ಭಾರತದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು 5-19 ವರ್ಷ ವಯಸ್ಸಿನವರು. ಅಂದರೆ ವಯಸ್ಸಿನ ದೃಷ್ಟಿಯಿಂದ ಭಾರತವು ವಿಶ್ವದ ಅತ್ಯಂತ ಕಿರಿಯ ರಾಷ್ಟ್ರಗಳಲ್ಲಿ ಒಂದು. ಆದರೆ ಮಾನವ ಬಂಡವಾಳದ ಮೇಲಿನ ನಮ್ಮ ಹೂಡಿಕೆ ಅತ್ಯಂತ ನಿರಾಶಾದಾಯಕವಾಗಿದೆ. ಅದರಲ್ಲೂ ಮಕ್ಕಳ ಮೇಲೆ, ಅವರ ಶಿಕ್ಷಣದ ಮೇಲೆ ನಾವು ಹೂಡುವ ಬಂಡವಾಳವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ. ಮಕ್ಕಳ ಶಿಕ್ಷಣ ನೀತಿಯನ್ನು ಸ್ವಾತಂತ್ರ್ಯಾನಂತರ ಕೇವಲ ಮೂರು ಬಾರಿ ಪರಿಷ್ಕರಿಸಲಾಗಿದೆ.
ಭಾರತದ ಹಳ್ಳಿಗಳಲ್ಲಿ ಸಮರ್ಪಕ ಶಾಲೆಗಳ ಲಭ್ಯತೆಯಿಲ್ಲ. ಗ್ರಾಮೀಣ ಭಾರತದಲ್ಲಿ ಇದು ಮಕ್ಕಳ ಶಿಕ್ಷಣದ ಮೇಲೆ ಬೀರುವ ಪ್ರತಿಕೂಲ ಪರಿಣಾಮ ಅಗಾಧ. ಅದರಲ್ಲೂ ಹೆಣ್ಣು ಮಕ್ಕಳು ಹೆಚ್ಚಿನ ತೊಂದರೆಗೆ ಒಳಗಾಗುತ್ತಾರೆ. ಗ್ರಾಮೀಣ ಭಾರತದಲ್ಲಿ ಮಕ್ಕಳ ಶಾಲಾ ಶಿಕ್ಷಣದ ಮೇಲೆ ಅಸಮರ್ಪಕ ಶಿಕ್ಷಣ ವ್ಯವಸ್ಥೆ ಬೀರುವ ಪ್ರತಿಕೂಲ ಪರಿಣಾಮಗಳನ್ನು ಅಧ್ಯಯನ ಮಾಡಿರುವ OP ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯು 2020 ರಲ್ಲಿ ಮಾಡಿದ ‘ಶಿಕ್ಷಣದ ನಿರ್ಧಾರದಲ್ಲಿ ಭಾರತದ ಸಾರ್ವಜನಿಕ ಶಾಲೆಗಳ ಪಾತ್ರ’ ಎಂಬ ಅಧ್ಯಯನದ ಪ್ರಕಾರ ಎಲ್ಲಾ ರಾಜ್ಯಗಳಲ್ಲಿ ಸುಮಾರು 23% ಮಕ್ಕಳು ಸಾರ್ವಜನಿಕ ಶಾಲೆಗಳಿಗೆ ಪ್ರವೇಶ ಪಡೆಯುವುದಿಲ್ಲ. ಅವರಲ್ಲಿ ಸರಿಸುಮಾರು 30% ಮಕ್ಕಳು 6-8ನೇ ತರಗತಿಗೆ ದಾಖಲಾಗುವುದಿಲ್ಲ. ಮತ್ತು 80% ಮಕ್ಕಳು 9-12ನೇ ತರಗತಿಗೆ ದಾಖಲಾಗಲು ಸಾಧ್ಯವಾಗುವುದಿಲ್ಲ.
ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಪ್ರಾಥಮಿಕ ಹಂತದ ಶಾಲೆಗಳು ಸರ್ವವ್ಯಾಪಿಯಾಗಿರುವುದರಿಂದ 93% ಮಕ್ಕಳು ಕಿರಿಯ ಪ್ರಾಥಮಿಕ ಶಾಲೆಗಳಿಗೆ ದಾಖಲಾಗುತ್ತಾರೆ. ಆದರೆ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಇದೇ ಮಟ್ಟದ ದಾಖಲಾತಿ ಇರುವುದಿಲ್ಲ. ಅನೇಕ ಹಳ್ಳಿಗಳಲ್ಲಿ ಎರಡೂ ಹಂತದ ಶಾಲೆಗಳು ಇರದಿರುವುದೇ ಇದಕ್ಕೆ ಮುಖ್ಯ ಕಾರಣ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಮಕ್ಕಳ ಶಾಲೆಗೆ ಹೋಗಲು ಸಾರಿಗೆಗಾಗಿ ಪ್ರತ್ಯೇಕ ಹಣ ತೆಗೆದಿಡಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯವೇ ಇರದ ಪ್ರದೇಶಗಳಲ್ಲಿ ಇಂತಹ ಮನೋಭಾವ ಹೆಚ್ಚು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಪೋಷಕರು ಕೆಲವೊಮ್ಮೆ ಶಾಲೆಗೆ ಕಳಹಿಸಲು ಒಪ್ಪುವುದಿಲ್ಲ.
