ರಾಜ್ಯದಲ್ಲಿ ದಿನೇದಿನೇ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಕಳೆದೊಂದು ವಾರದಿಂದ ದಾಖಲೆಯ ಕ್ರೈಸ್ತ ಮತಾಂತರ ಸಂಬಂಧಿತ ಘಟನೆಗಳು ರಾಜ್ಯದಲ್ಲಿ ವರದಿಯಾಗಿದೆ ಎಂದು ಖುದ್ದು ಬಿಜೆಪಿ ಸಚಿವರೇ ಆರೋಪಿಸಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿರುವ ಆರ್‌ಎಸ್‌ಎಸ್ ಆಕ್ಟೋಬರ್ 21ಕ್ಕೆ ಮಹತ್ವದ ಸಭೆಯೊಂದನ್ನು ಕರೆದಿದೆ. ಈ ಸಭೆಯಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ತುರ್ತು ಸಮನ್ವಯ ಬೈಠಕ್ ನಡೆಸಲಿದೆ.
ಎಷ್ಟೋ ವರ್ಷಗಳಿಂದ ರಾಜ್ಯದಲ್ಲಿ ಮತಾಂತರ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇತ್ತೀಚೆಗಂತೂ ದಾಖಲೆ ಪ್ರಮಾಣದಲ್ಲಿ ರಾಜ್ಯದ ಮೂಲೆ ಮೂಲೆಯಲ್ಲೂ ಕ್ರೈಸ್ತ ಮತಾಂತರ ಸಾಕಷ್ಟೂ ಸದ್ದು ಮಾಡುತ್ತಿದೆ. ಇದರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಬೇಕು ಎಂದು ಹಿಂದೂಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ.
ಇದೇ ನೆಪವನ್ನಾಗಿಟ್ಟುಕೊಂಡು ಭಜರಂಗದಳ ಕಾರ್ಯಕರ್ತರು ಹುಬ್ಬಳ್ಳಿಯ ಬೈರಿದೇವರಕೊಪ್ಪದ ಎಜೆ ಚರ್ಚ್ನಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾಳಿ ನಡೆಸಿದ್ದರು. ಪಾದ್ರಿ ಪ್ರಾರ್ಥನೆ ಮಾಡಿಸುತ್ತಿದ್ದರು ಎಂದು ಚರ್ಚ್‌ಗೆ ನುಗ್ಗಿ ಗಲಾಟೆ ಮಾಡಿದ್ದರು. ಹೀಗೆ ಮಾಡಿದ ಭಜರಂಗದಳ ಕಾರ್ಯಕರ್ತರ ವಿರುದ್ಧ ಅಲ್ಪಸಂಖ್ಯಾತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ರು.
ಮಂಗಳೂರಿನ ಓಲ್ಡ್ ಕೆಂಟ್ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮತಾಂತರಕ್ಕೆ ಪುಸ್ತಕ ಹಂಚಿದ್ದಾಗಿ ಹಿಂದೂ ಸಂಘಟನೆ ಆರೋಪ ಮಾಡಿತ್ತು. ಅಲ್ಲದೆ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಹಿಡಿದು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದರು. ಇದರ ಪೂರ್ವ-ಪರ ಯೋಚಿಸದೆ ಪೊಲೀಸರು ಕೂಡ ಹಿಂದೂಪರ ಸಂಘಟನೆಗಳು ಥಳಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದರು.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಕುಕ್ಕುಂದೂರುವಿನಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಗತಿ ಪ್ರಾರ್ಥನಾಲಯಕ್ಕೆ ನುಗ್ಗಿ ಹಿಂದೂಪರ ಸಂಘಟನೆಗಳ ಮುಖಂಡರು ಗಲಾಟೆ ಮಾಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಕುಂದಾಪುರ ತಾಲೂಕಿನ ಹಳ್ಳಾಡಿ ಎಂಬಲ್ಲಿ ಮನೆಯಲ್ಲಿ ಮತಾಂತರ ನಡೆಯುತ್ತಿದ್ದರು ಎಂದು ನೆಪವೇಳಿ ಅಲ್ಲಿಯೂ ಹಿಂದೂ ಸಂಘಟನೆಗಳು ದಾಳಿ ಮಾಡಿ ಪುಂಡಾಟ ಮೆರೆದಿದ್ದರು.
ಇನ್ನು, ಮಡಿಕೇರಿಯಲ್ಲಿ ಕ್ರೈಸ್ತ ಮತದ ಪರವಾಗಿ ಮಹಿಳೆಯೊಬ್ಬರು ಕರಪತ್ರ ಹಂಚಿದ್ದರು. ಕ್ರೈಸ್ತ ಧರ್ಮ, ಏಸುವನ್ನು ಮಾತ್ರ ನಂಬಿ ಅಂತ ಪ್ರಚಾರ ಮಾಡ್ತಿದ್ದರು ಎಂದು ಆರೋಪಿಸಿದ್ದರು. ದಿಡ್ಡಳ್ಳಿ ಆದಿವಾಸಿಗಳ ಪರ ಹೋರಾಟ ನಡೆಸುತ್ತಿದ್ದವರ ವಿರುದ್ಧವೂ ಹಿಂದೂ ಸಂಘಟನೆಗಳು ಹೀಗೆ ಸುಳ್ಳು ಆರೋಪ ಎಸಗಿದ್ದರು.
ಹೀಗೆ ಆರ್‌ಎಸ್‌ಎಸ್ ಮತ್ತು ಹಿಂದೂ ಸಂಘಟನೆಗಳು ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಲೇ ಇವೆ. ಹೀಗಿರುವಾಗಲೇ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಚರ್ಚ್ಗಳ ಮೇಲಿನ ದಾಳಿಗಳನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದಾರೆ. ಈ ಹೊತ್ತಲೇ ಅಕ್ಟೋಬರ್ 21ಕ್ಕೆ ಆರ್‌ಎಸ್‌ಎಸ್, ಬಿಜೆಪಿ ತುರ್ತು ಸಮನ್ವಯ ಬೈಠಕ್ ಅನ್ನು ಕರೆದಿದೆ.
ಬೈಠಕ್‌ನಲ್ಲಿ ಸಂಘದ ಮುಖಂಡರಾದ ಸಿ.ಆರ್.ಮುಕುಂದ್, ಸುಧೀರ ಭಾಗಿಯಾಗಲಿದ್ದಾರೆ. ಅಲ್ಲದೆ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್ ಕೂಡ ಉಪಸ್ಥಿತಲಿರಲಿದ್ದಾರೆ. ಬೈಠಕ್ನಲ್ಲಿ ಉತ್ತರಪ್ರದೇಶ ಮಾದರಿಯಲ್ಲಿ ಕಾನೂನು ಜಾರಿಗೆ ತರುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.