ಈಗ, ವೈದ್ಯಕೀಯ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅಖಿಲ ಭಾರತ ಪರೀಕ್ಷೆಯಾದ ನ್ಯಾಷನಲ್ ಎಲಿಜೆಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಅಥವಾ ನೀಟ್ ವ್ಯವಸ್ಥೆ ಜಾರಿಯಲ್ಲಿದೆ. ಈ ಅಕಾಡೆಮಿಕ್ ಸಾಲಿನ ನೀಟ್ ಪರೀಕ್ಷೆ ಮುಗಿದಿದೆ.
ಆದರೆ ನೀಟ್ ವ್ಯವಸ್ಥೆ ಬಂದಾಗಿನಿಂದ ಈ ಬಗ್ಗೆ ಸಾಕಷ್ಟು ತಕರಾರುಗಳು ಕೇಳಿ ಬಂದಿವೆ. ತಮಿಳುನಾಡಿನಲ್ಲಿ ನೀಟ್ ಕಾರಣಕ್ಕೆ ಮೆಡಿಕಲ್ ಸೀಟ್ ಪಡೆಯಲಾಗದ ಹಲವು ವಿದ್ಯಾರ್ಥಿಗಳು ಪ್ರತಿ ವರ್ಷ ಆತ್ಮಹತ್ಯೆಗೆ ಶರಣಾಗಿದ್ದಾರೆ.. ತಮಿಳುನಾಡು ಅಸೆಂಬ್ಲಿ ನೀಟ್ ವ್ಯವಸ್ಥೆ ರದ್ದು ಪಡಿಸುವ ಮಸೂದೆಯನ್ನು ಜಾರಿಗೆ ತಂದಿದೆ.
ತಮಿಳುನಾಡು ಸರ್ಕಾರದಿಂದ ರಚಿಸಲ್ಪಟ್ಟ ನ್ಯಾಯಮೂರ್ತಿ ಎ..ಕೆ. ರಾಜನ್ ನೇತ್ವತ್ವದ ಸಮಿತಿಯು, ನೀಟ್ ಸಮಾನತೆಗೆ ವಿರುದ್ಧವಾಗಿದೆ. ಇದು ಅಸಮಾನತೆಯನ್ನು ಪೋಷಿಸುತ್ತಿದೆ. ನಗರ-ಗ್ರಾಮೀಣ ತಾರತಮ್ಯ ತಳ ಸಮುದಾಯಗಳಿಗೆ ಅವಕಾಶ ನಿರಾಕರಣೆ ಮಾಡುತ್ತಿದೆ. ಇದು ಒಳಹೋಗುವ ಪ್ರಕ್ರಿಯೆ ಆಗಿರದೇ ಹೊರಗಿಡುವಂತದ್ದು ಎಂದು ಸಮಿತಿ ತೀರ್ಮಾನಿಸಿತು. ನೀಟ್ ಪರಿಚಯಿಸಿದ ನಂತರ, ತಮಿಳುನಾಡು ರಾಜ್ಯ ಬೋರ್ಡ್‌ಗಳಿಂದ ಕಡಿಮೆ ವಿದ್ಯಾರ್ಥಿಗಳಿಗೆ ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶವನ್ನು ನೀಡಲಾಯಿತು, ಆಯ್ಕೆಯಾದ ಬಹುತೇಕ ಅಭ್ಯರ್ಥಿಗಳು (ಶೇ. 99ರಷ್ಟು) ಖಾಸಗಿ ಸಂಸ್ಥೆಗಳು ನೀಡುವ ತರಬೇತಿಯನ್ನು ಪಡೆದಿದ್ದಾರೆ ಎಂದು ಸಮಿತಿಯು ತೀರ್ಮಾನಿಸಿತು. ಗ್ರಾಮೀಣ ಹಿನ್ನೆಲೆಯ ಅಭ್ಯರ್ಥಿಗಳು ಆಯ್ಕೆಯ ಕಡಿಮೆ ಅವಕಾಶಗಳನ್ನು ಹೊಂದಿರುವುದನ್ನು ಇದು ಗಮನಿಸಿದೆ. 