ನಿವೃತ್ತ ಕಾರ್ಮಿಕರು ಬಹು ದಿನಗಳಿಂದ ನಿರೀಕ್ಷಿಸುತ್ತಿದ್ದ ಕನಿಷ್ಠ ಪಿಂಚಿಣಿ ಮೊತ್ತ ಹೆಚ್ಚಳದ ಬೇಡಿಕೆಯನ್ನು ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) ಈಡೇರಿಸುವ ಕಾಲ ಸಮೀಪಿಸಿದೆ.
ನವೆಂಬರ್ ತಿಂಗಳ ಅಂತ್ಯದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಕೇಂದ್ರೀಯ ವಿಶ್ವಸ್ಥ ಮಂಡಳಿ ಸಭೆಯು ನಡೆಯಲಿದ್ದು, ಕನಿಷ್ಠ ಪಿಂಚಿಣಿ ಹೆಚ್ಚಳ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಕನಿಷ್ಠ ಪಿಂಚಿಣಿ ಹೆಚ್ಚಳ ಮಾಡುವುದಕ್ಕೆ ಇಪಿಎಫ್ಒ ಮತ್ತು ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿವೆ. ಆದರೆ, ಹೆಚ್ಚಳದ ಪ್ರಮಾಣ ಎಷ್ಟಿರಬೇಕೆಂಬುದರ ಬಗ್ಗೆ ಎದ್ದಿರುವ ತಕರಾರು ಬಗೆಹರಿದಿಲ್ಲ.
ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಕನಿಷ್ಠ ಪಿಂಚಿಣಿ ಮೊತ್ತವನ್ನು 6000 ರುಪಾಯಿಗಳಿಗೆ ಏರಿಸಬೇಕು ಎಂಬ ಬೇಡಿಕೆ ಮುಂದಿಟ್ಟಿವೆ. ಕೇಂದ್ರ ಸರ್ಕಾರ ಮತ್ತು ಇಪಿಎಫ್ಒ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ಪುರಸ್ಕರಿಸಿಲ್ಲ. ಈ ಪ್ರಮಾಣದಲ್ಲಿ ಕನಿಷ್ಠ ಪಿಂಚಿಣಿ ಮೊತ್ತ ಹೆಚ್ಚಿಸಿದರೆ, ದೀರ್ಘಕಾಲದಲ್ಲಿ ಇಪಿಎಫ್ಒ ತೀವ್ರ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಕಾರಣ ಮುಂದೊಡ್ಡಲಾಗಿದೆ.

ಪ್ರಸ್ತುತ ಕನಿಷ್ಠ ಪಿಂಚಿಣಿ 1000 ರುಪಾಯಿಗಳಿದೆ. ಇಷ್ಟು ಅತ್ಯಲ್ಪ ಪ್ರಮಾಣದಲ್ಲಿ ಪಿಂಚಣಿ ಪಡೆದು ಜೀವನ ಸಾಗಿಸುವುದಾರೂ ಹೇಗೆ ಎಂಬ ಪ್ರಶ್ನೆಯನ್ನು ಕಾರ್ಮಿಕ ಸಂಘಟನೆಗಳ ನಾಯಕರು ಪ್ರತಿ ಸಭೆಯಲ್ಲೂ ಎತ್ತುತ್ತಲೇ ಬಂದಿದ್ದಾರೆ. ಪ್ರಸ್ತುತ ಪೆಟ್ರೋಲ್, ಡಿಸೇಲ್, ಅಡಿಗೆ ಅನಿಲ ಮತ್ತು ನಿತ್ಯಬಳಕೆಯ ದಿನಸಿ ಮತ್ತಿತರ ವಸ್ತುಗಳ ಬೆಲೆಗಳು ತೀವ್ರವಾಗಿ ಏರಿರುವುದರಿಂದ ಕೇವಲ 1000 ರುಪಾಯಿಗಳಲ್ಲಿ ಪಿಂಚಿಣಿಯನ್ನೇ ನಂಬಿಕೊಂಡವರು ಜೀವನ ನಡೆಸುವುದು ಕಷ್ಟ ಎಂಬುದು ಇಪಿಎಫ್ಒ ಮತ್ತು ಕೇಂದ್ರ ಸರ್ಕಾರಕ್ಕೂ ಅರಿವಾದಂತಿದೆ.
