ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಅದರ ಬೀರಿ ಕ್ಯಾಂಪಸ್ ನ ಪಾರ್ಕ್ ಒಂದಕ್ಕೆ ಸ್ಟಾನ್ ಸ್ವಾಮಿ ಅವರ ಹೆಸರಿನಲ್ಲಿ ನಾಮಕರಣ ಮಾಡುವುದಾಗಿ ಘೋಷಿಸಿತ್ತು. ಈ ನಿರ್ಧಾರವನ್ನು ಅಲ್ಲಿನ ಬಲಪಂಥೀಯ ಗುಂಪುಗಳಾದ ವಿಶ್ವ ಹಿಂದೂ ಪರಿಷದ್, ಬಜರಂಗ ದಳ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ಸಂಘಟನೆಗಳು ವಿರೋಧಿಸಿ ಬೆದರಿಕೆಗಳನ್ನು ಹಾಕಿವೆ.
ಸ್ಟಾನ್ ಸ್ವಾಮಿ ಯಾರು?
ಸ್ಟಾನ್ ಸ್ವಾಮಿ ಅವರು ಜಾರ್ಖಂಡ್ ರಾಜ್ಯದ ಆದಿವಾಸಿಗಳ ಹಕ್ಕುಗಳಿಗಾಗಿ ತಮ್ಮ ಜೀವನ ಪರ್ಯಂತ ಹೋರಾಡಿದ ಜೇಸ್ಯೂಟ್ ಪ್ರಚಾರಕ. 1534ರಲ್ಲಿ ಧಾರ್ಮಿಕ ಸುಧಾರಣೆಗಳನ್ನು ಮಾಡಲು ಲಯೋಲಾದ ಇಗ್ನೇಷಿಯಸ್ ಎಂಬವರು ಸೊಸೈಟಿ ಆಫ್ ಜೀಸಸ್ ಅಥವಾ ಜೆಸ್ಯೂಟ್ ಪಂಗಡವನ್ನು ಸ್ಥಾಪಸಿದರು. ಜಗತ್ತಿನಾದ್ಯಂತ ಹರಡಿಕೊಂಡಿರುವ ಕ್ಯಾತೋಲಿಕ್ ಗಳ ಈ ಪಂಗಡ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತದೆ. ಬೆಂಗಳೂರಿನ ಸಂತ ಜೋಸಫರ ಕಾಲೇಜು, ಮಾನ್ವಿಯ ಲಯೋಲಾ ಕಾಲೇಜು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಸೇರಿದಂತೆ ಹತ್ತಾರು ಶೈಕ್ಷಣಿಕ ಸಂಸ್ಥೆಗಳನ್ನು ಜೇಸ್ಯೂಟ್ ಗಳು ನಡೆಸುತ್ತಾರೆ.
ಸ್ವಾಮಿ ಅವರನ್ನು ಕಳೆದ ವರ್ಷದ ಅಕ್ಟೋಬರ್ 8 ರಂದು ಎನ್.ಐ.ಎ. ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿತವಾಗಿ ಬಂಧಿಸಿತು. ಆಗಾಗಲೇ ಅವರು ತಮ್ಮ 83ನೇ ವಯಸ್ಸಿನಲ್ಲಿದ್ದರು. ಈ ಪ್ರಕರಣವನ್ನು ಮೋದಿ ಸರಕಾರ ತನ್ನ ವಿರೋಧಿಗಳನ್ನು ಗುರಿಯಾಗಿಸಲು ಹುಟ್ಟುಹಾಕಿತು ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿತವಾಗಿ ಸ್ವಾಮಿ ಅವರು ಬಂಧಿತರಾದ 16ನೇ ಮತ್ತು ಅತ್ಯಂತ ಹಿರಿಯ ವ್ಯಕ್ತಿಯಾದರು.