ಶಾಲಾ ದಾಖಲಾತಿ ಮತ್ತು ಭಾಗವಹಿಸುವಿಕೆಯನ್ನು ಸುಧಾರಿಸಲು ಪ್ರತಿ ಭಾರತೀಯ ಹಳ್ಳಿಗಳಲ್ಲಿ ಪೂರ್ಣ ಪ್ರಮಾಣದ ಶಾಲೆಗಳು ಆರಂಭವಾಗಬೇಕು ಎನ್ನುವುದು ಅಧ್ಯಯನವು ಎತ್ತಿ ತೋರಿಸಿರುವ ಪ್ರಮುಖ ಅಂಶ. ಏಕೆಂದರೆ ಸೂಕ್ತವಾದ ಶಾಲೆಯು ಸುಲಭವಾಗಿ ತಲುಪುವಲ್ಲಿ ಇರುವುದು ಮಗುವಿನ ಶಾಲೆಗೆ ಹೋಗುವ ಸಾಧ್ಯತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.ಇದು ಸಾರಿಗೆ ವೆಚ್ಚ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅನುಕೂಲ ಮಾಡಿಕೊಡುತ್ತದೆ. ಅಲ್ಲದೆ ಪ್ರತಿ ಊರುಗಳಲ್ಲಿ ಶಾಲೆ ಇರುವುದು ಶಿಕ್ಷಣಕ್ಕಾಗಿ ವ್ಯಯಿಸುವ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡಲೂ ಸಹಾಯ ಮಾಡುತ್ತದೆ.
ಮಕ್ಕಳಿಗೆ ತಮ್ಮ ಹಳ್ಳಿಯೊಳಗೆ ಎಲ್ಲಾ ಮೂರು ಹಂತದ ಶಾಲಾ ಶಿಕ್ಷಣವನ್ನು ಒದಗಿಸುವುದರಿಂದ ಲಿಂಗದ ಅಂತರವನ್ನು ಕಡಿಮೆ ಮಾಡಲು ಮತ್ತು ಶೈಕ್ಷಣಿಕ ಫಲಿತಾಂಶಗಳನ್ನು ಸುಧಾರಿಸಲು ಸಹ ಸಾಧ್ಯ. 2009 ರಲ್ಲಿ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಬಂದ ನಂತರ ಶಿಕ್ಷಣವು ಕೇವಲ ಒಂದು ಅಗತ್ಯವಾಗಿ ಉಳಿದಿಲ್ಲ, ಬದಲಾಗಿ ಅದೀಗ ಮಕ್ಕಳ ಕಾನೂನಾತ್ಮಕ ಹಕ್ಕು. ಆದ್ದರಿಂದ, ಈ ಹಕ್ಕಿನ ನೆರವೇರಿಕೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗವು ಅನೇಕ ಕುಟುಂಬಗಳ ಜೀವನೋಪಾಯದ ಮೇಲೆ ಪರಿಣಾಮ ಬೀರಿರುವುದರಿಂದ ಸರ್ಕಾರಿ ಶಾಲೆಗಳ ಅಗತ್ಯ ಇನ್ನಷ್ಟು ತೀವ್ರವಾಗಿದೆ. ಕೋವಿಡ್ ಪರಿಣಾಮವಾಗಿ, ಹೆಚ್ಚು ಹೆಚ್ಚು ಮಕ್ಕಳನ್ನು ಖಾಸಗಿಗಳಿಂದ ಸರ್ಕಾರಿ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದರಿಂದಾಗಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಶೈಕ್ಷಣಿಕ ಮೂಲಸೌಕರ್ಯದ ಮೇಲೆ ಒತ್ತಡ ಹೆಚ್ಚುತ್ತಿದೆ.
ಹಾಗಾಗಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಶಾಲೆಗಳ ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಈ ವಲಯದಲ್ಲಿ ಹೂಡಿಕೆಯ ಅಗತ್ಯವಿರುತ್ತದೆ. ಎಲ್ಲೆಡೆ ಉನ್ನತ ಮಟ್ಟದಲ್ಲಿ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಶಾಲಾ ವ್ಯವಸ್ಥೆಯನ್ನು ವಿಸ್ತರಿಸುವುದು ಅತ್ಯಗತ್ಯ. ಮತ್ತು ಇದನ್ನು ಪೂರೈಸಲು ಮಾನವ ಬಂಡವಾಳ ಮತ್ತು ಇತರ ಸಂಪನ್ಮೂಲಗಳನ್ನು ಬೃಹತ್ ಪ್ರಮಾಣದಲ್ಲಿ ತುರ್ತಾಗಿ ಸಜ್ಜುಗೊಳಿಸಬೇಕಾಗಿದೆ.