ಪ್ರಿಯಾಂಕ ಗಾಂಧಿ ಜೊತೆಗೆ ಸೆಲ್ಫಿ ತೆಗೆದುಕೊಂಡ ಮಹಿಳಾ ಪೊಲೀಸ್ ಅಧಿಕಾರಿಗಳ ವಿರುದ್ಧ ಯೋಗಿ ಸರ್ಕಾರ ಕ್ರಮಕ್ಕೆ ಮುಂದಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮಹಿಳಾ ಪೊಲೀಸರ ವಿರುದ್ಧ ಕ್ರಮಕ್ಕೆ ಮುಂದಾಗಿರುವುದನ್ನು ಖಂಡಿಸಿರುವ ಪ್ರಿಯಾಂಕ ಗಾಂಧಿ ʼನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದು ಅಪರಾಧವಾದರೆ ನನಗೂ ಶಿಕ್ಷೆಯಾಗಬೇಕುʼ ಎಂದು ಟ್ವೀಟ್ ಮಾಡಿದ್ದಾರೆ.
‘ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಮಹಿಳಾ ಪೊಲೀಸರ ನಡೆಗೆ ಯೋಗಿ ಆದಿತ್ಯನಾಥ್ ಸಿಟ್ಟಾಗಿದ್ದಾರೆ ಎಂದು ಕೇಳಲ್ಪಟ್ಟೆ. ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಅಪರಾಧ ಎಂದಾದರೆ ಈ ಅಪರಾಧಕ್ಕೆ ನನ್ನನ್ನು ಶಿಕ್ಷೆಗೆ ಗುರಿಪಡಿಸಬೇಕು. ಈ ಮಹಿಳಾ ಪೊಲೀಸ್ ಅಧಿಕಾರಿಗಳ ಕರ್ತವ್ಯನಿಷ್ಠೆ ಮತ್ತು ಕಠಿಣ ಪರಿಶ್ರಮದ ಮೇಲೆ ಯಾರೂ ಅನುಮಾನಪಡಬಾರದು. ಕೇವಲ ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಈ ಧೀರ ಮಹಿಳಾ ಪೊಲೀಸ್ ಅಧಿಕಾರಿಗಳ ವೃತ್ತಿ ಜೀವನವನ್ನು ಹಾಳು ಮಾಡುವುದು ಸರಿಯಲ್ಲ. ಯೋಗಿ ಅವರು ಶಿಕ್ಷೆ ನೀಡಲೇಬೇಕು ಎಂದು ನಿರ್ಧರಿಸಿದರೆ ನನಗೆ ನೀಡಲಿ..” ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶ ಪೊಲೀಸ್ ಕಸ್ಟಡಿಯಲ್ಲಿ ಮೃತ ಪಟ್ಟ ಆಗ್ರಾ ಮೂಲದ ಕಾರ್ಮಿಕನ ಕುಟುಂಬವನ್ನು ಭೇಟಿ ಮಾಡಲು ಪ್ರಿಯಾಂಕ ತೆರಳಿದ್ದಾಗ ಉತ್ತರ ಪ್ರದೇಶ ಸರ್ಕಾರ ಅವರನ್ನು ತಡೆದಿತ್ತು.
ಬುಧವಾರ ಪ್ರಿಯಾಂಕಾ ಗಾಂಧಿ ಮೃತ ಕಾರ್ಮಿಕನ ಕುಟುಂಬಸ್ಥರನ್ನು ಭೇಟಿ ಮಾಡಲು ಆಗ್ರಾಕ್ಕೆ ತೆರಳುತ್ತಿದ್ದರು. ಈ ವೇಳೆ ಪ್ರಿಯಾಂಕಾ ಅವರಿಗೆ ಆಗ್ರಾಕ್ಕೆ ತೆರಳಲು ಪೊಲೀಸರು ಅನುಮತಿ ನಿರಾಕರಿಸಿದರು. ಅಲ್ಲದೇ ಮಾರ್ಗ ಮಧ್ಯೆಯೇ ಪ್ರಿಯಾಂಕಾ ಮತ್ತವರ ಬೆಂಬಲಿಗರನ್ನು ತಡೆದಿದ್ದರು.

ಈ ವೇಳೆ ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆಯಲು ಬಂದಿದ್ದ ಕೆಲವು ಮಹಿಳಾ ಪೊಲೀಸ್ ಅಧಿಕಾರಿಗಳು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಒಬ್ಬರಾದ ಮೇಲೆ ಒಬ್ಬರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಪ್ರಿಯಾಂಕಾ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವಿಡೀಯೋ ಸಾಕಷ್ಟು ವೈರಲ್ ಆಗಿತ್ತು.
ಮಹಿಳಾ ಪೊಲೀಸರು ಪ್ರಿಯಾಂಕ ಅವರೊಂದಿಗೆ ಸೆಲ್ಪಿ ತೆಗೆದುಕೊಳ್ಳುತ್ತಿರುವ ಚಿತ್ರ ವೈರಲ್ ಆಗುತ್ತಿದ್ದಂತೆ, ಮಹಿಳಾ ಪೊಲೀಸರ ವರ್ತನೆಯೂ ಪೊಲೀಸ್ ನಿಯಮಾವಳಿ ಉಲ್ಲಂಘನೆಯಾಗಿದೆಯೆ ಎಂದು ವಿಚಾರಿಸಲು ಕೇಂದ್ರೀಯ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ಕೇಳಲಾಗಿದ್ದು, ಈ ವರದಿಯ ಆಧಾರಲ್ಲಿ ಮಹಿಳಾ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವುದೋ ಬೇಡವೇ ಎಂದು ಆಯುಕ್ತರು ನಿರ್ಧರಿಸಲಿದ್ದಾರೆ ಎಂದು ವರದಿಯಾಗಿದೆ.