2023 ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ವರಿಷ್ಠರು ಭಾರೀ ರಣತಂತ್ರ ರೂಪಿಸಿದ್ದಾರೆ. ಶತಾಯಗತಾಯ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಹೆಚ್ಚು ಸೀಟು ಗೆಲ್ಲುವ ಮೂಲಕ ಅಧಿಕಾರ ಹಿಡಿಯಲೇಬೇಕು ಎಂದು ಕಾರ್ಯಗಾರದ ಮೊರೆ ಹೋಗಿದ್ದಾರೆ. ಕಾರ್ಯಗಾರದಲ್ಲಿ ಆಗಲೇ ಅಭ್ಯರ್ಥಿಗಳಿಗೆ ಪಾಠ ಮಾಡಿದ್ದಾಯ್ತು. ಇವರಿ ಪರೀಕ್ಷೆಯೂ ಕೊಟ್ಟಾಯ್ತು. ಈಗ ಫಲಿತಾಂಶ ಬರುವ ಸಮಯ. ಹೀಗಿರುವಾಗ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಜೆಡಿಎಸ್ ನಿರ್ಧರಿಸಿದೆ.
ಜೆಡಿಎಸ್ ಅಭ್ಯರ್ಥಿಗಳಿಗೆ ನಾಲ್ಕು ದಿನಗಳ ಕಾಲ ಪಾಠ, ಪ್ರವಚನ ಜೋರಾಗಿಯೇ ಇತ್ತು. ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಕಾರ್ಯಗಾರ ಯುವ ಜೆಡಿಎಸ್ ನಾಯಕರ ಸಮಾಗಮಕ್ಕೆ ವೇದಿಕೆಯಾಗಿತ್ತು. ಮುಂದಿನ ಚುನಾವಣೆಯಲ್ಲಿ ಪಾರುಪತ್ಯ ಮೆರೆಯೋಕೆ ಯುವನಾಯಕರಿಗೆ ತಂತ್ರ, ರಣತಂತ್ರಗಳ ಉಪದೇಶಗಳು ನಡೆಯಿತು.
4 ದಿನಗಳ ಕಾರ್ಯಗಾರದ ಕೊನೆ ದಿನ ರಾಜ್ಯ ಯುವ ಘಟಕದ ನಾಯಕರಿಗೆ ತರಬೇತಿ ನೀಡಲಾಯ್ತು. ಯುವ ಮತದಾರರನ್ನ ಸೆಳೆಯುವನಿಟ್ಟಿನಲ್ಲಿ ಜೆಡಿಎಸ್ ತಂತ್ರ ಹೇಗಿರಬೇಕು? ಯುವಕರನ್ನ ಸೆಳೆಯಲು ಯಾವ ವಿಧಾನ ಅನುಸರಿಸಬೇಕು? ಯುವ ಘಟಕದ ಕಾರ್ಯೋದ್ದೇಶಗಳೇನು ಎಂಬ ತರಬೇತಿಯನ್ನ ಯುವ ಜೆಡಿಎಸ್ ನಾಯಕರಿಗೆ ನೀಡಲಾಯ್ತು.
ಇನ್ನು, ಕಾರ್ಯಾಗಾರದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ರು. ಈ ವೇಳೆ ಇಬ್ಬರೂ ನಾಯಕರು ತಮ್ಮ ಪಕ್ಷದ ಯುವ ನಾಯಕರಿಗೆ ಪಕ್ಷದ ರೀತಿ ರಿವಾಜುಗಳು, ಚುನಾವಣಾ ತಂತ್ರಗಾರಿಗಳ ಪಾಠ ಮಾಡಿದ್ರು. ಇದೇ ವೇಳೆ ಪ್ರಜ್ವಲ್, ನಿಖಿಲ್ ಜಂಟಿ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ರು.
2023ರ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್ ಸಕಲ ಸಿದ್ಧತೆ ನಡೆಸಿರುವ ಜೆಡಿಎಸ್, ಅಭ್ಯರ್ಥಿಗಳ ಆಯ್ಕೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿಗಳ ಹಿಂದೆ ಜೆಡಿಎಸ್ ವರಿಷ್ಠರು ಸ್ಪೈ ಹಾಕಿದ್ದಾರೆ. ಈ ಗೂಢಾಚಾರಿಗಳು ನೀಡುವ ರಿಪೋರ್ಟ್ ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.
ಗೂಢಾಚಾರಿಗಳು ನೀಡುವ ವರದಿಯಲ್ಲಿ ಅಭ್ಯರ್ಥಿ ಎದುರಾಳಿ ಎದುರು ಗೆಲ್ಲುವ ಸ್ಪರ್ಧಿಯಾಗಿರಬೇಕು. ವಿಪಕ್ಷಗಳ ಜೊತೆಗೆ ಯಾವುದೇ ರೀತಿಯ ಹೊಂದಾಣಿಕೆ ಇರಬಾರದು. ಜೊತೆಗೆ ಕ್ಷೇತ್ರದ ಜನರ ಸಮಸ್ಯೆಯನ್ನ ಮೊದಲು ಆಲಿಸುವಂತಿರಬೇಕು. ಜೆಡಿಎಸ್ ಕಾರ್ಯಕರ್ತರ ಜೊತೆ ನಿಕಟ ಸಂಪರ್ಕದಲ್ಲಿರಬೇಕು. ಅಲ್ಲದೇ ಜೆಡಿಎಸ್ ಪಕ್ಷಕ್ಕೆ ಬರುವವರನ್ನು ಆಹ್ವಾನವನ್ನೂ ನೀಡಬಹುದು. ಇದೆಲ್ಲದರ ಜೊತೆಗೆ ಹಿರಿಯರು ಇಲ್ಲದಿದ್ದರೂ ಜನರನ್ನು ಸೇರಿಸಿ ಸಮಾವೇಶ ನಡೆಸುವಂತಹ ವರ್ಚಸ್ಸು ಬೆಳೆಸಿಕೊಂಡಿರಬೇಕು. ಈ ಎಲ್ಲಾ ಅಂಶಗಳು ಜೆಡಿಎಸ್ನ ಸ್ಪೈ ರಿಪೋರ್ಟ್ನಲ್ಲಿ ಇರಲಿದೆ.
ಒಟ್ಟಾರೆ, ಜೆಡಿಎಸ್ನ ನಾಲ್ಕು ದಿನದ ಕಾರ್ಯಾಗಾರ ಯುವನಾಯಕರ ಸಮ್ಮಿಲನದೊಂದಿಗೆ ಮುಕ್ತಾಯವಾಗಿದೆ. ಆದ್ರೆ, ಈ ಕಾರ್ಯಾಗಾರದಿಂದ ಜೆಡಿಎಸ್ನಲ್ಲಿ ಅದೆಷ್ಟು ಗೆಲ್ಲೋ ಕುದುರೆಗಳು ಹುಟ್ಟಿಕೊಳ್ಳಲಿವೆ. ಚುನಾವಣಾ ರೇಸ್ನಲ್ಲಿ ಹೇಗೆ ತಮ್ಮ ಪೈಪೋಟಿ ನೀಡಲಿದ್ದಾರೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.