ಇದನ್ನು ಖಂಡಿಸಿ ಬೆಂಗಳೂರಿನ ಸಂತ ಜೋಸಫರ ಕಾಲೇಜಿನ ವಿದ್ಯಾರ್ಥಿಗಳು ಕಳೆದ ವರ್ಷ ಮಾನವ ಸರಪಳಿಯೊಂದನ್ನು ಸೃಷ್ಟಿಸುವ ಮೂಲಕ ಪ್ರತಿಭಟಿಸಿದ್ದರು. ಆಗಲೂ ಕೆಲ ಬಲಪಂಥೀಯ ಸಾಮಾಜಿಕ ಜಾಲತಾಣದ ಪ್ರಭಾವಿಗಳು ಕಾಲೇಜಿನ ಮೇಲೆ ಆರೋಪಗಳನ್ನು ಮಾಡಿ ಮೌಖಿಕ ಹಲ್ಲೆ ನಡೆಸಿದ್ದರು. ಕಾಲೇಜಿನಿಂದ ಅವರು ಕ್ಷಮಾಯಾಚನೆಯನ್ನು ಒತ್ತಾಯಿಸಿದ್ದರೂ ಅಲ್ಲಿನ ವಿದ್ಯಾರ್ಥಿಗಳಿಂದ ಚುನಾಯಿತವಾದ ವಿದ್ಯಾರ್ಥಿ ಸಂಘ ಕ್ಷಮೆ ಕೇಳುವಂತಹ ಕೆಲಸ ತಾವೇನು ಮಾಡಿಲ್ಲ ಎಂಬ ಧೃಡ ನಿಲುವನ್ನು ತೆಗೆದುಕೊಂಡಿತ್ತು.
ಸ್ಟಾನ್ ಸ್ವಾಮಿ ಅವರು ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದು ಅವರು ದೈಹಿಕವಾಗಿ ಬಹಳ ಕುಗ್ಗಿ ಹೋಗಿದ್ದರು. ಲೋಟದಿಂದ ನೀರು ಕುಡಿಯಲೂ ಸಹ ಕಷ್ಟ ಪಡುತ್ತಿದ್ದ ಸ್ವಾಮಿ ಅವರಿಗೆ ಒಂದು ಸಿಪ್ಪರ್ ಅನ್ನು ತಲುಪಿಸುವದಕ್ಕೆ ಅನುಮತಿ ನೀಡದೆ ಪ್ರಭುತ್ವ ಕ್ರೌರ್ಯ ಮೆರೆದಿತ್ತು. ಯು.ಎ.ಪಿ.ಎ. ಕಾಯ್ದೆಯ ಕಠಿಣ ನಿಯಮಗಳಿಂದ ಅವರಿಗೆ ಜಾಮೀನು ಸಿಗದೇ ಜುಲೈ 5 ರಂದು ಕೋವಿಡ್ ಸಂಬಂಧಿತ ಅನಾರೋಗ್ಯದಿಂದ ಅವರು ಮರಣ ಹೊಂದಿದ್ದರು.
ಹಲವಾರು ನಾಗರೀಕ ಸಮಾಜ ಸಂಘಟನೆಗಳು ಮತ್ತು ಹೋರಾಟಗಾರರು ಸ್ವಾಮಿ ಅವರ ಸಾವನ್ನು ಪ್ರಭುತ್ವ ನಡೆಸಿದ ಕೊಲೆ ಎಂದು ಪರಿಗಣಿಸಿವೆ. ಈ ನಿಟ್ಟಿನಲ್ಲಿ ಜೆಸ್ಯೂಟ್ ಸಂಸ್ಥೆಗಳು, ನಾಗರೀಕ ಸಮಾಜ ಸಂಘಟನೆಗಳು, ರಾಜಕೀಯ ಪಕ್ಷಗಳನ್ನು ಸೇರಿದಂತೆ ಹಲವಾರು ಸಂಘಟನೆಗಳು ಪ್ರತಿರೋಧವನ್ನು ವ್ಯಕ್ತ ಪಡಿಸಿದ್ದವು.
