯೋಜನೆ ಜಾರಿಗೊಳಿಸಲಾಗುವುದು ಎಂದು ಬೊಮ್ಮಾಯೊ ಹೇಳಿದ್ದರು.
ಇನ್ನು ಮೇಕದಾಟು ಯೋಜನೆ ಜಾರಿಗೆ ಒತ್ತಾಯಿಸಿ ಡಿಸೆಂಬರ್ ಮೊದಲ ವಾರದಲ್ಲಿ ಮೇಕದಾಟುವಿನಿಂದ ಬೆಂಗಳೂರಿನವರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಲಾಗುವುದು ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.