ರಾಜ್ಯದಲ್ಲಿ ಉಪಚುನಾವಣೆಯ ರಂಗು ಕಾವೇರುತ್ತಿದ್ದಂತೆ ಜೆಡಿಎಸ್ ಮುಸ್ಲಿಂ ಓಲೈಕೆ ರಾಜಕಾರಣಕ್ಕೆ ತೊಡಗಿಸಿಕೊಂಡಿದೆ. ಆ ಮೂಲಕ ಕಾಂಗ್ರೆಸ್ನ ಪ್ರಬಲ ವೋಟ್ಬ್ಯಾಂಕ್ ಅನ್ನು ತನ್ನೆಡೆಗೆ ಸೆಳೆಯಲು ಪ್ರಯತ್ನ ಪಡುತ್ತಿದೆ. ಮುಸ್ಲಿಮರ ಮತಗಳನ್ನು ಗಮನದಲ್ಲಿಟ್ಟುಕೊಂಡೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಆರ್ಎಸ್ಎಸ್ ವಿರುದ್ಧ ಬಿರುಸಿನ ದಾಳಿ ನಡೆಸುತ್ತಿದ್ದಾರೆ.
ಆರ್ಎಸ್ಎಸ್ ವಿರುದ್ಧ ಹೆಚ್ಡಿಕೆ ಮಾಡುತ್ತಿರುವ ವಾಗ್ದಾಳಿಯ ಹಿಂದಿನ ರಾಜಕಾರಣ ಕಾಂಗ್ರೆಸ್ ನಾಯಕರಿಗೂ ಬಿಸಿ ಮುಟ್ಟಿಸಿದೆ. ಈ ಹಿನ್ನೆಲೆಯಲ್ಲೇ ಜೆಡಿಎಸ್ ಮುಸ್ಲಿಮ್ ಅಭ್ಯರ್ಥಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಿ ಎಂದು ಬಹಿರಂಗ ಸವಾಲು ಹಾಕಿತ್ತಿದ್ದಾರೆ. ನಮ್ಮದು ಹೈಕಮಾಂಡಿನ ಪಕ್ಷ, ನಮ್ಮ ಮುಖ್ಯಮಂತ್ರಿ ಯಾರೆಂಬುದು ಹೈಮಾಂಡಿನ ತೀರ್ಮಾನ, ಆದರೆ ಜೆಡಿಎಸ್ ಮುಖ್ಯಮಂತ್ರಿ ಯಾರೆಂದು ಕುಮಾರಸ್ವಾಮಿ ಅವರ ಮನೆಯಲ್ಲೇ ನಿರ್ಧಾರವಾಗುತ್ತದೆ. ಹಾಗಾಗಿ, ನಮಗಿಂತಲೂ ಮುಸ್ಲಿಂ ಅಭ್ಯರ್ಥಿಯನ್ನು ಸಿಎಂ ಮಾಡುವುದು ಜೆಡಿಎಸ್ಗೆ ಸುಲಭ ಎಂದು ಕಾಂಗ್ರೆಸ್ ನಾಯಕ ಝಮೀರ್ ಹೆಚ್ಡಿಕೆಗೆ ಸವಾಲು ಹಾಕಿದ್ದಾರೆ.
ಅದೇನೇ ಆಗಲಿ, ಜೆಡಿಎಸ್ ಅಂತೂ ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಮತಗಳಿಗೆ ಗಂಭೀರವಾಗಿ ಗಾಳ ಹಾಕಿದೆ. ಹಾಗಾಗಿಯೇ ಇತ್ತೀಚೆಗೆ ಸ್ಥಳೀಯ ಮುಸ್ಲಿಂ ಮುಖಂಡರನ್ನು ಓಲೈಸುತ್ತಾ ಬಂದಿದೆ. ಅಲ್ಲದೆ, ಅಲ್ಪಸಂಖ್ಯಾತ ಕಾರ್ಯಗಾರ ಮಾಡಿ ಸ್ಥಳೀಯ ನಾಯಕರನ್ನು ಜೆಡಿಎಸ್ ಒಳಗೆ ಸೆಳೆದುಕೊಂಡಿದೆ. ಎಸ್ಡಿಪಿಐ, ಎಂಐಎಂ ನ ಸ್ಥಳೀಯ ನಾಯಕರು ಸೇರಿದಂತೆ ಹಲವಾರು ಬೆಂಬಲಿಗರು ಜೆಡಿಎಸ್ ಸೇರಿಕೊಂಡಿದ್ದಾರೆ. ಜೆಡಿಎಸ್ನ ಕಾರ್ಯಗಾರದ ತಂತ್ರಗಾರಿಕೆ ತಕ್ಕ ಮಟ್ಟಿಗೆ ಯಶಸ್ಸು ಕಂಡುಬಂದಿದೆ.
