ಭಾರತದ ಉದ್ಯೋಗ ಬಿಕ್ಕಟ್ಟಿನ ಬಗ್ಗೆ 2018ರಲ್ಲಿ ಸಂದರ್ಶನಾಕಾರರು ಪ್ರಧಾನ ಮಂತ್ರಿ ಮೋದಿ ಅವರನ್ನು ಕೇಳಿದಾಗ ಪ್ರಧಾನಿ ಅವರ ಈ ಉತ್ತರವನ್ನು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. “ನಿಮ್ಮ ಕಛೇರಿಯ ಎದುರು ಯಾರಾದರೂ ಪಕೋಡಾ ಅಂಗಡಿಯೊಂದನ್ನು ತೆರೆದರೆ ಅದನ್ನು ಉದ್ಯೋಗ ಎಂದು ನೀವು ಪರಿಗಣಿಸುವುದಿಲ್ಲವೇ? ಆ ವ್ಯಕ್ತಿ ದಿನಕ್ಕೆ ಸುಮಾರು 200 ರುಪಾಯಿಗಳನ್ನು ದುಡಿಯುತ್ತಾನೆ. ಇದು ಎಲ್ಲೂ ದಾಖಲಿತವಾಗುವುದಿಲ್ಲ. ಇಲ್ಲಿನ ಅಸಲಿ ವಿಷಯವೇನೆಂದರೆ ಬಹುತೇಕರು ಹೀಗೆ ಉದ್ಯೋಗದಲ್ಲಿದ್ದಾರೆ,” ಎಂಬ ಉತ್ತರವನ್ನು ಮೋದಿ ಅವರು ನೀಡಿದ್ದರು.
ಐದು ಜನರ ಕುಟುಂಬವನ್ನು ನಡೆಸಲು ತಿಂಗಳಿಗೆ 6000 ರುಪಾಯಿಗಳು ಸಾಕು ಎಂಬುದು ಪ್ರಧಾನ ಮಂತ್ರಿಗಳ ನಂಬಿಕೆ. 2019-20ರ ವರ್ಷಕ್ಕೆ ಭಾರತದ ಬಡತನ ರೇಖೆಯನ್ನು ನಾವು ಗಮನಿಸಿದರೆ ಐದು ಜನರ ಕುಟುಂಬವೊಂದನ್ನು ಬಡ ಕುಟುಂಬವೆಂದು ಪರಿಗಣಿಸಲು ಅವರ ಅದಾಯ ಮಾಸಿಕವಾಗಿ ಗರಿಷ್ಟ 7,340 ರುಪಾಯಿಗಳಾಗಿರಬೇಕು. ‘ಪಕೋಡ ಮಾರಾಟ’ದ ಆದಾಯವು ಮೋದಿ ಅವರ ಲೆಕ್ಕದಲ್ಲಿ ಮಾಸಿಕವಾಗಿ 6000 ರುಪಾಯಿಗಳಾಗಿದ್ದು ನಗರ ಪ್ರದೇಶದ ಬಡತನ ರೇಖೆಯ ಆದಾಯಕ್ಕಿಂತ 18% ಕಡಿಮೆಯಿದೆ. ಜೊತೆಗೆ ಈ ಆದಾಯವು ಗ್ರಾಮೀಣ ಬಡತನ ರೇಖೆಯ ಆದಾಯಕ್ಕಿಂತಲೂ ಕಡಿಮೆಯಿದೆ.
