ಭಾರತದ ಚೀಫ್ ಜಸ್ಟಿಸ್ ಆಗಿರುವ ಎನ್.ವಿ.ರಮಣ ಅವರು ಇತ್ತೀಚೆಗಷ್ಟೇ “ನಮ್ಮ ನ್ಯಾಯಾಂಗ ವ್ಯವಸ್ಥೆಯು ವಸಾಹತುಶಾಹಿ ಶೈಲಿಯನ್ನು ತ್ಯಜಿಸಿ ಭಾರತೀಕರಣಕ್ಕೆ ಒಳಗಾಗಬೇಕು” ಎಂದು ಹೇಳಿದ್ದರು. ಆದರೆ, ಇದರ ಪ್ರಾಯೋಗಿಕ ಅರ್ಥ ಏನು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗುವುದಿಲ್ಲ.
ಭಾರತದ ಸ್ವಾತಂತ್ರೋತ್ತರ ದಶಕಗಳಲ್ಲಿ ಭಾರತೀಕರಣ ಯಾವುದೇ ಮಹತ್ವಕಾರಿ ಬದಲಾವಣೆಯನ್ನು ಸೂಚಿಸಿರಲಿಲ್ಲ. ಕೆಲವೊಮ್ಮೆ, ಸಾರ್ವಜನಿಕ ಸ್ಥಳಗಳ ಪ್ರಜಾತಾಂತ್ರೀಕರಣ ಅಥವಾ ಪಾರದರ್ಶಕತೆಯನ್ನು ಹೆಚ್ಚಿಸುವುದೇ ಭಾರತೀಕರಣವೆಂಬ ಅರ್ಥ ಮೂಡುತ್ತಿತ್ತು. ಬೇರೆಯ ಸಮಯದಲ್ಲಿ, ಅದರ ಅರ್ಥ ಸಂಪೂರ್ಣವಾಗಿ ವಿರುದ್ಧಾರ್ಥಕವಾಗಿತ್ತು. ಚರ್ಚೆ ಮತ್ತು ಸಂವಾದಕ್ಕೆ ಅವಕಾಶಗಳನ್ನು ಕಡಿತಗೊಳಿಸುವ ‘ಬಲಿಷ್ಟ ರಾಷ್ಟ್ರ ಪ್ರಭುತ್ವ’ದ ಪರಿಕಲ್ಪನೆಯೇ ಭಾರತೀಕರಣ ಎಂದೂ ಸಹ ಅರ್ಥೈಸಿಕೊಳ್ಳಲಾಗಿದೆ. ಇನ್ನೂ ಕೆಲವರಿಗೆ ಧಾರ್ಮಿಕ-ಸಾಂಸ್ಕೃತಿಕ ಅಸ್ಮಿತೆಯೊಂದನ್ನು ದೇಶದ ಪರಕಲ್ಪನೆಯೊಂದಿಗೆ ಬೆರೆಸುವುದೇ ಭಾರತೀಕರಣವೆಂಬಂತೆ ಕಂಡಿದೆ.
ಈ ವರ್ಷದ ಆರಂಭದಲ್ಲಿ ಭಾರತವು ಕೇವಲ ಪ್ರಾತಿನಿಧಿಕ ಪ್ರಜಾತಂತ್ರವಾಗಿದ್ದು, ಸಹಯೋಗಿ ಪ್ರಜಾತಂತ್ರವಲ್ಲ ಎಂದು ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಎದುರು ವಾದಿಸಿತ್ತು. ಈ ಪ್ರಜಾತಂತ್ರದಲ್ಲಿ ನಾಗರೀಕರ ಭಾಗವಹಿಸುವಿಕೆ ಅಥವಾ ಸಹಯೋಗತ್ವ ಕೇವಲ ನಾಯಕರನ್ನು ಚುನಾಯಿಸುವುದಕ್ಕೆ ಸೀಮಿತವಾಗುತ್ತದೆ ಎಂಬುದು ಇದರ ಅರ್ಥ. ಬಹುಮತ ಗಳಿಸುವವರು ನಂತರ ಸರ್ಕಾರ ರಚಿಸಿ ತಮಗೆ ಬೇಕಾದುದ್ದನ್ನು ಮಾಡಬಹುದು. ಈ ದೃಷ್ಟಿಕೋನದಲ್ಲಿ ಪ್ರಭುತ್ವದ ನೀತಿಗಳನ್ನು ಅಥವಾ ಕ್ರಮಗಳನ್ನು ಪ್ರಶ್ನೆ ಮಾಡುವುದು ಪ್ರಭುತ್ವವನ್ನು ಅಡ್ಡಿಪಡಿಸುವುದಕ್ಕೆ ಸಮಾನ. ಅಧಿಕಾರದಲ್ಲಿರುವವರಿಗೆ ಪ್ರತಿರೋಧವನ್ನು ಸಹಿಸುವಷ್ಟು ತಾಳ್ಮೆ ಇಲ್ಲವಾದಲ್ಲಿ ಈ ಪ್ರತಿರೋಧವನ್ನು ‘ಭಾರತ-ವಿರೋಧಿ’ ಎಂದು ಪರಿಗಣಿಸಬಹುದು ಎನ್ನುತ್ತದೇ ಈ ವಾದ.

