ಕೇಂದ್ರ ನಾಯಕತ್ವದ ಬಿಕ್ಕಟ್ಟಿಗೆ ಸಕಾಲದಲ್ಲಿ ಪರಿಹಾರ ಕಂಡುಕೊಳ್ಳಲಾರದ ದೇಶದ ಅತಿ ಪುರಾತನ ಪಕ್ಷ ಕಾಂಗ್ರೆಸ್ಸಿನ ದೌರ್ಬಲ್ಯಕ್ಕೆ ಆ ಪಕ್ಷದ ಆಡಳಿತವಿರುವ ಬೆರಳೆಣಿಕೆಯ ರಾಜ್ಯಗಳಲ್ಲೂ ಅಧಿಕಾರ ಕೈತಪ್ಪುತ್ತಿದೆ.
ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಹಿರಿಯ ನಾಯಕ ಮತ್ತು ಅಂದಿನ ಮುಖ್ಯಮಂತ್ರಿ ಕಮಲನಾಥ್ ಮತ್ತು ಯುವ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ನಡುವಿನ ಅಧಿಕಾರ ಪೈಪೋಟಿಯನ್ನು ಸಕಾಲದಲ್ಲಿ ಶಮನ ಮಾಡದ ಹೈಕಮಾಂಡ್ ಉದಾಸೀನಕ್ಕೆ ಅಲ್ಲಿನ ಸರ್ಕಾರವೇ ಬಲಿಯಾಗಿತ್ತು. ಆ ಅವಕಾಶವನ್ನು ಬಳಸಿಕೊಂಡ ಬಿಜೆಪಿ ಶಿವರಾಜ್ ಸಿಂಗ್ ನೇತೃತ್ವದಲ್ಲಿ ಮತ್ತೆ ಅಧಿಕಾರ ಹಿಡಿದಿತ್ತು. ಆ ಬಳಿಕ ಕಾಂಗ್ರೆಸ್ ಕೈಯಲ್ಲಿ ಉಳಿದಿದ್ದು ಕೇವಲ ಮೂರು ರಾಜ್ಯಗಳು. ಪಂಜಾಬ್, ರಾಜಸ್ತಾನ ಮತ್ತು ಛತ್ತೀಸಗಢ. ಕಳೆದ ಕೆಲವು ತಿಂಗಳುಗಳಿಂದ ಆ ಮೂರೂ ಕಡೆ ನಾಯಕತ್ವದ ಬಿಕ್ಕಟ್ಟು ತಲೆದೋರಿತ್ತು. ಇದೀಗ ಆ ಪೈಕಿ ಪಂಜಾಬಿನಲ್ಲಿ, ಭಾರೀ ಭಿನ್ನಮತಕ್ಕೆ ಜನಪ್ರಿಯ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ತಲೆದಂಡವಾಗಿದೆ.
ಇಡೀ ದೇಶದಲ್ಲಿಯೇ ಕಾಂಗ್ರೆಸ್ ಪಕ್ಷ ಸೋಲಿನ ಮೇಲೆ ಸೋಲುಂಡು ಹೈರಾಣಾಗಿರುವ ಹೊತ್ತಲ್ಲೂ ಪಂಜಾಬಿನಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ವಿಶ್ವಾಸದಲ್ಲಿದ್ದ ಸಿಎಂ ಅಮರೀಂದರ್ ಸಿಂಗ್ ಕಳೆದ 2017ರ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದರು. ಆದರೆ, ಕಳೆದ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಕ್ರಿಕೆಟಿಗ ಮತ್ತು ಹಾಲಿ ರಾಜಕಾರಣಿ ನವಜೋತ್ ಸಿಂಗ್ ಸಿಧು ಮತ್ತು ಸಿಂಗ್ ನಡುವಿನ ಭಿನ್ನಮತ ಇದೀಗ ನಾಯಕತ್ವ ಬದಲಾವಣೆಯಲ್ಲಿ ಪರ್ಯಾವಸಾನ ಕಂಡಿದೆ. ಪಕ್ಷದ ದಲಿತ ನಾಯಕ ಚರಣ್ ಸಿಂಗ್ ಚನ್ನಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಪಕ್ಷದ ಇಬ್ಬರು