ಸರಕಾರ ನೀಡುವ ಓರ್ವ ವ್ಯಕ್ತಿಯ ಉಪಭೋಗದ ಖರ್ಚಿನ ಮಾಹಿತಿಯನ್ನು ಬಳಿಸಿ ನಾವು ಬಡತನದ ಮಾಹಿತಿಯನ್ನು ಪ್ರಸ್ತುತ ಪಡಿಸುತ್ತೇವೆ. ಈ ಉಪಭೋಗ ಖರ್ಚಿನ ಸಮೀಕ್ಷೆಯನ್ನು (ಸಿ.ಇ.ಎಸ್.) ನ್ಯಾಷನಲ್ ಸರ್ವೇ ಆರ್ಗನೈಸೇಷನ್ ಪಂಚವಾರ್ಷಿಕವಾಗಿ ನಡೆಸಿದರೂ ಸರಕಾರ 2011-12 ರ ನಂತರ ಈ ಸಮೀಕ್ಷೆಯ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. 2017-18 ರಲ್ಲಿ ಒಂದು ವರ್ಷ ತಡವಾಗಿ ಈ ಸಮೀಕ್ಷೆಯನ್ನು ನಡೆಸಿದರೂ ಇದರ ಮಾಹಿತಿಯನ್ನು ಸರಕಾರ ಸಾರ್ವಜನಿಕರಿಗೆ ಇನ್ನೂ ಒದಗಿಸಿಲ್ಲ.
ಪಂಚವಾರ್ಷಿಕ ಉದ್ಯೋಗ-ನಿರುದ್ಯೋಗ ಸಮೀಕ್ಷೆಗಳನ್ನು ಒಳಗೊಂಡ ಭಾರತದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (ಪಿ.ಎಲ್.ಎಫ್.ಎಸ್.) ಸಹ ಈ ಮಾಹಿತಿಯನ್ನು ಶೇಖರಿಸುತ್ತಿತ್ತು. ಪಿ.ಎಲ್.ಎಫ್.ಎಸ್. ಈ ಸಂಪ್ರದಾಯವನ್ನು ಮುನ್ನಡೆಸುತ್ತಾ ಬಂದಿದ್ದು ಇದೀಗ ಎನ್.ಎಸ್.ಒ. ಇದನ್ನು ವಾರ್ಷಿಕವಾಗಿ ನಡೆಸುತ್ತದೆ.
ಪಿ.ಎಲ್.ಎಫ್.ಎಸ್. ಸಮೀಕ್ಷೆಯ ಪ್ರಶ್ನೆಗಳು ಸಿ.ಇ.ಎಸ್. ಸಮೀಕ್ಷೆಯಷ್ಟು ವಿವರಣಾತ್ಮಕವಾಗಿ ಇಲ್ಲದಿದ್ದರೂ ಉಪಭೋಗದಲ್ಲಿ ಕಂಡು ಬರುವ ಬದಲಾವಣೆಯನ್ನು ಅಂದಾಜಿಸಲು ಆ ಮಾಹಿತಿ ಸಾಕಾಗುತ್ತದೆ. ನಾವು ಬಡತನದಲ್ಲಿರುವವರ ಸಂಖ್ಯೆಯನ್ನು ಅಂದಾಜಿಸುವುದರ ಜೊತೆಗೆ ಎಷ್ಟು ಪ್ರತೀಶತ ಜನಸಂಖ್ಯೆ ಬಡತನದಲ್ಲಿದೆ ಎಂಬುದನ್ನೂ ಅಂದಾಜಿಸುತ್ತೇವೆ. 2012ರಲ್ಲಿ ಪ್ಲಾನಿಂಗ್ ಕಮಿಷನ್ ಅಂದಾಜಿಸಿದ್ದ ಅದೇ ಅಧೀಕೃತ ಬಡತನ ರೇಖೆಯನ್ನು ಬಳಸಲಾಗಿದೆ. ಆದರೆ ಬೆಲೆಯೇರಿಕೆಯನ್ನು ಪರಿಗಣಿಸಿ ಈ ರೇಖೆಯನ್ನು 2020ಕ್ಕೆ ನವೀಕರಿಸಲಾಗಿದೆ.