‘ಸರಕಾರಕ್ಕೆ ಜನರ ಒಳಿತಿನ ಕುರಿತು ಪಾಠ ಮಾಡಬೇಕಿಲ್ಲ’ ಎಂಬ ವಾದ ಹಲವಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಭಾರತದ ಮೊದಲ ಸರ್ಕಾರ ಚುನಾಯಿತವಾಗುವ ಮುನ್ನವೇ ಅಂದಿನ ಮಧ್ಯಂತರ ಸರ್ಕಾರ ಸಂವಿಧಾನಕ್ಕೆ ಮೊದಲ ತಿದ್ದುಪಡಿಯನ್ನು ಮಾಡಿತ್ತು. ಆ ಸರ್ಕಾರ ಜವಹರಲಾಲ್ ನೆಹರು ಅವರ ಮುಂದಾಳತ್ವದ ಸರ್ಕಾರವಾಗಿತ್ತು.
ಆ ತಿದ್ದುಪಡಿಯು ನಾಗರೀಕರ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರದ ಮೇಲೆ ನಿಯಂತ್ರಣ ಸಾಧಿಸಲು ಉದ್ದೇಶಿಸಿತ್ತು. ಆಗ ತಾನೆ ಜನ್ಮ ಪಡೆದಿದ್ದ ಗಣರಾಜ್ಯದಲ್ಲಿ ಸ್ಥಿರವಾದ ಪ್ರಜಾಪ್ರಭುತ್ವವೊಂದನ್ನು ನಿರ್ಮಿಸಲು ಈ ರೀತಿ ಮಾಡಲಾಗಿತ್ತು. ದೇಶ ವಿಭಜನೆಯ ಸಮಯದಲ್ಲಿ ಜನರ ಪ್ರಚೋದನಾಕಾರಿ ವರ್ತನೆ, ತೆಲಂಗಾಣದ ರೈತ ಚಳುವಳಿ, ಆಹಾರ ಕೊರತೆ ಇತ್ಯಾದಿ ಸಮಸ್ಯೆಗಳಿಂದ ನಡೆಯಬಹುದಾದ ಸಾರ್ವಜನಿಕ ಗಲಭೆಗಳನ್ನು ನಿಯಂತ್ರಿಸುವುದಕ್ಕೆ ಆ ತಿದ್ದುಪಡಿ ಅವಶ್ಯಕವಿತ್ತು.
ಖಾಸಗಿ ಆಸ್ತಿಯ ಕುರಿತಾದ ನೀತಿಗಳನ್ನೂ ಬದಲಾಯಿಸಿದ ಆ ತಿದ್ದುಪಡಿಯು ಪ್ರಚೋದನಾಕಾರಿ ಭಾಷಣಗಳನ್ನು ನಿಯಂತ್ರಿಸಲು ಪ್ರಭುತ್ವಕ್ಕೆ ಅಧಿಕಾರವನ್ನು ನೀಡಿತು. ಹೊಸ ಗಣರಾಜ್ಯವು ತನ್ನ ಪ್ರತಿಭಟನಾಕಾರರ ಮೇಲೆ ನಂಬಿಕೆ ಇಡಬೇಕು ಎಂದು ಯೋಚಿಸುತ್ತಿದ್ದವರು ಇದನ್ನು ವಿರೋಧಿಸಿದ್ದರು.