ಆದರೆ, 6000 ರುಪಾಯಿಗಳ ಬೇಡಿಕೆಯನ್ನು ಈಡೇರಿಸುವುದು ಸಾಧ್ಯವೆ ಇಲ್ಲ ಎಂಬುದು ಇಪಿಎಫ್ಒ ಪ್ರತಿಪಾದಿಸಿರುವ ಇಪಿಎಫ್ಒ ಕನಿಷ್ಠ ಪಿಂಚಣಿ ಮೊತ್ತವನ್ನು 3000 ರುಪಾಯಿಗೆ ನಿಗದಿ ಮಾಡಲು ಒಪ್ಪಬಹುದು ಎಂದು ಬ್ಯುಸಿನೆಸ್ ಲೈನ್ ವರದಿ ಮಾಡಿದೆ. ವರದಿಯ ಪ್ರಕಾರ, ಕಾರ್ಮಿಕರಿಗಾಗಿ ಇರು ಸಂಸದೀಯ ಸ್ಥಾಯಿ ಸಮಿತಿಯು ಈಗಾಗಲೇ ಕನಿಷ್ಠ ಪಿಂಚಣಿಯನ್ನು 3000ಕ್ಕೆ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿದೆ. ಆದರೆ, ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ವಿನಾಕಾರಣ ವಿಳಂಬ ಮಾಡುತ್ತಿದೆ ಎಂಬುದು ಕಾರ್ಮಿಕ ಸಂಘಟನೆಗಳ ನಾಯಕರ ಆರೋಪ.
ಏನೇ ಆದರೂ ತಿಂಗಳಾಂತ್ಯದ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬರಲಿದೆ. ಕನಿಷ್ಠ ಪಿಂಚಿಣಿ ಮೊತ್ತವು 3000 ರುಪಾಯಿಗೆ ಏರಲಿದೆ.
ಸಾಮಾನ್ಯವಾಗಿ ಸರ್ಕಾರಿ ಸೇವೆಯಲ್ಲಿರುವವರು ನಿವೃತ್ತರಾದಾಗ, ಅವರ ಸೇವೆಯ ಕೊನೆ ತಿಂಗಳಲ್ಲಿ ಪಡೆದ ವೇತನದ ಅರ್ಧದಷ್ಟು ಮೊತ್ತವನ್ನು ಪಿಂಚಣಿ ಮೊತ್ತವಾಗಿ ನಿಗದಿ ಮಾಡಲಾಗುತ್ತದೆ. ಆದರೆ, ಕಾರ್ಮಿಕರಿಗೆ ಉದ್ಯೋಗದಾತರು ಪಾವತಿಸುವ ಶೇ.12ರಷ್ಟು ಭವಿಷ್ಯ ನಿಧಿ ಮೊತ್ತದ ಪೈಕಿ ಕಡಿತ ಮಾಡಿ ಸಂಗ್ರಹಿಸಲಾಗುವ ಶೇ.3.5ರಷ್ಟು ಮೊತ್ತದ ಠೇವಣಿ ಮೇಲಿನ ಬಡ್ಡಿಯನ್ನು ಮಾಸಿಕ ಪಿಂಚಿಣಿಯಾಗಿ ನೀಡಲಾಗುತ್ತದೆ. ಹೀಗಾಗಿ ಬಹುತೇಕ ಸಂದರ್ಭಗಳಲ್ಲಿ ಮತ್ತು ಹೆಚ್ಚಿನ ವರ್ಷಗಳ ಕಾಲ ಸೇವೆ ಸಲ್ಲಿಸದ ಹಾಗೂ ಸೇವೆ ಸಲ್ಲಿಸಿಯು ಭವಿಷ್ಯ ನಿಧಿ ವ್ಯಾಪ್ತಿಗೆ ತಡವಾಗಿ ಬರುವ ಕಾರ್ಮಿಕರು ನಿವೃತ್ತರಾದಾಗ ಉಳಿಯುವ ಠೇವಣಿ ಅತ್ಯಲ್ಪ ಇರುತ್ತದೆ. ಹೀಗಾಗಿ ಪಿಂಚಿಣಿ ಮೊತ್ತವೂ ಅತ್ಯಲ್ಪ ಮೊತ್ತದ್ದಾಗಿರುತ್ತದೆ. ಈ ಕಾರಣಕ್ಕಾಗಿ ಕನಿಷ್ಠ ಪಿಂಚಿಣಿ ನಿಗದಿ ಮಾಡುವಂತೆ ಕಾರ್ಮಿಕ ಸಂಘಟನೆಗಳು ಹೋರಾಟ ಮಾಡಿದ್ದವು. 1000 ರುಪಾಯಿ ನಿಗದಿ ಮಾಡಿ ಹಲವು ವರ್ಷಗಳೇ ಕಳೆದಿವೆ. ಇದನ್ನು ಪರಿಷ್ಕರಿಸುವಂತೆ ಸತತ ಹೋರಾಟ ನಡೆಸಲಾಗಿದೆ. ಸಂಸದೀಯ ಸ್ಥಾಯಿ ಸಮಿತಿಯು ಶಿಫಾರಸು ಮಾಡಿದ ನಂತರವು ಪರಿಷ್ಕೃತ ಪಿಂಚಿಣಿ ಜಾರಿಯಾಗಿಲ್ಲ. ತಿಂಗಳಾಂತ್ಯದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಬಹುತೇಕ ಏಪ್ರಿಲ್ 2022ರಿಂದ ಕಾರ್ಮಿಕರಿಗೆ ಕನಿಷ್ಠ ಪಿಂಚಿಣಿ ಮೊತ್ತವು 3000 ರುಪಾಯಿ ಲಭ್ಯವಾಗಬಹುದು.