ಸ್ವಾಮಿ ಅವರ ಹೆಸರಿನ ಪಾರ್ಕ್
ಸ್ವಾಮಿ ಅವರ ಮರಣದ ನಂತರ ಅವರ ನೆನಪಿನಲ್ಲಿ ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜು ತಮ್ಮ ಕೋಟೆಕರ್ ಬೀದಿ ಕ್ಯಾಂಪಸ್ಸಿನ ಪಾರ್ಕಿಗೆ ಅವರ ಹೆಸರನ್ನಿಡಬೇಕೆಂಬ ತೀರ್ಮಾನಕ್ಕೆ ಬಂದಿತ್ತು. ಈ ಕುರಿತು ಸಿದ್ಧತೆಗಳು ನಡೆದು ಅಕ್ಟೋಬರ್ 7 ರಂದು ನಾಮಕರಣ ಸಮಾರಂಭ ನಡೆಯಬೇಕಿತ್ತು.
ಆದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಕಾರಣ ಪೋಲೀಸರು ಸದ್ಯದ ಪರಿಸ್ಥಿತಿಯಲ್ಲಿ ಈ ಸಮಾರಂಭ ನಡೆಸುವುದು ಬೇಡ ಎಂದು ಸಲಹೆ ನೀಡಿದ್ದರು. ಈ ನಿಟ್ಟಿನಲ್ಲಿ ನಾಮಕರಣವನ್ನು ಮುಂದೂಡಲಾಗಿದೆ ಎಂದು ಹಲವಾರು ಪತ್ರಿಕೆಗಳು ವರದಿ ಮಾಡಿವೆ.
ಬಲಪಂಥೀಯರ ವಿರೋಧ
ಯು.ಎ.ಪಿ.ಎ. ಕಾಯ್ದೆಯಡಿ ಬಂಧಿತರಾಗಿದ್ದ ಸ್ಟಾನ್ ಸ್ವಾಮಿ ಅವರ ಹೆಸರಿನಲ್ಲಿ ಪಾರ್ಕಿಗೆ ನಾಮಕರಣ ಮಾಡುವುದು ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವ ಹಿಂದೂ ಪರಿಷದ್, ಬಜರಂಗ ದಳ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ಈ ನಿರ್ಧಾರ ಜಾರಿಯಾದರೆ ಸ್ಥಳೀಯವಾಗಿ ತೀವ್ರ ಪ್ರತಿಭಟನೆ ಮಾಡುವುದಾಗಿ ಹೇಳಿದೆ.
ಸ್ಟಾನ್ ಸ್ವಾಮಿ ಅವರನ್ನು ‘ಅರ್ಬನ್ ನಕ್ಸಲ್’ ಎಂದು ಕರೆದು ಅವರ ಹೆಸರಿನಲ್ಲಿ ನಾಮಕರಣ ಮಾಡುವುದು ‘ಭಾರತದ ಏಕತೆಯ ಮೇಲೆ ದಾಳಿ ನಡೆಸಿದಂತೆ’ ಎಂದು ಎ.ಬಿ.ವಿ.ಪಿ. ಸಂಘಟನೆಯು ಪೋಲೀಸರಿಗೆ, ಸಂಸ್ಥೆಗೆ ಮತ್ತು ಕಾಲೇಜಿಗೆ ಪತ್ರಗಳನ್ನು ಬರೆದಿದೆ. ಈ ನಿರ್ಧಾರವನ್ನು ಕಾಲೇಜು ಬದಲಿಸದಿದ್ದರೆ ‘ಮುಂದಾಗುವ ಘಟನೆಗಳಿಗೆ ಕಾಲೇಜು ಜವಾಬ್ದಾರಿ ಹೊರಬೇಕಾಗುತ್ತದೆ’ ಎಂದು ಬೆದರಿಸಲಾಗಿದೆ.
ಬಜರಂಗ ದಳ ಒಂದು ಪತ್ರಿಕಾಗೋಷ್ಠಿಯನ್ನೂ ಕರೆದಿತ್ತು. ಸ್ವಾಮಿ ಅವರ ಬದಲಿಗೆ ಇತ್ತೀಚೆಗೆ ಮೃತಪಟ್ಟ ಆಸ್ಕರ್ ಫರ್ನಾಂಡೆಸ್ ಅಥವಾ ಜಾರ್ಜ್ ಫರ್ನಾಂಡೆಸ್ ಅವರ ಹೆಸರಿನಲ್ಲಿ ನಾಮಕರಣ ಮಾಡಬೇಕು ಎಂದು ಈ ಸಂಘಟನೆಗಳು ಸೂಚಿಸಿವೆ.
