ಕೇರಳದ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯಲ್ಲಿ ದಲಿತ ಸಮುದಾಯಕ್ಕೆ ಸೇರಿದ್ದಾರೆ ಎಂಬ ಕಾರಣದಿಂದ ಜಾತಿತಾರತಮ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಿಹೆಚ್ ಡಿ ವಿದ್ಯಾರ್ಥಿನಿ ದೀಪಾ ಪಿ ಮೋಹನ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಒಂದು ಹಂತದ ಜಯ ದೊರಕಿದೆ.
ದೀಪಾ ಪಿ ಮೋಹನ್ ಎಂಬ ಪಿಹೆಚ್ ಡಿ ವಿದ್ಯಾರ್ಥಿನಿ ಹಿರಿಯ ಪ್ರಾಧ್ಯಾಪಕ ಡಾ. ನಂದಕುಮಾರ್ ಕಲರಿಕ್ಕಲ್ ವಿರುದ್ಧ ಜಾತಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಕ್ಟೋಬರ್ 29 ರಿಂದ ವಿಶ್ವವಿದ್ಯಾನಿಲಯದ ಮುಖ್ಯ ದ್ವಾರದ ಬಳಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
10 ವರ್ಷಗಳಿಂದ ಜಾತಿ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅವರನ್ನು ಹೊರ ಹಾಕುವವರೆಗೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸಲಾಗುತ್ತದೆ ಎಂದಿದ್ದಾರೆ.
ದೀಪಾ ಪಿ ಮೋಹನ್ ಅವರ ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮಾಧ್ಯಮಗಳೂ ಬೆಂಬಲವನ್ನು ಸೂಚಿಸುತ್ತಿದ್ದು, ಇದರಿಂದ ಕಲರಿಕ್ಕಲ್ ಅವರನ್ನು ಸಂಸ್ಥೆಯಿಂದ ಹೊರಹಾಕುವವರೆಗೂ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ನವೆಂಬರ್ 6 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಡಾ. ನಂದಕುಮಾರ್ ಕಲರಿಕ್ಕಲ್ ಅವರನ್ನು ಅಂತರಾಷ್ಟ್ರೀಯ ಮತ್ತು ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ನ್ಯಾನೊಸೈನ್ಸ್ ಮತ್ತು ನ್ಯಾನೊಟೆಕ್ನಾಲಜಿಯ (IIUCNN) ನಿರ್ದೇಶಕರನ್ನಾಗಿ ಮಾಡಲಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಸಾಬು ಥಾಮಸ್ ತಿಳಿಸಿದ್ದರು. ಆದರೆ, ವಿಶ್ವ ವಿದ್ಯಾಲಯದ ಅಡಿಯಲ್ಲಿರುವುದರಿಂದ ಇನ್ನಷ್ಟು ಪರಿಣಾಮ ಬೀರಲಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
‘ಕಳೆದ 10 ವರ್ಷಗಳಿಂದ ತಾರತಮ್ಯ ಮಾಡಲಾಗುತ್ತಿದೆ’
ದೀಪಾ ಪಿ ಮೋಹನ್ ಅವರು ಕಲರಿಕ್ಕಲ್ ನೀಡುತ್ತಿರುವ ಮಾನಸಿಕ ಕಿರುಕುಳದಿಂದ ತಮ್ಮ ಸಂಶೋಧನೆಯಲ್ಲಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದರು.
ಈಕೆ ಮಾರ್ಚ್ 2011 ರಲ್ಲಿ IIUCNN ಗೆ ಎಂಫಿಲ್ ಅಭ್ಯರ್ಥಿಯಾಗಿ ಕೇರಳದ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯಕ್ಕೆ ಸೇರಿದ್ದರು. ಬಳಿಕ ಎರಡು ವರ್ಷಗಳ ಬಳಿಕ 2014 ರಲ್ಲಿ ಪಿಎಚ್ಡಿ ಪದವಿಗಾಗಿ ಅದೇ ಸಂಸ್ಥೆಗೆ ಸೇರಿದರು. ಈ ವೇಳೆ ಕಲರಿಕ್ಕಲ್ ಜಂಟಿ ನಿರ್ದೇಶಕರಾಗಿದ್ದರು.
