ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಹೈಕಮಾಂಡ್ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನಡುವೆ ನಡೆಯುತ್ತಿದ್ದ ರಾಜಕೀಯ ಮಾತುಗಳು ದಿಢೀರನೇ ಯೂ ಟರ್ನ್ ತೆಗೆದುಕೊಂಡಂತೆ ಕಾಣುತ್ತಿದೆ.
2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಪ್ರಶಾಂತ್ ಕಿಶೋರ್ ತಿಂಗಳುಗಳಿಂದ ನಿರಂತರ ಮಾತುಕತೆ ನಡೆಸುತ್ತಿದ್ದರು. ಒಂದು ಹಂತದಲ್ಲಂತೂ ಯಶಸ್ವಿ ಚುನಾವಣಾ ತಂತ್ರಗಾರ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ ಮತ್ತು ಕಾಂಗ್ರೆಸ್ಸಿನ ಚುನಾವಣಾ ಪ್ರಚಾರ ನಿರ್ವಹಣೆಯಂತಹ ಮಹತ್ವದ ಹುದ್ದೆಯನ್ನೇ ಹೊಂದಲಿದ್ದಾರೆ. ಆ ಸಂಬಂಧ ಪಕ್ಷದ ಹೈಕಮಾಂಡ್ ಮತ್ತು ಪ್ರಶಾಂತ್ ನಡುವೆ ಬಹುತೇಕ ಮಾತುಕತೆಗಳು ಅಂತಿಮವಾಗಿವೆ ಎಂದೇ ಹೇಳಲಾಗುತ್ತಿತ್ತು.
ಯುವ ನಾಯಕ ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೆವಾನಿ ಕಾಂಗ್ರೆಸ್ ಸೇರ್ಪಡೆಯೊಂದಿಗೆ, ರಾಷ್ಟ್ರಮಟ್ಟದಲ್ಲಿ ದೇಶದ ಅತ್ಯಂತ ಹಿರಿಯ ಪಕ್ಷದ ಪುನರ್ ಸಂಘಟನೆ ಆರಂಭವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ದೇಶದ ಇಬ್ಬರು ಪ್ರಭಾವಿ ಯುವ ಮುಖಂಡರು ಬಿಜೆಪಿಯ ಕೋಮುವಾದಿ ಮತ್ತು ವಿಭಜನೆ ರಾಜಕಾರಣದ ವಿರುದ್ದದ ತಮ್ಮ ಹೋರಾಟದ ಮುಂದುವರಿದ ಭಾಗವಾಗಿ ಕಾಂಗ್ರೆಸ್ ಸೇರುವ ಮೂಲಕ ಪ್ರತಿಪಕ್ಷವನ್ನು ಬಲಪಡಿಸುವ ಮಾತುಗಳನ್ನಾಡಿದ್ದರು. ಆ ಮೂಲಕ ಯುವ ಜನತೆ ಮತ್ತೆ ಕಾಂಗ್ರೆಸ್ಸಿನತ್ತ ಮುಖ ಮಾಡಲಿದ್ದಾರೆ ಎಂಬ ವಿಶ್ಲೇಷಣೆಗಳೂ ಕೇಳಿಬಂದಿದ್ದವು. ಆ ನಾಯಕರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸ್ವತಃ ರಾಹುಲ್ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಅಂತಹ ಯತ್ನಗಳು ಮುಂದುವರಿದ ಭಾಗವಾಗಿ ಪ್ರಶಾಂತ್ ಕಿಶೋರ್ ಕೂಡ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆ ಹಿನ್ನೆಲೆಯಲ್ಲಿ ರಾಷ್ಟ್ರರಾಜಕಾರಣದ ಪಡಸಾಲೆಯಲ್ಲಿ ತಿಂಗಳುಗಳ ಕಾಲ ಪ್ರಶಾಂತ್ ಹೆಸರು ಚರ್ಚೆಯಲ್ಲಿತ್ತು.
