ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶದಂತೆ ತಮಿಳುನಾಡಿಗೆ 25.84 ಟಿಎಂಸಿ ನೀರನ್ನು ಬಿಡುವಂತೆ ಈ ಹಿಂದೆ ರಾಜ್ಯಕ್ಕೆ ಆದೇಶಿಸಿತ್ತು. ಕಬಿನಿ ಮತ್ತು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕರ್ನಾಟಕದ ನೀರಿನ ಕೊರತೆ ನೀಗಿಸಲು ಮಳೆರಾಯ ನೆರವಾಗಿದ್ದಾನೆ.
ಈ ತಿಂಗಳ ಆರಂಭದಲ್ಲಿ ಮಳೆ ಸುರಿಯುವ ಮುನ್ನ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಒಳಹರಿವು ಇರದ ಕಾರಣ ರಾಜ್ಯದಲ್ಲಿ ಕಠಿಣ ನೀರಿನ ಪರಿಸ್ಥಿತಿಯನ್ನು ಎದುರಿಸಬೇಕಾಗಿತ್ತು. ಅಕ್ಟೋಬರ್ 30ರ ಒಳಗೆ ಬಿಳಿಗೊಂಡ್ಲುವಿನಲ್ಲಿ 14 ಟಿಎಂಸಿ ನೀರು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿಯು ರಾಜ್ಯಕ್ಕೆ ಆದೇಶಿಸಿತ್ತು.
ಕೊಡಗಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು ಕೆಆರ್ಎಸ್ ಅಣೆಕಟ್ಟಿನಲ್ಲಿ ನೀರಿನ ಮಟ್ಟವು 112 ಟಿಎಂಸಿಯಿಂದ 120 ಟಿಎಂಸಿಗೆ ಏರಿಕೆಯಾಗಿದೆ. ಕಬಿನಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು 7,000 ಸಾವಿರ ಕ್ಯೂಸೆಕ್ಗಳಿಗೆ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಸಮಿತಿ ಒಂದು ವಾರದವರೆಗೆ ಅಧಿಕಾರಿಗಳು ಪ್ರತಿ ದಿನ 6,000 ಸಾವಿರ ಕ್ಯೂಸೆಕ್ ನೀರನ್ನು ಬಿಡುವಂತೆ ಆದೇಶಿಸಿತ್ತು.
ಆಗಸ್ಟ್ನಲ್ಲಿ ಮುಂಗಾರಿನ ಕೊರತೆಯಿಂದ ಮಳೆಯ ಅಭಾವ ಸಂಭವಿಸಿದ ಪರಿಣಾಮ ಕೆಅರ್ಎಸ್ನಲ್ಲಿ ನೀರಿನ ಮಟ್ಟವು 120 ಟಿಎಂಸಿಯಿಂದ 112 ಟಿಎಂಸಿಗೆ ಇಳಿದಿತ್ತು. ಇದೇ ವೇಳೆ ಸಮಿತಿಯು ರಾಜ್ಯಕ್ಕೆ 32 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶಿಸಿತ್ತು. ಇದು ಸ್ಥಳೀಯ ರೈತರ ಆತ್ಮ ವಿಶ್ವಾಸವನ್ನ ಬುಡಮೇಲು ಮಾಡಿತ್ತು. ಸುಮಾರು ಒಂದು ವಾರದಿಂದ ಮಳೆಯು ಎಡಬಿಡದೆ ಸುರಿಯುತ್ತಿರುವ ಕಾರಣ ರಾಜ್ಯವು ತಮಿಳುನಾಡಿಗೆ ನೀಡಬೇಕಾಗಿದ್ದ ನೀರಿನ ಪಾಲನ್ನು ಈಗಾಗಲೇ ಜಲಾಶಯದಿಂದ ಬಿಡುಗಡೆ ಮಾಡಿದೆ.
ಸಕಾಲಿಕ ಮಳೆಯು ಕೆಆರ್ಎಸ್ ಸುತ್ತಮುತ್ತಲಿನ ರೈತರಿಗೆ ವರ್ಷಕ್ಕೆ ಎರಡು ಬೆಳೆಗಳನ್ನು ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಇದಕ್ಕಾಗಿ ಇಲ್ಲಿನ ರೈತರಿಗೆ ಸುಮಾರು 6-7 ಟಿಎಂಸಿ ನೀರು ಬೇಕಾಗುತ್ತದೆ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.