“ನಾವು ಪಾರ್ಕ್ ಗೆ ನಾಮಕರಣ ಮಾಡುವುದರ ವಿರುದ್ಧವಿಲ್ಲ. ಅವರು ಆಸ್ಕರ್ ಫರ್ನಾಂಡೆಸ್, ಜಾರ್ಜ್ ಫರ್ನಾಂಡೆಸ್ ಅಥವಾ ಶಿಕ್ಷಣಕ್ಕೆ ಬಹಳ ಕೊಡುಗೆಯನ್ನು ನೀಡಿರುವ ಸಂತ ಅಲೋಷಿಯಸ್ ಕಾಲೇಜಿನ ಸಂಸ್ಥಾಪಕರ ಹೆಸರನ್ನಿಡಲಿ. ಸ್ಟಾನ್ ಸ್ವಾಮಿ ಅವರ ಹೆಸರನ್ನಲ್ಲ. ಸ್ವಾಮಿ ಸತ್ತಿರಬಹುದು. ಆದರೆ ಅವರ ಮೇಲಿನ ಆಪಾದನೆಗಳು ಸುಳ್ಳು ಎಂದು ಸಾಬೀತಾಗಿಲ್ಲ,” ಎಂದು ವಿಶ್ವ ಹಿಂದೂ ಪರಿಷದ್ ನ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದಾರೆ.
ಪ್ರತಿರೋಧಕ್ಕೆ ಪ್ರತಿರೋಧ
ಸಂತ ಅಲೋಷಿಯಸ್ ಕಾಲೇಜಿಗೆ ಬೆದರಿಕೆಗಳನ್ನು ಹಾಕಿರುವ ಬಲಪಂಥೀಯರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಲವಾರು ಸಂಘಟನೆಗಳು ಮತ್ತು ಹೋರಾಟಗಾರರು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮತ್ತು ಪೋಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕ ಪತ್ರದ ಮೂಲಕ ಹಿಂದುತ್ವ ಸಂಘಟನೆಗಳ ಈ ನಡೆ ಕ್ರಿಮಿನಲ್ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ. ಕಾಲೇಜಿನ ಖಾಸಗಿ ವಿಚಾರಗಳಲ್ಲಿ ಈ ಗುಂಪುಗಳು ತಲೆ ಹಾಕದೇ ಇರುವಂತೆ ಜಿಲ್ಲಾಡಳಿತ ಮತ್ತು ಪೋಲೀಸರು ನಿಗಾ ವಹಿಸಬೇಕಾಗಿ ಹಲವಾರು ಹೋರಾಟಗಾರರು ಮನವಿ ಮಾಡಿಕೊಂಡಿದ್ದಾರೆ.
“ಒಂದು ಕ್ಯಾತೊಲಿಕ್ ಖಾಸಗಿ ಸ್ವಾಯತ್ತ ಕಾಲೇಜಿಗೆ ಎಬಿವಿಪಿ, ವಿ.ಎಚ್.ಪಿ. ಮತ್ತು ಬಜರಂಗ ದಳ ಹಾಕಿರುವ ಬೆದರಿಕೆಗಳನ್ನು ನಾವು ಖಂಡಿಸುತ್ತೇವೆ. ಅಂಚಿನ ಸಮುದಾಯಗಳ ಮಾನವ ಹಕ್ಕುಗಳಿಗಾಗಿ ಹೋರಾಡಿದ ಸ್ವಾಮಿ ಅವರ ಸಾವು ಪ್ರಭುತ್ವದ ವ್ಯವಸ್ಥಿತ ಶೋಷಣೆಯ ಸಂಕೇತವಾಗಿದ. ಅವರ ಸ್ಮರಣೆಯಲ್ಲಿ ನಾಮಕರಣ ಮಾಡುವ ಕಾಲೇಜಿನ ನಿರ್ಧಾರಕ್ಕೆ ಈ ಗುಂಪುಗಳು ಬೆದರಿಕೆ ಹಾಕುವುದು ಖಂಡನಾರ್ಹ,” ಎಂದು ಪತ್ರ ಹೇಳುತ್ತದೆ.