ಇದೇ ಸಭೆಯಲ್ಲಿ ಮತ್ತೆರಡು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ. ಇಪಿಎಫ್ಒ ನಿಧಿಯಲ್ಲಿರುವ ನಗದನ್ನು ಕಾರ್ಪೋರೆಟ್ ಬಾಂಡ್ ಗಳಲ್ಲಿ ಹೂಡಿಕೆ ಮಾಡುವುದು ಮತ್ತು 2021-22ನೇ ಸಾಲಿಗೆ ಭವಿಷ್ಯ ನಿಧಿ ಮೇಲಿನ ಬಡ್ಡಿ ಪ್ರಮಾಣ ನಿಗದಿ ಮಾಡುವ ಬಗ್ಗೆ ಚರ್ಚೆ ಆಗಲಿದೆ. ಇದುವರೆಗೆ ಇಪಿಎಫ್ಒ ಕಾರ್ಮಿಕರ ಭವಿಷ್ಯ ನಿಧಿ ಮೊತ್ತವನ್ನು ನೇರವಾಗಿ ಷೇರು ಪೇಟೆಯಲ್ಲಿ ಹೂಡಿಕೆ ಮಾಡುತ್ತಿದೆ. ಜತೆಗೆ ಮ್ಯೂಚುವಲ್ ಫಂಡ್ ಗಳಲ್ಲೂ ಹೂಡಿಕೆ ಮಾಡುತ್ತಿದೆ. ಆದರೆ, ಕಾರ್ಪೊರೆಟ್ ಬಾಂಡ್ ಗಳಲ್ಲಿ ಹೂಡಿಕೆಗೆ ಇನ್ನೂ ಅನುಮತಿ ದಕ್ಕಿಲ್ಲ.
ನೇರವಾಗಿ ಷೇರುಪೇಟೆಯಲ್ಲಿನ ಹೂಡಿಕೆ, ಮ್ಯೂಚುವಲ್ ಫಂಡ್ ಗಳ ಮೇಲಿನ ಹೂಡಿಕೆ ಮೇಲೆ ಇಪಿಎಫ್ಒ ಉತ್ತಮ ಲಾಭ ಪಡೆದಿದೆ. ಆದರೆ, ಈ ಲಾಭದ ಪ್ರಮಾಣವು ನಿಶ್ಛಿತವಲ್ಲ. ಹೀಗಾಗಿ ಕಾರ್ಪೊರೆಡ್ ಬಾಂಡ್ ಗಳ ಮೇಲೆ ಹೂಡಿಕೆ ಮಾಡುವ ಬಗ್ಗೆ ಚಿಂತಿಸಿದೆ. ಕಾರ್ಪೊರೆಟ್ ಬಾಂಡ್ ಗಳ ಮೇಲಿನ ಹೂಡಿಕೆ ಮೇಲೆ ಪೂರ್ವನಿರ್ಧಾರಿತ ಬಡ್ಡಿದರ/ಲಾಭಾಂಶವನ್ನು ನೀಡಲಾಗುತ್ತದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭವಿಷ್ಯ ನಿಧಿ ಮೇಲೆ ನೀಡುವ ಬಡ್ಡಿದರ ಕುರಿತಂತೆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. 2020-21 ವಿತ್ತೀಯ ವರ್ಷದಲ್ಲಿ ಶೇ.8.5ರಷ್ಟು ಬಡ್ಡಿದರ ನಿಗದಿ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಬಡ್ಡಿದರವನ್ನು ಹೆಚ್ಚಿಸಬೇಕು ಎಂಬುದು ಕಾರ್ಮಿಕ ಸಂಘಟನೆಗಳ ಬೇಡಿಕೆಯಾಗಿದೆ. ಸರ್ಕಾರ ಬಡ್ಡಿದರವನ್ನು ಶೇ.8.25 ಅಥವಾ ಶೇ.8ಕ್ಕೆ ತಗ್ಗಿಸುವ ಇರಾದೆ ಹೊಂದಿದೆ.