2013 ರಲ್ಲಿ ನೀಟ್ ಪರಿಚಯಿಸುವ ಮೊದಲು, ಆಯ್ಕೆಯಾದ ವೈದ್ಯಕೀಯ ಅಭ್ಯರ್ಥಿಗಳಲ್ಲಿ 65 ಪ್ರತಿಶತದಷ್ಟು ಜನರು ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಅವರ ಸಂಖ್ಯೆ ಸುಮಾರು 50 ಪ್ರತಿಶತದಷ್ಟು ಇಳಿದಿದೆ. ತಮಿಳು ಮಾಧ್ಯಮ ಶಾಲೆಗಳ ಅಭ್ಯರ್ಥಿಗಳಿಗೆ ಇದು ಮುಳುವಾಗಿದೆ.. ಇಂಗ್ಲಿಷ್ ಬಿಟ್ಟು ಬೇರೆ ಆಯ್ಕೆ ಅವರಿಗೆ ಇಲ್ಲ. ಅಲ್ಲಿ ಹಿಂದಿ ಶಿಕ್ಷಣ ನೀಡುವುದಿಲ್ಲ ಎಂಬುದನ್ನು ಗಮನಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಅವರ ಪ್ರಮಾಣವು, ನೀಟ್‌ಗೆ ಮುಂಚೆಗಿಂತ ಶೇಕಡಾ 15 ರಿಂದ 1.9 ಕ್ಕೆ ಇಳಿದಿದೆ.
ನ್ಯಾಯಮೂರ್ತಿ ರಾಜನ್ ನೇತೃತ್ವದ ಒಂಬತ್ತು ಸದಸ್ಯರ ಸಮಿತಿಯು ವ್ಯಾಪಕ ಸಮೀಕ್ಷೆಗಳನ್ನು ನಡೆಸಿ 86,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆಯಿತು. ಸಮಿತಿಯು ತನ್ನ ವರದಿಯನ್ನು ಜುಲೈ 2021 ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತು. ತಮಿಳುನಾಡಿನಲ್ಲಿ ನೀಟ್ ಅನ್ನು ರದ್ದುಗೊಳಿಸಬೇಕು ಮತ್ತು ಹನ್ನೆರಡನೇ ತರಗತಿಯ ಫಲಿತಾಂಶಗಳ ಆಧಾರದ ಮೇಲೆ ಹಳೆಯ ಆಯ್ಕೆ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸಿನ ಆಧಾರದ ಮೇಲೆ, ಸರ್ಕಾರವು ತಮಿಳುನಾಡಿನಲ್ಲಿ ನೀಟ್ ಅನ್ನು ರದ್ದುಗೊಳಿಸಲು ಶಾಸನವನ್ನು ಜಾರಿಗೊಳಿಸಿತು.
ವೈದ್ಯಕೀಯ ಕಾಲೇಜುಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅಖಿಲ ಭಾರತ ಪರೀಕ್ಷೆಯೇ ನಮಗೆ ಅಂತಿಮವೇಕೆ ಎಂಬ ಪ್ರಶ್ನೆಯನ್ನು ಇದು ಹುಟ್ಟು ಹಾಕಿದೆ. ಈ ಸಮಿತಿಯು ಕೆಲವು ಸಮಂಜಸವಾದ ಅನುಮಾನಗಳನ್ನು ವ್ಯಕ್ತಪಡಿಸಿದೆ.