ಭಾರತ 1973ರಲ್ಲಿ ಬಡತನದ ಕುರಿತು ಅಂದಾಜುಗಳನ್ನು ಮಾಡಲು ಆರಂಭಿಸಿತು. ಅಂದಿನಿಂದ 2012ರ ವರೆಗೂ ಬಡತನದ ಶೇಕಡಾವಾರು ಲೆಕ್ಕ ಇಳಿಯುತ್ತಲೇ ಬಂದಿತ್ತು. 1973-74 ರಲ್ಲಿ ಅದು 54.9% ಇತ್ತು. ನಂತರ 1983-4 ರಲ್ಲಿ 44.5%; 1993-4 ರಲ್ಲಿ 36% ಮತ್ತು 2004-5 ರಲ್ಲಿ 27.5% ಇತ್ತು ಎಂದು ಅಂದಾಜಿಸಲಾಗಿದೆ. ಪ್ಲಾನಿಂಗ್ ಕಮಿಷನ್ ನ ಸದಸ್ಯರಾಗಿದ್ದ ಅರ್ಥಶಾಸ್ತ್ರಜ್ಞ ಲಕ್ಡಾವಾಲಾ ಅವರ ಹೆಸರಿನ ಲಕ್ಡಾವಾಲಾ ಬಡತನ ರೇಖೆಯನ್ನು ಈ ಅಂದಾಜುಗಳು ಅನುಸರಿಸಿವೆ. 2011ರಲ್ಲಿ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನ ಪ್ರಾಧ್ಯಾಪಕರಾಗಿದ್ದ ಸುರೇಶ್ ತೆಂಡುಲ್ಕರ್ ಅವರ ನಾಯಕತ್ವದ ತಜ್ಞರ ಸಮಿತಿಯೊಂದು ಈ ರೇಖೆಯನ್ನು ಮೇಲ್ಮುಖವಾಗಿ ನವೀಕರಿಸಿತು.
ತೆಂಡುಲ್ಕರ್ ಅವರ ಬಡತನ ರೇಖೆಯನ್ನು ಅಧರಿಸಿ ನಾವು 2011-12ರ ರೇಖೆಯನ್ನು ಪ್ರತೀ ರಾಜ್ಯಕ್ಕೂ ವಿಸ್ತರಿಸಿದ್ದೇವೆ. ಜೊತೆಗೆ ಪಿ.ಎಲ್.ಎಫ್.ಎಸ್. ವರದಿ ಮಾಡಿರುವ ಉಪಭೋಗ ಖರ್ಚಿನ ಮಾಹಿತಿಯನ್ನು ಒಂದು ಸ್ಥಿರ ಅಂದಾಜನ್ನು ನೀಡಲು ಬಳಸಿಕೊಂಡಿದ್ದೇವೆ.
ಭಾರತದ ಬಹುತೇಕ ಜನಸಂಖ್ಯೆ ಗ್ರಾಮೀಣ ನಿವಾಸಿಗಳು ಆಗಿರುವುದರಿಂದ ಭಾರತದ ಬಡತನವೂ ಬಹುತೇಕ ಗ್ರಾಮೀಣ ಬಡತನವೇ. 2019-20 ರ ಹೊತ್ತಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಡತನವು ಮಹತ್ವಕಾರಿಯಾಗಿ ಹೆಚ್ಚಾಗಿದೆ. ಇಲ್ಲಿನ ಮುಖ್ಯ ವಿಷಯವೇನು ಎಂದರೆ ಸೋರಿಕೆಗೊಂಡ ಸಿ.ಇ.ಎಸ್. ಮಾಹಿತಿಯೊಂದಿಗೆ ಈ ಅಂದಾಜುಗಳು ಹೊಂದಾಣಿಕೆ ಆಗುತ್ತವೆ. ಸೋರಿಕೆಗೊಂಡ ಮಾಹಿತಿಯ ಪ್ರಕಾರ 2012 ರಿಂದ 2018ರ ಹೊತ್ತಿಗೆ ಗ್ರಾಮೀಣ ಉಪಭೋಗ 8% ದಷ್ಟು ಕಡಿಮೆಯಾಗಿದ್ದು ನಗರ ಪ್ರದೇಶಗಳ ಉಪಭೋಗ ಹೆಚ್ಚೆಂದರೆ 2%ದಷ್ಟು ಏರಿಕೆಯಾಗಿತ್ತು.
