ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗಳು ವಿಭಿನ್ನ ಬಗೆಯಲ್ಲಿ ನಡೆಯುತ್ತಿವೆ. ಹಾನಗಲ್‍ನಲ್ಲಿ ಜಾತಿ ಎಂಬ ಅಂಶ ಹಿನ್ನಲೆಗೆ ಸರಿದಿದೆ. ಸಿಂದಗಿಯಲ್ಲಿ ಜಾತಿ-ಧರ್ಮ ಮತ್ತು ಹಣ ಪಣಕ್ಕೆ ನಿಂತಿವೆ.
ದೇಶದ ಇತಿಹಾಸದಲ್ಲಿ ಮಾಜಿ ಪ್ರಧಾನಿಯೊಬ್ಬರು ಒಂದು ಬೈ ಎಲೆಕ್ಷನ್‍ನಲ್ಲಿ ಇಷ್ಟೊಂದು ಸಕ್ರಿಯರಾಗಿದ್ದು ಇದೇ ಮೊದಲು! ಹೌದು, ದೇವೆಗೌಡರು ಇಲ್ಲಿ 15 ದಿನಗಳಿಂದ ಮೊಕ್ಕಾಂ ಹೂಡಿದ್ದಾರೆ. ದಿನವೂ ನಿರಂತರ ಸಭೆಗಳನ್ನು, ಆಂತರಿಕ ಕಲಾಪಗಳನ್ನು ನಡೆಸುತ್ತಿರುವ ದೇವೆಗೌಡರು ಸಿಂದಗಿ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ ಅಥವಾ ಇಲ್ಲಿ ಕಾಂಗ್ರೆಸ್ ಸೋಲಿಸಲೇಬೇಕು ಎಂದು ಶಪಥ ಮಾಡಿದ್ದಾರೆ.
ಇನ್ನೊಂದು ಕಡೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಕಂಡು ಬರುತ್ತಿದೆ. ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಗೋವಿಂದ ಕಾರಜೋಳ, ವಿ. ಸೋಮಣ್ಣ ಸೇರಿದಂತೆ 7 ಸಚಿವರು ಇಲ್ಲಿ ಸಕ್ರಿಯರಾಗಿದ್ದಾರೆ! ಪ್ರತಿ ಜಿಪಂ ಕ್ಷೇತ್ರಕ್ಕೆ ಒಬ್ಬೊಬ್ಬ ಎಂಎಲ್‍ಎಗಳಿಗೆ ಉಸ್ತುವಾರಿ ನೀಡಲಾಗಿದೆ. ಹಣ ಹಂಚುವಿಕೆಯಲ್ಲಿ ಬಿಜೆಪಿ ಮುಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿ ದಿನವೂ ಒಂದೊಂದು ಸಮುದಾಯದ ಲೀಡರ್‍ಗಳ ಸಭೆ ನಡೆಸಿ ಮತ ವ್ಯವಹಾರ ಕುದುರಿಸಲಾಗುತ್ತಿದೆ ಎಂಬ ಮಾತು ಇವೆ.

ಕಾಂಗ್ರೆಸ್ ಕೂಡ ಇದಕ್ಕೆ ತಕ್ಕಂತೆ ಜಾತಿ, ಹಣದ ಅಸ್ತ್ರಗಳನ್ನು ಝಳಪಿಸುತ್ತಿದೆ. ಜೆಡಿಎಸ್‍ನ ಮುಸ್ಲಿಂ ಅಭ್ಯರ್ಥಿ ನಾಜಿಯಾ ಶಕೀರ್ ಅಂಗಡಿ ಪಡೆಯುವ ಮತಗಳು ನಿರ್ಣಾಯಕ ಆಗಬಹುದು ಕೂಡ.
ಲಿಂಗಾಯತರ ಎರಡು ಪ್ರಮುಖ ಬಣಗಳಾದ ಪಂಚಮಸಾಲಿ ಮತ್ತು ಗಾಣಿಗ ಅಭ್ಯರ್ಥಿಗಳು ಕಾಂಗ್ರೆಸ್ ಬಿಜೆಪಿಯಿಂದ ಕಣದಲ್ಲಿದ್ದಾರೆ. ಕಾಂಗ್ರೆಸ್‍ನಿಂದ ಪಂಚಮಸಾಲಿ ಸಮುದಾಯದ ಅಶೋಕ್ ಮನಗೂಳಿ ಮತ್ತು ಬಿಜೆಪಿಯಿಂದ ಗಾಣಿಗರ ರಮೇಶ ಭೂಸನೂರು ಕಣದಲ್ಲಿದ್ದಾರೆ.