ಈ ಗೊಂದಲವನ್ನು ಸಿದ್ದಾರ್ಥ್ ನಾರಾಯಿನ್ ಅವರು ಹೀಗೆ ವರ್ಣಿಸುತ್ತಾರೆ: ‘ಭಾರತದ ಕಾನೂನು-ಸಮ್ಮತಿಯನ್ನು ಯಾರಲ್ಲಿ ಕಾಣಬೇಕು – ವಸಾಹತುಶಾಹಿ ಆಡಳಿತದ ನಂತರ ಹುಟ್ಟಿಕೊಂಡಿರುವ ಮಧ್ಯಂತರ ಸಂಸತ್ತಿನಲ್ಲಿಯೋ, ಅಥವಾ ಅಸಂಘಟಿತ ಪ್ರತಿಭಟನಾಕಾರರಲ್ಲಿಯೋ. ಮೊದಲನೆ ತಿದ್ದುಪಡಿ ಒಪ್ಪಿತವಾದಾಗ ಈ ‘ಭಾರತೀಕರಣ’ ಕೊಂಚ ಪ್ರಭುತ್ವದತ್ತ ಮುಖ ಮಾಡಿತು ಎಂದು ಭಾವಿಸಬಹುದು.

ಭಾರತದ ಆರಂಭಿಕ ಚುನಾಯಿತ ಸರ್ಕಾರಗಳು ವಸಾಹತುಶಾಹಿ ವ್ಯವಸ್ಥೆಯ ಕಾನೂನುಗಳನ್ನು ಸ್ವತಂತ್ರವಾದ ದೇಶದ ಮೇಲೆ ಪ್ರಯೋಗಿಸಲು ಆರಂಭಿಸಿದವು. ಅವರ ಸಾಂವಿಧಾನಿಕ ಸ್ಥಾನವನ್ನು ಗುರುತಿಸಿಕೊಂಡು ನಾಗರೀಕರು ಗಣರಾಜ್ಯದ ತಿದ್ದುಪಡಿಗಳನ್ನು ಗೌರವಿಸುತ್ತಾ ಹಿನ್ನಡೆದರು. ರೋಹಿತ್ ಡೆ ಅವರ ಪುಸ್ತಕವಾದ ‘ಅ ಪೀಪಲ್ಸ್ ಕಾನ್ಸ್ಟಿಟ್ಯೂಷನ್’ ಈ ‘ಭಾರತೀಕರಣದ’ ವಾದ ವಿವಾದಗಳನ್ನು ವಿವರಿಸುತ್ತದೆ.
ಚೀಫ್ ಜಸ್ಟೀಸ್ ರಮಣ ಅವರ ‘ಭಾರತೀಕರಣ’ವು ನ್ಯಾಯಾಂಗವನ್ನು ಇನ್ನಷ್ಟು ಪ್ರಜಾತಾಂತ್ರೀಕರಿಸುವದರ ಕುರಿತಾಗಿದೆ. ಪ್ರಭುತ್ವವನ್ನು ಕೇಂದ್ರವಾಗಿಸಿಕೊಳ್ಳುವ ‘ಭಾರತೀಕರಣ’ದ ಪರಿಕಲ್ಪನೆ ಅವರದ್ದಲ್ಲ. ‘ಜನಸಾಮಾನ್ಯರು ನ್ಯಾಯಾಂಗವನ್ನು ತಲುಪಲು ಎದುರಿಸಬೇಕಾದ (ಭಾಷೆ ಮತ್ತು ಶೈಲಿಯ) ಅಡೆತಡೆ’ಗಳ ಕುರಿತು ರಮಣ ಮಾತನಾಡುತ್ತಾರೆ.
ಭಾಷೆ ಮತ್ತು ಪ್ರೋಟೋಕಾಲ್‌ಗಳಿಂದ ಜನಸಾಮಾನ್ಯರು ಅನುಭವಿಸುವ ಅಂತರವನ್ನು ಮೀರಿ ನ್ಯಾಯ ವ್ಯವಸ್ಥೆ ಅಂದಿನ ಸಾಮಾಜಿಕ ಮತ್ತು ರಾಜಕೀಯ ವಿವೇಚನೆಗೆ ಅನುಸಾರವಾಗಿ ನಡೆಯುತ್ತದೆ. ನ್ಯಾಯ ವ್ಯವಸ್ಥೆಯನ್ನು ಹೆಚ್ಚು ಪ್ರಜಾತಾಂತ್ರಿಕರಿಸುವುದಕ್ಕೆ ನಮ್ಮ ಕಾಲದ ರಾಜಕೀಯ ಮತ್ತು ಸಾಮಾಜಿಕ ತರ್ಕವು ಪ್ರಜಾತಂತ್ರದ ಪರವಾಗಿರಬೇಕೇ ಹೊರತು ಬಹುಸಂಖ್ಯಾತವಾದದ (ಮೆಜಾರಿಟೇರಿಯನಿಸಂನ) ಪರವಾಗಲ್ಲ. ಆದರೆ ಯಾವಾಗಲೂ ಹೀಗೆಯೇ ಆಗಬೇಕೆಂದಿಲ್ಲ.