ನೀಟ್‌ಗೆ ಮುಂಚಿನ ವರ್ಷಗಳಲ್ಲಿ ಎಲ್ಲಾ ರಾಜ್ಯಗಳು ತಮ್ಮದೇ ಆದ ಆಯ್ಕೆಯನ್ನು ಹೊಂದಿದ್ದವು. ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳು ಕೂಡ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ಹೊಂದಿದ್ದವು. ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ ಮತ್ತು ತೆಲಂಗಾಣ ಹೊರತುಪಡಿಸಿ ಅಖಿಲ ಭಾರತ ಕೋಟಾಕ್ಕೆ ಕೇವಲ 15 ಪ್ರತಿಶತ ಸೀಟುಗಳನ್ನು ಮಾತ್ರ ಮೀಸಲಿಡಲಾಗಿತ್ತು. ಮೇಲ್ನೋಟಕ್ಕೆ, ಈ ಬಹು ಪರೀಕ್ಷೆಗಳ ವ್ಯವಸ್ಥೆಯು ಅಸ್ತವ್ಯಸ್ತವಾಗಿರುವಂತೆ ಕಾಣಿಸಬಹುದು. ಹಾಗಾಗಿ ಅಂದಿನ ಯುಪಿಎ ಸರ್ಕಾರ ಮಧ್ಯಪ್ರವೇಶಿಸಲು ನಿರ್ಧರಿಸಿತು
ಏನಿದು ರಾಷ್ಟ್ರೀಯ ಹಿತಾಸಕ್ತಿ
ನೀಟ್ ಅನ್ನು ದೊಡ್ಡ ಭರವಸೆಗಳೊಂದಿಗೆ ಪರಿಚಯಿಸಲಾಯಿತು. ಹೆಚ್ಚಿನ ಕ್ಯಾಪಿಟೇಶನ್ ಶುಲ್ಕಗಳು ಮತ್ತು ದುಬಾರಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಚರ್ಚೆಗಳು ಉಲ್ಬಣಗೊಳ್ಳುತ್ತಿರುವ ಸಮಯದಲ್ಲಿ ಇದನ್ನು ಜಾರಿ ಮಾಡಲಾಯಿತು ಖಾಸಗಿ ವೈದ್ಯಕೀಯ ಕಾಲೇಜುಗಳು ವೈದ್ಯಕೀಯ ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಿದ ಆರೋಪಗಳಿವೆ. ಕರ್ನಾಟಕದಲ್ಲಂತೂ 80ರ ದಶಕದಿಂದ ಕ್ಯಾಪಿಟೇಷನ್ ಹಾವಳಿಯಿದೆ. 20 ಡಿಸೆಂಬರ್ – 2010 ರ ಗೆಜೆಟ್ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗಿತು, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ 18 ಜುಲೈ 2013 ರಂದು, ಇಂಡಿಯನ್ ಮೆಡಿಕಲ್ ಕೌನ್ಸಿಲ್ (ಎಂಸಿಐ) ವಕೀಲರು ಮತ್ತು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ನೀಟ್ ಸಮರ್ಥಿಸಿಕೊಂಡರು ಇದು ಪ್ರವೇಶ ಪ್ರಕ್ರಿಯೆಯನ್ನು ಸುಗಮಗೊಳಿಸುವ ಪ್ರಯತ್ನ ಎಂದು ಸರ್ಕಾರ ಹೇಳುತ್ತದೆ.
ಎಂಸಿಐ ವಕೀಲರು “ಈ (ಹಿಂದಿನ) ವ್ಯಸಸ್ಥೆಯಲ್ಲಿ ವೈದ್ಯಕೀಯ ಪ್ರವೇಶದ ಕ್ಷೇತ್ರದಲ್ಲಿ ಲಾಭದಾಯಕ ಮತ್ತು ಕ್ಯಾಪಿಟೇಶನ್ ಶುಲ್ಕಗಳು ಹೆಚ್ಚಿವೆ. ಇದು ದೇಶದ ಶಿಕ್ಷಣದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹಳೆಯ ವ್ಯಸ್ಥೆಯನ್ನು ಮುಂದುವರಿಸಲು ಅನುಮತಿಸಿದರೆ, ಪ್ರವೇಶ ಪ್ರಕ್ರಿಯೆಯನ್ನು ಒಂದು ಪ್ರಹಸನಕ್ಕೆ ಇಳಿಸಲಾಗುತ್ತದೆ. ಇಂತಹ ಕೆಟ್ಟ ಪರಿಣಾಮಗಳನ್ನು ಕೊನೆಗೊಳಿಸಲು ಎಂಸಿಐ ನೀಟ್ ಅನ್ನು ಪರಿಚಯಿಸಿದೆ; ಎಂದು ವಾದಿಸಿದರು.