ಭಾರತದಲ್ಲಿ ಬಡತನವನ್ನು ಅಂದಾಜಿಸಲು ಆರಂಭಿಸಿದಾಗಿನಿಂದ ಇದೇ ಮೊದಲ ಬಾರಿಗೆ ಬಡಜನರ ಸಂಖ್ಯೆ ಕಳೆದ ಸಮೀಕ್ಷೆಗಿಂತಲೂ ಹೆಚ್ಚಾದದ್ದು. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 2012ರಲ್ಲಿ 21.7 ಕೋಟಿ ಬಡಜನರಿದ್ದರೆ 2019-20 ರ ಹೊತ್ತಿಗೆ ಈ ಸಂಖ್ಯೆ 28.3 ಕೋಟಿಗೆ ಏರಿದೆ. ಹಾಗೆಯೇ ನಗರ ಪ್ರದೇಶಗಳಲ್ಲಿ ಬಡಜನರ ಸಂಖ್ಯೆ 5.3 ಕೋಟಿಯಿಂದ 6.3 ಕೋಟಿಯಷ್ಟು ಹೆಚ್ಚಾಗಿದೆ. ಎಂಟು ವರ್ಷಗಳಲ್ಲಿ ಭಾರತದಲ್ಲಿ 7.6 ಕೋಟಿ ಜನರನ್ನು ಬಡತನಕ್ಕೆ ನೂಕಲಾಗಿದೆ.
| ವಲಯ | 2004-05 | 2011-12 | 2019-20 |
| ಗ್ರಾಮೀಣ | ರು. 446.7 | ರು. 816 | ರು. 1217.9 |
| ನಗರ ಪ್ರದೇಶ | ರು. 578.8 | ರು. 1000 | ರು. 1467.6 |
ಈ ಸಂಖ್ಯಾಂಶಗಳಲ್ಲಿ ಎರಡು ಸಂಗತಿಗಳು ಎದ್ದುಕಾಣುತ್ತವೆ. 1973 ಮತ್ತು 1993 ರ ನಡುವೆ ಭಾರತದ ಜನಸಂಖ್ಯೆ ಮಹತ್ವಕಾರಿ ಹೆಚ್ಚಳವನ್ನು ಕಂಡರೂ ಬಡವರ ಸಂಖ್ಯೆ ಸ್ಥಿರವಾಗಿತ್ತು (32 ಕೋಟಿ, ಲಕ್ಡಾವಾಲಾ ರೇಖೆಯ ಪ್ರಕಾರ). 1993ರಿಂದ 2004ರ ಸಂದರ್ಭದಲ್ಲಿ ಆರ್ಥಿಕ ಸುಧಾರಣೆಗಳ ನಂತರ ಜಿಡಿಪಿ ಬೆಳೆಯಲು ಆರಂಭಿಸಿದಾಗ ಬಡಜನರ ಸಂಖ್ಯೆ 32 ಕೋಟಿಯಿಂದ 30.2 ಕೋಟಿಗೆ 1.8 ಕೋಟಿಗಳಷ್ಟು ಕಡಿಮೆಯಾಯಿತು. ಹಾಗಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಡಜನರ ಸಂಖ್ಯೆ ಕಳೆದ ಸಮೀಕ್ಷೆಗಿಂತ ಹೆಚ್ಚಾಗಿದ್ದು.
ಮತ್ತೊಂದು ಸಂಗತಿಯೇನೆಂದರೆ 2004-5 ರಿಂದ 2011-12ರ ವರೆಗೆ ಬಡಜನರ ಸಂಖ್ಯೆ ಬೃಹತ್ 13.7 ಕೋಟಿಗಳಷ್ಟು ಇಳಿಯಿತು. ವಾರ್ಷಿಕವಾಗಿ 2 ಕೋಟಿ ಜನ ಬಡತನದಿಂದ ವಿಮುಕ್ತರಾಗುತ್ತಿದ್ದರು ಎಂಬುದನ್ನು ಇದು ಸೂಚಿಸುತ್ತದೆ. 2004 ರಿಂದ 2014ರ ವರೆಗೆ ಭಾರತದ ಜಿಡಿಪಿ ಬೆಳವಣಿಗೆಯ ರೇಟ್ ಹೆಚ್ಚು ಕಡಿಮೆ ವಾರ್ಷಿಕವಾಗಿ 8% ಆಗಿತ್ತು. ಇಂತಹ ದಶಕದ ಕನಸಿನ ಸಾಧನೆಯನ್ನು ಈ ಹಿಂದೆಯಾಗಲೀ ಅಥವಾ ಇದಾದ ನಂತರ ಭಾರತ ಕಂಡಿಲ್ಲ.