ಉನ್ನತ ನಾಯಕರ ನಡುವಿನ ಭಿನ್ನಮತ, ಅಧಿಕಾರಕ್ಕಾಗಿ ನಡೆದ ಸಂಘರ್ಷವನ್ನು ನಿಭಾಯಿಸುವಲ್ಲಿ ನಿರಂತರವಾಗಿ ಎಡವಿದೆ ಕಾಂಗ್ರೆಸ್ ಹೈಕಮಾಂಡ್ ನ ದೌರ್ಬಲ್ಯದಿಂದಾಗಿ ಆ ರಾಜ್ಯದಲ್ಲಿ ಕೇವಲ ಮುಖ್ಯಮಂತ್ರಿ ಬದಲಾವಣೆಯಷ್ಟೇ ಅಲ್ಲ; ಬರಲಿರುವ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳುವ ಅವಕಾಶವನ್ನೂ ಆ ಪಕ್ಷ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿರುವ ಅಮರೀಂದರ್ ಸಿಂಗ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ ಕ್ರಮ ಸಹಜವಾಗೇ ಪಕ್ಷದ ರಾಜ್ಯ ಘಟಕದಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ಮಟ್ಟದಲ್ಲೂ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಕಾರಿಣಿಗೆ ಚುನಾವಣೆ ಮೂಲಕ ಹೊಸಬರ ಆಯ್ಕೆಯಾಗಬೇಕು ಎಂದು ಬಹಿರಂಗ ಆಗ್ರಹ ಮಾಡಿರುವ ಕಾಂಗ್ರೆಸ್ಸಿನ ಹಿರಿಯರ ಕೂಟ ಜಿ.23, ಪಂಜಾಬ್ ವಿಷಯದಲ್ಲಿ ಹೈಕಮಾಂಡ್ ಎಡವಿದೆ ಮತ್ತು ಅದಕ್ಕಾಗಿ ಪಕ್ಷ ಮುಂದಿನ ಚುನಾವಣೆಯಲ್ಲಿ ಬೆಲೆ ತೆರಬೇಕಾಗಬಹುದು ಎಂದು ಹೇಳಿದೆ. ಜೊತೆಗೆ ಜಿ.23 ಕೂಟದ ಹಿರಿಯ ನಾಯಕರು ಅಮರೀಂದರ್ ಸಿಂಗ್ ಅವರ ಪರ ನಿಂತಿದ್ದಾರೆ.
ಆದರೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸಿಧು ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದಿರುವ ಸಿಂಗ್, ಅವರ ವಿರುದ್ಧ ಪಾಕಿಸ್ತಾನದ ನಾಯಕರೊಂದಿಗೆ ಆಪ್ತ ನಂಟು ಹೊಂದಿರುವ ಸಂಗತಿ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಅವರ ನೇತೃತ್ವ ರಾಜ್ಯಕ್ಕೆ ಮಾತ್ರವಲ್ಲದೆ, ದೇಶದ ಭದ್ರತೆಯ ದೃಷ್ಟಿಯಿಂದಲೂ ಅಪಾಯಕಾರಿ ಎಂದಿದ್ದಾರೆ. ಹಾಗಾಗಿ ಒಂದು ಕಡೆ ಸಿಂಗ್ ಅವರಂಥ ಜನಪ್ರಿಯ ನಾಯಕರ ನಾಯಕತ್ವ ಕಳೆದುಕೊಂಡಿರುವ ಪಂಜಾಬ್ ಕಾಂಗ್ರೆಸ್, ಮತ್ತೊಂದು ಕಡೆ ನಾಯಕತ್ವ ಬದಲಾವಣೆಗೆ ಕಾರಣರಾದ ಸಿಧು ನೇತೃತ್ವದಲ್ಲಿ ಕೂಡ ಚುನಾವಣೆಗೆ ಹೋಗುವ ಸ್ಥಿತಿಯಲ್ಲಿ ಇಲ್ಲ.