ಒಂದು ಕಠಿಣ ಪ್ರಭುತ್ವವನ್ನು ಸೃಷ್ಟಿಸುವುದು
ಇಂದು ಭಾರತೀಕರಣವನ್ನು ‘ಕಠಿಣವಾದ ರಾಷ್ಟ್ರ ಪ್ರಭುತ್ವ’ವನ್ನು ನಿರ್ಮಿಸುವುದು ಎಂದು ಸಾಮಾನ್ಯವಾಗಿ ಅರ್ಥೈಸಲಾಗುತ್ತಿದೆ. ಪ್ರತಿಭಟನಾಕಾರರ ಕುರಿತು, ಕಾನೂನಾತ್ಮಕ ಪ್ರಕ್ರಿಯೆಗಳ ಕುರಿತು, ಪಾಕಿಸ್ತಾನದ ಕುರಿತು ಮತ್ತು ಜಾಗತಿಕ ಸಂಧಾನದ ಕುರಿತು ಕಠಿಣ ನಿಲುವುಗಳನ್ನು ಇರಿಸಿಕೊಳ್ಳುವುದೇ ಭಾರತೀಕರಣ ಎಂದು ಬಿಂಬಿಸಲಾಗುತ್ತಿದೆ. ‘ಕಠಿಣ ಪ್ರಭುತ್ವ’ದ ನಿರ್ಮಾಣದ ಪ್ರಕ್ರಿಯೆಯಲ್ಲಿ ಕುಂದುತ್ತಿರುವ ಪ್ರಜಾಪ್ರಭುತ್ವದ ಕುರಿತು ಇಂದಿನ ‘ಭಾರತೀಕರಣ’ ಗಮನ ವಹಿಸುವುದೇ ಇಲ್ಲ.

‘ರಾಷ್ಟ್ರೀಯ ಭದ್ರತೆ’ ಎಂಬ ಅಸ್ಪಷ್ಟ ಉಲ್ಲೇಖಗಳನ್ನು ಮಾಡಿ ನಾಗರೀಕರ ಮತ್ತು ನ್ಯಾಯಾಂಗದ ದೃಷ್ಟಿಗೂ ಮೀರಿ ಅಧಿಕಾರವನ್ನು ತಮಗೆ ಬೇಕಾದಂತೆ ಬಳಸಲಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಭದ್ರತೆ ಎಂದು ನಾವು ಮಾತನಾಡಬೇಕಾದರೆ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದೇ ಅರ್ಥವಾಗದಷ್ಟು ಅಸ್ಪಷ್ಟವಾಗಿದೆ. ‘ರಾಷ್ಟ್ರೀಯ ಭದ್ರತೆ’ ಎಂಬ ನೆಪದಡಿ ಪ್ರಭುತ್ವವು ಅಂತ್ರಜಾಲವನ್ನು ನಿರ್ಬಂಧಿಸಬಹುದು, ವೈಯಕ್ತಿಕ ಸ್ವಾತಂತ್ರಗಳನ್ನು ಉಲ್ಲಂಘಿಸಿ ತನ್ನ ನಾಗರೀಕರ ಮೇಲೆ ನಿಗಾ ವಹಿಸಬಹುದು ಅಥವಾ ಅವರನ್ನು ಬಂಧಿಸಬಹುದು. ‘ರಾಷ್ಟ್ರೀಯ ಭದ್ರತೆ’ ಎಂಬ ನೆಪವೊಡ್ಡಿ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡವಿಟ್ಗಳನ್ನು ನೀಡಲು ಪ್ರಭುತ್ವ ನಿರಾಕರಿಸಬಹುದಾಗಿದೆ, ಜೊತೆಗೆ ಎಫ್.ಐ.ಆರ್. ಪ್ರತಿಗಳನ್ನು ನೀಡದೆ ಒಬ್ಬರನ್ನು ಬಂಧಿಸಬಹುದಾಗಿದೆ.
