ಅನೈತಿಕ ಪೊಲೀಸ್ ಗಿರಿಯ ವಿಷಯದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಆಡಿರುವ ಮಾತು ವ್ಯಾಪಕ ಟೀಕೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯಬೇಕಾದ ಸರ್ಕಾರದ ಹೊಣೆಹೊತ್ತಿರುವ ಮುಖ್ಯಮಂತ್ರಿಯೇ ‘ಜಂಗಲ್ ರಾಜ್’ ವ್ಯವಸ್ಥೆಯ ಪ್ರತಿಪಾದಕರಂತೆ ಮಾತನಾಡಿರುವುದು ಸಹಜವಾಗೇ ನಾಗರಿಕ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಸಂವಿಧಾನ ಮತ್ತು ದೇಶದ ಕಾನೂನಿಗೆ ತದ್ವಿರುದ್ಧವಾಗಿ ‘ಆಕ್ಷನ್ ಗೆ ರಿಯಾಕ್ಷನ್’ ಎನ್ನುವ ಮೂಲಕ ಕಾಡಿನ ನ್ಯಾಯದ ಮಾತನಾಡಿರುವುದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಅವರ ಆಡಳಿತ ಪಕ್ಷ ಬಿಜೆಪಿಗೆ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಇರುವ ಗೌರವ ಎಷ್ಟು ಎಂಬುದನ್ನು ಜಗಜ್ಜಾಹೀರು ಮಾಡಿದೆ.
ತಾವು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ರಾಜ್ಯದ ತೀವ್ರ ಹಿಂದುತ್ವವಾದಿ ನೆಲೆಯಾಗಿರುವ ಕರಾವಳಿ ಪ್ರದೇಶದಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ದಿಢೀರನೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಬಸವರಾಜ ಬೊಮ್ಮಾಯಿ ಅವರು “ಸಮಾಜದಲ್ಲಿ ಹಲವು ಭಾವನೆಗಳಿವೆ. ಆ ಭಾವನೆಗಳಿಗೆ ಧಕ್ಕೆಯಾಗದಂತೆ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗೇ ಆಕ್ಷನ್ ಅಂಡ್ ರಿಯಾಕ್ಷನ್ ಆಗುತ್ತೆ. ನೈತಿಕತೆ ಇಲ್ಲದೆ ಬದುಕೋಕೆ ಆಗುತ್ತಾ? ನಮ್ಮೆಲ್ಲಾ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರೋದು ನೈತಿಕತೆ ಮೇಲೆ. ಅದು ಇಲ್ಲದಾಗ ಆಕ್ಷನ್, ರಿಯಾಕ್ಷನ್ ಆಗುತ್ತೆ” ಎಂದಿದ್ದರು.
ಆ ಮೂಲಕ ನೈತಿಕತೆಯ ಹೆಸರಿನಲ್ಲಿ ನಡೆಯುವ ಅನೈತಿಕ ಪೊಲೀಸ್ ಗಿರಿಯನ್ನು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಅಂತಿಮ ಹೊಣೆಗಾರರಾದ ಮುಖ್ಯಮಂತ್ರಿಗಳೇ ಸಮರ್ಥಿಸಿಕೊಂಡಿದ್ದರು. ಅಷ್ಟೇ ಅಲ್ಲ; ಆಕ್ಷನ್ ರಿಯಾಕ್ಷನ್ ಆಗುತ್ತೆ ಎನ್ನುವ ಮೂಲಕ ಭವಿಷ್ಯದಲ್ಲಿ ಕೂಡ ಅನೈತಿಕ ಪೊಲೀಸ್ ಗಿರಿ ಮಾಡುವುದಕ್ಕೆ ಪರೋಕ್ಷವಾಗಿ ತಮ್ಮ ಸರ್ಕಾರವೇ ಬೆನ್ನಿಗೆ ನಿಲ್ಲಲಿದೆ ಎಂಬ ಸಂದೇಶವನ್ನೂ ರವಾನಿಸಿದ್ದರು.