ಈ ನಡುವೆ, ಪದಚ್ಯುತ ನಾಯಕ ಅಮರೀಂದರ್ ಸಿಂಗ್, ತಾವು ರಾಜಕಾರಣದಿಂದ ನಿವೃತ್ತರಾಗುವ ಯೋಚನೆ ಇಲ್ಲ. ಮುಂದಿನ ನಡೆ ಏನು ಎಂಬುದನ್ನು ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧರಿದಸಲಾಗುವುದು ಎನ್ನುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ಬಿಗ್ ಶಾಕ್ ನೀಡಿದ್ದಾರೆ. ಮೂಲಗಳ ಪ್ರಕಾರ, ಕಾಂಗ್ರೆಸ್ಸಿನ ಹಿರಿಯರ ಜಿ23 ತಂಡ ಅಮರೀಂದರ್ ಅವರ ಸಂಪರ್ಕದಲ್ಲಿದ್ದಾರೆ. ಜೊತೆಗೆ ಚುನಾವಣಾ ತಂತ್ರಗಾರ ಮತ್ತು ಅಮರೀಂದರ್ ಆಪ್ತ ಪ್ರಶಾಂತ್ ಕಿಶೋರ್ ಕೂಡ ನಿರಂತರ ಸಂಪರ್ಕದಲ್ಲಿದ್ದಾರೆ. ಹಾಗಾಗಿ ಸದ್ಯ ಅಮರೀಂದರ್ ಪಕ್ಷ ತೊರೆಯುವ ಸಾಧ್ಯತೆ ಕಡಿಮೆ. ಆದರೆ ಚುನಾವಣೆಗಳು ಸಮೀಪಿಸುವ ವೇಳೆಗೆ ಹೈಕಮಾಂಡ್ ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ಹೊಸ ಪಕ್ಷ ಘೋಷಣೆ, ಅಥವಾ ಎಎಪಿ ಇಲ್ಲವೇ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎನ್ನಲಾಗುತ್ತಿದೆ.
ಈ ನಡುವೆ, ಪಕ್ಷದ ಪೂರ್ಣಾವಧಿ ನಾಯಕತ್ವ ಇಲ್ಲದೇ ಇರುವುದೇ ರಾಜ್ಯಮಟ್ಟದಲ್ಲಿ ಪಕ್ಷದ ನಾಯಕತ್ವ ಬಿಕ್ಕಟ್ಟು ತಲೆದೋರಲು ಕಾರಣ. ಕಳೆದ ಎರಡು ವರ್ಷಗಳಿಂದ ಹೈಕಮಾಂಡ್ ಮಟ್ಟದಲ್ಲಿ ದೃಢ ಮತ್ತು ಕ್ಷಿಪ್ರ ನಿರ್ಧಾರ ಕೈಗೊಳ್ಳುವ ಗಟ್ಟಿ ನಾಯಕತ್ವದ ಕೊರತೆಯ ಕಾರಣಕ್ಕೆ ಕರ್ನಾಟಕ, ಮಧ್ಯಪ್ರದೇಶ, ಗೋವಾ, ಸೇರಿದಂತೆ ಸಾಲು ಸಾಲು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಆ ಹಿನ್ನೆಲೆಯಲ್ಲಿ ಪಕ್ಷದ ಪೂರ್ಣಾವಧಿ ಅಧ್ಯಕ್ಷರ ಆಯ್ಕೆಗೆ ಚುನಾವಣೆಗೆ ಒತ್ತಾಯಿಸುತ್ತಿರುವ ಜಿ 23 ಕೂಟ, ಇದೀಗ ಪಂಜಾಬ್ ವಿಷಯವನ್ನೇ ಮುಂದಿಟ್ಟುಕೊಂಡು ತನ್ನ ಆಗ್ರಹವನ್ನು ಇನ್ನಷ್ಟು ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ಈಗಾಗಲೇ ಜಿ.23 ತಂಡದ ಶಶಿ ತರೂರು, ಕಪಿಲ್ ಸಿಬಲ್, ಮನೀಶ್ ತಿವಾರಿ ಮತ್ತಿತರರು ಸಾಮಾಜಿಕ ಜಾಲತಾಣಗಳ ಮೂಲಕ ಹೈಕಮಾಂಡ್ ಗೆ ಪರೋಕ್ಷವಾಗಿ ಪೂರ್ಣಾವಧಿ ಅಧ್ಯಕ್ಷರ ಗೈರು ಮತ್ತು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ನಾಯಕತ್ವ ಬಿಕ್ಕಟ್ಟಿನ ಬಗ್ಗೆ ಗಮನ ಸೆಳೆದಿದ್ದಾರೆ.
