ಉತ್ತರ ಪ್ರದೇಶ ಚುನಾವಣೆಗೆ ಇನ್ನು ಕೆಲವೇ ಕೆಲವು ತಿಂಗಳುಗಳ ಕಾಲ ಬಾಕಿ ಇರುವ ಸಮಯದಲ್ಲಿ ರಾಜಕೀಯ ನಾಯಕರು ಆರೋಪ, ಪ್ರತ್ಯಾರೋಪಗಳ ಸುರಿಮಳೆಗೈಯುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಬಿಎಸ್‌ಪಿ ವರಿಷ್ಠೆ ಮಾಯಾವತಿ ಸಮಾಜವಾದಿ ಪಕ್ಷದ ವಿರುದ್ದ ಹರಿಹಾಯ್ದಿದ್ದಾರೆ.
ಸಮಾಜವಾದಿ ಪಕ್ಷವು ದಲಿತರು ಮತ್ತು ಹಿಂದುಳಿದ ಜಾತಿಯಲ್ಲಿ ಹುಟ್ಟಿದ ಮಹಾನ್ ಪುರುಷರನ್ನ ಅವಹೇಳನ ಮಾಡುತ್ತಿದೆ ಎಂದು ಸೋಮವಾರ ಬಿಎಸ್‌ಪಿ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ. ಈ ಸಮುದಾಯಗಳು ಅಖಿಲೇಶ್ ಯಾದವ ನೇತೃತ್ವದ ಎಸ್‌ಪಿ ಪಕ್ಷದಿಂದ ಏನನ್ನೂ ಸಹ ನಿರೀಕ್ಷಿಸಬಾರದು ಎಂದು ಹೇಳಿದ್ದಾರೆ.
ಜಾತಿಯ ವಿರುದ್ಧದ ದ್ವೇಷದ ಕಾರಣಕ್ಕೆ ರಾಜ್ಯದಲ್ಲಿರುವ ಅನೇಕ ಸಂಘ-ಸಂಸ್ಥೆಗಳು ಮತ್ತು ಯೋಜನೆಗಳ ಹೆಸರನ್ನು ಬದಲಾಯಿಸಲಾಗಿದೆ ಎಂದು ಮಾಯಾವತಿ ಕಿಡಿಕಾರಿದ್ದಾರೆ.
ದಲಿತರು ಹಾಗೂ ಹಿಂದುಳಿದ ಜನಾಂಗದಲ್ಲಿ ಹುಟ್ಟಿದ ಮಹಾನ್ ಸಂತರು, ಗುರುಗಳು, ಮಹಾನ್ ಪುರುಷರ ಬಗ್ಗೆ ಎಸ್ಪಿ ಮೊದಲಿನಿಂದಲೂ ಅವಹೇಳನ ಮಾಡುತ್ತಾ ಬಂದಿದೆ. ಇದಕ್ಕೆ ಉತ್ತಮ ಉದಾಹರಣೆ ನಮ್ಮ(ಬಿಎಸ್‌ಪಿ) ಸರ್ಕಾರ ಅಧಿಕಾರದಲ್ಲಿದ್ದಾಗ ಫೈಜಾಬಾದ್ ಜಿಲ್ಲೆಯನ್ನು ಅಂಬೇಡ್ಕರ್ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡಿದ್ದು. ಆದರೆ, ಸಮಾಜವಾದಿ ಪಕ್ಷದವರು ಭದೋಹಿಯನ್ನು ಹೊಸ ಜಿಲ್ಲೆಯನ್ನಾಗಿ ಮಾಡುವುದನ್ನು ವಿರೋಧಿಸಿದರು ಮತ್ತು ಆ ಜಿಲ್ಲೆಯ ಹೆಸರನ್ನು ಸಹ ಎಸ್‌ಪಿ ಬದಲಾಯಿಸಿದೆ ಎಂದು ಟ್ವೀಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶದಲ್ಲಿ ಹಲವು ಸಂಸ್ಥೆ ಮತ್ತು ಯೋಜನೆಗಳ ಹೆಸರುಗಳನ್ನು ಜಾತಿಯ ಮೇಲಿನ ದ್ವೇಷದಿಂದ ಬದಲಾಯಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆ ಪಕ್ಷದ ಕಾರ್ಯಕರ್ತರು ಜನರ ಬಳಿ ಮತಕ್ಕಾಗಿ ಎಷ್ಟೇ ನಾಟಕವಾಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿಗಷ್ಟೇ ಬಿಎಸ್‌ಪಿಯ ಆರು ಜನ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಭಾನುವಾರ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಎಸ್‌ಪಿ ನಡೆಸಿದ ʻಜನಾದೇಶ ಮಹಾರ್‍ಯಾಲಿʼಯಲ್ಲಿ ಬಿಎಸ್‌ಪಿ ಪಕ್ಷದ ಹಿರಿಯ ನಾಯಕರಾದ ಲಾಲ್‌ಜಿ ವರ್ಮಾ ಮತ್ತು ರಾಮಚಲ್ ರಾಜ್‌ಭರ್ ಅವರು ಬಿಎಸ್‌ಪಿ ತೊರೆದು ಎಸ್‌ಪಿ ಸೇರ್ಪಡೆಯಾದರು.
ವರ್ಮಾ ಉತ್ತರ ಪ್ರದೇಶ ಬಿಎಸ್‌ಪಿ ಶಾಸಕಾಂಗ ಪಕ್ಷದ ನಾಯಕರಾಗಿದ್ದರು ಮತ್ತು ರಾಜ್‌ಭರ್ ಉತ್ತರ ಪ್ರದೇಶ ಬಿಎಸ್‌ಪಿ ರಾಜ್ಯಧ್ಯಕ್ಷರಾಗಿದ್ದರು. ಅವರಿಬ್ಬರು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪಕ್ಷದಿಂದ ಉಚ್ಛಾಟಿಸುವ ಮೊದಲು ಬಿಎಸ್‌ಪಿ ತೊರೆದು ಎಸ್‌ಪಿ ಸೇರಿದ್ದಾರೆ.