ಅದರಲ್ಲೂ ಕರಾವಳಿಯ ವಿವಿಧೆಡೆಯ ಸರಣಿ ಅನೈತಿಕ ಪೊಲೀಸ್ ಗಿರಿಗೆ ವಾರದ ಹಿಂದೆ ಬೆಂಗಳೂರಿನಲ್ಲಿ ಅಲ್ಪಸಂಖ್ಯಾತ ಕೋಮಿಗೆ ಸೇರಿದ ಕೆಲವರು ನಡೆಸಿದ್ದ ಅನೈತಿಕ ಪೊಲೀಸ್ ಗಿರಿ ಘಟನೆಯ ವಿಷಯದಲ್ಲಿ ತಕ್ಷಣವೇ ಸ್ವಯಂಪ್ರೇರಿತರಾಗಿ ಟ್ವೀಟ್ ಮಾಡಿದ್ದ ಸಿಎಂ ಬೊಮ್ಮಾಯಿ, ‘ಇಂತಹ ಘಟನೆಗಳನ್ನು ಸಹಿಸಲಾಗದು, ಸರ್ಕಾರ ಇಂತಹ ಘಟನೆಗಳಿಗೆ ಕಾರಣರಾದವರನ್ನು ಕಠಿಣ ರೀತಿಯಲ್ಲೇ ನಿಭಾಯಿಸಲಿದೆ’ ಎಂಬರ್ಥದ ಹೇಳಿಕೆಯ ಮೂಲಕ ಎಚ್ಚರಿಕೆಯ ಸಂದೇಶ ನೀಡಿದ್ದರು. ಆದರೆ, ಅದಾದ ಕೆಲವೇ ದಿನಗಳಲ್ಲಿ ನಡೆದ ಪುತ್ತೂರು, ಬಂಟ್ವಾಳ, ಮಂಗಳೂರಿನ ಹಲವೆಡೆಯ ಸರಣಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳ ವಿಷಯದಲ್ಲಿ ಮಾತ್ರ ಸಂಪೂರ್ಣ ಯೂ ಟರ್ನ್ ಹೊಡೆದಿದ್ದಾರೆ. ಕರಾವಳಿ ಘಟನೆಗಳ ಹಿಂದೆ ಇರುವುದು ಹಿಂದುತ್ವವಾದಿ ಗುಂಪುಗಳು ಎಂಬ ಹಿನ್ನೆಲೆಯಲ್ಲಿ ಬಿಜೆಪಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಹೀಗೆ, ಒಂದರ್ಥದಲ್ಲಿ ಭಯೋತ್ಪಾದನಾ ಕೃತ್ಯಗಳೆಂದೇ ಪರಿಗಣಿಸಲಾಗುವ ಅನೈತಿಕ ಪೊಲೀಸ್ ಗಿರಿಗೆ ಕುಮ್ಮಕ್ಕು ನೀಡುವ ಹೇಳಿಕೆ ನೀಡಿರುವುದು ಸಹಜವಾಗೇ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಆಕ್ಷನ್ ಗೆ ರಿಯಾಕ್ಷನ್ ಇದ್ದೇ ಇರುತ್ತೆ. ಸಮಾಜದಲ್ಲಿ ನೈತಿಕತೆ ಮುಖ್ಯ. ನೈತಿಕತೆ ಇಲ್ಲದೆ ಇದ್ದರೆ ಸಮಾಜದ ಭಾವನೆಗಳಿಗೆ ಧಕ್ಕೆ ಬರುತ್ತದೆ. ಸಮಾಜದ ಭಾವನೆಗಳಿಗೆ ಧಕ್ಕೆ ಬಂದರೆ ಆಕ್ಷನ್ ರಿಯಾಕ್ಷನ್ ಇರುತ್ತೆ ಎಂದಿರುವ ಸಿಎಂ, ಪರೋಕ್ಷವಾಗಿ ತಮ್ಮ ಆಡಳಿತದಲ್ಲಿ ನೈತಿಕತೆ ಮತ್ತು ಅದನ್ನು ನಿರ್ಧರಿಸುವ ಧರ್ಮಾಂಧ ವ್ಯವಸ್ಥೆಯೇ ಜಾರಿಯಲ್ಲಿರುತ್ತೆ. ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಹಕ್ಕುಗಳ ಮೂಲಕ ನಾಗರಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ದೇಶದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಗೆ ತಾವು ಬೆಲೆ ಕೊಡುವುದಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಹಾಗಿದ್ದರೆ, ದೇಶದಲ್ಲಿ ಯಾರು ಯಾರನ್ನು ಪ್ರೀತಿಸಬೇಕು, ಯಾರು ಯಾರೊಂದಿಗೆ ಓಡಾಡಬೇಕು, ಯಾರು ಯಾವ ಆಹಾರ ಸೇವಿಸಬೇಕು ಮತ್ತು ಯಾರನ್ನು ಮದುವೆಯಾಗಬೇಕು ಎಂಬುದನ್ನು ಅನೈತಿಕ ಪೊಲೀಸ್ ಗಿರಿಯ ಪಡೆಗಳೇ ನಿರ್ಧರಿಸುವುದಾದರೆ, ದೇಶದ ಸಂವಿಧಾನ, ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಗಳ ಅಗತ್ಯವಾದರೂ ಏನು? ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆ ನಿರ್ವಹಿಸಬೇಕಾದ ಕೆಲಸಗಳನ್ನು ಅನೈತಿಕ ಪೊಲೀಸ್ ಗಿರಿಯೇ ನಡೆಸುವುದಾದರೆ, ಬೊಮ್ಮಾಯಿ ಅವರ ಸರ್ಕಾರ ಮತ್ತು ಸ್ವತಃ ಅವರ ಮುಖ್ಯಮಂತ್ರಿಗಿರಿಯ ಅಗತ್ಯವೇನು ಎಂಬ ಪ್ರಶ್ನೆಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಎತ್ತಲಾಗಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, “ಅನೈತಿಕ ಪೊಲೀಸ್‌ಗಿರಿಗೆ ಬಲಿಯಾಗುತ್ತಿರುವುದು ಅಸಹಾಯಕ, ಅಮಾಯಕ ಹೆಣ್ಣುಮಕ್ಕಳು. ಸ್ತ್ರಿಪೀಡಕರ ಹೆಡೆಮುರಿಕಟ್ಟಿ ಜೈಲಿಗೆ ತಳ್ಳಬೇಕಾದ ನೀವು ಅದನ್ನು ಮಾಡದೆ ದುಷ್ಕರ್ಮಿಗಳ ರಕ್ಷಣೆಗೆ ನಿಂತಿದ್ದೀರಿ. ಕುರ್ಚಿಯ ರಕ್ಷಣೆಗಾಗಿ ಸಂಘ ಪರಿವಾರದ ಓಲೈಕೆ ನಿಮಗೆ ಅನಿವಾರ್ಯವಾಗಿರಬಹುದು. ಇದಕ್ಕಾಗಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿಯುವುದೇ?. ನಾಳೆಯಿಂದ ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆದರೆ, ಅದು ಯಾರೇ ಮಾಡಿದರೂ ಅವರು ಮುಖವಾಡ ಮಾತ್ರ. ಅದರ ಹಿಂದಿನ ಅಸಲೀ ಮುಖ ಅಂತಹ ಕೃತ್ಯಗಳಿಗೆ ಪ್ರಚೋದನೆ, ಉತ್ತೇಜನ ಮತ್ತು ರಕ್ಷಣೆ ನೀಡುವ ನಿಮ್ಮದು ಎಂದು ತಿಳಿಯಬಹುದೆ? ರಾಜ್ಯವನ್ನು ಜಂಗಲ್ ರಾಜ್ ಮಾಡಬೇಡಿ. ಇಂತಹ ಕೃತ್ಯಗಳನ್ನು ನಿಯಂತ್ರಿಸುವುದು ನಿಮ್ಮಿಂದ ಸಾಧ್ಯವಿಲ್ಲ ಎಂದಾದರೆ ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿಪಕ್ಷಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, “ಪ್ರತಿಯೊಂದು ಕ್ರಿಯೆಗೂ ತಕ್ಕ ಪ್ರತಿಕ್ರಿಯೆ ಸಮಾಜದಲ್ಲಿ ಇರುತ್ತದೆ ಮತ್ತು ಕಾನೂನು ತನ್ನದೇ ರೀತಿಯಲ್ಲಿ ಕ್ರಮ ಜರುಗಿಸುತ್ತದೆ ಎಂದು ನಾನು ಹೇಳಿದ್ದೆ. ನಿಮ್ಮ ಆಳ್ವಿಕೆಯಲ್ಲಿ ಹಿಂದೂಗಳನ್ನು ಮೂಲೆ ಮೂಲೆಯಲ್ಲಿಯೂ ಕೊಂದಿರುವಂತೆ ಅಲ್ಲ. ನೀವು ಕನ್ನಡಿಯನ್ನು ನಿಮ್ಮ ಕಡೆಗೆ ತಿರುಗಿಸಿಕೊಳ್ಳಬೇಕಿದೆ. ನಿಮ್ಮ ಕೈಗಳಲ್ಲಿ ರಕ್ತ ಅಂಟಿಸಿಕೊಂಡು ಹೇಗೆ ಮಲಗುತ್ತೀರೋ ದೇವರಿಗೇ ಗೊತ್ತು” ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಆದರೆ, ಬೊಮ್ಮಾಯಿ ಅವರ ಇಂತಹ ಪ್ರತಿಕ್ರಿಯೆಗೆ ಸ್ವತಃ ಸಿದ್ದರಾಮಯ್ಯ ಸೇರಿದಂತೆ ಹಲವರು ತೀವ್ರ ಪ್ರತಿಕ್ರಿಯೆ ನೀಡಿದ್ದು, ಒಬ್ಬ ಮಾಜಿ ಮುಖ್ಯಮಂತ್ರಿಯ ಪುತ್ರರಾಗಿ, ಮುತ್ಸದ್ಧಿ ನಾಯಕನ ಪುತ್ರರಾಗಿ ಬೊಮ್ಮಾಯಿ ಹೀಗೆ ತೀರಾ ಒಬ್ಬ ಕಾರ್ಯಕರ್ತನ ರೀತಿ ಮನಸೋ ಇಚ್ಛೆ ಮಾತನಾಡಬಾರದು. ಕನಿಷ್ಟ ತಾವಿರುವ ಸ್ಥಾನದ ಘನತೆಗೆ ತಕ್ಕಂತೆ ಪ್ರತಿಕ್ರಿಯಿಸುವ ಪ್ರಬುದ್ಧತೆಯನ್ನು ರಾಜ್ಯದ ಜನತೆ ಅವರಿಂದ ನಿರೀಕ್ಷಿಸುತ್ತಾರೆ ಎಂದು ಹೇಳಿದ್ದಾರೆ.
ಆದರೆ, ಬೊಮ್ಮಾಯಿ ಅವರ ಸರ್ಕಾರ ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕುಗಳ ವಿಷಯದಲ್ಲಿ ಯಾವ ಧೋರಣೆ ತಳೆದಿದೆ. ಆ ವಿಷಯದಲ್ಲಿ ಯಾವ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂಬುದಕ್ಕೆ ಅನೈತಿಕ ಪೊಲೀಸ್ ಗಿರಿ ಕುರಿತು ಈ ಹೇಳಿಕೆಯೊಂದಿಗೆ, ಮಹಿಳಾ ಸ್ವಾತಂತ್ರ್ಯದ ಕುರಿತ ಅವರ ಸಂಪುಟ ಸಹೋದ್ಯೋಗಿ ಡಾ ಸುಧಾಕರ್ ಅವರ ಇತ್ತೀಚಿನ ಹೇಳಿಕೆ ಮತ್ತು ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತ ಸ್ವತಃ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೊದಲ ಪ್ರತಿಕ್ರಿಯೆಗಳಲ್ಲಿ ಸೂಚನೆಗಳಿವೆ. ಅದು ಕಟ್ಟಾ ಮನುವಾದಿ ಮಾದರಿ.
ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಎಷ್ಟು ಹೊತ್ತಲ್ಲಿ ಹೋಗಬೇಕು, ಯಾವಾಗ ಹೋಗಬಾರದು, ಹೆಣ್ಣು ಮಕ್ಕಳು ಉದ್ಯೋಗಕ್ಕೆ ಹೋಗಬೇಕೆ, ಬೇಡವೇ? ಅವಿಭಕ್ತ ಕುಟುಂಬ ಬೇಕೆ, ಅಥವಾ ವಿಭಕ್ತ ಕುಟುಂಬ ಬೇಕೆ, ಅಂತಹ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಹೊಣೆ ಏನು? ಎಂಬುದನ್ನು ಆ ಇಬ್ಬರು ಸಂಪುಟ ಸಹೋದ್ಯೋಗಿಗಳ ಆ ಎರಡು ಹೇಳಿಕೆಗಳು, ಸಂವಿಧಾನ ಮತ್ತು ದೇಶದ ಕಾನೂನು ಚೌಕಟ್ಟಿನ ಬದಲು ಮನುವಾದಿ ಚೌಕಟ್ಟಿನಲ್ಲಿ ವ್ಯಾಖ್ಯಾನಿಸಿದ್ದವು. ಇದೀಗ ಸ್ವತಃ ಸಿಎಂ ಬೊಮ್ಮಾಯಿ ಒಂದು ಹೆಜ್ಜೆ ಮುಂದೆ ಹೋಗಿ, ಮನುವಾದಿ, ಸನಾತನವಾದಿ ಆಶಯದ ಮೇಲೆ ಸಮಾಜವನ್ನು ಕಟ್ಟುವ ಉದ್ದೇಶದ ಮತ್ತು ಅದೇ ಹೊತ್ತಿಗೆ ದೇಶದ ಸಂವಿಧಾನ, ಕಾನೂನು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರದ ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಾಗೆ ನೋಡಿದರೆ, ಬೊಮ್ಮಾಯಿ ಅವರು ಹೀಗೆ ಕಟ್ಟಾ ಹಿಂದುತ್ವ ಕಾರ್ಯಕರ್ತರ ರೀತಿ ಮಾತನಾಡುವುದು ಇದೇ ಮೊದಲೇನಲ್ಲ. ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣದಲ್ಲಿ ಕೂಡ ಬೊಮ್ಮಾಯಿ ಅವರ ಪ್ರತಿಕ್ರಿಯೆ ಒಬ್ಬ ಗೃಹ ಮಂತ್ರಿಯ ಪ್ರತಿಕ್ರಿಯೆಗಿಂತ, ಬಿಜೆಪಿ ಕಾರ್ಯಕರ್ತರ ಪ್ರತಿಕ್ರಿಯೆಯಂತೆಯೇ ಇತ್ತು. ಘಟನೆ ಬೆಳಕಿಗೆ ಬರುತ್ತಲೇ, ಆರೋಪಿಯ ವಿವರಗಳು ತಿಳಿಯುವ ಮುನ್ನ ಅವರು ನೀಡಿದ್ದ ಹೇಳಿಕೆಗೂ, ಆರೋಪಿ ಒಬ್ಬ ಹಿಂದೂ ಮತ್ತು ಹಿಂದುತ್ವವಾದಿ ಸಂಘಟನೆಯ ಪ್ರಮುಖರೊಬ್ಬರ ಕುಟುಂಬಕ್ಕೆ ಸೇರಿದವ ಎಂಬ ವಿವರಗಳು ಗೊತ್ತಾದ ಬಳಿಕ ಅವರು ನೀಡಿದ ಹೇಳಿಕೆಗೂ ಬಹಳಷ್ಟು ವ್ಯತ್ಯಾಸವಿತ್ತು. ಆ ಕಾರಣಕ್ಕೆ ಗೃಹಸಚಿವರಾಗಿ ಬೊಮ್ಮಾಯಿ ಅವರ ಆ ಹೇಳಿಕೆಗಳು ಸಾಕಷ್ಟು ಟೀಕೆಗೆ ಗುರಿಯಾಗಿದ್ದವು.