ಸಾಂಕ್ರಾಮಿಕದ ಮುನ್ನವೇ 2015 ಮತ್ತು 2019ರ ನಡುವೆ ಜಿಡಿಪಿ ಬೆಳವಣಿಗೆಯ ದರ 6% ಕ್ಕೆ ಇಳಿದಿದ್ದು ಭಾರತದ ಹೆಚ್ಚುತ್ತಿರುವ ಬಡತನಕ್ಕೆ ಇದೊಂದು ಕಾರಣವಾಗಿದೆ. ಯುವಕರಲ್ಲಿ ನಿರುದ್ಯೋಗ ಹೆಚ್ಚಿರುವುದು ಮತ್ತೊಂದು ಕಾರಣವಾಗಿದೆ. 2012 ರಿಂದ 2020ರ ವರೆಗೆ ನಿರುದ್ಯೋಗ 6.1% ನಿಂದ 15%ಕ್ಕೆ ಏರಿದೆ. ಹಲವಾರು ವಲಯಗಳಲ್ಲಿ ಕೆಲಸ ಮಾಡುವವರಿಗೆ ವೇತನಗಳು ಕಡಿಮೆಯಾಗಿರುವುದು ಹೆಚ್ಚುತ್ತಿರುವ ಬಡತನಕ್ಕೆ ಮೂರನೇ ಕಾರಣವಾಗಿದೆ.
ಭಾರತದ ಶ್ರಮಿಕ ವರ್ಗದಲ್ಲಿ ಕಾಲು ಭಾಗಕ್ಕೂ ಕಡಿಮೆ ಜನ ನಿಯಮಿತ ವೇತನ ನೌಕರರು; ಕಾಲು ಭಾಗ ಜನ ಅನೌಪಚಾರಿಕ ಕೂಲಿಗಾರರು ಮತ್ತು ಉಳಿದ ಅರ್ಧ ಭಾಗ ಸ್ವಂತ ಉದ್ಯೋಗದಲ್ಲಿ ತೊಡಗಿರುವವರು. ಭಾರತದ ನಗರ ಪ್ರದೇಶಗಳಲ್ಲಿ ನಿಯಮಿತ ವೇತನ ನೌಕರರ ನೈಜ ವೇತನ ದರವು 186 ರುಪಾಯಿಗಳಿಗೆ ಕುಸಿದಿದೆ. 2005-12 ರ ಕಾಲದಲ್ಲಿ ಕೃಷಿಯೇತರ ಉದ್ಯೋಗಗಳು ಬೆಳೆದಾಗ ಅವರ ನೈಜ ವೇತನ ದರವು 183 ರುಪಾಯಿಗಳಿಂದ 226 ರುಪಾಯಿಗಳಿಗೆ ಹೆಚ್ಚಾಗಿತ್ತು. ಹಾಗೆಯೇ 2012-20 ರ ಕಾಲದಲ್ಲಿ ಗ್ರಾಮೀಣ ಭಾಗದ ನಿಯಮಿತ ವೇತನ ನೌಕರರ ವೇತನ ದರವು 48 ರುಪಾಯಿಗಳಿಂದ 41 ರುಪಾಯಿಗಳಿಗೆ ಇಳಿದಿದೆ.