ಚರ್ಚೆಗಳು ಅನಾವಶ್ಯಕ ಎಂಬ ಮನೋಭಾವದಲ್ಲಿ ಪ್ರಭುತ್ವವು ನ್ಯಾಯಾಲಯಗಳಿಗೆ ‘ಮುದ್ರಿತ ಲಕೋಟೆ’ಗಳಲ್ಲಿ ವರದಿಗಳನ್ನು ಸಲ್ಲಿಸುತ್ತದೆ. ಇಂತಹ ವರ್ತನೆಯಲ್ಲಿ ಪಾರದರ್ಶಕತೆ ಎಲ್ಲಿದೆ. ಹಾಗಾಗಿ ಹಲವಾರು ಬಾರಿ ಪ್ರಭುತ್ವದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವವರಿಗೆ ಪ್ರಭುತ್ವ ಯಾವ ಉತ್ತರ ನೀಡಿದೆ ಎಂದು ತಿಳಿಯಲೂ ಸಾಧ್ಯವಿಲ್ಲ. ಪ್ರಭುತ್ವದ ಯಾವುದೇ ಯೋಜನೆಗೆ ಸವಾಲೊಡ್ಡುವವರನ್ನು ಶಂಕಿತರೆಂದು ಪರಿಗಣಿಸಿ ಅವರ ಕೃತ್ಯವು ದುರುದ್ದೇಶದಿಂದ ಪೂರಿತವಾದದ್ದು ಎಂದು ಗ್ರಹಿಸಲಾಗುತ್ತದೆ.
ಇಂತಹ ಬೃಹತ್ ಚರ್ಚೆಯಲ್ಲಿ ನ್ಯಾಯ ವ್ಯವಸ್ಥೆಯ ಶೈಲಿಯ ಬದಲಾವಣೆಯು ಜನಸಾಮಾನ್ಯರಿಗೆ ಹೆಚ್ಚು ಪ್ರವೇಶಾವಕಾಶವನ್ನು ನೀಡುವದನ್ನು ಹೊರತಾಗಿ ಬೇರೆ ಯಾವ ರೀತಿಯಲ್ಲೂ ಸಹಕರಿಸುವುದಿಲ್ಲ.
ನ್ಯಾಯಕ್ಕೆ ದಾರಿ
ದಾರಿಯ ಬಗ್ಗೆ ಯೋಚಿಸುವಾಗ ಅಪಾದಿತರನ್ನು ವ್ಯವಸ್ಥೆ ಹೇಗೆ ಕಾಣುತ್ತದೆ ಎಂಬುದನ್ನು ಪರಿಗಣಿಸುವುದು ಸೂಕ್ತವಾಗುತ್ತದೆ. ಒಬ್ಬ ಆರೋಪಿಯು ನ್ಯಾಯ ವ್ಯವಸ್ಥೆಯಲ್ಲಿ (ಪ್ರಜಾತಾಂತ್ರಿಕ) ಪ್ರಭುತ್ವದ ವಿರುದ್ಧವಾಗಿ ಪ್ರವೇಶ ಪಡೆಯುತ್ತಾನೆ. ಆದರೆ ಈತ ಕಾನೂನಿನ ಮುಂದೆ ಸಮಾನ ಎಂದು ಗ್ರಹಿಸಲಾಗುತ್ತದೆ. ವ್ಯವಸ್ಥೆಯ ‘ಭಾರತೀಕರಣ’ ಆರೋಪಿಯನ್ನು ಹೇಗೆ ನಡೆಸಿಕೊಳ್ಳುತ್ತದೆ?