ಆ ಬಳಿಕ ಕೂಡ ಹಲವು ಸಾಮಾಜಿಕ ಹೋರಾಟಗಳ ವಿಷಯದಲ್ಲಿಯೂ ಗೃಹ ಸಚಿವರಾಗಿ ಬೊಮ್ಮಾಯಿ ತಮ್ಮ ಸಂವಿಧಾನಿಕ ಬದ್ಧತೆ ಮತ್ತು ಜವಾಬ್ದಾರಿಗಿಂತ, ತಾವೊಬ್ಬ ಬಿಜೆಪಿ ಮತ್ತು ಆರ್ ಎಸ್ ಎಸ್ ಆಜ್ಞಾನುಪಾಲಕ ಎಂಬಂತೆಯೇ ನಡೆದುಕೊಂಡಿದ್ದರು. ಈಗಲೂ ಅವರು, ತಾವೇ ಪ್ರಮಾಣವಚನ ಸ್ವೀಕರಿಸಿದ ಸಂವಿಧಾನದ ಆಶಯಕ್ಕೆ ತದ್ವಿರುದ್ಧವಾಗಿ ಮಾತನಾಡಿದ್ದಾರೆ. ತಾವು ದೇಶದ ಸಂವಿಧಾನಕ್ಕೆ ಬದ್ಧರಲ್ಲ; ಬದಲಾಗಿ ಮನುವಾದಕ್ಕೆ ಮತ್ತು ಮನುವಾದ ಹೇರುವ ಹುನ್ನಾರದ ಪರಿವಾರದ ಸಂಘಟನೆಗಳ ಮೂಗಿನ ನೇರಕ್ಕೆ ಕೆಲಸ ಮಾಡುವವರು ಎಂಬುದನ್ನು ಮತ್ತೊಮ್ಮೆ ಹೇಳಿದ್ದಾರೆ.
ಹಾಗಾಗಿ, ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ಆಕ್ಷನ್ ಗೆ ರಿಯಾಕ್ಷನ್ ಎಂದು ವ್ಯಾಖ್ಯಾನಿಸುವ ಮೂಲಕ ಅನೈತಿಕ ಪೊಲೀಸ್ ಗಿರಿಗೆ ಅಧಿಕೃತ ಪೊಲೀಸ್ ಗಿರಿಯ ಮಾನ್ಯತೆ ನೀಡಿರುವುದರಿಂದ, ರಾಜ್ಯದಲ್ಲಿ ಇನ್ನು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಜನರ ನಾಗರಿಕ ಹಕ್ಕುಗಳ ರಕ್ಷಣೆ ಎಂಬುದು ಕೂಡ ಹಿಂದೂ ಕಟ್ಟರ್ ಸಂಘಟನೆಗಳ ಕೈಗೆ ಜಾರಬಹುದು. ಸಂವಿಧಾನ ಖಾತರಿಪಡಿಸಿರುವ ನಾಗರಿಕ ಹಕ್ಕುಗಳ ಸ್ಥಾನದಲ್ಲಿ ಮನುವಾದಿ, ಸನಾತನವಾದಿ ನೀತಿಗಳು ಜಾರಿಗೆ ಬರಬಹುದು. ಅಂದರೆ; ನಾಲ್ಕಾರು ದಿನಗಳ ಹಿಂದೆ ಪ್ರತಿಪಕ್ಷ ನಾಯಕರು ಪ್ರಸ್ತಾಪಿಸಿದ್ದ ತಾಲಿಬಾನ್ ವ್ಯವಸ್ಥೆ ಮತ್ತೊಂದು ರೂಪದಲ್ಲಿ ರಾಜ್ಯದಲ್ಲಿ ಜಾರಿಯ ಹಂತದಲ್ಲಿದೆ! ಅಲ್ಲವೆ?