ಬೆಂಗಳೂರು ಇತ್ತೀಚೆಗೆ ಸರಣಿ ದುರಂತಗಳಿಗೆ ಸಾಕ್ಷಿಯಾಗುತ್ತಿದೆ. ದೇವರಚಿಕ್ಕನಹಳ್ಳಿ ಅಗ್ನಿ ಅವಘಡದಿಂದ ಹಿಡಿದು ಇಂದು ಡೈರಿ ಸರ್ಕಲ್ ನ ಕೆಎಂಎಫ್ ಕ್ವಾಟರ್ಸ್ ವರೆಗಿನ ಘಟನೆಗಳು ಮತ್ತೊಮ್ಮೆ ಬೆಂಗಳೂರಿಗೆ ಮಾರ್ಮಿಕ ಹೊಡೆತ ನೀಡುತ್ತಿದೆ. ಈಗಾಗಲೇ ಬೆಂಗಳೂರು ಹಲವು ಕಾರಣಗಳಿಂದ ಬದುಕಿಗೆ ಯೋಗ್ಯವಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಹವಾಮಾನ ವೈಪರೀತ್ಯ, ಜನರ ಜೀವನ ವೆಚ್ಚ, ಸಂಚಾರಿ ದಟ್ಟಣೆ ಹೀಗೆ ಬೆಂಗಳೂರು ದಿನದಿಂದ ದಿನಕ್ಕೆ ಮತ್ತೊಂದು ಸ್ಥರಕ್ಕೆ ಹೊಂದಿಕೊಳ್ಳುತ್ತಿದೆ. ಇದರ ನಡುವೆ ಇತ್ತೀಚಿನ ಕೆಲ ಘಟನೆಗಳು ಬೆಂಗಳೂರು ಮಂದಿಯ ಜೀವನ ಅಡ್ಡಗತ್ತರಿಯಲ್ಲಿ ತೂಗುವಂತೆ ಮಾಡಿದೆ. ಬೆಂಕಿ ಸ್ಪೋಟ, ಕಟ್ಟಡ ಕುಸಿತ, ಭಯಂಕರ ಮಳೆ.. ಹೀಗೆ ಬೆಂಗಳೂರು ಮತ್ತೆ ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡಿ ಹಾಕುತ್ತಿದೆ.
ಸೆಪ್ಟೆಂಬರ್ 21 : ದೇವರಚಿಕ್ಕನಹಳ್ಳಿ ಅಗ್ನಿ ಅವಘಡ.!!
ಸದ್ಯದ ಆತಂಕಮಯ ವಾತಾವರಣ ಶುರುವಾಗಿದ್ದು, ಸೆಪ್ಟೆಂಬರ್ 21ರಂದು ನಡೆದ ದೇವರಚಿಕ್ಕನಹಳ್ಳಿಯ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದ ಅಗ್ನಿ ಅವಘಡದಿಂದ. ಅಂದು ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಮಂದಿ ಸಜೀವ ದಹನವಾಗಿ ಹೋಗಿದ್ದರು. ಈ ಘಟನೆಯ ದೃಶ್ಯಗಳು ಕಾಲ್ಗಿಚ್ಚಿನಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದು, ಬೆಂಕಿ ಕೆನ್ನಾಲೆಯಿಂದ ಬದುಕು ಉಳಿಸಲು ಪರದಾಡುತ್ತಿದ್ದ ಮಹಿಳೆಯೊಬ್ಬರ ದೃಶ್ಯ ಇಡೀ ಜನರ ಮನ ಕಲಕುವಂತೆ ಮಾಡಿತ್ತು. ಆದರೆ ಈ ದುರಂತಕ್ಕೆ ಮೂಲ ಕಾರಣವೇನು ಏನು ಎನ್ನುವುದು ಇನ್ನೂ ಪತ್ತೆ ಹಚ್ಚಲಾಗಲಿಲ್ಲ. ಆರಂಭದಲ್ಲಿ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ ಎಂದು ಹೇಳಲಾಗಿತ್ತು. ಅದಾದ ಬಳಿಕ ಶಾರ್ಟ್ ಸರ್ಕ್ಯೂಟ್ ಎಂದು ಹೇಳಲಾಯ್ತು. ಅದಕ್ಕೂ ಬಳಿಕ ದೇವರಿಗೆ ಹಚ್ಚಿದ್ದ ದೀಪದ ಬೆಂಕಿಯಿಂದ ಬೆಂಕಿ ಹೊತ್ತಿ ಕೊಂಡಿದೆ ಎಂಬ ಗುಮಾನ ಹಬ್ಬಿತು. ಒಟ್ಟಾರೆ, ಮೂಲ ಯಾವುದೇ ಇದ್ದರೂ ದೇವರಚಿಕ್ಕನಹಳ್ಳಿ ಅಗ್ನಿ ಅವಘಡ ಒಂದು ಆರಂಭವೇ ಆಗಿತ್ತು. ಅದಾದ ಬಳಿಕ ಮಹಾನಗರ ಬೆಂಗಳೂರಲ್ಲಿ ಸಾಲು ಸಾಲು ದುರಂತಗಳು ಘಟಿಸಿದವು.