2011 ರಲ್ಲಿ ವಿಶ್ವ ವಿದ್ಯಾನಿಲಯಕ್ಕೆ ಸೇರಿದ ಮೊದ ಮೊದಲೇ ಜಾತಿ ತಾರತಮ್ಯವನ್ನು ಎದುರಿಸ ಬೇಕಾಯಿತು ಎಂದು ಆರೋಪಿಸಿದ್ದಾರೆ.
ದೀಪಾ ದೂರಿನಲ್ಲಿ ಏನೇನಿದೆ?
ಕಲರಿಕ್ಕಲ್ ವಿರುದ್ಧ ದೀಪಾ ನೀಡಿದ ದೂರುಗಳಲ್ಲಿ ಅನೇಕ ಅಂಶಗಳನ್ನು ತಿಳಿಸಲಾಗಿದೆ. ಅವುಗಳಲ್ಲಿ, ಇತರ ಸಂಸ್ಥೆಗಳಲ್ಲಿ ಪ್ರಾಜೆಕ್ಟ್ ಮಾಡಲು ಅವಕಾಶಗಳನ್ನು ನಿರಾಕರಿಸಲಾಗಿದೆ. ಜೊತೆಗೆ ಸಂಸ್ಥೆಯ ಸೌಲಭ್ಯಗಳನ್ನೂ ನೀಡಿಲ್ಲ.ಇವೆಲ್ಲದರ ಜೊತೆಗೆ ಬೆದರಿಕೆಯನ್ನು ಒಡ್ಡಲಾಗಿದೆ. ಎಂಫಿಲ್ ಪದವಿ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರವನ್ನು ನೀಡಲು ನಿರಾಕರಿಸಲಾಗಿದೆ ಎಂಬ ದೂರನ್ನು ಒಳಗೊಂಡಿದೆ. 2011 ರಿಂದಲೇ ಈತನ ವಿರುದ್ಧ ಅನೇಕ ಆರೋಪಗಳು ಕೇಳಿಬರುತ್ತಿದ್ದವು. 2015 ರಲ್ಲಿ IIUCNN ಹೊಂದಿರುವ ಭೌತಶಾಸ್ತ್ರ ವಿಭಾಗದೊಳಗೆ ಕಲರಿಕ್ಕಲ್ ತನ್ನನ್ನು ಮಾನಭಂಗ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾಳೆ.
ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತಕ್ಕೆ ದೂರು ಸಲ್ಲಿಸಲಾಗಿತ್ತು. ಆಕೆಯ ದೂರುಗಳನ್ನು ಪರಿಶೀಲಿಸಲು ವಿಶ್ವವಿದ್ಯಾನಿಲಯದ ದ್ವಿಸದಸ್ಯ ತನಿಖಾ ಆಯೋಗವನ್ನು ರಚಿಸಲಾಗಿತ್ತು.. ಕಲರಿಕ್ಕಲ್ ವಿರುದ್ಧ ದೀಪಾ ಮಾಡಿರುವ ಆರೋಪಗಳನ್ನು ಆಯೋಗವು ದೃಢಪಡಿಸಿತ್ತು. ದೀಪಾ ಜಾತಿಯ ಹೆಸರಿನಲ್ಲಿ ಬೆದರಿಕೆಗಳನ್ನು ಎದುರಿಸಬೇಕಾಗಿರುವುದರಿಂದ ದೀಪಾಳಿಗೆ ನ್ಯಾಯ ಒದಗಿಸಬೇಕು, ಇದಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಮಂಡಳಿ ತಿಳಿಸಿದೆ.
ದೀಪಾಳ ಅಧ್ಯಯನಕ್ಕಾಗಿ ಮೂಲಸೌಕರ್ಯಗಳನ್ನು ಮತ್ತು ಓದಲು ಬೇಕಾಗಿರುವ ಸಾಮಾಗ್ರಿಗಳನ್ನು ಒದಗಿಸುವಲ್ಲಿ ಕೂಡ ನಿರ್ದೇಶಕರು ಮೂಗು ತೂರಿಸಿದ್ದಾರೆ ಎಂಬುವುದನ್ನು ಆಡಳಿತ ಮಂಡಳಿ ಕ್ರಮ ಕೈಗೊಂಡಿತ್ತು, ಆದಾಗ್ಯೂ, ಆಡಳಿತ ಮಂಡಳಿಯು ಕಲರಿಕ್ಕಲ್ ಅವರನ್ನು IIUCNN ನ ನಿರ್ದೇಶಕ ಹುದ್ದೆಯಿಂದ ತೆಗೆದುಹಾಕಲಾಗಿತ್ತು, ಅನಂತರ ಕೆಲವು ಸಮಯದ ಬಳಿಕ ವಾಪಾಸು ಹುದ್ದೆಗೆ ನೇಮಕ ಮಾಡಿಕೊಂಡಿತ್ತು.