ಅದರಲ್ಲೂ ಮುಖ್ಯವಾಗಿ ಪಂಜಾಬ್, ಉತ್ತರಪ್ರದೇಶ, ಗೋವಾ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಪಂಜಾಬ್ ನಂತಹ ಅನಾಹುತದಿಂದ ಸದ್ಯ ಅಧಿಕಾರದಲ್ಲಿರುವ ರಾಜಸ್ತಾನ ಮತ್ತು ಛತ್ತೀಸಗಢದ ಸರ್ಕಾರಗಳನ್ನು ಪಾರು ಮಾಡಲು ಕೂಡಲೇ ನಾಯಕತ್ವ ಬದಲಾವಣೆಯಾಗಬೇಕು. ಪದಾಧಿಕಾರಿಗಳ ಸ್ಥಾನಗಳೂ ಸೇರಿದಂತೆ ಪಕ್ಷದ ಕಾರ್ಯಕಾರಿಣಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕು ಎಂಬ ತಮ್ಮ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಲು ಜಿ 23 ನಾಯಕರು ನಿರ್ಧರಿಸಿದ್ದಾರೆ. ಆ ತಮ್ಮ ಹಕ್ಕೊತ್ತಾಯಕ್ಕೆ, ಅಮರೀಂದರ್ ಸಿಂಗ್ ನೀಡಿದ ನಾಲ್ಕೂವರೆ ವರ್ಷಗಳ ಉತ್ತಮ ಆಡಳಿತದ ಹೊರತಾಗಿಯೂ, ಮುಂದಿನ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಭರವಸೆಯ ಹೊರತಾಗಿಯೂ ಅವರನ್ನು ಅಧಿಕಾರದಿಂದ ಇಳಿಸಿದ ರೀತಿಯನ್ನೇ ಮುಂದಿಟ್ಟುಕೊಂಡು ತಮ್ಮ ಹೋರಾಟವನ್ನು ತೀವ್ರಗೊಳಿಸಲು ನಾಯಕರು ತೀರ್ಮಾನಿಸಿದ್ದಾರೆ.
ಹಾಗಾಗಿ, ಪಂಜಾಬ್ ಬೆಳವಣಿಗೆ ಇದೀಗ, ಗಾಂಧಿ ಕುಟುಂಬ ಮತ್ತು ಅವರ ನಿಷ್ಠರು ವರ್ಸಸ್ ಜಿ23 ನಾಯಕರ ನಡುವಿನ ಸಂಘರ್ಷವನ್ನು ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸಿದೆ. ಈಗಲೂ ಹೈಕಮಾಂಡ್ ಎಚ್ಚೆತ್ತುಕೊಳ್ಳದೇ ಹೋದರೆ, ಪಕ್ಷದ ನೂತನ ಅಧ್ಯಕ್ಷರ ನೇಮಕ ಬಿಕ್ಕಟ್ಟು ಮತ್ತು ರಾಜ್ಯಗಳ ನಾಯಕತ್ವ ಸಂಘರ್ಷಕ್ಕೆ ಇತಿಶ್ರೀ ಹಾಡದೇ ಹೋದರೆ ಕಾಂಗ್ರೆಸ್ ಪಕ್ಷದ ರಾಷ್ಟ್ರ ಮಟ್ಟದಲ್ಲಿಯೇ ದೊಡ್ಡ ಸಂಕಷ್ಟಕ್ಕೆ ಸಿಲುಕಲಿದೆ. ಹಾಗಾಗಿ ಬಿಜೆಪಿಯನ್ನು ಮಣಿಸಲು ರಾಷ್ಟ್ರೀಯ ಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವ ದಿಸೆಯಲ್ಲಿ ಆಸಕ್ತಿ ವಹಿಸಿರುವ ಪಕ್ಷದ ಹೈಕಮಾಂಡ್, ಮೊದಲು ಕುಸಿಯುತ್ತಿರುವ ತನ್ನ ಮನೆಯ ಅಡಿಪಾಯವನ್ನು ಸರಿಪಡಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಪ್ರಧಾನಿ ಮೋದಿಯವರ ಘೋಷಣೆ ನಿಜವಾಗಲು ಪರೋಕ್ಷವಾಗಿ ಆ ಪಕ್ಷದ ನಾಯಕತ್ವವೇ ಕೊಡುಗೆ ನೀಡಿದಂತಾದರೂ ಅಚ್ಚರಿ ಇಲ್ಲ!