ಆದರೆ, ಇದೀಗ ರಾಷ್ಟ್ರ ರಾಜಕಾರಣದ ನಿರ್ಣಾಯಕ ರಾಜ್ಯ ಎನಿಸಿರುವ ಉತ್ತರಪ್ರದೇಶವೂ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಪ್ರಶಾಂತ್ ಕಿಶೋರ್ ಮತ್ತೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ನ ಚುನಾವಣಾ ಸಲಹೆಗಾರರಾಗಿ ಗೋವಾದ ಉಸ್ತುವಾರಿ ನೋಡಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಲುಸಿನೋ ಫೆಲೈರೋ ಸೇರಿದಂತೆ ಅಲ್ಲಿನ ಕಾಂಗ್ರೆಸ್ಸಿನ ಬಹಳಷ್ಟು ಹಿರಿಯ ತಲೆಗಳನ್ನು ಟಿಎಂಸಿಯ ಪಾಳೆಯಕ್ಕೆ ಕರೆತಂದಿದ್ದಾರೆ.
ಅದಷ್ಟೇ ಆಗಿದ್ದರೆ ಬಹುಶಃ ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ನಡುವಿನ ಸಂಬಂಧದ ವಿಷಯದಲ್ಲಿ ಯೂ ಟರ್ನ್ ಬಗ್ಗೆ ಚರ್ಚೆಗಳು ಹುಟ್ಟಿಕೊಳ್ಳುತ್ತಿರಲಿಲ್ಲವೇನೋ. ಆದರೆ, ಪ್ರಶಾಂತ್ ಕಿಶೋರ್, ಗೋವಾದ ಟಿಎಂಸಿ ನಾಯಕರ ಆಂತರಿಕ ಸಭೆಯಲ್ಲಿ ಮಾತನಾಡುತ್ತಾ, “ಯಾರೇನೇ ಹೇಳಲಿ ಬಿಜೆಪಿ ದೇಶದ ರಾಜಕೀಯ ಕೇಂದ್ರಬಿಂದುವಾಗಿ ಇನ್ನೂ ದಶಕಗಳ ಕಾಲ ಇರಲಿದೆ. ದೇಶದ ಜನತೆ ಬಿಜೆಪಿಯನ್ನು ಏಕಾಏಕಿ ಕಿತ್ತೊಗೆಯುತ್ತಾರೆ ಎಂಬ ರಾಹುಲ್ ಗಾಂಧಿಯವರ ಯೋಚನೆ ಬಾಲಿಶಃ” ಎಂಬರ್ಥದ ಹೇಳಿಕೆ ನೀಡಿದ್ದರು. ಆ ಮೂಲಕ ಏಕ ಕಾಲಕ್ಕೆ ಅತ್ತ ಬಿಜೆಪಿ ಮತ್ತು ಮೋದಿಯ ಸಾಮರ್ಥ್ಯವನ್ನೂ, ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ರಾಜಕೀಯ ಅಪ್ರಬುದ್ಧತೆಯನ್ನೂ ಅವರು ಎತ್ತಿ ತೋರಿಸಿದ್ದರು.
