ಅಕ್ಟೋಬರ್ 3ರಂದು ಲಖೀಂಪುರ್ ಖೇರಿಯಲ್ಲಿ ನಡೆದ ಘಟನೆ ಸಂಬಂಧ ಇದೀಗ ಅಚ್ಚರಿಯ ಮಾಹಿತಿಯೊಂದು ಬಯಲಾಗಿದೆ. ಈ ಬಗ್ಗೆ THE CARAVAN ವೆಬ್ ತಾಣವೂ ವರದಿ ಮಾಡಿದ್ದು, ಬಿಜೆಪಿ ಸಚಿವನ ಪುತ್ರ ಆಶಿಶ್ ಮಿಶ್ರಾನ ಕಾರು ರೈತರ ಮೇಲೆ ಹರಿಯುವುದರ ಜೊತೆಗೆ ಓರ್ವ ಪತ್ರಕರ್ತನ ಮೇಲೂ ಹರಿದಿದೆ ಎಂದು ಓರ್ವ ಪ್ರತ್ಯಕಷದರ್ಶಿ ಮಾಹಿತಿ ನೀಡಿದೆ ಎಂದು ಕ್ಯಾರಾವನ್ ವರದಿ ಮಾಡಿದೆ.
ಲಖೀಂಫುರ್ ಖೇರಿ ಘಟನೆ ಇಡೀ ದೇಶದ ಗಮನ ಸೆಳೆದಿದೆ. ಮೋದಿ ಸಂಪುಟದ ಸಚಿವನಾಗಿರುವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ತನ್ನ ಕಾರನ್ನು ರೈತರ ಮೇಳೆ ಹರಿಸಿ ರೈತರ ಮಾರಣಹೋಮ ನಡೆಸಿದ್ದಾನೆ. ಈ ಘಟನೆ ಸಂಬಂಧ ಇದೀಗ ಪ್ರಕರಣ ದಾಖಲಾಗಿದ್ದರೂ ಹೇಳಿಕೊಳ್ಳುವ ಕ್ರಮವನ್ನೇನು ತೆಗೆದುಕೊಳ್ಳಲಾಗಿಲ್ಲ. ಇದರ ನಡುವೆ ಈ ಘಟನೆಯಲ್ಲಿಓರ್ವ ಪತ್ರಕರ್ತನ ಜೀವವನ್ನೂ ಆಶಿಶ್ ಪುತ್ರ ತೆಗೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಕ್ಯಾರಾವನ್ ಗೆ ತಿಳಿಸಿದ್ದಾನೆ.
ಈ ಘಟನೆ ನಡೆಯುವ ಸಂಧರ್ಬ ಸ್ಥಳದಲ್ಲೇ ಇದ್ದ ಅನಿಲ್ ಕುಮಾರ್ ಮೌರ್ಯ ಎಂಬ ಪತ್ರಕರ್ತ ಕ್ಯಾರಾವನ್ ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಅನಿಲ್ ಕುಮಾರ್ ಮೌರ್ಯ ಬಹ್ರೈಚ್ ಜಿಲ್ಲೆಯಲ್ಲಿ ದಿ ದಸ್ತಕ್ 24 ಎಂಬ ಸುದ್ದಿ ಸಂಸ್ಥೆಯ ಮುಖ್ಯಸ್ಥನಾಗಿ ಕೆಲಸ ಮಾಡಿಕೊಂಡಿದ್ದಾರೆ. ರಾಮನ್ ಕಶ್ಯಪ್ ಎಂಬ ಪತ್ರಕರ್ತನ ಮೇಲೆ ಆಶಿಶ್ ಮಿಶ್ರಾ ಕಾರು ಹರಿಯವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಅನಿಲ್ ಕುಮಾರ್ ಮೌರ್ಯ ತಿಳಿಸಿದ್ದಾರೆಂದು ಕ್ಯಾರಾವನ್ ವರದಿ ಮಾಡಿದೆ.