2012-20 ರ ಕಾಲದಲ್ಲಿ ದಿನಗೂಲಿ ನೌಕರರ ನೈಜ ವೇತನ ಕೊಂಚ ಸುಧಾರಿಸಿದರೂ (ಗ್ರಾಮೀಣ ಪ್ರದೇಶಗಳಲ್ಲಿ 22 ರಿಂದ 26 ರುಪಾಯಿಗಳಾಗಿದೆ, ನಗರ ಪ್ರದೇಶಗಳಲ್ಲಿ 87 ರಿಂದ 102 ರುಪಾಯಿಗಳಾಗಿದೆ) ಗ್ರಾಮೀಣ ಸ್ವಂತ ಉದ್ಯೋಗಿಗಳ ದುಡಿಮೆ 21.1 ರುಪಾಯಿಗಳಿಂದ 19.9 ರುಪಾಯಿಗಳಿಗೆ ಇಳಿದಿದೆ. ನಗರ ಪ್ರದೇಶಗಳಲ್ಲಿ 139.9 ರಿಂದ 141.3 ರುಪಾಯಿಗಳಿಗೆ ಹೆಚ್ಚಾಗಿದ್ದರೂ ಇದೇನು ಗಮನಾರ್ಹ ಏರಿಕೆ ಅಲ್ಲ. ವೇತನ ಮತ್ತು ದುಡಿಮೆಯ ಕುಸಿತವು ಕೆಳ ವರ್ಗದ ಕೂಲಿ ಕಾರ್ಮಿಕರ ಮೇಲೆ ಪ್ರಭಾವ ಬೀರಿ ಬಡಜನರ ಸಂಖ್ಯೆ ಹೆಚ್ಚಾಗಿದೆ.
ಭಾರತವು ಉದ್ಯೋಗವನ್ನು ಸೃಷ್ಟಿಸುವವರನ್ನು ತಯಾರಿಸಬೇಕು, ಉದ್ಯೋಗವನ್ನು ಹುಡುಕುವವರನ್ನಲ್ಲ ಎಂಬ ಪ್ರಧಾನಿ ಮಂತ್ರಿಯ ನಿಲುವನ್ನು ಈ ‘ಪಕೋಡಾ’ ಉದ್ಯೋಗ (ಅಂದರೆ ಸ್ವಂತ ಉದ್ಯೋಗ ಅಥವಾ ದಿನಗೂಲಿ ಉದ್ಯೋಗ) ಪ್ರತಿಧ್ವನಿಸುತ್ತದೆ. ಸ್ವಂತ ಉದ್ಯೋಗವೇ ಭಾರತದ ಹಾದಿ, ಅದೇ ‘ಆತ್ಮನಿರ್ಭರತೆ’ ಎಂಬುದು ಸರಕಾರದ ನಿಲುವಾಗಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಪ್ರಧಾನ ಮಂತ್ರಿಯ ‘ಉದ್ಯೋಗವಾಗಿ ಪಕೋಡಾ’ ಎಂಬ ಹೇಳಿಕೆಗೆ ವಿರೋಧ ಪಕ್ಷವೊಂದು ಹೀಗೆ ಪ್ರತಿಕ್ರಯಿಸಿತ್ತು – “ಪಕೋಡಾ ಕರಿಯುವುದನ್ನು ಉದ್ಯೋಗವೆಂದು ಪರಿಗಣಿಸುವುದಾದರೆ ಭಿಕ್ಷಾಟನೆಯನ್ನೂ ಹಾಗೆಯೇ ಪರಿಗಣಿಸಬೇಕು.”
ಕೃಪೆ: ದ ವೈರ್
ಮೂಲ: ಸಂತೋಷ್ ಮೆಹ್ರೋತ್ರಾ ಮತ್ತು ಕೆಶರಿ ಪರಿದಾ
ಸಂತೋಷ್ ಅವರು ಜರ್ಮನಿಯ ಬಾನ್ ನಗರದ ಐ.ಜೆಡ್.ಎ. ಇನ್ಸ್ಟಿಟ್ಯೂಟ್ ಆಫ್ ಲೇಬರ್ ಎಕನಾಮಿಕ್ಸ್ ನ ಸಂಶೋಧನಾಕಾರರು ಮತ್ತು ಕೆಶರಿ ಪರಿದಾ ಸೆಂಟ್ರಲ್ ಯೂನಿವರ್ಸಿಟಿ ಆಫ್ ಪಂಜಾಬಿನಲ್ಲಿ ಅರ್ಥಶಾಸ್ತ್ರವನ್ನು ಹೇಳಿಕೊಡುತ್ತಾರೆ.