‘ಬಿಜೆಪಿಯು ಭಾರತೀಯ ರಾಜಕಾರಣದ ಕೇಂದ್ರದಲ್ಲಿ ಇರಲಿದೆ. ಅವರು ಗೆಲ್ಲಲಿ ಅಥವಾ ಸೋಲಲಿ. ಕಾಂಗ್ರೆಸ್‌ನ ತನ್ನ ಆರಂಭದ 40 ವರ್ಷಗಳಲ್ಲಿದ್ದಂತೆಯೇ ಬಿಜೆಪಿ ಕೂಡ ಇರಲಿದೆ. ರಾಷ್ಟ್ರ ಮಟ್ಟದಲ್ಲಿ ಒಮ್ಮೆ ನೀವು ಶೇ. 30ಕ್ಕೂ ಹೆಚ್ಚು ಮತ ಪಡೆದುಕೊಂಡರೆ ಅಂತಹ ಯಾವುದೇ ಪಕ್ಷವನ್ನು ತಕ್ಷಣಕ್ಕೆ ಕದಲಿಸಲು ಆಗುವುದಿಲ್ಲ. ಹೀಗಾಗಿ ಜನರು ಬಹಳ ಆಕ್ರೋಶಗೊಳ್ಳುತ್ತಿದ್ದಾರೆ ಮತ್ತು ಪ್ರಧಾನಿ ಮೋದಿ ಅವರನ್ನು ಕಿತ್ತೊಗೆಯಲಿದ್ದಾರೆ ಎಂಬ ಭ್ರಮೆಯ ಬಲೆಯೊಳಗೆ ಬೀಳಬೇಡಿ. ಬಹುಶಃ ಮೋದಿ ಪ್ರಧಾನಿಯಾಗಿ ಮುಂದುವರಿಯದೇ ಇರಬಹುದು. ಆದರೆ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ. ಅವರು ಇಲ್ಲಿಯೇ ಇರಲಿದ್ದಾರೆ. ಅವರು ಮುಂದಿನ ಅನೇಕ ದಶಕಗಳ ಕಾಲ ಹೋರಾಟ ನಡೆಸಲಿದ್ದಾರೆ. ಈ ವಾಸ್ತವ ಅರಿಯದೇ ನೀವು ಬಿಜೆಪಿ ಮತ್ತು ಮೋದಿ ವಿರುದ್ದ ತಂತ್ರ ರೂಪಿಸಲಾಗದು. ರಾಹುಲ್ ಗಾಂಧಿಯವರ ಸಮಸ್ಯೆ ಏನೆಂದರೆ ಅವರು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ” ಎಂಬ ಪ್ರಶಾಂತ್ ಕಿಶೋರ್ ಮಾತುಗಳು ಸಹಜವಾಗೆ ಕಾಂಗ್ರೆಸ್ ವಲಯದಲ್ಲಿ ಆಕ್ರೋಶದ ಪ್ರತಿಕ್ರಿಯೆಗೆ ಕಾರಣವಾಗಿವೆ.
ಪ್ರಶಾಂತ್ ಸದ್ಯದ ಬಿಜೆಪಿಯ ಶಕ್ತಿ ಮತ್ತು ರಾಜಕೀಯ ವಾಸ್ತವದ ಹಿನ್ನೆಲೆಯಲ್ಲಿ ಸರಿಯಾಗಿಯೇ ಹೇಳಿದ್ದರೂ, ಕಾಂಗ್ರೆಸ್ಸಿನ ವಕ್ತಾರರು ಅವರ ವಿರುದ್ಧ ಮುಗಿಬಿದ್ದಿದ್ದಾರೆ. “ನೀವೊಬ್ಬ ಚುನಾವಣಾ ತಂತ್ರಗಾರ. ಇಂದು ಈ ಕಡೆ ಇದ್ದರೆ, ನಾಳೆ ಮತ್ತೊಂದು ಕಡೆ ಇರುವವರು. ನಿಮಗೆ ನಿಮ್ಮದೇ ಆದ ಒಂದು ಸಿದ್ಧಾಂತವೆನ್ನುವುದೇ ಇರುವುದಿಲ್ಲ. ಹಾಗಿರುವಾಗ ಬೇರೆಯವರಿಗೆ ಬೋಧನೆ ಮಾಡುವ ಮುಂಚೆ ನೀವೇನು? ನೀವೆಲ್ಲಿದ್ದೀರಿ ಎಂಬುದನ್ನು ಮೊದಲು ಕಂಡುಕೊಳ್ಳಿ” ಎಂದು ಪಕ್ಷದ ವಕ್ತಾರ ಪವನ್ ಖೇರಾ ಹೇಳಿದ್ದರೆ, ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ಮೋಹನ್ ಗುಪ್ತಾ, “ಕೆಲವರ ಬಿಜೆಪಿ ಮುಖಗಳು ಹೇಗೆಲ್ಲಾ ಅನಾವರಣಗೊಳ್ಳುತ್ತವೆ ನೋಡಿ. ಮೊದಲು ಕಾಂಗ್ರೆಸ್ ಇಲ್ಲದೆ ಪ್ರತಿಪಕ್ಷಗಳ ಪರ್ಯಾಯ ರಂಗವೆನ್ನುವುದೇ ಇಲ್ಲ ಎಂದರು. ನಂತರ ಕಾಂಗ್ರೆಸ್ಸಿನ ಆಯಕಟ್ಟಿನ ಹುದ್ದೆಯ ಬಗ್ಗೆ ಮಾತನಾಡಿದರು. ಆ ಬೇಡಿಕೆ ಈಡೇರದು ಎಂಬುದು ಖಾತ್ರಿಯಾಗುತ್ತಲೇ ಬಿಜೆಪಿಯ ಮೆಚ್ಚಿಸುವ ಸಾಹಸ ಆರಂಭಿಸಿದ್ದಾರೆ. ಒಟ್ಟಾರೆ ಸಾರಾಂಶವೆಂದರೆ; ಮತ್ತೊಬ್ಬರ ಭಕ್ತನ ಮುಖವಾಡ ಕಳಚಿದೆ!” ಎಂದು ಪ್ರಶಾಂತ್ ವಿರುದ್ಧ ಟ್ವೀಟರ್ ನಲ್ಲಿ ಹರಿಹಾಯ್ದಿದ್ದಾರೆ.