ಕುತೂಹಲ ಮೂಡಿಸಿದ ಸಿಎಂ ಇಬ್ರಾಹಿಂ ಹೆಚ್ಡಿಕೆ ಭೇಟಿ.!
ಈ ನಡುವೆ, ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಭೇಟಿ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೆಚ್ ಡಿ ಕುಮಾರಸ್ವಾಮಿ ಸಿಂದಗಿಗೆ ಉಪಚುನಾವಣೆ ಪ್ರಚಾರಕ್ಕೆ ತೆರಳುವ ಮುನ್ನ ಸಿ.ಎಂ.ಇಬ್ರಾಹಿಂ ಮನೆಗೆ ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ.
ಇದರೊಂದಿಗೆ ಸಿಎಂ ಇಬ್ರಾಹಿಂ ಜೆಡಿಎಸ್ ಸೇರಲಿದ್ದಾರೆಂಬ ಊಹಾಪೋಹಗಳಿಗೆ ಇನ್ನಷ್ಟು ಬಲ ಬಂದಂತಾಗಿದೆ. ಮೂಲಗಳ ಪ್ರಕಾರ, ಇಬ್ಬರೂ ನಾಯಕರು ಸುದೀರ್ಘ ಮಾತುಕತೆ ನಡೆಸಿದ್ದು, ಇಬ್ರಾಹಿಂ ಜೆಡಿಎಸ್ ಸೇರ್ಪಡೆ ಕುರಿತು ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ. ಉಭಯ ನಾಯಕರ ನಡುವಿನ ಚರ್ಚೆಯ ಫಲಶ್ರುತಿಯಾಗಿ ಇಬ್ರಾಹಿಂ ಡಿಸೆಂಬರ್ನಲ್ಲಿ JDS ಸೇರ್ಪಡೆ ಆಗಲಿದ್ದಾರೆ. ಇಬ್ರಾಹಿಂ ಜತೆ ಇನ್ನೂ ಹಲವು ಮುಖಂಡರು JDS ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ ಎಂದು ಸ್ವಪಕ್ಷದ ಮೇಲೆಯೇ ಬಹಿರಂಗ ವಾಗ್ದಾಳಿ ನಡೆಸಿದ್ದ ಇಬ್ರಾಹಿಂ, ಜೆಡಿಎಸ್ ಜೊತೆಗೆ ಸಂಪರ್ಕ ಇಟ್ಟುಕೊಂಡೇ ಬಂದಿದ್ದರು.
ಸೋಮವಾರ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪತ್ರಿಕಾಗೋಷ್ಟಿ ನಡೆಸಿದ್ದ ಕಾಂಗ್ರೆಸ್ ಶಾಸಕ ಝಮೀರ್ ಅಹಮದ್, ಸಿಎಂ ಇಬ್ರಾಹಿಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಿಎಂ ಇಬ್ರಾಹಿಂ ಕಾಂಗ್ರೆಸ್ನಲ್ಲಿ ಒಂದು ಕಾಲು, ಜೆಡಿಎಸ್ ನಲ್ಲಿ ಒಂದು ಕಾಲು ಇಟ್ಟಿದ್ದಾರೆ ಎಂದು ಝಮೀರ್ ಅಹಮದ್ ನೇರವಾಗಿ ಆರೋಪಿಸಿದ್ದರು. ಝಮೀರ್ ಆರೋಪದ ಬೆನ್ನಲ್ಲೇ ಹೆಚ್ಡಿಕೆ ಸಿಎಂ ಇಬ್ರಾಹಿಂ ಅವರನ್ನು ಭೇಟಿ ಮಾಡಿರುವುದು ಝಮೀರ್ ಹೇಳಿಕೆಗೆ ಇಂಬು ಕೊಟ್ಟಂತಿದೆ.
ಹಾಗೆ ನೋಡಿದರೆ, ಝಮೀರ್ ಆಗಲಿ ಸಿಎಂ ಇಬ್ರಾಹಿಂ ಆಗಲಿ ಇಬ್ಬರೂ ಜೆಡಿಎಸ್ ಪಾಳೆಯದಲ್ಲಿ ಇದ್ದವರೇ. ನಂತರ ಕಾಂಗ್ರೆಸ್ ಪಕ್ಷದಲ್ಲಿ ರಾಜಕಾರಣ ಜೀವನ ಮುಂದುವರೆಸಿದ್ದರು. ಕಾಂಗ್ರೆಸಿನಲ್ಲಿ ಝಮೀರ್ಗಿಂತ ಸಿಎಂ ಇಬ್ರಾಹಿಂ ಹಿರಿಯ. ಆದರೆ, ಝಮೀರ್ ಕಾಂಗ್ರೆಸ್ ಸೇರಿಕೊಂಡಂದಾಗಿಂದ ಪಕ್ಷದೊಳಗೆ ತಮಗೆ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ ಎನ್ನುವುದು ಇಬ್ರಾಹಿಂ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಅಸಮಾಧಾನ ಝಮೀರ್ ಮೇಲೆ ಮಾತ್ರವಲ್ಲದೆ ಪಕ್ಷದ ವರಿಷ್ಟರ ಮೇಲೂ ತಿರುಗಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕಾಗಿ ಪಕ್ಷದ ವರಿಷ್ಟರಿಗೆ ಸಿಎಂ ಇಬ್ರಾಹಿಂ ಇಟ್ಟಿದ್ದ ಬೇಡಿಕೆಗೆ ಕಾಂಗ್ರೆಸ್ ವರಿಷ್ಟರು ಮಣೆ ಹಾಕದಿರುವುದು ಹಾಗೂ ಅದೇ ವೇಳೆ ಎಐಸಿಸಿ ಮಟ್ಟದಲ್ಲಿ ಸಿದ್ದರಾಮಯ್ಯ ಮುಖಾಂತರ ಝಮೀರ್ ಪ್ರಭಾವ ಹೆಚ್ಚಾಗುತ್ತಿರುವುದು ಇಬ್ರಾಹಿಂ ಅಸಮಾಧಾನ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಒಂದು ಮೂಲದ ಪ್ರಕಾರ ಯುಪಿ ಚುನಾವಣೆಯಲ್ಲಿ ಝಮೀರ್ಗೆ ಮಹತ್ವದ ಜವಾಬ್ದಾರಿ ಸಿಗಲಿದೆ ಎನ್ನಲಾಗಿದೆ.
ಜಮೀರ್ ಅಹಮದ್ ಖಾನ್ ಅವರಿಗೆ ಈಗಾಗಲೇ ಪ್ರಿಯಾಂಕಾ ಗಾಂಧಿ ಕಚೇರಿಯಿಂದ ಕರೆ ಬಂದಿದ್ದು, ಉತ್ತರ ಪ್ರದೇಶ ಚುನಾವಣೆಯ ಜವಾಬ್ದಾರಿಯನ್ನು ಜಮೀರ್ ಅಹ್ಮದ್ಗೆ ವಹಿಸಲು ಪ್ರಿಯಾಂಕ ಗಾಂಧಿ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಶಾಸಕ ಜಮೀರ್ ಅಹ್ಮದ್ ಅವರಿಂದ ಪ್ರಚಾರ ನಡೆಸುವ ಜವಾಬ್ದಾರಿ ನೀಡುವ ಸಾಧ್ಯತೆಯಿದೆ. ಓವೈಸಿಗೆ ತಿರುಗೇಟು ನೀಡಲು ಕಾಂಗ್ರೆಸ್ ಈ ತಂತ್ರಗಾರಿಕೆ ಹೆಣೆದಿದೆ ಎನ್ನಲಾಗಿದ್ದರೂ, ಈ ಕುರಿತು ಅಧಿಕೃತ ಮಾಹಿತಿಯೇನೂ ಹೊರಬಿದ್ದಿಲ್ಲ. ಅದೇನೆ ಆಗಲಿ, ಹಿರಿಯ ನಾಯಕನಾಗಿಯೂ ತನ್ನ ಬೇಡಿಕೆ ಈಡೇರಿಸದಿರುವುದು ಹಾಗೂ ತನಗಿಂತ ಕಿರಿಯ ಝಮೀರ್ ಪಕ್ಷದೊಳಗೆ ಪ್ರಭಾವ ಹೆಚ್ಚುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಒಟ್ಟಾರೆ, ಜೆಡಿಎಸ್ ಅಲ್ಪಸಂಖ್ಯಾತ ಮತಬೇಟೆಗೆ ಭರ್ಜರಿಯಾಗಿ ಇಳಿದಿದೆ. ತನ್ನ ಮತಬ್ಯಾಂಕನ್ನು ಶಥಾಯಗತಾಯ ಉಳಿಸಲೇಬೇಕೆಂದು ಹೊರಟಿರುವ ಕಾಂಗ್ರೆಸ್, ತನ್ನೊಂದಿಗೆ ಇರುವ ಮುಸ್ಲಿಂ ನಾಯಕರನ್ನು ಸಮನ್ವಯದಿಂದ ಕರೆದುಕೊಂಡು ಹೋಗಲು ಸಂಪೂರ್ಣ ಸೋತು, ಒಬ್ಬರ ಮೇಲೆ ಇನ್ನೊಬ್ಬರನ್ನು ಛೂಬಿಟ್ಟಿದೆ. ಪರಿಣಾಮ ಏನಾಗಲಿದೆಯೆಂದು ಇನ್ನಷ್ಟೇ ಕಾದು ನೋಡಬೇಕಿದೆ.