ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ರಿತು ರಾಜ್ ಅವಸ್ತಿ ಅವರ ನೇಮಕಾತಿಯೂ ಸೇರಿದಂತೆ ದೇಶಾದ್ಯಂತ ವಿವಿಧ 13 ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರವು ಶನಿವಾರ ಅಧಿಸೂಚನೆ ಹೊರಡಿಸಿದೆ. ಐವರು ಮುಖ್ಯ ನ್ಯಾಯಮೂರ್ತಿಗಳನ್ನು ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದ್ದು, ಎಂಟು ಹೈಕೋರ್ಟ್‌ಗಳಿಗೆ ಹಿರಿಯ ನ್ಯಾಯಮೂರ್ತಿಗಳಾಗಿದ್ದವರನ್ನು ಮುಖ್ಯ ನ್ಯಾಯಮೂರ್ತಿಗಳಾಗಿ ಪದನೋನ್ನತಿ ನೀಡಲಾಗಿದೆ. ಸೆಪ್ಟೆಂಬರ್ 16ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿಗಳ ವರ್ಗಾವಣೆಗೆ ಶಿಫಾರಸ್ಸು ಮಾಡಿತ್ತು.
ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಅಲಹಾಬಾದ್ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ್ ಚಂದ್ರ ಶರ್ಮಾ ಅವರನ್ನು ತೆಲಂಗಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕ ಮಾಡಲಾಗಿದೆ. ಹಾಗೆಯೇ, ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರನ್ನು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಇದೇ ವೇಳೆ ಕನ್ನಡಿಗ ನ್ಯಾಯಮೂರ್ತಿ ರವಿ ವಿ. ಮಳಿಮಠ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ನೇಮಕ ಮಾಡಲಾಗಿದೆ. ಪ್ರಸ್ತುತ ನ್ಯಾ. ರವಿ ವಿ. ಮಳಿಮಠ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ನ್ಯಾ. ರಿತು ರಾಜ್ ಅವಸ್ತಿ ಹಿನ್ನೆಲೆ.!!
ಪ್ರಸ್ತುತ ಅಲಹಾಬಾದ್ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಆಗಿ ಸೇವೆ ಸಲ್ಲಿಸುತ್ತಿರುವ ರಿತು ರಾಜ್ ಅವಸ್ತಿ 1960ರ ಜುಲೈ 3ರಂದು ಜನಿಸಿದ್ದಾರೆ. ಲಕ್ನೋ ವಿಶ್ವವಿದ್ಯಾಲಯದಿಂದ 1986ರಲ್ಲಿ ಕಾನೂನು ಪದವಿ ಪಡೆದು, 1987ರಲ್ಲಿ ವಕೀಲರಾಗಿ ನೋಂದಾಯಿಸಿಕೊಂಡಿರುವ ಇವರು ಸಿವಿಲ್, ಶಿಕ್ಷಣ ಹಾಗೂ ಸೇವಾ ವಿಷಯಗಳಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದಾರೆ. ಕೇಂದ್ರ ಸರ್ಕಾರದ ಪರ ಸಹಾಯಕ ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2009ರ ಏಪ್ರಿಲ್ 13ರಿಂದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸುಪ್ರೀಂ ಕೋರ್ಟ್ ಕಳದ ತಿಂಗಳು ಶಿಫಾರಸು ಮಾಡಿತ್ತು. ಸದ್ಯ ರಾಜ್ಯ ಹೈಕೋರ್ಟ್ ನ ಸಿಜೆ ಹುದ್ದೆಗೆ ನೇಮಕಗೊಂಡಿರುವ ನ್ಯಾ. ರಿತುರಾಜ್ ಅವಸ್ತಿ 2022ರ ಜುಲೈ 2ರಂದು ನಿವೃತ್ತಿ ಹೊಂದಲಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳಾಗಿ ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ವರ್ಗಾವಣೆಗೊಂಡ ನ್ಯಾಯಮೂರ್ತಿಗಳ ಪಟ್ಟಿ:
· ನ್ಯಾ. ಅಖಿಲ್ ಖುರೇಷಿ – ತ್ರಿಪುರದಿಂದ ರಾಜಸ್ಥಾನ
· ನ್ಯಾ. ಇಂದ್ರಜಿತ್ ಮಹಂತಿ – ರಾಜಸ್ಥಾನದಿಂದ ತ್ರಿಪುರ
· ನ್ಯಾ. ಮೊಹಮ್ಮದ್ ರಫೀಕ್ – ಮಧ್ಯಪ್ರದೇಶದಿಂದ ಹಿಮಾಚಲ ಪ್ರದೇಶ
· ನ್ಯಾ. ಅರುಪ್ ಕುಮಾರ್ ಗೋಸ್ವಾಮಿ – ಆಂಧ್ರಪ್ರದೇಶದಿಂದ ಚತ್ತೀಸಗಢ
· ನ್ಯಾ. ಬಿಸ್ವನಾಥ್ ಸೋಮದ್ದರ್ – ಮೇಘಾಲಯದಿಂದ ಸಿಕ್ಕಿಂ
8 ಹಿರಿಯ ನ್ಯಾಯಮೂರ್ತಿಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ. ಆ ಪಟ್ಟಿ ಇಂತಿದೆ:
· ನ್ಯಾ. ರಿತು ರಾಜ್ ಅವಸ್ತಿ – ಕರ್ನಾಟಕ ಹೈಕೋರ್ಟ್
· ನ್ಯಾ. ರಾಜೇಶ್ ಬಿಂದಾಲ್ – ಅಲಾಹಾಬಾದ್
· ನ್ಯಾ. ಪ್ರಕಾಶ್ ಶ್ರೀವಾಸ್ತವ – ಕಲ್ಕತ್ತಾ
· ನ್ಯಾ. ಪಿ ಕೆ ಮಿಶ್ರಾ – ಆಂಧ್ರ ಪ್ರದೇಶ
· ನ್ಯಾ. ಸತೀಶ್ ಚಂದ್ರ ಶರ್ಮಾ – ತೆಲಂಗಾಣ
· ನ್ಯಾ. ಅರವಿಂದ್ ಕುಮಾರ್ – ಗುಜರಾತ್
· ನ್ಯಾ. ಆರ್ ವಿ ಮಳಿಮಠ – ಮಧ್ಯಪ್ರದೇಶ
· ನ್ಯಾ. ರಂಜಿತ್ ವಿ ಮೋರೆ – ಮೇಘಾಲಯ