ಗೋವಾದ ಟಿಎಂಸಿ ಚುನಾವಣಾ ತಂತ್ರಗಾರಿಕೆಯ ಉಸ್ತುವಾರಿಯ ಜೊತೆ, ಪ್ರಶಾಂತ್ ಕಿಶೋರ್ ಬಿಜೆಪಿ ಮತ್ತು ರಾಹುಲ್ ಕುರಿತು ನೀಡಿದ ಹೇಳಿಕೆ ಮತ್ತು ಆ ಹೇಳಿಕೆಗೆ ಕಾಂಗ್ರೆಸ್ ನಿಂದ ವ್ಯಕ್ತವಾಗುತ್ತಿರುವ ಕಟು ಪ್ರತಿಕ್ರಿಯೆಗಳ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಮತ್ತು ಪ್ರಶಾಂತ್ ನಡುವಿನ ಸಂಬಂಧ ಕಡಿದುಹೋಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಶಾಂತ್ ನಿರೀಕ್ಷೆಯ ಸ್ಥಾನಮಾನಗಳ ವಿಷಯದಲ್ಲಿ ಪಕ್ಷದ ಹೈಕಮಾಂಡ್ ಮತ್ತು ಉನ್ನತ ಮಟ್ಟದ ನಾಯಕರ ನಡುವೆ ಸಹಮತ ಮೂಡಿಲ್ಲ. ಆ ಹಿನ್ನೆಲೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲು ಎಂದಿನಂತೆ ಹೈಕಮಾಂಡ್ ವಿಳಂಬ ಧೋರಣೆ ತಳೆದಿದೆ. ಇದು ಸಹಜವಾಗೇ ಪ್ರಶಾಂತ್ ಅವರಿಗೆ ನಿರಾಶೆ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ನಿಂದ ದೂರವಾಗಿ ಮತ್ತೆ ಟಿಎಂಸಿ ಮಡಿಲಿಗೆ ಜಾರಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.
ಆದರೆ, ಕಾಂಗ್ರೆಸ್ ಹೈಕಮಾಂಡ್ ನ ಆಪ್ತ ಮೂಲಗಳ ಪ್ರಕಾರ, ಗೋವಾದಲ್ಲಿನ ಪ್ರಶಾಂತ್ ಹೇಳಿಕೆ ಮತ್ತು ಅದಕ್ಕೆ ಪಕ್ಷದ ವಕ್ತಾರರು ಮತ್ತು ಐಟಿ ಸೆಲ್ ಸೇರಿದಂತೆ ಕೆಲವು ವಲಯದಿಂದ ವ್ಯಕ್ತವಾಗುತ್ತಿರುವ ಖಾರವಾದ ಪ್ರತಿಕ್ರಿಯೆಗಳು ಗಾಂಧಿ ಕುಟುಂಬದ ಪ್ರಮುಖರು ಮತ್ತು ಪ್ರಶಾಂತ್ ನಡುವಿನ ನಂಟಿನ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಅವರ ಬಾಂಧವ್ಯ ಹಿಂದಿನಂತೆಯೇ ಇದೆ ಮತ್ತು ಪಕ್ಷದ ಪುನರ್ ಸಂಘಟನೆಯ ವಿಷಯದಲ್ಲಿ ಆ ಹಂತದಲ್ಲಿನ ಮಾತುಕತೆಗಳು ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕ ಎಂದಿನಂತೆ ಮುಂದುವರಿಯಲಿವೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.