ಲಿಂಗಾಯತರು ಅಧಿಕ ಪ್ರಮಾಣದಲ್ಲಿದ್ದರೂ ಒಬಿಸಿ ಮತ್ತು ಮುಸ್ಲಿಮರು ಸೇರಿದರೆ ಈ ಪ್ರಮಾಣವೇ ದೊಡ್ಡದಾಗಿದೆ. ಈ ಕ್ಷೇತ್ರದಲ್ಲಿ ಜಾತಿ ಆಟ ಆಡುತ್ತಿರುವುದು ನಗ್ನ ಸತ್ಯ. ಜೆಡಿಎಸ್ ಮುಸ್ಲಿಂ ಅಭ್ಯರ್ಥಿ ಹಾಕಿದ್ದು ಕೂಡ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ. ದೇವೆಗೌಡ ಮತ್ತು ಕುಮಾರಸ್ವಾಮಿ ಇಬ್ಬರೂ ಈ ಕ್ಷೇತ್ರವನ್ನು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡಿದ್ದಾರೆ. ದಿ|| ಎಂ.ಸಿ. ಮನಗೂಳಿ ದೇವೆಗೌಡರ ಆಪ್ತರಾಗಿದ್ದರು. ಅವರು ಜೆಡಿಎಸ್‍ನಿಂದ ಇಲ್ಲಿ ಗೆಲುವು ಸಾಧಿಸಿದ್ದರು. ಅವರ ನಿಧನದ ನಂತರ ಜೆಡಿಎಸ್ ಅವರ ಮಗ ಅಶೋಕ್ ಮನಗೂಳಿಗೆ ಟಿಕೆಟ್ ನೀಡಲು ನಿರ್ಧರಿಸಿತ್ತು. ಆದರೆ ಕಾಂಗ್ರೆಸ್ ಅಶೋಕ್ ಮನಗೂಳಿಯನ್ನು ತನ್ನ ಕಡೆ ಸೆಳೆದುಕೊಂಡಿತು. ಅಚಾನಕ್ಕಾಗಿ ಕ್ಷೇತ್ರ ತಪ್ಪಿ ಹೋಗಿತು ಎಂಬ ಆಕ್ರೋಶ ಜೆಡಿಎಸ್ ನಾಯಕರಲ್ಲಿದೆ.

ಆದರೆ ಅದಕ್ಕೆ ಈ ಕ್ಷೇತ್ರದಲ್ಲಿ ಸಂಘಟನೆಯಿಲ್ಲ. ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ನಾಜಿಯಾ ಅವರಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ಕಾಂಗ್ರೆಸ್‍ಗೆ ಸವಾಲು ಹಾಕಿದೆ.
ಬೆಂಗಳೂರಿನಲ್ಲಿ ಕುಳಿತು ಆರ್‍ಎಸ್‍ಎಸ್ ವಿರುದ್ಧ ಆಶ್ಚರ್ಯಕರ ರೀತಿಯಲ್ಲಿ ದಾಳಿ ಮಾಡುತ್ತಿರುವ ಕುಮಾರಸ್ವಾಮಿ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣು ಇಟ್ಟಂತೆ ಕಾಣುತ್ತದೆ. ಸಿಂದಗಿ ಮತ್ತು ಹಾನಗಲ್ ಎರಡರಲ್ಲೂ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದೆ. ಇಲ್ಲಿ ಗೆಲ್ಲುವುದಕ್ಕಿಂತ ಕಾಂಗ್ರೆಸ್ ಸೋಲಿಸುವುದೇ ಮುಖ್ಯ ಗುರಿಯಾಗಿದೆ. ಇದೊಂತರಾ ಆರ್‍ಎಸ್‍ಎಸ್ ಟೀಕಿಸುತ್ತಲೇ ಬಿಜೆಪಿಗೆ ಲಾಭ ಮಾಡಿಕೊಡುವ ತಂತ್ರವೂ ಇರಬಹುದೆನೋ?
ಪಂಚಮಸಾಲಿ ಮತ್ತು ಗಾಣಿಗರು ಸೇರಿ ಲಿಂಗಾಯತರು 60 ಸಾವಿರದಷ್ಟಿದ್ದಾರೆ. ತಳವಾರರು, ಕುರುಬರು ಮತ್ತು ಮುಸ್ಲಿಮರು ತಲಾ 25-30 ಸಾವಿರದಷ್ಟಿದ್ದು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಜಾತಿ ಮತ್ತು ಹಣ ಈ ಚುನಾವಣೆಯಲ್ಲಿ ಪ್ರಮುಖ ಮಾನದಂಡವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹೋರಾಟವಿದ್ದು, ಜೆಡಿಎಸ್ ಗಳಿಸುವ ಮತ ಪ್ರಮಾಣ ಹೆಚ್ಚಿದರೆ ಅದು ಕಾಂಗ್ರೆಸ್‍ಗೆ ಉರುಳಾಗಲಿದೆ, ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಆದಂತೆ!