‘ನಮ್ಮ ಕಾನೂನಿನ ವ್ಯವಸ್ಥೆಯ ವಸಾಹಾತುಶಾಹಿ ಉಗಮಗಳು ಮಿಕ್ಕ ದೇಶಗಳಿಗೆ ಹೋಲಿಸಿದಾಗ ಪೋಲೀಸರಿಗೆ ಹೆಚ್ಚು ಅಧಿಕಾರವನ್ನು ನೀಡುತ್ತದೆ’ ಎಂದು ಕೆಲವು ತಿಂಗಳ ಹಿಂದೆ ವೆಬಿನಾರ್ ಒಂದರಲ್ಲಿ ನಾನು ವಾದಿಸಿದ್ದೆ. ವಸಾಹುತು ನಂತರ ಕಾಲದಲ್ಲಿ ಈ ವಸಾಹಾತುಶಾಹಿ ಕಾನೂನುಗಳ ಪಯಣದ ಬಗ್ಗೆ ನಾವು ಗಮನಿಸಬೇಕು ಎಂದು ತತ್ವಶಾಸ್ತ್ರದ ಅಧ್ಯಾಪಕರಾದ ಮೀನಾ ಡಾಂಡ ಅವರು ಸೂಕ್ಷ್ಮವಾಗಿ ಸೂಚಿಸಿದ್ದರು. ಪ್ರಭುತ್ವ ಮತ್ತು ನಾಗರೀಕರ ನಡುವಿನ ಅಧಿಕಾರದ ಸಂಬಂಧವನ್ನು ಬದಲಾಯಿಸುವ ಅವಕಾಶಗಳು ಸ್ವತಂತ್ರ ದೇಶಗಳಿಗೆ ಸಿಕ್ಕಿವೆ. ಆದರೆ ನಾವು ಅವುಗಳನ್ನು ವಿಮರ್ಷಿಸಿದ್ದೇವೆಯೋ ಅಥವಾ ಪುನರುಚ್ಚರಿಸಿದ್ದೇವೆಯೋ?
ಕೆಲವು ವಸಾಹತುಶಾಹಿ ದೇಶಗಳು (ಮತ್ತು ವಸಾಹತುಗಳು ಕೂಡ) ತಮ್ಮ ಕಾನೂನು ಪ್ರಕ್ರಿಯೆಯನ್ನು ಇನ್ನಷ್ಟು ಪ್ರಜಾತಾಂತ್ರೀಕರಿಸಲು ಮುಂದಾಗಿವೆ. ಮಿಕ್ಕವರು ಹಾಗೆಯೇ ಉಳಿದಿದ್ದಾರೆ.

ಭಾರತದ ನ್ಯಾಯ ವ್ಯವಸ್ಥೆಯ ಮೇಲೆ ಬಹಳಷ್ಟು ಹೊರೆಯನ್ನು ಹಾಕಲಾಗಿದೆ. ತನಿಖಾ ಏಜನ್ಸಿಗಳು ಅನಗತ್ಯವಾಗಿ ದಾಖಲಿಸಿರುವ ಪ್ರಕರಣಗಳನ್ನು ಪುನರ್ವಿಮರ್ಷಿಸುವ ಅವಶ್ಯಕತೆಯಿದೆ. ಭಾರತೀಯ ನ್ಯಾಯಾಲಯದಲ್ಲಿ ಪರಿಹರಿಸಲಾಗದೇ ಉಳಿದಿರುವ ಲಕ್ಷಾಂತರ ಪ್ರಕರಣಗಳ ನಡುವೆ ವಾರಂಟ್ ಇಲ್ಲದ ಬಂಧನಗಳನ್ನು ನಡೆಸುವುದು ಅಗತ್ಯವೇ ಎಂಬ ಪ್ರಶ್ನೆ ಮೂಡುತ್ತದೆ.
ಒಂದೊಂದು ಅನಗತ್ಯ ಬಂಧನವೂ ಈಗಾಗಲೇ ಬೇಕಾದಷ್ಟು ಹೊರೆ ಹೊತ್ತಿರುವ ನ್ಯಾಯ ವ್ಯವಸ್ಥೆಗೆ ಅಧಿಕ ಪ್ರಕರಣವಾಗಿ ಕಾಣುತ್ತದೆ ಎಂಬುದನ್ನು ನಾವು ಮರೆಯುವ ಹಾಗಿಲ್ಲ. ಇದು ನ್ಯಾಯ ಪಡೆಯುವ ಹಕ್ಕನ್ನು ನಿರಾಕರಿಸುವುದಕ್ಕೆ ಸಮಾನ. ಅದಕ್ಕೂ ಮುಖ್ಯವಾಗಿ ಈ ಅನಗತ್ಯ ಬಂಧನಗಳು ಅರೋಪಿತರಿಗೆ ತಮ್ಮ ಮೂಲಭೂತ ಹಕ್ಕಾದ ವೈಯಕ್ತಿಕ ಸ್ವಾತಂತ್ರವನ್ನು ನಿರಾಕರಿಸದಂತಾಗುತ್ತದೆ.
(ಮುಂದುವರೆಯುತ್ತದೆ)