ನೇರ ನಡೆ, ನುಡಿಯ ಮತ್ತು ಹೇಳಬೇಕಾದ್ದನ್ನು ಬಹಳ ಮಾರ್ಮಿಕವಾಗಿ ಹೇಳುವ ಪ್ರಶಾಂತ್ ಕಿಶೋರ್ ಈ ಹಿಂದೆಯೂ ಹಲವು ಬಾರಿ ಕಾಂಗ್ರೆಸ್ ನಾಯಕರ ಕುರಿತು ವ್ಯತಿರಿಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ, ಗಾಂಧಿ ಕುಟುಂಬಕ್ಕೆ ಈ ಬಗ್ಗೆ ಸ್ಪಷ್ಟತೆ ಇದೆ. ಹಾಗಾಗಿ ಪಕ್ಷದ ವಕ್ತಾರರ ಮಟ್ಟದಲ್ಲಿ ಏನೇ ಪ್ರತಿಕ್ರಿಯೆ ಬಂದಿದ್ದರೂ, ವೈಯಕ್ತಿಕವಾಗಿ ಗಾಂಧಿ ಕುಟುಂಬದರು ಪ್ರಶಾಂತ್ ಮಾತುಗಳನ್ನು ವ್ಯತಿರಿಕ್ತವಾಗಿ ಪರಿಗಣಿಸಿಲ್ಲ ಎಂಬುದನ್ನು ಆ ವರದಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಪಕ್ಷದ ಟಿಕೆಟ್ ನೀಡಿಕೆ ವ್ಯವಸ್ಥೆ, ಚುನಾವಣಾ ತಂತ್ರಗಾರಿಕೆ, ನಿಧಿ ಸಂಗ್ರಹ, ಸಂಘಟನಾ ವ್ಯವಸ್ಥೆಯ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಮಹತ್ವದ ಮಾತುಕತೆಗಳು ಎಂದಿನಂತೆ ಮುಂದುವರಿಯುತ್ತವೆ ಎಂದೂ ಹೇಳಲಾಗಿದೆ.
ಆ ಹಿನ್ನೆಲೆಯಲ್ಲಿ ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ನಡುವಿನ ನಂಟಿಗೆ ಗೋವಾದ ಹೇಳಿಕೆ ಪೆಟ್ಟು ಕೊಟ್ಟಿದೆ. ಪ್ರಶಾಂತ್ ಕಾಂಗ್ರೆಸ್ ಸೇರುವ ಪ್ರಸ್ತಾಪ ಇನ್ನು ಮುಗಿದ ಅಧ್ಯಾಯ ಎಂಬ ವಾದಗಳೆಲ್ಲಾ ನಿಜವಲ್ಲ. ವಾಸ್ತವವಾಗಿ ಅದು ಗೋವಾದ ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ಪ್ರಶಾಂತ್ ನೀಡಿರುವ ಒಂದು ಹೇಳಿಕೆಯಷ್ಟೇ ಎಂಬುದು ಇದೀಗ ಕೇಳಿಬರುತ್ತಿರುವ ವಿಶ್ಲೇಷಣೆ. ಅದೇ ಹೊತ್ತಿಗೆ ಪ್ರಶಾಂತ್ ಅವರ ಆ ಹೇಳಿಕೆಗೆ ಗಾಂಧಿ ಕುಟುಂಬದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಕೂಡ ಗಮನಾರ್ಹ!