ಅಂದಿನಿಂದ, ದೀಪಾ ಪಿ ಮೋಹನ್ ಕೇರಳ ಹೈಕೋರ್ಟ್, ಪೊಲೀಸರು ಮತ್ತು ರಾಜ್ಯ SC/ST ಆಯೋಗದೊಂದಿಗೆ ತನ್ನ ಹೋರಾಟವನ್ನು ಎತ್ತಿದ್ದಾರೆ. ಆದಾಗ್ಯೂ, ವಿಶ್ವವಿದ್ಯಾಲಯದಲ್ಲಿ ಕಿರುಕುಳ ಮತ್ತು ತಾರತಮ್ಯವನ್ನು ಎದುರಿಸುತ್ತಿದ್ದೇನೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಸಿ ಥಾಮಸ್, ದೀಪಾ ಅವರು ಈವರೆಗೆ ತನ್ನ ಸಂಶೋಧನಾ ಪ್ರಗತಿ ವರದಿಯನ್ನು ಸಲ್ಲಿಸಲಿಲ್ಲ, ಕೋರ್ಸ್ಗೆ ಸೇರಿದಾಗಿನಿಂದ ಪಿಎಚ್ಡಿ ವಿದ್ಯಾರ್ಥಿಗಳು ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಲ್ಲಿಸಲೇ ಬೇಕಾಗಿತ್ತು, ಆದರೆ ಅವರು ಸಲ್ಲಿಸಲೇ ಇಲ್ಲ ಎಂದಿದ್ದರು.
ಪ್ರತ್ಯೇಕ ಸಮಿತಿ ರಚನೆ- ನಂದಕುಮಾರ್ ಕಲರಿಕ್ಕಲ್ ಹೊರಕ್ಕೆ!
ವಿಸಿ ಥಾಮಸ್ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ದೀಪಾ ಪಿ ಮೋಹನನ್ ಅವರು ಎತ್ತಿರುವ ದೂರುಗಳನ್ನು ಪರಿಶೀಲಿಸಲು ಹೊಸ ಸಮಿತಿಯನ್ನು ರಚಿಸಿತು. ಜೊತೆಗೆ ಕಲರಿಕ್ಕಲ್ ಅವರನ್ನು ಅವರ ಪ್ರಸ್ತುತ ಸ್ಥಾನದಿಂದ ತೆಗೆದುಹಾಕಲಾಯಿತು. ದೀಪಾ ಅವರ ಸಂಶೋಧನಾ ಪ್ರಗತಿಯನ್ನು ಪರಿಶೀಲಿಸಲು ಮತ್ತು ಅವರಿಗೆ ಸಾಕಷ್ಟು ಸಂಶೋಧನಾ ಮಾರ್ಗದರ್ಶನ ನೀಡಲು ಪ್ರತ್ಯೇಕ ಸಮಿತಿಯನ್ನು ಸಹ ರಚಿಸಲಾಗಿದೆ ಎಂದರು.
ಕೇರಳದ ಉನ್ನತ ಶಿಕ್ಷಣ ಸಚಿವ ಡಾ. ಆರ್. ಬಿಂದು ಅವರು ಶನಿವಾರ ಫೇಸ್ಬುಕ್ ಪೋಸ್ಟ್ನಲ್ಲಿ ದೀಪಾ ಪಿ ಮೋಹನನ್ ಅವರಿಗೆ ನ್ಯಾಯವನ್ನು ಒದಗಿಸುತ್ತೇನೆ ಎಂದು ಹೇಳಿದರು. ಬಳಿಕ ತಕ್ಷಣವೇ ಕಲರಿಕ್ಕಲ್ ಅವರನ್ನು ಬದಲಾಯಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ವೇಳೆ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ದೀಪಾ ಪಿ ಮೋಹನ್ ಅವರಿಗೆ ಮನವಿ ಮಾಡಿದರು.