ಅನಿಲ್ ಕುಮಾರ್ ಮೌರ್ಯ ಹೇಳುವ ಪ್ರಕಾರ, ಅಕ್ಟೋಬರ್ 3ರಂದು ಲಖೀಂಪುರ್ ಖೇರಿಯ ಬನ್ವೀರ್ಪುರ್ ಎಂಬಲ್ಲಿ ಗುಸ್ತಿ ಕಾರ್ಯಕ್ರಮದ ಬಗ್ಗೆ ಸುದ್ದಿ ಮಾಡುವ ಸಲುವಾಗಿ ಸ್ಥಳಕ್ಕೆ ಬಂದಿದ್ದರು. ಈ ಗುಸ್ತಿ ಕಾರ್ಯಕ್ರಮವನ್ನು ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಅಜಯ್ ಮಿಶ್ರಾ ನಿವಾಸದಲ್ಲೇ ಆಯೋಜಿಸಲಾಗಿತ್ತು. 1.30ಕ್ಕೆ ನಿಗದಿಯಾಗಿದ್ದ ಈ ಕಾರ್ಯಕ್ರಮಕ್ಕೆ ನಾನು 12 ಸುಮಾರಿಗೆ ಸ್ಥಳದಲ್ಲಿದ್ದೆ. ಈ ಕಾರ್ಯಕ್ರಮಕ್ಕೆ ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಆಗಮಿಸುತ್ತಿದ್ದ ಹಿನ್ನೆಲೆ ಬಿಗಿ ಪೊಲೀಸ್ ಬಂದೋ ಬಸ್ತ್ ಕೂಡ ನೀಡಲಾಗಿತ್ತು. ಆದರೆ ಕೇಶವ್ ಪ್ರಸಾದ್ ಮೌರ್ಯ 2.15 ಸುಮಾರಿಗೆ ಲ್ಯಾಂಡ್ ಆಗುವ ಸಾಧ್ಯತೆ ಇದ್ದುದ್ದರಿಂದ ನಾನು ಹೆಲಿಕಾಪ್ಟರ್ ಇಳಿಯಲು ನಿಗದಿ ಪಡಿಸಲಾಗಿದ್ದ ಬನ್ವೀರ್ಪುರ್ ನಿಂದ ಐದಾರು ಕಿಲೋಮೀಟ್ ದೂರದಲ್ಲಿರುವ ತಿಕೂನಿಯಾ ಎಂಬ ಹಳ್ಳಿಯ ಮೈದಾನದ ಕಡೆಗೆ ನಡೆದೆ. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದರು. ಇದರ ಜೊತೆಗೆ ಕಪ್ಪು ಬಣ್ಣದ ಪಟ್ಟಿ ಹಿಡಿದುಕೊಂಡು ರೈತರು ನೆರೆದಿದ್ದರು.

2.15ಕ್ಕೆ ಬರಬೇಕಿದ್ದ ಉಪ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಗಂಟೆ ಮೂರಾದರೂ ಸ್ಥಳಕ್ಕೆ ಬರಲಿಲ್ಲ. ಹೀಗಾಗಿ ಕಪ್ಪು ಪಟ್ಟಿ ತೋರಿ ಪ್ರತಿಭಟನೆ ದಾಖಲು ಮಾಡಲು ಬಂದಿದ್ದ ರೈತರೆಲ್ಲಾ ತಮ್ಮ ಮನೆಯ ಕಡೆಗೆ ನಡೆಯಲು ಶುರು ಮಾಡಿದ್ದರು. ರೈತರೆಲ್ಲಾ ವಾಪಾಸ್ ನಡೆಯುವ ಹೊತ್ತಿಗೆ ಸ್ಥಳಕ್ಕೆ ಒಂದು ಬಿಳಿ ಬಣ್ಣದ ಕಾರ್ ಹಾಗೂ ಮೂರು ಕಪ್ಪು ಬಣ್ಣದ ಕಾರು ಸೇರಿದಂತೆ ಒಟ್ಟು 4 ಕಾರುಗಳು ಬಂದವು. ಬಿಳಿ ಬಣ್ಣದ ಕಾರು ವೇಗವಾಗಿ ರೈತರಿದ್ದ ಕಡೆಗೆ ಬಂದರೂ, ರೈತರು ಆ ಕಾರಿಗೆ ಮುಂದಕ್ಕೆ ಹೋಗಲು ದಾರಿ ಮಾಡಿಕೊಟ್ಟಿದ್ದರು. ಆ ಬಿಳಿ ಬಣ್ಣದ ಕಾರು ಸಚಿವ ಅಜಯ್ ಮಿಶ್ರಾ ಮತ್ತೊಬ್ಬ ಪುತ್ರ ಅಭಿಮನ್ಯೂ ಮಿಶ್ರಾ ಓಡಿಸುತ್ತಿದ್ದ. ಆದರೆ ಇದೇ ವೇಳೆ ಅದಕ್ಕಿಂತಲೂ ವೇಗವಾಗಿ ಬಂದ ಮತ್ತೊಂದು ಕಪ್ಪು ಬಣ್ಣದ ಕಾರು ರೈತರ ಮೇಲೆಯೇ ಹರಿಸಿದ್ದಾರೆ. ಈ ಕಾರನ್ನು ಆಶಿಶ್ ಮಿಶ್ರಾ ಓಡಿಸುತ್ತಿದ್ದ. ಈ ವೇಳೆ ನಾನು (ಅಮಿಲ್ ಕುಮಾರ್ ಮೌರ್ಯ) ರಾಮನ್ ಕಶ್ಯಪ್ ಜೊತೆ ಸೇರಿ ಅಲ್ಲೇ ಪಕ್ಕದಲ್ಲಿ ನಿಂತು ಮಾತುಕತೆ ನಡೆಸುತ್ತಿದ್ದವು. ಮೊದಲ ಭೇಟಿಯಾಗಿದ್ದರಿಂದ ತಮ್ಮ ವಿಸಿಟಿಂಗ್ ಕಾರ್ಡ್ ಹಂಚಿಕೊಳ್ಳುತ್ತಿದ್ದೆವು.
ಈ ವೇಳೆ ಆಶಿಶ್ ಮಿಶ್ರಾ ಕಾರಿನ ಚಕ್ರ ರಾಮನ್ ಕಶ್ಯಪ್ ಮೇಲೆ ಹರಿದಿದೆ. ಈ ಘಟನೆ ನಡೆಯುತ್ತಿದ್ದಂತೆ, ಅಲ್ಲಿದ್ದ ಜನರೆಲ್ಲಾ ಚೆಲ್ಲಾಪಿಲ್ಲಿಯಾದರು. ಈ ಘಟನೆಗೂ ಮೊದಲು ಅಲ್ಲಿ ಯಾವುದೇ ದುರ್ಘಟನೆ ನಡೆಯುವ ವಾತಾವರಣ ಇರಲಿಲ್ಲ. ಎಲ್ಲವೂ ಶಾಂತಿಯುತವಾಗಿತ್ತು. ಆದರೆ ಆಶಿಶ್ ಮಿಶ್ರಾ ಏಕಾಏಕಿಯಾಗಿ ಕಾರು ಚಲಾಯಿಸಿ ರೈತರ ಮೇಲೆ ಹಾಗೂ ಪತ್ರಕರ್ತ ರಾಮನ್ ಕಶ್ಯಪ್ ಮೇಲೆ ಹರಿಸಿದ್ದಾನೆ. ಇದಾದ ಬಳಿಕ ಆಶಿಶ್ ಮಿಶ್ರಾನನ್ನು ಹಿಡಿಯುವ ಪ್ರಯತ್ನ ರೈತರಿಂದ ನಡೆಯಿತು. ಗುರ್ವೀಂದರ್ ಎಂಬ 19 ವರ್ಷದ ರೈತ ಯುವಕ ಆಶಿಶ್ ಮಿಶ್ರಾನನ್ನು ಹಿಡಿದಿಡುವ ಪ್ರಯತ್ನ ಮಾಡಿದ. ಆದರೆ ಪೊಲೀಸರು ಆ ಯುವಕನ ಮೇಲೆಯೇ ಗುಂಡಿ ಹಾರಿಸಿದ ಪರಿಣಾಮ, ಆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದ. ನಂತರ ಪೊಲೀಸರೇ ಆಶಿಶ್ ಮಿಶ್ರಾಗೆ ಸ್ಥಳದಿಂದ ಕಾಲುಕೀಳಲು ಸಹಾಯ ಮಾಡಿದರು. ಅದಾದ ಬಳಿಕ ಪತ್ರಕರ್ತ ರಾಮನ್ ಕಶ್ಯಪ್ ಗೆ ಏನಾಯಿತು ಎಂದು ವಿಚಾರಿಸೋಣ ಎಂದರೆ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ನನ್ನನ್ನು ಹಾಗೂ ನನ್ನ ಜೊತೆಗಿದ್ದವರನ್ನು ಬಿಡಲಿಲ್ಲ ಎಂದು ಈ ಘಟನೆಯನ್ನುಕಣ್ಣಾರೆ ಕಂಡಿದ್ದ ಪತ್ರಕರ್ತ ಅನಿಲ್ ಕುಮಾರ್ ಮೌರ್ಯ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಷ್ಟೆಲ್ಲಾ ಆದರೂ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನು ಪೊಲೀಸರು ಬಂಧಿಸಿಲ್ಲ. ಸದ್ಯ ಎಫ್‌ಐಆರ್ ದಾಖಲು ಮಾಡಲಾಗಿದೆ. ಎಫ್‌ಐಆರ್‌ನಲ್ಲಿ ಐಪಿಸಿ 302 (ಕೊಲೆ), ಐಪಿಸಿ 304A (ನಿರ್ಲಕ್ಷ್ಯದಿಂದ ಸಾವು) ಉಲ್ಲೇಖಿಸಲಾಗಿದ್ದರೂ ಮಿಶ್ರಾನನ್ನು ಬಂಧಿಸಲು ಸಾಧ್ಯವಾಗಿಲ್ಲ. ಅಂದಹಾಗೆ, ಈ ಘಟನೆಯ ನಡೆಯುವುದಕ್ಕೂ ಕೆಲ ದಿನಗಳ ಮೊದಲು ಪಕ್ಕದ ಪಾಲಿಯ ಎಂಬ ಹಳ್ಳಿಯಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಅಜಯ್ ಮಿಶ್ರಾ ರೈತರಿಗೆ ಬಹಿರಂಗವಾಗಿಯೇ ಬೆದರಿಕೆ ಒಡ್ಡಿದ್ದರು. ʻʻಸುಧರ್ ಜಾವೋ. ನಹೀ ಥೋ ಹಮ್ ಆಪ್ಕೋ ಸುಧರ್ ದೇಂಗೆ. ದೋ ಮಿನಿಟ್ ಲಗೇಂಗೆ ಕೇವಲ್ʼʼ (ನೀವು ಬದಲಾಗಿ. ಇಲ್ಲದಿದ್ದರೆ ನಿಮ್ಮನ್ನು ನಾವು ಬದಲಿಸುತ್ತೇವೆ. ಅದಕ್ಕೆ ಬೇಕಾಗಿರುವುದು ಕೇವಲ ಎರಡು ನಿಮಿಷ ಮಾತ್ರ) ಎಂದು ಅಜಯ್ ಮಿಶ್ರಾ ಬೆದರಿಕೆ ಒಡ್ಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿರುವು ಬಹಳಷ್ಟು ಅನುಮಾನ ಹುಟ್ಟಿಸಿದೆ.