ಕಾಂಪೇನ್ ಟು ಡಿಫೆಂಡ್ ಡೆಮಾಕ್ರೆಸಿ, ಆಲ್ ಇಂಡಿಯಾ ಪೀಪಲ್ಸ್ ಫೋರಂ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ನಂತಹ ಸಂಘಟನೆಗಳ ಜೊತೆಗೆ ಅಮರ್ ಜೆಸಾನಿ, ಪಿ. ಸಾಯಿನಾಥ್, ಅನಿಲ್ ಸದ್ಗೋಪಾಲ್, ದೂನು ರಾಯ್, ಹರ್ಷ್ ಮಂದರ್, ಕವಿತಾ ಶ್ರೀವತ್ಸವ, ಮೀರಾ ಸಂಘಮಿತ್ರ, ನಂದಿನಿ ಸುಂದರ್, ಪಿಯೇಟರ್ ಫ್ರೆಡ್ರಿಚ್ ಮತ್ತು ರಾಮ್ ಪುನಿಯಾನಿ ಸೇರಿದಂತೆ ಹಲವಾರು ಗಣ್ಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
“ಈ ಗುಂಪುಗಳಿಗೆ ಖಾಸಗಿ ಸಂಸ್ಥೆಯೊಂದರ ವಿಷಯಕ್ಕೆ ತಲೆ ಹಾಕಲು ಯಾವುದೇ ಅಧಿಕಾರವಿಲ್ಲ. ಹಿಂಸೆ, ಧಾರ್ಮಿಕ ವಿಭಜನೆಯನ್ನು ಪ್ರಚೋದಿಸುವ ಇತಿಹಾಸವಿರುವ ಈ ಸಂಘಟನೆಗಳು ಸಂವಿಧಾನಕ್ಕೆ ಮತ್ತು ಕಾನೂನು ವ್ಯವಸ್ಥೆಗೆ ಯಾವುದೇ ಗೌರವ ನೀಡದಂತಹ ರಾಷ್ಟ್ರದ ಪರಿಕಲ್ಪನೆಯನ್ನು ಹೊಂದಿವೆ. ಕರಾವಳಿ ಕರ್ನಾಟಕದಲ್ಲಿ ಈ ಸಂಘಟನೆಗಳಿಗೆ ನೀಡಿರುವ ಅತಿಯಾದ ಸ್ವಾತಂತ್ರವೇ ಇಂತಹ ನೇರವಾದ ಅಕ್ರಮ ನಡುವಳಿಕೆಗೆ ಕಾರಣ,” ಎಂದು ಪತ್ರದಲ್ಲಿ ಹೇಳಲಾಗಿದೆ.
“ಈ ಸಂಘಟನೆಗಳು ಸಾಮಾಜಿಕ ಅಪಾರ್ಥೈಡನ್ನು ಹೇರುತ್ತಾ ಜನರ ಖಾಸಗಿ ವಿಷಯಗಳ ಮೇಲೆ ಅಧಿಕಾರ ಸಾಧಿಸಲು ಯತ್ನಿಸುತ್ತಾ ಸಂವಿಧಾನದ ತತ್ವವಾದ ಭ್ರಾತೃತ್ವಕ್ಕೆ ತಮ್ಮ ಪ್ರತಿನಿತ್ಯದ ಹಿಂಸಾಚಾರದಿಂದ ಯಾವುದೇ ಬೆಲೆಯನ್ನು ನೀಡುತ್ತಿಲ್ಲ. ಗಲಭೆಗಳನ್ನು ಪ್ರಚೋದಿಸುವುದು, ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುವುದು, ಅವರನ್ನು ಎರಡನೇ ದರ್ಜೆಯ ಪೌರತ್ವಕ್ಕೆ ತಳ್ಳುವುದು ಈ ಸಂಘಟನೆಗಳ ಕಾರ್ಯಕರ್ತರ ಕೆಲಸವಾಗಿದೆ,” ಎನ್ನುತ್ತದೆ ಪತ್ರ.