ಸೆಪ್ಟೆಂಬರ್ 23 : ಚಾಮರಾಜಪೇಟೆ ನ್ಯೂ ತರಗುಪೇಟೆ ಪಟಾಕಿ ಸ್ಫೋಟ.!!
ದೇವರಚಿಕ್ಕನಹಳ್ಳಿ ಅಗ್ನಿ ಅವಘಡದ ಒಂದು ದಿನದ ಬಳಿಕ ಮತ್ತೆ ಬೆಂಗಳೂರು ಭಯಂಕರ ಸ್ಪೋಟಕ್ಕೆ ಕಣ್ಣರಳಿಸಿತು. ಸೆಪ್ಟೆಂಬರ್ 23ರ ಮಧ್ಯಾಹ್ನದ ಹೊತ್ತಿಗೆ ಚಾಮರಾಜಪೇಟೆಯ ನ್ಯೂ ತರಗು ಪೇಟೆಯಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರು. ಅಲ್ಲಿದ್ದ ಪಟಾಕಿ ಅಂಗಡಿಯಲ್ಲಿ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡು ಸುಮಾರು ನೂರು ಮೀಟರ್ ದೂರಕ್ಕೆ ಅದರ ಕಾವು ತಾಕಿತ್ತು. ಪರಿಣಾಮ, ಅನೂಹ್ಯ ರೀತಿಯಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಕಾರ್ಮಿಕರ ದೇಹ ಸಿಡಿದು ಛಿಧ್ರವಾಗಿಹೋಗಿತ್ತು. ಈ ಘಟನೆ ದೇವರಚಿಕ್ಕನಹಳ್ಳಿ ಘಟನೆಗಿಂತ ಭೀಭತ್ಸವಾಗಿತ್ತು. ಅಲ್ಲಿದ್ದ ಕೆಲ ವಾಹನಗಳು ಕೂಡ ಧ್ವಂಸವಾಗಿ ಹೋಗಿತ್ತು. ಈ ಘಟನೆಯಲ್ಲಿ ಮೂವರು ಮೃತರಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ಸೆಪ್ಟೆಂಬರ್ 24 : ಅತ್ತಿಬೆಲೆಯ ಕೆಮಿಕಲ್ ಕಂಪೆನಿಯಲ್ಲಿ ಬಾಯ್ಲರ್ ಬ್ಲಾಸ್ಟ್.!!
ನಗರದ ಅತ್ತಿಬೆಲೆಯ ಕೆಮಿಕಲ್ ಕಂಪನಿ ಒಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಘಟನೆ ಸೆಪ್ಟೆಂಬರ್ 24ರಂದು ನಡೆದಿತ್ತು. ಅತ್ತಿಬೆಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟವಾಗಿತ್ತು. ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟದಿಂದ ಗಾಳಿಯಲ್ಲಿ ವಾಸನೆ ಉಂಟಾಗಿದೆ. ಗಾಳಿಯಲ್ಲೆಲ್ಲಾ ಕೆಮಿಕಲ್ ತುಂಬಿ ಬಟ್ಟೆಗಳಲ್ಲಿಯೂ ವಾಸನೆ ಉಂಟಾಗಿದೆ. ಈ ಕೆಮಿಕಲ್ ವಾಸನೆಗೆ ಹೆದರಿ ಜನರು ಹೈರಾಣಾಗಿ ಹೋಗಿದ್ದರು. ಬಾಯ್ಲರ್ ಬ್ಲಾಸ್ಟ್ಗೆ ಇಡೀ ಪ್ರದೇಶದಲ್ಲಿ ಕೆಮಿಕಲ್ ವಾಸನೆ ಹರಡಿತ್ತು. ಉಸಿರು ತೆಗೆದುಕೊಳ್ಳಲೂ ಸ್ಥಳೀಯರು ಯೋಚಿಸುವಂತಾಗಿತ್ತು. ಬಾಯ್ಲರ್ ಬ್ಲಾಸ್ಟ್ನಿಂದ ಮೂರ್ನಾಲ್ಕು ಕಿ.ಮಿ.ವರೆಗೂ ವಿಷಮ ವಾತಾವರಣ ಸೃಷ್ಟಿಯಾಗಿತ್ತು. ಅತ್ತಿಬೆಲೆ, ವಡ್ಡರಪಾಳ್ಯ ಮಾಯಸಂದ್ರ, ಮುಚ್ಚೆಂದ, ಕಂಬಳೀಪುರ, ಇಂಚಗೂರು, ಮಯಾಸಂದ್ರ, ಬಾಂಡೇಪುರ ವರೆಗೂ ಕೆಮಿಕಲ್ ಘಾಟು ಹಬ್ಬಿದೆ. ಅತ್ತಿಬೆಲೆ ಸಮೀಪದ ವಡ್ಡರಪಾಳ್ಯದಲ್ಲಿರುವ ಲೇಕ್ ಕೆಮಿಕಲ್ ಫ್ಯಾಕ್ಟರಿ ಬಾಯ್ಲರ್ ಸ್ಫೋಟ ಹಲವು ಪ್ರದೇಶಗಳನ್ನು ಆತಂಕದಲ್ಲಿರಿಸಿತ್ತು. ಲೇಕ್ ಕೆಮಿಕಲ್ ಕಂಪನಿಯಿಂದ ಫಾರ್ಮಾಸಿಟಿಕಲ್ ವಸ್ತುಗಳ ಉತ್ಪಾದನೆ ಮಾಡಲಾಗುತ್ತಿತ್ತು. ಮಿಥೇನಾಲ್ ಹಾಗೂ ಬೇರೆ ಬೇರೆ ರಾಸಾಯನಿಕಗಳಿಂದ ಉತ್ಪನ್ನಗಳ ತಯಾರಿಕೆ ಮಾಡಲಾಗುತ್ತದೆ. ರಾಜಸ್ಥಾನಿ ಮೂಲದವರ ಒಡೆತನದ ಲೇಕ್ ಕೆಮಿಕಲ್ಸ್ ಕಂಪನಿ ಇದು ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.
ಸೆಪ್ಟೆಂಬರ್ 27 : ಲಕ್ಕಸಂಧ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ.!!
ಮೂರು ಅಗ್ನಿ ಅವಘಡದ ಬಳಿಕ ಸೆಪ್ಟೆಂಬರ್ 27ರಂದು ಬೆಂಗಳೂರು ಸಾಕ್ಷಿಯಾಗಿದ್ದು ಕಟ್ಟಡ ಕುಸಿತ ಘಟನೆಗೆ. ನಗರದ ವಿಲ್ಸನ್ ಗಾರ್ಡನ್ನ ಲಕ್ಕಸಂಧ್ರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ನೆಲಕಚ್ಚಿತ್ತು. ಈ ದೃಶ್ಯವೂ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹೋಗಿತ್ತು. ಸುರೇಶ್ ಎಂಬವರಿಗೆ ಸೇರಿದ ಕಟ್ಟಡ ಇದಾಗಿದ್ದು, ಈಲ್ಲಿ ಸುಮಾರು 60 ಮಂದಿ ಮೆಟ್ರೋ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ವಾಸವಿದ್ದರು. ಆದರೆ ಯಾವೊಬ್ಬ ಕಾರ್ಮಿಕನಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಬಿಬಿಎಂಪಿ ಗಮನಕ್ಕೆ ತರದೆ ಬಾಡಿಗೆಗೆ ನೀಡಿದ್ದ ಮಾಲೀಕ ಸುರೇಶ್ ವಿರುದ್ಧ ಸ್ವತಃ ಪಾಲಿಕೆಯೇ ದೂರು ನೀಡಿದೆ.
ಸೆಪ್ಟೆಂಬರ್ 28 : ಡೈರಿ ವೃತ್ತದ ಕೆಎಂಎಫ್ ಕ್ವಾಟರ್ಸ್ ಕುಸಿತ.!!