ಎಎಸ್‌ಜಿ ಸಿದ್ಧಾರ್ಥ್ ಲೂತ್ರಾ “ಈ ನಿಯಮಾವಳಿಗಳನ್ನು ಜಾರಿಗೆ ತರುವುದರ ಹಿಂದಿನ ತರ್ಕವೆಂದರೆ ಮಾನದಂಡಗಳ ಏಕರೂಪತೆ, ಅರ್ಹತೆ ಮತ್ತು ಪಾರದರ್ಶಕತೆ ಮತ್ತು ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳ ಕಷ್ಟವನ್ನು ಕಡಿಮೆ ಮಾಡುವುದು. ಬಹು ಪರೀಕ್ಷೆಗಳ ಹಿಂದಿನ ವ್ಯವಸ್ಥೆಯು ರಾಷ್ಟ್ರೀಯ ಹಿತಾಸಕ್ತಿಯಲ್ಲ ಅಥವಾ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವ ಹಿತಾಸಕ್ತಿಯಲ್ಲ, ಎಂದು ವಾದಿಸಿದರು.
ನೀಟ್ ಪರಿಚಯದ ಉದ್ದೇಶವು ಲಾಭದಾಯಕತೆ ಮತ್ತು ಕ್ಯಾಪಿಟೇಶನ್ ಶುಲ್ಕವನ್ನು ಕೊನೆಗೊಳಿಸುವುದು, ಪ್ರವೇಶ ಪರೀಕ್ಷೆಗಳ ಏಕತೆಯನ್ನು ಸೃಷ್ಟಿಸುವುದು ಮತ್ತು ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸರಳವಾಗಿಸುವುದು ಎಂಬುದು ಸರ್ಕಾರದ ವಾದ..
ಇದಕ್ಕೆ ರಾಷ್ಟ್ರೀಯ ಹಿತಾಸಕ್ತಿಯನ್ನು ಒಂದು ಕಾರಣವೆಂದು ಉಲ್ಲೇಖಿಸಲಾಗಿದೆ, ಆದರೆ ಅದನ್ನು ವಿವರಿಸಲಾಗಿಲ್ಲ
ಈಗಿನ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಇದೇ ಮಾದರಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯನ್ನು ಉಲ್ಲೇಖಿಸುವ ಮೂಲಕ ಎಲ್ಲ ಸ್ಪರ್ಧಾ ಪರೀಕ್ಷೆಗಳನ್ನೂ ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸುವುದನ್ನು ಬೆಂಬಲಿಸಿದೆ.
ಇದರಿಂದಾಗಿ ಪ್ರಾದೇಶಿಕ ಮತ್ತು ಸ್ಥಳಿಯ ಪ್ರೆತಿಭೆಗಳಿಗೆ ಅನ್ಯಾಯವಾಗುತ್ತಿದೆ. ಈ ಕಾರಣಕ್ಕೆ ತಮಿಳುನಾಡು ಸರ್ಕಾರ ತಾರತಮ್ಯ ಮಾಡುವ ನೀಟ್ ರದ್ದು ಮಾಡಲು ಶಾಸನ ರೂಪಿಸಿದೆ.
ರಾಷ್ಟ್ರೀಯ ಹಿತಾಸಕ್ತಿಯ ಹೆಸರಲ್ಲಿ ಪ್ರಾದೇಶಿಕ ವ್ಯವಸ್ಥೆಗಳನ್ನು ಬಲಿ ಕೊಡುವ ಪ್ರಕ್ರಿಯೆ ಕಳೆದ 7 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿದೆ.