ಇತ್ತೀಚಿಗೆ ಕೆಪಿಸಿಸಿಯಲ್ಲಿ ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗು ಸಲೀಂ ನಡುವೆ ನಡೆದಿದ್ದ ಮಾತುಕತೆ ಸಂಬಂಧ ಸಲೀಂರವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ಯಾರನ್ನು ದೂಷಿಸುವುದಿಲ್ಲ ಎಂದು ಹೇಳಿದ್ದಾರೆ.
ಸಲೀಂ ಹಾಗೂ ವಿ.ಎಸ್ ಉಗ್ರಪ್ಪ ಅವರ ಸಂಭಾಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ‘ನನ್ನ ಬಗ್ಗೆ ಯಾರು, ಯಾವ ರೀತಿ ಮಾತಾಡಬೇಕೋ ಮಾತನಾಡಿದ್ದಾರೆ. ಅದನ್ನು ಯಾರು ಯಾವ ರೀತಿ ಬಳಸಿಕೊಳ್ಳಬೇಕೋ, ಬಳಸಿಕೊಂಡಿದ್ದಾರೆ ಎಂಬುದು ನನ್ನಗೆ ಗೊತ್ತಿದೆ.
ನಾನು ಬಿಜೆಪಿ ಅವರನ್ನಾಗಲಿ, ಮಾಧ್ಯಮಗಳನ್ನಾಗಲಿ ದೂಷಿಸುವುದಿಲ್ಲ. ನಾವು ಅವಕಾಶ ಕೊಟ್ಟಿದ್ದರಿಂದ ಬೇರೆಯವರು ಬಳಸಿಕೊಂಡಿದ್ದಾರೆ. ನಾನು ಯಾರನ್ನೂ ದೂಷಣೆ ಮಾಡುವುದಿಲ್ಲ. ಇದು ನನ್ನ ವೈಯಕ್ತಿಕವಾದುದಲ್ಲ, ಪಕ್ಷದ ವಿಚಾರ. ಈ ಪಕ್ಷವನ್ನು ನಾನು ಮಾತ್ರ ಕಟ್ಟಿಲ್ಲ. ಹಳ್ಳಿಯ ಲಕ್ಷಾಂತರ ಜನ, ಕಾರ್ಯಕರ್ತರು ಈ ಪಕ್ಷ ಕಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಹಿಂದೆ ಬಿಜೆಪಿ ನಾಯಕರ ಧ್ವನಿ ಬಿದ್ದು ಹೋಗಿತ್ತಾ:
ಕಾಂಗ್ರೆಸ್ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದಂತೆ ಉತ್ತರಿಸಿದ ಶಿವಕುಮಾರ್, ‘ಯಾರು ಏನು ಮಾತನಾಡುತ್ತಾರೋ ಮಾತಾಡಲಿ. ಕಳೆದ ಎರಡು ವರ್ಷಗಳಿಂದ ಯಾರು ಏನೆಲ್ಲಾ ಮಾತನಾಡಿದ್ದಾರೆ ಅದನ್ನೂ ಮೊದಲು ಬಿಜೆಪಿ ನಾಯಕರು ನೋಡಲಿ. ಎಚ್. ವಿಶ್ವನಾಥ್, ಯೋಗೀಶ್ವರ್, ಮಂಚದ ಮೇಲೆ ರಮೇಶ್ ಜಾರಕಿಹೊಳಿ ಅವರು ಮಾತನಾಡಿದರಲ್ಲಾ.., ಅದಕ್ಕೆ ಉತ್ತರ ಯಾಕಿಲ್ಲ? ಯತ್ನಾಳ್ ಅವರ ಹೇಳಿಕೆಗೆ ಸಿ.ಟಿ ರವಿ ಅವರಾಗಲಿ, ಈಗ ಮಾತನಾಡುತ್ತಿರುವವರಾಗಲಿ ಯಾಕೆ ಉತ್ತರ ನೀಡಲಿಲ್ಲ. ಯಡಿಯೂರಪ್ಪ, ವಿಜಯೇಂದ್ರ ಕಲೆಕ್ಷನ್, ಅವರ ಮೊಮ್ಮಗನ ಬಗ್ಗೆ ಮಾತನಾಡಿದಾಗ ಇವರ ಧ್ವನಿ ಏನು ಬಿದ್ದು ಹೋಗಿತ್ತಾ? ಆಗ್ಯಾಕೆ ಮಾತನಾಡಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
ಪಕ್ಷ ಅಧಿಕಾರಕ್ಕೆ ತರುವುದಷ್ಟೇ ನನ್ನ ಕರ್ತವ್ಯ:
ಡಿ.ಕೆ ಶಿವಕುಮಾರ್, ಯಡಿಯೂರಪ್ಪ, ದೇವೇಗೌಡರನ್ನು ಒಂದೇ ವೇದಿಕೆ ಮೇಲೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂಬ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ‘ನಾನು ಪಕ್ಷದ ಅಧ್ಯಕ್ಷ, ಆ ಕೆಲಸ ಮಾಡುತ್ತಿದ್ದೇನೆ. ಅವರು ದೊಡ್ಡ ನಾಯಕರು. ಎಲ್ಲರ ಸಂಪರ್ಕ ಇಟ್ಟುಕೊಂಡಿರುವವರು. ಕಾರ್ಯಕರ್ತರ ಜತೆ ನಿಂತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಕರ್ತವ್ಯ. ನಾನು ಆ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದು ಹೇಳಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಂಸದ ಉಗ್ರಪ್ಪ ಮತ್ತು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ಘಟಕದ ಸದಸ್ಯರಾದ ಸಲೀಂ ಸುದ್ದಿಘೋಷ್ಠಿ ಶುರುವಾಗುವ ಮುನ್ನ ಕೆಲವು ನಿಮಿಷಗಳ ಕಾಲ ಪಿಸುಗುಡುತ್ತಿದ್ದದು ಕಂಡು ಬಂದಿತ್ತು ಇದು ಡಿ.ಕೆ. ಶಿವಕುಮಾರ್‌ರವರ ಬಗ್ಗೆ ಮಾತನಡಿದ್ದು ಇದರಲ್ಲಿ ನೀರಾವರಿ ಇಲಾಖೆಯಿಂದ ಕಿಕ್‌ಬ್ಯಾಕ್ ಪಡೆದ ಆರೋಪವು ಕೇಳಿ ಬಂದಿತ್ತು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕಷದಲ್ಲಿ ಗುಂಪುಗಾರಿಕೆ ಜಾಸ್ತಿಯಾಗಿದೆ ಎಂದು ಇಬ್ಬರು ನಾಯಕರು ಪಿಸುಗುಡುತ್ತಿದ್ದದು ಕಂಡು ಬಂದಿತ್ತು. ಇದು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಇದಾದ ನಂತರ ಉಗ್ರಪ್ಪರಿಗೆ ಸ್ಪಷ್ಟನೆಯನ್ನು ಕೇಳಿ ಕಾಂಗ್ರೆಸ್ ಶಿಸ್ತು ಸಮಿತಿಯಿಂದ ನೋಟಿಸ್ ಜಾರಿ ಮಾಡಲಾಗಿತ್ತು ಮತ್ತು ಸಲೀಂರನ್ನು ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.