ಕಾಲೇಜಿನ ನಿಲುವು
ಸಂತ ಅಲೋಷಿಯಸ್ ಸಂಸ್ಥೆಗಳ ರೆಕ್ಟರ್ ಮತ್ತು ಮಂಗಳೂರು ಜೇಸ್ಯೂಟ್ ಶೈಕ್ಷಣಿಕ ಸಮಾಜದ ಉಪಾಧ್ಯಕ್ಷರಾದ ಮೆಲ್ವಿನ್ ಜೋಸೆಫ್ ಪಿಂಟೋ ಅವರು ಸ್ಟಾನ್ ಸ್ವಾಮಿ ಅವರ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಸ್ವಾಮಿ ಅವರೊಡನೆ ವೈಯಕ್ತಿಕವಾಗಿ ಕೆಲಸ ಮಾಡಿದ್ದ ಪಿಂಟೋ ಅವರು ಭಾರತದ ಆದಿವಾಸಿ ಚಳುವಳಿಗೆ ಸ್ವಾಮಿ ಅವರ ಕೊಡುಗೆ ಅಪಾರ ಎಂದು ಹೇಳಿದ್ದಾರೆ.
ದ ವೈರ್ ನ ಪ್ರಕಾರ ಪಿಂಟೋ ಅವರು ಇನ್ನಷ್ಟು ಚರ್ಚೆಗಳ ನಂತರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. “ಇಂತಹ ಸಂದರ್ಭದಲ್ಲಿ ಪಾರ್ಕನ್ನು ಸ್ವಾಮಿ ಅವರ ಹೆಸರಿನಲ್ಲಿ ನಾಮಕರಣ ಮಾಡಬೇಕೋ ಬೇಡವೋ ಎಂಬುದು ನಮಗೆ ಖಾತ್ರಿಯಿಲ್ಲ,” ಎಂದು ಪಿಂಟೋ ಹೇಳಿದ್ದಾರೆಂದು ದ ವೈರ್ ಶನಿವಾರ ವರದಿ ಮಾಡಿದೆ.
ಇದೇ ಸಂದರ್ಭದಲ್ಲಿ ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು ಕಾಲೇಜು ತನ್ನ ನಿರ್ಧಾರದ ಬಗ್ಗೆ ಧೃಢ ನಿಲುವನ್ನು ಹೊಂದಿದೆ ಎಂದು ಗುರುವಾರ ವರದಿ ಮಾಡಿತ್ತು. ಆ ವರದಿಯ ಪ್ರಕಾರ ಕಾಲೇಜು ರಾಷ್ಟ್ರಪತಿಯ ಭೇಟಿಯ ಕಾರಣದಿಂದಾಗಿ ಸಮಾರಂಭವನ್ನು ಮುಂದೂಡಲಾಗಿದೆ, ಆದರೆ ಯಾವುದೇ ಕಾರಣಕ್ಕೂ ಬಲಪಂಥೀಯ ಗುಂಪುಗಳಿಗೆ ಹೆದರಿ ತಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ಪಿಂಟೋ ಅವರು ಹೇಳಿದ್ದಾರೆ.
ಈ ಎಲ್ಲಾ ವಾದ ವಿವಾದಗಳ ನಡುವೆ ಸಂತ ಅಲೋಷಿಯಸ್ ಕಾಲೇಜು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.
(ದ ವೈರ್, ದ ಕ್ವಿಂಟ್, ದ ನ್ಯೂಸ್ ಮಿನಿಟ್, ದ ಹಿಂದೂ ಮತ್ತು ವ್ಯಕ್ತಿಗತ ಮೂಲಗಳ ಮಾಹಿತಿಯನ್ನು ಆಧರಿಸಲಾಗಿದೆ)