ಲಕ್ಕಸಂಧ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ ಮರುದಿನವೇ ಅಲ್ಲಿಂದ ಹೆಚ್ಚು ಕಮ್ಮಿ ಒಂದು ಕಿಲೋಮೀಟರ್ ದೂರದಲ್ಲಿರುವ ಕೆಎಂಎಫ್ ಕ್ವಾಟರ್ಸ್ ಕುಸಿತ ಕಂಡಿದೆ. ಈ ಕ್ವಾಟರ್ಸ್ನಲ್ಲಿ ಬಮೂಲ್ ನೌಕರರು ವಾಸವಿದ್ದರು ಎಂದು ಪೊಲೀಸರು ಪ್ರಾರ್ಥಮಿಕವಾಗಿ ಮಾಹಿತಿ ನೀಡಿದ್ದಾರೆ. ಈ ಘಟನೆಯಲ್ಲಿ ನಾಲ್ವರಿಗೆ ಗಂಭೀರವಾಗಿ. ಹಾಗೂ ಕುಸಿದ ಕಟ್ಟಡದ ತಳಗೆ ಎರಡು ಶ್ವಾನಗಳು ಸಿಲುಕಿದ್ದು, ಅಗ್ನಿಶಾಮಕ ಸಿಬ್ಬಂದಿಗಳಿಂದ ಅವುಗಳನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಇದು 50 ವರ್ಷ ಹಳೆಯ ಕಟ್ಟಡವಾಗಿದ್ದು, ಒಟ್ಟು ಈ ಕ್ವಾಟರ್ಸ್ನಲ್ಲಿ 18 ಕುಟುಂಬಗಳು ವಾಸವಿದ್ದವು.
ಶಿಥಿಲಾವಸ್ಥೆಯಲ್ಲಿದೆ ಬೆಂಗಳೂರಿನ 194 ಕಟ್ಟಡಗಳು.!!
ಒಂದೆಡೆ ಸಾಲು ಸಾಲು ದುರಂತಗಳು ಘಟಿಸುತ್ತಿದ್ದರೆ, ಇತ್ತ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯ ಮತ್ತೆ ಸಾಲು ಸಾಲು ದುರಂತಗಳಿಗೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಎರಡು ವರ್ಷಗಳ ಹಿಂದೆಯೇ ಬಿಬಿಎಂಪಿ ನಗರದಲ್ಲಿನ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡಿತ್ತು. ಅಲ್ಲದೆ ಈ ಬಗ್ಗೆ ವಿಸ್ತೃತ ವರದಿಯನ್ನೂ ತಯಾರಿಸಿದೆ. ಈ ವರದಿಯಲ್ಲಿ ನಗರದ 194 ಕಟ್ಟಡಗಳು ಬೀಳುವ ಹಂತದಲ್ಲಿದೆ, ಇವುಗಳನ್ನು ತೆರವು ಮಾಡಬೇಕು ಎಂದು ಪಾಲಿಕೆ ಮೊದಲೇ ನಿರ್ಧರಿಸಿತ್ತು. ಆದರೆ ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಇದೀಗ ಒಂದೋಂದೇ ಆಗಿ ಹಳೆಯ ಕಟ್ಟಡಗಳು ಕುಸಿಯ ತೊಡಗಿವೆ. 2019ರ ಜುಲೈನಲ್ಲಿ ಕಾಕ್ಸ್ ಟೌನ್ ನಲ್ಲಿ ಕಟ್ಟಡ ಕುಸಿದು 4 ಮಂದಿ ಹಾಗೂ ಅದೇ ವರ್ಷದ ಸೆಪ್ಟೆಂಬರ್ನಲ್ಲಿ ಪುಟ್ಟೇನಹಳ್ಳಿಯ ಮೂತು ಅಂತಸ್ತಿನ ಕಟ್ಟಡ ಕುಸಿದಿತ್ತು. ಈ ವೇಳೆ ಹಳೆಯ ಕಟ್ಟಡಗಳ ಸರ್ವೇಯನ್ನು ಬಿಬಿಎಂಪಿ ಮಾಡಿತ್ತು. ಆದರೆ ಅದರಿಂದ ಯಾವುದೇ ಉಪಯೋಗವಂತೂ ಆಗಿಲ್ಲ. ಕಟ್ಟಡ ಕುಸಿತ ಪ್ರಕರಣಗಳು ಮುಂದುವರೆಯುತ್ತಲೇ ಇದೆ.
ಕಳೆದ ಎಂಟು ದಿನಗಳಲ್ಲಿ ಐದು ಅವಘಡಗಳು ಘಟಿಸಿದೆ. ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ, ಅಥವಾ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವು ಇವುಗಳೇ ಈ ಎಲ್ಲಾ ಅವಘಡಗಳ ಮೂಲ ಕಾರಣ. ಇದನ್ನು ನಿರೀಕ್ಷಿಸಲೆಂದೇ ಸರ್ಕಾರಿ ಅಧಿಕಾರಿಗಳು ಇದ್ದರೂ ಅವರ ನಿರ್ಲಕ್ಷ್ಯ ದುರಂತಗಳಿಗೆ ಮುನ್ನುಡಿ ಬರೆಯುತ್ತಿದೆ.